ಭಾರತಿಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸದ ಶ್ರಾವಣದಲ್ಲಿ ಮಾತ್ರ ಬಾಗಿಲು ತೆಗೆದು ಪೂಜೆ ಸಲ್ಲಿಸುವ ದೇವಾಲವೊಂದಿದೆ. ಮುಂಬಯಿಯ ವಿಲೇಪಾರ್ಲೆಯಲ್ಲಿನ ಪುರುಷೋತ್ತಮ ದೇವಾಲಯವಿದು. ಮತ್ತೆ ಈ ದೇವಾಲಯದ ಬಾಗಿಲು ತೆರೆಯುವುದು ಮುಂದಿನ ಮೂರು ವರ್ಷಗಳ ನಂತರ. ಈ ಸಲ ಜುಲೈ18 ರಿಂದ ಅಗಸ್ಟ್ 16 ರವರೆಗೆ ಇಲ್ಲಿ ದೇವರಿಗೆ ಅಧಿಕ ಮಾಸದ ಶ್ರಾವಣ ತಿಂಗಳಲ್ಲಿ ಪೂಜೆ, ಅಭಿಷೇಕ, ಹಾಗೂ ಭಕ್ತರಿಗೆ ದರ್ಶನ ಸಿಗುತ್ತದೆ. ಪುರುಷೋತ್ತಮ ಮಾಸವು ಎಲ್ಲಾ ತಿಂಗಳುಗಳಿಗಿಂತ ಭಿನ್ನವಾಗಿರುತ್ತದೆ. ಏಕೆಂದರೆ ಇದು ಪ್ರತಿ ವರ್ಷ ಬರುವುದಿಲ್ಲ. ಮೂರು ವರ್ಷಕ್ಕೊಮ್ಮೆ ಮಾತ್ರ ಬರುವುದರಿಂದ ಈ ಮಾಸದಲ್ಲಿ ವಿಶೇಷವಾಗಿ ವಿಷ್ಣು, ಸೂರ್ಯ ಮತ್ತು ಶಿವ ಈ ಮೂರು ದೇವರನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ.
ಪುರುಷೋತ್ತಮ ಮಂದಿರ್ ಜಾನಾ ಹೇ ಅಂತ ನಮ್ಮ ಬಿಲ್ಡಿಂಗ್ ಮಹಿಳಾ ಮಣಿಗಳು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುವುದನ್ನು ಕೇಳಿಸಿಕೊಂಡ ನಾನು ಎಲ್ಲಿ ಏನು ಅಂತ ವಿಚಾರಿಸಿದಾಗ ಮುಂಬಯಿಯ ವಿಲೆಪಾರ್ಲೆ ಪಶ್ಚಿಮದಲ್ಲಿ ರೈಲು ನಿಲ್ದಾಣದಿಂದ ಕೇವಲ 40 ನಿಮಿಷಗಳ ಅಂತರದಲ್ಲಿ ಪುರುಷೋತ್ತಮ ಭಗವಾನ್ ಮಂದಿರ ಅಂತ ಇದ್ದು ಇದು ಅಧಿಕ ಮಾಸದ ಶ್ರಾವಣ ತಿಂಗಳಲ್ಲಿ ಮಾತ್ರ ಈ ದೇವಸ್ಥಾನದ ಬಾಗಿಲು ತೆರೆದು. ಪೂಜಾವಿಧಿ ವಿಧಾನಗಳು ನಡೆಯುತ್ತದೆ. ಈ ವರ್ಷ ಅಧಿಕ ಮಾಸ ಮುಗಿಯುತ್ತಲೆ ಬಾಗಿಲು ಹಾಕಿದರೆ ದೇವಸ್ಥಾನಕ್ಕೆ ಮುಂದಿನ 3 ವರ್ಷಗಳು ದೇವಳದ ಬಾಗಿಲು ಯಾವುದೆ ಕಾರಣಕ್ಕೂ ತೆಗೆಯುವುದಿಲ್ಲ ಎಂದರು.
ಸರಿ ಎಂದು ನಮ್ಮ ಬಿಲ್ಡಿಂಗ್ನಿಂದ ಹೊರಟ 6 ಜನರಲ್ಲಿ ಒಬ್ಬಳು ನಾನಾಗಿರುವುದು ನನ್ನ ಭಾಗ್ಯ. ವಿಲೆಪಾರ್ಲೆಯಲ್ಲಿ ರೈಲು ಇಳಿದು ರಿಕ್ಷಾದಲ್ಲಿ ಹೊರಟ ನಾವು ದೇವಸ್ಥಾನಕ್ಕೆ ಅಣತಿ ದೂರವಿರುವಾಗಲೇ ರಿಕ್ಷಾದವರೆಂದರು ಇಲ್ಲಿಂದಲೇ ಸರತಿ ಸಾಲು ಪ್ರಾರಂಭವಾಗಿದೆ ಇಳಿಯಿರಿ ಎಂದ ಮಾತ್ರಕ್ಕೆ ಇಳಿದು ಎರಡು ಗಂಟೆ ಸಾಲಿನಲ್ಲಿ ನಿಂತು ಅಂತೂ ಇಂತು ದೇವಳದ ಒಳ ನಡೆದೆವು.
ದೇವಸ್ಥಾನದ ಪ್ರವೇಶ ದ್ವಾರದ ಎದುರಿಗೆ ದೊಡ್ಡದಾದ ಅಶ್ವಥ್ಥ ವೃಕ್ಷವೊಂದು ನಮ್ಮನ್ನು ಸ್ವಾಗತಿಸುತ್ತದೆ. ಈ ವೃಕ್ಷಕ್ಕೆ ಪುರುಷೋತ್ತಮ ದೇವರ ದರ್ಶನ ಮಾಡಿ ಬಂದವರು 31,11, 9,7 ಅಥವಾ 5 ಸುತ್ತು ಹಾಕಬೇಕಂತೆ. ಕೆಲವರು ಬಿಳಿ ಹತ್ತಿ ನೂಲನ್ನು ಅಶ್ವಥ ಮರಕ್ಕೆ ಸುತ್ತಿ ಪೂಜೆ ಸಲ್ಲಿಸುತ್ತಿದ್ದರು. ದೇವಸ್ಥಾನದ ಒಳಗೆ ಪ್ರವೇಶಿಸುತ್ತಲೇ ಒಂದು ವಿಶಾಲ ಪ್ರಾಂಗಣವಿದ್ದು ಅದರ ಮೂರು ಮಗ್ಗುಲಿಗೆ ಗಣಪತಿ, ಶಿವ -ಪಾರ್ವತಿ, ಕೃಷ್ಣ- ರುಕ್ಮಿಣಿ, ನರಸಿಂಹ, ಲಕ್ಷ್ಮಿ, ಸರಸ್ಪತಿ, ವಿಠೊಬಾ – ರುಕುಮಯಿ, ಚಾಮುಂಡಿ, ವಿಷ್ಣು, ದತ್ತಾತ್ರೇಯ, ವಾಮನ, ಆದಿಶೇಷ, ಹೀಗೆ ಅನೇಕ ದೇವರುಗಳ ಶೃಂಗರಿಸಿದ ಮೂರ್ತಿ ಇರಿಸಲಾಗಿದೆ. ಇವುಗಳ ದರ್ಶನ ಪಡೆದು ಮುಂದೆ ಸಾಗಿದರೆ ಉತ್ತರ ದಿಕ್ಕಿಗೆ ಮುಖ ಮಾಡಿದ ಪುರುಷೋತ್ತಮನ ನಿಂತ ವಿಗ್ರಹ ಅತಿ ಸುಂದರವಾಗಿ ಗೋಚರಿಸುತ್ತದೆ.
ಹೂವುಗಳಿಂದ ಶೃಂಗರಿಸಿದ ಮೂರ್ತಿ ಎದುರಿಂದ ಆ ಕಡೆ ಸರಿಯಲು ಮನಸ್ಸು ಬರುವುದಿಲ್ಲ. ಆದರೆ ಇಲ್ಲಿನ ಕಾರ್ಯಕರ್ತರು ಕ್ಷಣವು ನಿಲ್ಲಲು ಬಿಡರು. ದ್ವಾರ ಬಾಗಿಲಿನಿಂದ ಹೊರಗೆ ಬಂದು ಮನದಣಿಯೆ ದೇವರ ಶೃಂಗಾರ ನೋಡಬಹುದು. ದೇವಾಲಯದ ಇನ್ನೊಂದು ಮಗ್ಗುಲಿನಲ್ಲಿ ಮನ ಸೆಳೆವ 12 ಜೋತಿರ್ಲಿಂಗಗಳ ಪತ್ರಿರೂಪದ ಕಲ್ಲುಗಳಿದ್ದು ಅದಕ್ಕೆ ಭಕ್ತರು ಅಭಿಷೇಕ ಮಾಡುವ ಕ್ರಮವಿದೆ.
ಪುರುಷೋತ್ತಮ ದೇವರ ಪೂಜೆಯ ನಂತರ ದೇವರ ಮೂರ್ತಿಯಿಂದ ಅಣತಿ ದೂರದಲ್ಲಿ 31 ಬತ್ತಿಯಿರುವ ಕಟ್ಟಿಗೆ ತುಪ್ಪ ಹಾಕಿ ಕಟ್ಟು ಸಮೇತ ಉರಿಸಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಎಲ್ಲಾ ಕಡೆ ಬತ್ತಿ ಕಟ್ಟು ಬಿಚ್ಚಿ ದೀಪ ಹಚ್ಚಿದರೆ ಇಲ್ಲಿ ಇಡಿ ಬತ್ತಿ ಕಟ್ಟಿಗೆ ದೀಪ ಹಚ್ಚಲಾಗುತ್ತದೆ. ಮುಂದಿನ ಮೂರು ವರ್ಷಗಳ ತನಕ ಇದರ ಪ್ರಕಾಶ ದೇವರಿಗೆ ಕಾಣಿಸುತ್ತದೆ ಎಂಬ ಭಕ್ತಿ .
ಬೆಳಿಗ್ಗೆಯಿಂದಲೇ ಮಹಿಳಾ ಮಣಿಗಳ ಸಾಲು ಈ ದೇವಳದಲ್ಲಿ ಸತ್ತುವರಿದಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಾರುವಾಡಿ ಮತ್ತು ಗುಜರಾತಿಗಳಿದ್ದು ಮಹಿಳೆಯರ ಸಂಖ್ಯೆ ಅಧಿಕವಾಗಿತ್ತು. ಈ ದೇವಳದಲ್ಲಿ ಅಧಿಕ ಮಾಸದ ಪೌರಾಣಿಕ ಕಥೆಯು ಭಗವಾನ್ ವಿಷ್ಣು, ಭಗವಾನ್ ನರಸಿಂಹ ಮತ್ತು ಭಗವಾನ್ ಕೃಷ್ಣನ ಅವತಾರಗಳ ಬಗೆಗಿನ ಕಥೆಗಳಿರುತ್ತವೆ. ಅದಕ್ಕಾಗಿ ವಿಷ್ಣು ಮತ್ತು ನರಸಿಂಹನ ಪೂಜೆಯನ್ನು ತುಂಬಾನೇ ಶ್ರದ್ಧಾ – ಭಕ್ತಿಯಿಂದ ಕೈಗೊಳ್ಳುತ್ತಾರೆ. ಅದರಲ್ಲೂ ಮಹಿಳಾ ಮಣಿಗಳಿಗೆ ಇದು ಉತ್ಸವದ ದಿನ.
ಅಧಿಕ ಮಾಸದ ಶ್ರಾವಣದಲ್ಲಿ ಶ್ರೀಮದ್ ಭಗವದ್ಗೀತೆಯಲ್ಲಿ ಪುರುಷೋತ್ತಮ ಮಾಸದ ಮಹಾತ್ಮೆ, ಶ್ರೀರಾಮ ಕಥಾ ಪಾರಾಯಣ, ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ ಮತ್ತು ಪುರುಷೋತ್ತಮ ಗೀತೆಯ 14ನೇ ಅಧ್ಯಾಯವನ್ನು ಪ್ರತಿನಿತ್ಯ ಅರ್ಥಪೂರ್ಣವಾಗಿ ಪಠಿಸುತ್ತಾರೆ. ಮತ್ತೇ ಕೆಲವರು ಹನ್ನೆರಡು ಅಕ್ಷರದ ವಿಷ್ಣುವಿನ ಮಂತ್ರವಾದ ”ಓಂ ನಮೋ ಭಗವತೇ ವಾಸುದೇವಾಯ” ಎನ್ನುವ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸುತ್ತಾರೆ. ಈ ಮಾಸದಲ್ಲಿ ದೀಪ ದಾನ ಹಾಗೂ ದೇವರ ಧ್ವಜವನ್ನು ದಾನ ಮಾಡುವುದರಿಂದ ಸಾಕಷ್ಟು ಶುಭ ಫಲಗಳು ಪ್ರಾಪ್ತವಾಗುತ್ತದೆ. ಈ ತಿಂಗಳಲ್ಲಿ, ದಾನ ಮತ್ತು ದಕ್ಷಿಣೆಯ ಕೆಲಸವು ಪುಣ್ಯ ಫಲಿತಾಂಶಗಳನ್ನು ನೀಡುತ್ತದೆ. ಪುರುಷೋತ್ತಮ ಮಾಸದಲ್ಲಿ ಸ್ನಾನ, ಪೂಜೆ, ವಿಧಿವಿಧಾನಗಳು ಮತ್ತು ದಾನ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.
ಅಧಿಕ ಮಾಸದ ಪ್ರಾಮುಖ್ಯತೆಗಳಲ್ಲಿ ವಿಶೇಷ ವೃತ, ಆಚರಣೆಯ ಈ ಮಾಸವನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ. ಈ ತಿಂಗಳನ್ನು ಅಧಿಮಾಸ್ ಮತ್ತು ಮಾಲ್ ಮಾಸ್ ಎಂದೂ ಕರೆಯುವುದು ರೂಢಿ. ಈ ಅಪರೂಪದ ಪುರುಷೋತ್ತಮ ಮಾಸದಲ್ಲಿ ಶ್ರೀ ವಿಷ್ಣುವಿನ ಹೆಸರಿನಲ್ಲಿ ಮಾಡುವ ಜಪ, ಸ್ನಾನ, ಪೂಜೆ ಮತ್ತು ದಾನದಿಂದ ಅನೇಕ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ. ಪ್ರತಿ ದಿನವು ವಿಶೇಷ ಮಹತ್ವವನ್ನು ಹೊಂದಿದ್ದು ಏಕಾದಶಿ ಅಮಾವಾಸ್ಯೆ ಮತ್ತು ಪೂರ್ಣಿಮಾ ತಿಥಿ ಈ ತಿಂಗಳ ಅತ್ಯಂತ ಮಂಗಳಕರ ದಿನಗಳಾಗಿವೆ. ಈ ಮಾಸದ ಏಕಾದಶಿಯಂದು ಉಪವಾಸ ಮಾಡಿ ಪುರುಷೋತ್ತಮ ಮಾಸದ ಕಥೆಯನ್ನು ಕೇಳುವುದು ಪುಣ್ಯದ ಕೆಲಸ. ದೇವಸ್ಥಾನದ ಹೊರ ವಲಯದಲ್ಲಿ ಸಂತೋಷಿ ಮಾತ ದೇವಳವಿದ್ದು ಅದರಲ್ಲಿ ಅನು ದಿನ ಪೂಜೆ ಹಾಗೂ ಜನರ ಪ್ರವೇಶವಿದೆ. ಪುರುಷೋತ್ತಮ ದೇವರ ದ್ವಾರ ಮಾತ್ರ ಅಧಿಕ ಮಾಸದ ಶ್ರಾವಣದಲ್ಲಿ ಮಾತ್ರ ತೆರೆಯುತ್ತದೆ. ದೇವಸ್ಥಾನದ ಹೊರ ಮಗ್ಗುಲಲ್ಲಿ ದೊಡ್ಡದಾದ ಶಿವನ ಮೂರ್ತಿ ಇದ್ದು ಬದಿಯಲ್ಲಿ ಗೋಶಾಲೆಯು ಇದೆ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ