LG ಇಲೆಕ್ಟ್ರಾನಿಕ್ಸ್ ಐಪಿಓ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬೇಕು. 11,000+ ಕೋಟಿ ರೂಪಾಯಿಗಳನ್ನು ಐಪಿಓ ಮೂಲಕ ಸಂಗ್ರಹಿಸಲಿದ್ದಾರೆ. ಅಷ್ಟೂ ಹಣ ದಕ್ಷಿಣ ಕೋರಿಯಾದಲ್ಲಿರುವ ಅದರ ಮಾತೃ ಸಂಸ್ಥೆಯಾದ LG ಕೋರ್ಪ್ಗೆ ಸಂದಾಯವಾಗಲಿದೆ!!! ಲಿಸ್ಟಿಂಗ್ ಆದ ನಂತರವೂ ಅದು ಭಾರತದಲ್ಲಿ 85% ಪಾಲನ್ನು ತನ್ನಲ್ಲೇ ಇಟ್ಟುಕೊಳ್ಳಲಿದೆ. ಸೆಬಿಯ ನಿಯಮದ ಪ್ರಕಾರ ಕೆಲವು ಸಮಯದ ನಂತರ ಅದು 75% ಕ್ಕೆ ಇಳಿಯಬೇಕು. ಆಗ ಮತ್ತೆ ಅವರು ಇನ್ನಷ್ಟು ಹಣವನ್ನು ಸಂಗ್ರಹಿಸಲಿದ್ದಾರೆ. ಅದೂ ಬಹುಶಃ ದಕ್ಷಿಣ ಕೋರಿಯಾಕ್ಕೆ ಹೋಗಲಿದೆ. ಭಾರತದಲ್ಲಿ ಎಷ್ಟು ವ್ಯಾಪಾರ ಮಾಡುತ್ತಾರೋ ಅದರ 3% ಅವರು ದಕ್ಷಿಣ ಕೋರಿಯಾದ ಮಾತೃ ಸಂಸ್ಥೆಗೆ ಕೊಡಬೇಕು. ಕಳೆದ ವರ್ಷ 350 ಕೋಟಿ ರೂಪಾಯಿಗಳನ್ನು ರಾಯಲಿಟಿ ರೂಪದಲ್ಲಿ ನೀಡಿದ್ದಾರೆ. ಇಷ್ಟೇ ಅಲ್ಲ ತಾನು ಮಾಡಿದ ಲಾಭದಲ್ಲಿ ಡಿವಿಡೆಂಡ್ ಕೂಡ ತನ್ನ ಮಾತೃ ಸಂಸ್ಥೆಗೆ ನೀಡಬೇಕು. ಪ್ರತಿ ವರ್ಷವೂ ಸುಮಾರು 2,000 ಕೋಟಿ ರೂಪಾಯಿಗಳು ಡೆವಿಡೆಂಡ್ ಹೆಸರಲ್ಲಿ ಭಾರತದಿಂದ ದಕ್ಷಿಣ ಕೋರಿಯಾಕ್ಕೆ ಹೋಗುತ್ತದೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ, ಎಲ್ಜಿ ಹಾಗೂ ಭಾರತ ಸರ್ಕಾರದ ತೆರಿಗೆ ವಿಭಾಗದ ನಡುವೆ ಸುಮಾರು 4,100/- ಕೋಟಿ ರೂಪಾಯಿಗಳ ಕೇಸ್ ನಡೆದಿದೆ. ತೆರಿಗೆ ವಿಭಾಗದ ಲೆಕ್ಕಾಚಾರದ ಪ್ರಕಾರ ಎಲ್ಜಿ ಅಷ್ಟು ತೆರಿಗೆಯನ್ನು ಕಟ್ಟುವುದು ಬಾಕಿಯಿದೆ!!!

ಇಷ್ಟೆಲ್ಲಾ ಇಲ್ಲಿ ಬರೆಯುವುದಕ್ಕೆ ಕಾರಣವೆಂದರೆ, ಅಂದು ಬ್ರಿಟಿಷರು ಭಾರತವನ್ನು ಲೂಟಿ ಮಾಡಿದ್ದಕ್ಕೂ, ಇಂದು ಈ ಅಂತರಾಷ್ಟ್ರೀಯ ಕಂಪನಿಗಳು ಭಾರತವನ್ನು ಲೂಟಿ ಮಾಡುತ್ತಿರುವುದಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ (ವೈಯಕ್ತಿಕ ಅನಿಸಿಕೆ). ದಕ್ಷಿಣ ಕೋರಿಯಾ ಅದೆಷ್ಟು ಸಣ್ಣ ರಾಷ್ಟ್ರ ಆದರೂ ಅವರು ಕೂತಲ್ಲೇ ತಮ್ಮ ಉತ್ಪನ್ನಗಳ ಮೂಲಕ ಎಷ್ಟೊಂದು ಹಣ ಮಾಡುತ್ತಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕು. ಸ್ಯಾಮ್ಸಂಗ್, ಕಿಯಾ, ಹ್ಯುಂಡೈ, ಎಲ್ಜಿ, ಇತ್ಯಾದಿ ಕಂಪನಿಗಳ ವ್ಯಾಪಾರ ವಹಿವಾಟನ್ನು ಅರ್ಥ ಮಾಡಿಕೊಂಡರೆ ಅಚ್ಚರಿಯಾಗುತ್ತದೆ. ನಾವು ಆ ಮಟ್ಟವನ್ನು ತಲುಪುವುದು ಯಾವಾಗ? ಕೆಲವು ತಿಂಗಳ ಹಿಂದೆಯಷ್ಟೇ ಅಮೇರಿಕಾ ಮೂಲದ ವರ್ಲ್ಪೂಲ್ ಕಂಪನಿ ಭಾರತದಲ್ಲಿನ ತನ್ನ ಪಾಲಿನಲ್ಲಿದ್ದ ಷೇರುಗಳನ್ನು ಮಾರಿತ್ತು. ಹುಂಡೈ 25,000/- ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಪೇಟಿಎಮ್, ಓಲಾ, ಝೋಮ್ಯಾಟೋಗಳು ಐಪಿಓ ಮೂಲಕ ಚೀನಾದ ಹೂಡಿಕೆದಾರರಿಗೆ ಒಂದಿಷ್ಟು ಹಣ ಮಾಡಿಕೊಟ್ಟರು. ನಮ್ಮಲ್ಲೂ ಒಂದು ಎಲ್ಜಿ, ಸ್ಯಾಮ್ಸಂಗ್, ಆ್ಯಪಲ್ಗಳು ಹುಟ್ಟಿಕೊಳ್ಳುವುದು ಎಂದು?
ನಿಮಗೆ ನೆನಪಿದೆಯೇ? ನಮ್ಮಲ್ಲೂ ನಮ್ಮದೇ ಆದ ವಿಡಿಯೋಕಾನ್, ಒನಿಡಾ ಇದ್ದವು. ನಮ್ಮಲ್ಲಿ ಮೊದಲು ಗೊದ್ರೇಜ್ ಫ್ರಿಜ್ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಆ ಎಲ್ಲಾ ಕಂಪನಿಗಳನ್ನು ಮೂಲೆ ಗುಂಪು ಮಾಡಿದ್ದು ಯಾರು? ಇದೇ ಸ್ಯಾಮ್ಸಂಗ್, ಎಲ್ಜಿ, ಮೊದಲಾದ ವಿದೇಶಿ ಕಂಪನಿಗಳು. ಈಗ ಅವರು ಲಾಭದ ಬಹುಪಾಲು ಭಾಗವನ್ನು ನಮ್ಮ ದೇಶದಿಂದ ರಾಯಲ್ಟಿ, ಡೆವಿಡೆಂಡ್, ಷೇರು ಮಾರಾಟದ ಮೂಲಕ ಒಯ್ಯುತ್ತಿದ್ದಾರೆ. ಇಷ್ಟೆಲ್ಲಾ ಹಣ ಯಾರದ್ದು? ಸರ್ಕಾರದ್ದಾ? ಅಲ್ಲ ನಮ್ಮದು, ನಿಮ್ಮದು.