ಪಠ್ಯ ಚಟುವಟಿಕೆಗಳೊಂದಿಗೆ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುವಲ್ಲಿ ಭಾರತ್ ಸ್ಕೌಟ್ಸ್ – ಗೈಡ್ಸ್ ನ ರೋವರ್ ಮತ್ತು ರೇಂಜರ್ ವಿಭಾಗ ಅವಕಾಶ ಕಲ್ಪಿಸುತ್ತದೆ. ಆದ ಕಾರಣ ತಾವೆಲ್ಲರೂ ತಮ್ಮ ವಿದ್ಯಾರ್ಥಿಗಳನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಭಾರತ್ ಸ್ಕೌಟ್ಸ್ – ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ ಅವರು ಕರೆ ನೀಡಿದರು.
ಅವರು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಲಾಲ್ ಬಾಗ್ ನಲ್ಲಿರುವ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ, ಉಪನ್ಯಾಸಕಿಯರುಗಳ ರೋವರ್ ಮತ್ತು ರೇಂಜರ್ ಮಾಹಿತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಉದ್ಘಾಟಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಡಿ ಜಯಣ್ಣ, ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್ ಗಂಗಾಧರ್ ಆಳ್ವ, ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ್ ಭಟ್, ರಾಜ್ಯ ರೇಂಜರಿಂಗ್ ಮೇಲ್ವಿಚಾರಕರು ಹಾಗೂ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ಮಲ್ಲೇಶ್ವರಿ ಜುಜಾರೆ, ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷರಾದ ವಿಮಲಾ ರಂಗಯ್ಯ, ಜಿಲ್ಲಾ ಸ್ಕೌಟ್ ಆಯುಕ್ತರಾದ ರಾಮಶೇಷ ಶೆಟ್ಟಿ, ಜಿಲ್ಲಾ ಗೈಡ್ ಆಯುಕ್ತೆ ಜಯವಂತಿ ಸೋನ್ಸ್, ಜಿಲ್ಲಾ ಕಾರ್ಯದರ್ಶಿ ಎಂಜಿ ಕಜೆ, ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಕೆ, ಜಿಲ್ಲಾ ಸಂಘಟನಾ ಆಯುಕ್ತರು ಶಾಂತಾರಾಮ ಪ್ರಭು, ಶಿಬಿರ ನಾಯಕರು ಗುರುಮೂರ್ತಿ ನಾಯ್ಕಪು ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು 125 ಕ್ಕೂ ಅಧಿಕ ಪದವಿ ಕಾಲೇಜಿನಿಂದ 77 ಉಪನ್ಯಾಸಕರು, 117 ಉಪನ್ಯಾಸಕಿಯರು ಒಟ್ಟು 194 ಶಿಬಿರಾರ್ಥಿಗಳು ಭಾಗವಹಿಸಿದ್ದರು.