ದಿವಂಗತ ಮಧುಕರ್ ಶೆಟ್ಟಿ ಸಾಹೇಬರು ತಾವು ಚಾಮರಾಜನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ತಮ್ಮ ಸಂಬಂಧಿಕರು ಮನೆಗೆ ಬಂದಾಗ ಅತಿಥಿಗಳಿಗೆ ಮಲಗಲು ಒಂದು ಮಂಚವನ್ನು ಬಾಡಿಗೆಗೆ ಪಡೆದಿದ್ದರಂತೆ,ಸರ್ ಮಾತ್ರ ಸದಾ ನೆಲದ ಮೇಲೆ ಒಂದು ಚಾಪೆ ಹಾಸಿಕೊಂಡು ಮಲಗುವ ಅಭ್ಯಾಸವಿತ್ತು. ಜೀವನವನ್ನು ಹೊರೆ ಮಾಡಿಕೊಳ್ಳದೆ ಕನಿಷ್ಠ ವಸ್ತುಗಳೊಂದಿಗೆ ತೀರಾ ಅಗತ್ಯ ಅವಶ್ಯ ಪದಾರ್ಥಗಳನ್ನು ಮಾತ್ರ ಖರೀದಿಸಿ ಸ್ವಂತ ಮಾಡಿಕೊಳ್ಳುತ್ತಿದ್ದರಂತೆ. ನಿತ್ಯದ ಖರ್ಚಿನ ಬಗ್ಗೆ ಡೈರಿಯಲ್ಲಿ ಬರೆದಿಡುತ್ತಿದ್ದರಂತೆ. ತಿಂಗಳ ಕೊನೆಯಲ್ಲಿ ಅಧೀನ ಸಿಬ್ಬಂದಿಗಳಿಂದಲೂ ಸಾಲ ಪಡೆಯುತ್ತಿದ್ದರಂತೆ. ಒಟ್ಟಾರೆ ಲೆಕ್ಕದಲ್ಲಿ ಪಕ್ಕ.
ಪ್ರತಿ ಬಾರಿ ವರ್ಗಾವಣೆಯಾದಾಗಲೂ, ನಾಲ್ಕು ಬ್ಯಾಗ್ ಗಳಿಗಿಂತ ಹೆಚ್ಚಿಗೆ ಲಗೇಜ್ ಇರುತ್ತಿರಲಿಲ್ಲ. ಹಾಗೆಯೇ ಅದನ್ನು ಸಾಗಿಸಲು ಎಂದಿಗೂ ಸರ್ಕಾರಿ ವಾಹನವನ್ನು ಬಳಸಿಲ್ಲ. ಸಾಮಾನ್ಯವಾಗಿ ಕರ್ತವ್ಯ ಮಾಡಿದ ಕಡೆಯಲ್ಲಿ ಅಧಿಕಾರ ಉಪಯೋಗಿಸಿಕೊಂಡು ಕೆಲವೊಮ್ಮೆ ದುರುಪಯೋಗ ಪಡಿಸಿಕೊಂಡು ಒಂದೊಂದು ಆಸ್ತಿ ಕಟ್ಟಡ ಕಾಂಪ್ಲೆಕ್ಸ್ ಕಟ್ಟಿ ಬಾಡಿಗೆ ಬರುವ ರೀತಿ ಮಾಡಿಕೊಳ್ಳಬೇಕು ಎಂಬ ಧೋರಣೆ ಇರುವವರ ನಡುವೆ ಸಾಹೇಬರು ಮಾತ್ರ ಈ ಬಾಡಿಗೆ ಜಗತ್ತಿನಲ್ಲಿ ಒಬ್ಬ ಲೋಕ ಸಂಚಾರಿಯಂತೆ ಹೋದಲೆಲ್ಲಾ ಅಳಿಸಲಾಗದ ಆದರ್ಶ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.
ಅಜಾನುಬಾಹು ಸ್ಪುರದ್ರೂಪಿಯಾಗಿದ್ದ ಮಧುಕರ್ ಶೆಟ್ಟಿರವರು ವಿದ್ಯಾರ್ಥಿ ದೆಸೆಯಿಂದಲೂ ನಿತ್ಯ ಒಂದೇ ನಿಶ್ಚಿತ ಶಿಸ್ತಿನ ದಿನಚರಿ, ಮುಂಜಾನೆ ಏಳುವ ಅಭ್ಯಾಸ. ತಮ್ಮ ದೇಹತೂಕ ಎಂದೂ ಕೂಡ ಹೆಚ್ಚಾಗದಂತೆ ಕಾಯ್ದುಕೊಳ್ಳಲು ತಪ್ಪದೆ ನಿತ್ಯ ಕಸರತ್ತು ಮಾಡುತಿದ್ದರಂತೆ. ಹಾಗೆಯೇ ಜೀವನ ಸಂತೆಯಲ್ಲಿ ಜೀವನ ಭಾರದ ಮೂಟೆಯೂ ಹೆಚ್ಚಾಗದಂತೆ ನೋಡಿಕೊಂಡಿದ್ದಾರೆ.
ದೇಹವನ್ನು ಹೇಗೋ ಸದೃಢ ಇಟ್ಟುಕೊಳ್ಳಬಹುದು ಆದರೆ ಆಕರ್ಷಣೆ ಲಾಭಿಯ ಜಗತ್ತಿನಲ್ಲಿ ಮಾನಸಿಕ ನಿಯಂತ್ರಣ ಬದ್ಧತೆ ದೃಢತೆ ಹೊಂದುವುದು ಒಂದು ಯಜ್ಞವೇ ಸರಿ! ತನ್ನ ದೊಡ್ಡ ಹುದ್ದೆಯ ಜೊತೆಗೆ ತನ್ನ ಇತಿಮಿತಿ ಅರಿತುಕೊಂಡು ತಮ್ಮ ಸರಳ ಬದುಕಿನಲ್ಲಿ ಸಂತೃಪ್ತರಾಗಿದ್ದರು. ಆಸೆ ಅಮೀಷ ಆಕರ್ಷಣೆ ಲಾಭಿಗೆ ಮಾರುಹೋಗಿ ಜೀವನವನ್ನು ಇಕ್ಕಟ್ಟು ಬಿಕ್ಕಟು ಕಗ್ಗಂಟು ಮಾಡಿಕೊಳ್ಳುತ್ತಿರುವ ಕಾಲಘಟ್ಟಕ್ಕೆ ಮಧುಕರ್ ಶೆಟ್ಟಿರವರ ತತ್ವ ಸಿದ್ಧಾಂತ ಆದರ್ಶ ಜೀವನ ಶೈಲಿ ಕ್ರಮ ವಿಚಾರ ಧಾರೆಯಲ್ಲಿ ಸಂತೃಪ್ತಿ ಕಂಡುಕೊಳ್ಳುವ ಅಧ್ಭುತ ಜೀವನ ಸಂದೇಶವಿದೆ. ಹಿಂಬಾಲಿಸಿ ಹೋದಂತೆ ದಾರ್ಶನಿಕತೆ ಕಾಣ ಸಿಗುತ್ತದೆ.
ಆದರ್ಶಗಳ ಜೀವನ ಸಪ್ಪೆ ರುಚಿಸದು ಆದರೆ ಮಾನಸಿಕ ಸಂತೃಪ್ತಿ ನೀಡುತ್ತೆ. ಜೊತೆಗೆ ಸಮಾಜಕ್ಕೆ ಒಳ್ಳೆಯದು. ಹೇಗೆಂದರೆ ಉಪ್ಪು ಖಾರ ಹುಳಿ ಕಡಿಮೆ ಇರುವ ಆಹಾರವೂ ಕೂಡ ಸಪ್ಪೆ ಬಾಯಿಗೆ ರುಚಿಸದು ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ಒಂದು ಮಾತು, ಮಧುಕರ್ ಶೆಟ್ಟಿ ಅವರು ಬರೇ ಉನ್ನತ ವ್ಯಕ್ತಿ ಅಧಿಕಾರಿಯಾಗಿದ್ದ ಮಾತ್ರಕ್ಕೆ ಇಷ್ಟೆಲ್ಲ ಬರಿಯಬೇಕೆಂದಿಲ್ಲ ಅದೊಂದು ಉನ್ನತ ವಿಚಾರ ಧಾರೆಯ ಅಸಾಮಾನ್ಯ ವ್ಯಕ್ತಿತ್ವ ಅದಕ್ಕಾಗಿ ಈ ಅಗೆದು ಬಗೆಯುವ ಕೃಷಿ ಕಾರ್ಯ!