ಕೃಷಿ ಪ್ರಧಾನ ತೌಳವ ಸಂಸ್ಕೃತಿಯ, ಧಾರ್ಮಿಕ ಐಸಿರಿಯ, ಧರ್ಮದೇವತೆಗಳ ಆಡುಂಬೊಲದ ತುಳುನಾಡಿನಲ್ಲಿ (ಕರಾವಳಿ ಪ್ರದೇಶ) ‘ಪರತ್ ನಿಗಿಪೆರೆ ಬುಡಯ’ (ಹಳೆಯದನ್ನು ಹೊಸಕಿ ಹಾಕಲು ಬಿಡೆವು) ಎಂಬ ದೈವಗಳ ಅಭಯದ ನುಡಿಯೊಂದಿದೆ. ಆರ್ಥಿಕ ಸಂಕಷ್ಟಗಳು ಎಷ್ಟೇ ಬರಲಿ, ಹೇಗೇ ಇರಲಿ ಅವೆಲ್ಲವನ್ನೂ ಮೀರಿ ಶ್ರದ್ಧೆ, ಭಕ್ತಿ, ನಿಷ್ಠೆಯ ಮೂಲ ಮಂತ್ರವಾಗಿ ಮನೆತನದ ಪೂರ್ವಜರಿಂದ ಅನೂಚಾನವಾಗಿ ನಡೆದು ಬಂದಿರುವ ಅನನ್ಯ ಹಿನ್ನೆಲೆಯ ಸಾಂಪ್ರದಾಯಿಕ ಕಂಬಳಗಳನ್ನು ದೈವ-ದೇವತೆಗಳ ಕಟ್ಟುಕಟ್ಟಳೆಯ ಆರಾಧನೆಯೊಂದಿಗೆ, ಗೌಜಿ, ಗದ್ದಲವಿಲ್ಲದ ಧಾರ್ಮಿಕ ಆಚರಣೆಗಳೊಂದಿಗೆ ಈಗಲೂ ಸರಳವಾಗಿ ಆಚರಿಸುತ್ತ ಬಂದಿರುವುದು ದಕ್ಷಿಣದ ಈ ಸಿರಿನಾಡಿನ ಸಾಂಸ್ಕೃತಿಕ ಹಿರಿಮೆ, ದೈವಗಳ ಮಹಿಮೆ, ಜನಪದರ ಭಕ್ತಿಪಂಥದ ಗರಿಮೆ.
ರೈತನೆಂದರೆ ‘ಅನ್ನಬ್ರಹ್ಮ’. ಅನ್ನ ಕೊಡುವ ಭೂಮಿಯನ್ನು ಹಸನುಗೊಳಿಸುವ ಕೋಣಗಳೇ ಅವನ ಬದುಕಿನ ಜೀವಾಳ. ವರ್ಷವಿಡೀ ಗದ್ದೆಯ ನಂಟಿಗೆ ಅಂಟಿಕೊಂಡಿರುವ ಆತನ ಆನಂದ, ಉಲ್ಲಾಸಕ್ಕೆ ಹುಟ್ಟಿಕೊಂಡ ಕಂಬಳ ಉತ್ಸವದ ಸುತ್ತ ಈ ಮಣ್ಣಿನ ಜೀವನಾಡಿಯಂತಿರುವ ಜನಪದ ನಂಬಿಕೆಗಳ ದಟ್ಟಐತಿಹ್ಯಗಳಿವೆ. ಮಾನವ ಸಂತಾನ ಪ್ರಕ್ರಿಯೆಯ ಮೇಲೆ ಫಲ ಬೀರುವ ಪ್ರಾಕೃತಿಕ ನಿಷೇಧಗಳಿವೆ. ಮಣ್ಣಿನ ಅಂತಃಸತ್ತ್ವದಲ್ಲಿ ಹಾಸುಹೊಕ್ಕಾಗಿರುವ ದೈವ-ದೇವತೆಗಳೇ ಗ್ರಾಮಸ್ಥರ ಸಮಸ್ಯೆಗಳಿಗೆ ನ್ಯಾಯ ತೀರ್ಮಾನ ಮಾಡಿ ಅಭಯ ನೀಡುವ ನ್ಯಾಯಾಂಗ ವ್ಯವಸ್ಥೆಯ ಘನತೆಯಿದೆ. ಧರ್ಮ ಸಮನ್ವಯತೆಯ ಮುಕುಟಪ್ರಾಯವಾಗಿ, ಸಾಮರಸ್ಯದ ಪ್ರತೀಕವಾಗಿ ಕಂಬಳೋತ್ಸವಗಳಲ್ಲಿ ಗ್ರಾಮಸ್ಥರು ಕಲೆತು ಸಂಭ್ರಮಿಸಿ ಹಬ್ಬದೂಟ ಮಾಡುವ ಭಾವೈಕ್ಯದ ನಂಟಿದೆ.
ಪರಂಪರೆಯ ಅನುಷ್ಠಾನಗಳಿಗೆ ಧಕ್ಕೆ ಬಂದಾಗಲೆಲ್ಲ ಆ ಪ್ರಕ್ರಿಯೆಯಲ್ಲಿರುವವರ ಕಿವಿ ಹಿಂಡಿ, ಮೆಲ್ಲಗೆ ಚಿವುಟಿ, ಎಚ್ಚರಿಸಿ ತಮ್ಮ ಸಾರ್ವಭೌಮತೆಗೆ ಚ್ಯುತಿ ಬಾರದಂತೆ ಮೂಲದಿಂದ ಬಂದ ಆಚರಣೆಗಳನ್ನು ಮತ್ತೆ ಪುಟಿದೇಳುವಂತೆ ಮಾಡುವ ಚೈತನ್ಯಶಕ್ತಿ ಈ ನೆಲದ ಮಣ್ಣಿನ ದೈವ-ದೇವತೆಗಳಿಗಿದೆ.
ಸಾಂಪ್ರದಾಯಿಕ ಕಂಬಳ ಕೇವಲ ಬೂಟಾಟಿಕೆಯ ಅಟಾಟೋಪದ ಕ್ರೀಡೆಯಲ್ಲಿ ಆಚರಣೆಯಲ್ಲಿ ಮನೋರಂಜನೆಯೂ ಅಲ್ಲ, ಆಳವಾಗಿ ವಿಶ್ಲೇಷಿಸುತ್ತ ಹೋದರೆ ಸಾಮಾಜಿಕ ಬಂಧವಿದೆ, ಸಾಂಸ್ಕೃತಿಕ ಬೆಸುಗೆಯಿದೆ. ಅರ್ಥಶಾಸ್ತ್ರದ ವೈಖರಿಯಿದೆ. ಮೂಕ ಪ್ರಾಣಿಯೊಂದಿಗಿನ ಒಡನಾಟದ ಸಂವೇದನೆಯಿದೆ. ಕೃಷಿಗೆ ವಿಶಿಷ್ಟವೆನಿಸಿದ ಗಣಿತ ಸೂತ್ರದ ತಂತ್ರಗಾರಿಕೆಯಿದೆ. ರಾಜಕೀಯ ತಿರುವುಗಳಿವೆ. ಅಷ್ಟೇಕೆ? ಮಾನವ ಶಾಸ್ತ್ರದ ಅಧ್ಯಯನಕ್ಕೆ ನಿಲುಕುವ ವೈಜ್ಞಾನಿಕ ಚಿಂತನೆಗಳು ಮಡುಗಟ್ಟಿವೆ.
ಕೃಪೆ – ಬ್ಯೂಟಿ ಆಫ್ ತುಳುನಾಡ್