ಇಂದಿನ ಪೋಷಕರ ಕನಸುಗಳು ಎಲ್ಲವೂ ಒಂದೇ ಗುರಿಯತ್ತ ಕೇಂದ್ರೀಕರಿಸಿರುವಂತೆ ಕಾಣುತ್ತಿವೆ. ನಮ್ಮ ಮಗು ಇಂಗ್ಲಿಷ್ನಲ್ಲಿ ಓದಬೇಕು. ಈ ಭಾವನೆ ಎಷ್ಟೇ ಪ್ರೀತಿಯಿಂದ ಹುಟ್ಟಿದರೂ, ಅದರ ಪರಿಣಾಮಗಳು ಎಷ್ಟೋ ಬಾರಿ ನೋವಿನ ಕಥೆಯಾಗುತ್ತವೆ. ಮಗುವಿನ ಭವಿಷ್ಯ ಹೊಳೆಯಬೇಕೆಂಬ ಆಶೆಯ ಹಿಂದೆ, ಅನೇಕ ಪೋಷಕರು ಸಾಲದ ಬಲೆಗೆ ಸಿಲುಕಿದ್ದಾರೆ. ಖಾಸಗಿ ಶಾಲೆಗಳ ಬಾಗಿಲು ತೆರೆಯುತ್ತಿದ್ದಂತೆ ಶುರುವಾಗುತ್ತದೆ ಹಣದ ಪಟ್ಟಿ ಪ್ರವೇಶ ಶುಲ್ಕ, ತಿಂಗಳ ಫೀ, ಬಸ್ ಶುಲ್ಕ, ಪುಸ್ತಕ, ಯೂನಿಫಾರ್ಮ್ ಮತ್ತು ಅನೇಕ ಅತಿರೇಕದ ‘ಅಕಾಡೆಮಿ’ ಖರ್ಚುಗಳು. ಪ್ರತಿ ತಿಂಗಳು ಪೋಷಕರು ಕೈಯಲ್ಲಿ ಬರುವ ವೇತನದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಈ ಖರ್ಚಿಗೆ ಕಳೆದುಕೊಳ್ಳುತ್ತಾರೆ. ಕೆಲವರು ಸಾಲ ಮಾಡುತ್ತಾರೆ. ಕೆಲವರು ಚಿನ್ನದ ಉಂಗುರ, ಭೂಮಿ ಅಥವಾ ಬಾಡಿಗೆಯ ಮನೆಯ ಹಣವನ್ನೇ ಶಿಕ್ಷಣದ ಹೆಸರಲ್ಲಿ ತ್ಯಜಿಸುತ್ತಾರೆ.

ಆದರೆ ಈ ಸಾಲದ ಹೊರೆ ಪೋಷಕರಿಗೆ ಮಾತ್ರವಲ್ಲ, ಮಕ್ಕಳಿಗೂ ಕಾಡುತ್ತದೆ. ಪೋಷಕರು ದಿನಪೂರ್ತಿ ಚಿಂತೆಯಿಂದ ತುಂಬಿರುವಾಗ, ಮಗುವು ಮನೆಯಲ್ಲಿ ನೆಮ್ಮದಿಯಿಂದ ಕಲಿಯುವುದು ಹೇಗೆ ಸಾಧ್ಯ? ನಾವು ನಿನ್ನ ಶಿಕ್ಷಣಕ್ಕೆ ಇಷ್ಟು ಸಾಲ ಮಾಡಿದ್ದೇವೆ, ನಿನ್ನಿಂದ ದೊಡ್ಡ ನಿರೀಕ್ಷೆಯಿದೆ ಎನ್ನುವ ಮಾತು ಮಕ್ಕಳ ಕಿವಿಯಲ್ಲಿ ದಿನವೂ ಮೊಳಗುತ್ತದೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಹುಟ್ಟುವ ಒತ್ತಡ ಅಳತೆ ಮಾಡಲಾಗದಷ್ಟು ಭಾರವಾದುದು. ಶಾಲೆಯ ಪಾಠಕ್ಕಿಂತ ಹೆಚ್ಚು ಭಾರವಾಗುವುದು ಪೋಷಕರ ನಿರೀಕ್ಷೆ. ಅಂಕ ಕಡಿಮೆಯಾದರೂ ಶಿಕ್ಷೆ, ಸ್ಪರ್ಧೆಯಲ್ಲಿ ಸೋತರೂ ಟೀಕೆ ಇವುಗಳೆಲ್ಲವೂ ಮಕ್ಕಳ ಮಾನಸಿಕ ಶಾಂತಿಯನ್ನು ಕಸಿದುಕೊಳ್ಳುತ್ತವೆ. ಅವರ ಕಣ್ಗಳಲ್ಲಿ “ಓದುವ ಖುಷಿ” ನಿಧಾನವಾಗಿ ನಶಿಸುತ್ತಾ ಹೋಗುತ್ತದೆ.
ಇಂಗ್ಲಿಷ್ ಮೀಡಿಯಂ ಶಾಲೆಗಳು ಭವಿಷ್ಯವನ್ನು ಹೊಳೆಯುವಂತೆ ತೋರುತ್ತವೆ. ಆದರೆ ಅದು ಕೇವಲ ಬಾಹ್ಯ ಆಕರ್ಷಣೆ. ಭಾಷೆ ಜೀವನ ರೂಪಿಸುವುದಿಲ್ಲ; ಶಿಕ್ಷಣದ ಮೌಲ್ಯ, ಶಿಕ್ಷಕರ ನಿಷ್ಠೆ ಮತ್ತು ಪಾಠದ ಪ್ರಾಮಾಣಿಕತೆಯೇ ಮಗುವಿನ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಈ ಅಂಶಗಳು ಸರಕಾರಿ ಶಾಲೆಗಳಲ್ಲಿ ಬೇರೂರಿವೆ. ಸರಕಾರಿ ಶಾಲೆಗಳು ಕೇವಲ ಬಡವರ ಶಾಲೆ ಅಲ್ಲ. ಅದು ಸಮಾನತೆಯ ಪಾಠಶಾಲೆ. ಅಲ್ಲಿ ಎಲ್ಲಾ ವರ್ಗದ ಮಕ್ಕಳು ಒಂದೇ ಮೇಜಿನ ಬಳಿ ಕುಳಿತು ಕಲಿಯುತ್ತಾರೆ, ಅಲ್ಲಿ ಶಿಕ್ಷಕರು ‘ಗುರು’ ಮಾತ್ರವಲ್ಲ, ‘ಮಾರ್ಗದರ್ಶಕರು’. ಪುಸ್ತಕ, ಮಧ್ಯಾಹ್ನದ ಊಟ, ಉಡುಪು, ಬೂಟು ಇವುಗಳೊಂದಿಗೆ ಅಲ್ಲಿ ದೊರೆಯುವುದು ಮಾನವೀಯ ಮೌಲ್ಯ. ಆದರೆ ವಿಷಾದಕರ ವಿಷಯವೆಂದರೆ, “ಇಂಗ್ಲಿಷ್ ಓದಿದರೆ ಮಾತ್ರ ದೊಡ್ಡವರು ಆಗುತ್ತಾರೆ” ಎಂಬ ತಪ್ಪು ಕಲ್ಪನೆ ಪೋಷಕರ ಮನಸ್ಸನ್ನು ಆವರಿಸಿದೆ. ಈ ಭ್ರಮೆಯ ಫಲವೇ ಖಾಸಗಿ ಶಿಕ್ಷಣದ ಬಲೆ. ಪೋಷಕರ ಸಾಲದ ನೋವು, ಮಕ್ಕಳ ಒತ್ತಡದ ಕೂಗು ಇವುಗಳ ಮಧ್ಯೆ ನಿಜವಾದ ಶಿಕ್ಷಣ ಅಳಿದುಹೋಗುತ್ತಿದೆ.
ಕನ್ನಡ ಮಾಧ್ಯಮದಲ್ಲಿ ಕಲಿತವರೇ ಇಂದು ವೈದ್ಯರು, ಇಂಜಿನಿಯರ್ಗಳು, ವಿಜ್ಞಾನಿಗಳು, ರಾಜಕೀಯ ನಾಯಕರು ಆಗಿದ್ದಾರೆ. ಅವರ ಯಶಸ್ಸಿಗೆ ಕಾರಣ ಇಂಗ್ಲಿಷ್ ಅಲ್ಲ, ಅವರ ಪರಿಶ್ರಮ ಮತ್ತು ಕನ್ನಡದಲ್ಲಿ ಬೆಳೆದ ಆತ್ಮವಿಶ್ವಾಸ. ನಾವು ಅದನ್ನು ಮರೆಯಬಾರದು. ಆದ್ದರಿಂದ ಪೋಷಕರೇ, ಇಂಗ್ಲಿಷ್ ಮೋಹದ ಹಿಂದೆ ಓಡುವುದನ್ನು ನಿಲ್ಲಿಸಿ. ನಿಮ್ಮ ಮಗುವಿನ ನೆಮ್ಮದಿಯತ್ತ ನೋಡಿ. ಸಾಲದ ಕಾಗದದಲ್ಲಿ ಭವಿಷ್ಯ ಬರೆದುಬಿಡುವ ಬದಲು, ಸರಕಾರಿ ಶಾಲೆಯ ಬ್ಲ್ಯಾಕ್ಬೋರ್ಡ್ನಲ್ಲಿ ಅದನ್ನು ಬರೆದುಕೊಡಿ. ಅಲ್ಲಿ ಪಾಠವಿದೆ, ಪೋಷಣೆ ಇದೆ, ಪ್ರಾಮಾಣಿಕತೆ ಇದೆ. ಮಗು ಯಾವ ಭಾಷೆಯಲ್ಲಾದರೂ ಓದಬಹುದು, ಆದರೆ ಅದು ಸಂತೋಷದಿಂದ ಕಲಿಯುವ ವಾತಾವರಣದಲ್ಲಿ ಇರಬೇಕು. ಸರಕಾರಿ ಶಾಲೆಯೇ ಅದಕ್ಕೆ ಸೂಕ್ತ ನೆಲೆ. ಶಿಕ್ಷಣ ಸಾಲದಿಂದ ಅಲ್ಲ ನಂಬಿಕೆಯಿಂದ ಬೆಳೆಯಬೇಕು. ಸರಕಾರಿ ಶಾಲೆಗಳು ಆ ನಂಬಿಕೆಯ ಮೂಲಗಳು. ಅವನ್ನು ಉಳಿಸೋಣ, ಬೆಳೆಸೋಣ.