ಪ್ರಾಚೀನ ತುಳುನಾಡಿನ ತುಳುವೇಶ್ವರ ದೇವಸ್ಥಾನ ಬಸ್ರೂರಿನಲ್ಲಿ ಅಕ್ಟೋಬರ್ 6 ರಿಂದ ಆರಂಭಗೊಂಡ ಅಷ್ಟಮಂಗಳ ಪ್ರಶ್ನೆ ಚಿಂತನೆ ವೇಳೆ ಅತ್ಯಂತ ಅದ್ಭುತ ಮತ್ತು ಮಹತ್ವದ ಆಧ್ಯಾತ್ಮಿಕ ಕುರುಹು ಪತ್ತೆ ಸಂಭವಿಸಿದೆ. ಪ್ರಶ್ನೆಯ ಸಂದರ್ಭದಲ್ಲಿ ದೇವತಾಪ್ರೇರಿತ ಸಂದೇಶದ ಮೂಲಕ ಮುಳಲದೇವಿ ತುಳುವೇಶ್ವರಿ ದೇವಾಲಯದ ಅಸ್ತಿತ್ವ ಮತ್ತು ಅದರ ತಾತ್ತ್ವಿಕ ಮಹತ್ವ ಬೆಳಕಿಗೆ ಬಂದಿದೆ. ಪುರಾಣೋಕ್ತ ಪ್ರಕಾರ, ಆದಿ ವಂದಿತ ಜಗದೀಶ್ವರಿ ಎಂಬ ಹೆಸರಿನಿಂದ ಪ್ರಸಿದ್ಧಳಾದ ಈ ದೇವಿ, ತುಳುವೇಶ್ವರನ ಪ್ರಾಣಸಖಿ ಎಂದೂ ಗುರುತಿಸಲ್ಪಟ್ಟಿದ್ದಾಳೆ. ತುಳುವೇಶ್ವರ ದೇವಾಲಯದ ಪೂರ್ವ ದಿಕ್ಕಿನಲ್ಲಿ ಈ ದೇವಾಲಯದ ಕುರುಹುಗಳು ಪತ್ತೆಯಾಗಿದ್ದು, ಆಕೆ ಪೂಜಿತಳಾದ ದೇವಾಲಯದಲ್ಲಿ ಅತ್ಯಂತ ರಹಸ್ಯಮಯ ತಾಂತ್ರಿಕ ಶಕ್ತಿಯ ಮೇರು ಶ್ರೀಚಕ್ರ ಸ್ಥಾಪಿತವಾಗಿದ್ದುದಾಗಿ ತಿಳಿದುಬಂದಿದೆ. ಈ ಶ್ರೀ ಚಕ್ರವು ಕಾಲಕ್ರಮೇಣ ನೇಪಾಳ ದೇಶಕ್ಕೆ ಹಸ್ತಾಂತರಗೊಂಡಿದೆ ಎಂಬ ಮಾಹಿತಿಯೂ ಪ್ರಶ್ನೆಯ ವೇಳೆ ಸ್ಪಷ್ಟವಾಯಿತು. ಈ ಸ್ಥಿಸ್ತ್ಯಂತಾರದಿಂದಾಗಿ ಈ ದೇವಾಲಯಗಳು ಸಂಪೂರ್ಣವಾಗಿ ಕ್ಷಯ ಸಂಭವಿಸಿದೆ ಎಂದು ತಿಳಿದುಬಂದಿದೆ.

ಪ್ರಶ್ನೆಯ ಸಂದೇಶದ ಪ್ರಕಾರ, ಈ ದೇವಿಯ ಶ್ರೀ ಚಕ್ರವನ್ನು ಮರು ಹುಡುಕಿ, ಅದರ ಪೂಜಾ ಕ್ರಮದೊಂದಿಗೆ ಮರುಸ್ಥಾಪನೆ ಮಾಡಿದಲ್ಲಿ, ಇಡೀ ಭಾರತ ದೇಶದ ಆಧ್ಯಾತ್ಮಿಕ ಪುನರುಜ್ಜೀವನಕ್ಕೂ, ಶ್ರೇಷ್ಠ ಯುಗದ ಆರಂಭಕ್ಕೂ ಕಾರಣವಾಗಲಿದೆ ಎಂಬ ವಿಶಿಷ್ಟ ಸಂದೇಶವೂ ಪ್ರಕಟವಾಗಿದೆ. ಈ ಪತ್ತೆಯು ತುಳುನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆಯುವಂತದ್ದು. ತುಳುವೇಶ್ವರ ಹಾಗೂ ತುಳುವೇಶ್ವರಿ ದೇವಿಯ ಎರಡೂ ದೇವಾಲಯಗಳು ಜೊತೆ ಜೊತೆಯಾಗಿ ಜೀರ್ಣೋದ್ಧಾರಗೊಳ್ಳಬೇಕೆಂಬ ಸೂಚನೆ ಅಷ್ಟಮಂಗಳ ಪ್ರಶ್ನೆಯಲ್ಲಿ ದೊರೆತಿದೆ. ಈ ಹಿನ್ನೆಲೆಯಲ್ಲಿ, ತುಳುವರ್ಲ್ಡ್ ಫೌಂಡೇಶನ್ ಈ ಪತ್ತೆಯ ಕುರಿತು ತಾತ್ತ್ವಿಕ ಹಾಗೂ ಆಧ್ಯಾತ್ಮಿಕ ವಿಶ್ಲೇಷಣೆಯನ್ನು ಆರಂಭಿಸಿದ್ದು, ಮುಂದಿನ ಕ್ರಮಗಳು ಮತ್ತು ಮರು ಸ್ಥಾಪನಾ ಕಾರ್ಯಯೋಜನೆ ರೂಪಿಸಲು ಸಜ್ಜಾಗಿದೆ.
ಅಷ್ಟಮಂಗಳ ಪ್ರಶ್ನೆಯಂತೆ, ಈ ಮಹತ್ಕಾರ್ಯದಲ್ಲಿ ನೀಲೇಶ್ವರದಿಂದ ಅಂಕೋಲವರೆಗಿನ ತುಳುನಾಡಿನ ಎಲ್ಲಾ ಮನೆತನಗಳು, ಸಾಧು ಸಂತರವರು ಹಾಗೂ ಪ್ರಮುಖ ವ್ಯಕ್ತಿತ್ವಗಳು ಸೇರಿ ಸಮಗ್ರ ಸಮಿತಿಯನ್ನು ರಚಿಸಿ, ತುಳುನಾಡಿನ ಈ ದೇವಾಲಯಗಳ ಪುನರುತ್ಥಾನದ ದಾರಿ ತೋರಲು ಸೂಚನೆ ನೀಡಲಾಗಿದೆ. ತುಳುನಾಡಿನ ಜನಪದ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪಾರಂಪರ್ಯದ ಪುನರುದ್ಧಾರಕ್ಕೆ ಈ ಪತ್ತೆಯು ಹೊಸ ಬೆಳಕು ತಂದಿದೆ. ತುಳುವೇಶ್ವರಿ ದೇವಾಲಯದ ಪತ್ತೆ ತುಳುವರಲ್ಲಿ ಹೊಸ ಭಕ್ತಿ, ಹೊಸ ನಂಬಿಕೆ ಮತ್ತು ಹೊಸ ಚೈತನ್ಯವನ್ನು ಮೂಡಿಸಿದೆ ಎಂದು ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ (ಅಬುಧಾಬಿ) ಅಭಿಪ್ರಾಯಪಟ್ಟಿದ್ದಾರೆ.