ಪ್ರತಿಷ್ಠಿತ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಇದರ 2022-2023 ನೇ ಸಾಲಿನ ವಿಕಾಸ ಪುಸ್ತಕ ಪುರಸ್ಕಾರಕ್ಕೆ ಪತ್ರಕರ್ತ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರ “ಮುಂಬೈ ಕನ್ನಡ ಪತ್ರಿಕೋದ್ಯಮ” ಸಂಶೋಧನ ಕೃತಿ ಆಯ್ಕೆಯಾಗಿದೆ. ರೆಂಜಾಳರ ಈ ಗ್ರಂಥಕ್ಕೆ ಮುಂಬಯಿ ವಿಶ್ವವಿದ್ಯಾಲಯ ಪಿ ಎಎಚ್ ಡಿ ಪದವಿ ನೀಡಿದೆ. 500 ಕ್ಕೂ ಅಧಿಕ ಪುಟಗಳನ್ನು ಹೊಂದಿರುವ ಈ ಕೃತಿ ಕಳೆದ ವರ್ಷ ಪ್ರಕಟಗೊಂಡು, ಮುಂಬಯಿ ಬಂಟರ ಸಂಘದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ “ಮುಂಬಯಿ ಪತ್ರಕರ್ತರ ಸಮಾಗಮ” ಸಂಭ್ರಮದಲ್ಲಿ ಗಣ್ಯಾಥಿ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತ್ತು. ಕೃತಿಯು ಮುಂಬಯಿ ಕನ್ನಡ ಪತ್ರಿಕೋದ್ಯಮದ ನೂರೈವತ್ತಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಹಿರಿಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮುಂಬೈಯಲ್ಲಿ ಯುವ ಪತ್ರಕರ್ತರಾಗಿರುವ ರೆಂಜಾಳರು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಎಂಎ ಪದವಿಯನ್ನು ಪ್ರಥಮ ಶ್ರೇಣಿಯೊಂದಿಗೆ ವರದರಾಜ ಆದ್ಯ ಚಿನ್ನದ ಪದಕವನ್ನು ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವ ಅವರ ಎಂಫಿಲ್ ಸಂಶೋಧನ ಕೃತಿ “ಗಿರಿಕುಂಜರ”, “ದೀಪದ ಬುಡ ಕತ್ತಲು”, “ಚಿನ್ನದ ಚೆಂಡು” ಕೃತಿಗಳು ಬೆಳಕು ಕಂಡಿವೆ.
ಪ್ರತಿ ವರ್ಷ ಮೂರು ಅತ್ಯುತ್ತಮ ಕೃತಿಗಳಿಗೆ ಕಾರ್ನಾಡ್ ಪ್ರತಿಷ್ಠಾನ ವಿಕಾಸ ಪುಸ್ತಕ ಪುರಸ್ಕಾರವನ್ನು ನೀಡುತ್ತಿದೆ. ಪ್ರಸ್ತುತ ವರ್ಷ ಡಾ. ದಿನೇಶ್ ಶೆಟ್ಟಿ ರೆಂಜಾಳ, ಡಾ. ಶ್ಯಾಮಲಾ ಪ್ರಕಾಶ್ ಮತ್ತು ಅಮಿತಾ ಭಾಗ್ವತ್ ಅವರ ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿಯು ನಗದು ಪುರಸ್ಕಾರ, ಗೌರವ ಗ್ರಂಥ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 23 ರಂದು ಅಂಧೇರಿಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟನೆ ತಿಳಿಸಿದೆ.
ಕೃತಿಯ ಬಗ್ಗೆ ಡಾ. ಬಿ. ಎ. ವಿವೇಕ ರೈ ಮಂಗಳೂರು ಅವರ ಅಭಿಪ್ರಾಯ :
ಡಾ. ದಿನೇಶ ಶೆಟ್ಟಿ ರೆಂಜಾಳ ಅವರಿಗೆ ನಮಸ್ಕಾರ
ನಿಮ್ಮ ಸಂಶೋಧನಾ ಗ್ರಂಥ ‘ಮುಂಬಯಿ ಕನ್ನಡ ಪತ್ರಿಕೋದ್ಯಮ’ ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಮತ್ತು ಪತ್ರಿಕಾರಂಗಕ್ಕೆ ಮಹತ್ವದ ಕೊಡುಗೆ. ಮುಂಬಯಿಯ ಪತ್ರಿಕೋದ್ಯಮ ವಿಸ್ತಾರವಾದದ್ದು ಮತ್ತು ಬಹುರೂಪಿಯಾದದ್ದು ಎನ್ನುವುದನ್ನು ಅಪೂರ್ವ ದಾಖಲೆಗಳ ಸಹಿತ ನೀವು ಅನಾವರಣ ಮಾಡಿದ್ದೀರಿ. ಭಾರತೀಯ ಮತ್ತು ಕನ್ನಡ ಪತ್ರಿಕೋದ್ಯಮದ ಹಿನ್ನೆಲೆಯಲ್ಲಿ ನಡಸಿದ ಅವಲೋಕನವು ನಿಮ್ಮ ಥೀಸಿಸ್ ಗೆ ಉತ್ತಮ ಬೆನ್ನೆಲುಬನ್ನು ಕೊಟ್ಟಿದೆ.
ಮುಂಬಯಿಯಲ್ಲಿ ಪತ್ರಿಕೆಗಳನ್ನು ಆರಂಭಿಸಿದ ಹಿರಿಯರ ಸಾಹಸಗಾಥೆಯೇ ರೋಮಾಂಚಕ. ಕನ್ನಡದ ಪ್ರೀತಿ ಮತ್ತು ಕನ್ನಡಿಗರನ್ನು ಬೆಸೆಯುವ ಛಲ ಇವು ಮುಂಬಯಿಯಲ್ಲಿ ಪತ್ರಿಕೆಗಳ ಮೂಲಕ ಕನ್ನಡವನ್ನು ಚಿರಂತನವಾಗಿ ಉಳಿಸಿದೆ. ಮುಂಬಯಿಯ ಕನ್ನಡ ಪತ್ರಿಕೆಗಳು ಬೆಳೆಸಿದ ಕನ್ನಡ ಸಾಹಿತಿಗಳ ವಿವರಗಳು ಬೆರಗು ಉಂಟುಮಾಡುತ್ತವೆ.
ಮುಂಬಯಿಯಲ್ಲಿ ದುಡಿಯುವ ಕನ್ನಡಿಗರ ಧ್ವನಿಯಾಗಿ ಕನ್ನಡ ಪತ್ರಿಕೆಗಳು ನಡಸಿದ ಕಾಯಕ ಅಪೂರ್ವವಾದುದು. ನಿಮ್ಮ ಮಹಾಪ್ರಬಂಧವು ಮುಂಬಯಿಯ ಒಂದು ಕಿರು ವಿಶ್ವಕೋಶವೇ ಆಗಿದೆ. ನಿಮ್ಮ ಈ ಪುಸ್ತಕವನ್ನು ಒಂದು ಆಕರ ಗ್ರಂಥವಾಗಿ ನಾನು ಬಳಸುತ್ತೇನೆ. ನಿಮ್ಮ ಪರಿಶ್ರಮ ಮತ್ತು ಕನ್ನಡ ಪ್ರೀತಿಗೆ ಅಭಿನಂದನೆಗಳು.
ನಿಮ್ಮ ಎಲ್ಲಾ ಕನ್ನಡದ ಕೆಲಸಗಳಿಗೆ ಒಳಿತನ್ನು ಕೋರುತ್ತೇನೆ.
ಡಾ. ಬಿ. ಎ. ವಿವೇಕ ರೈ
ಮಂಗಳೂರು