ಮುಂಬೈ ವಿಶ್ವವಿದ್ಯಾಲಯದ ಕುಸುಮಾಗ್ರಜ ಸಭಾಂಗಣದಲ್ಲಿ ಕುಸುಮೋದರ ಶೆಟ್ಟಿಯವರಿಗೆ ಗೌರವ ಗ್ರಂಥ ಅರ್ಪಣೆಯ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಎಲ್ಲರ ಬಗ್ಗೆ ಗ್ರಂಥ ರಚನೆ ಆಗುವುದಿಲ್ಲ. ಸಮಾಜದಲ್ಲಿನ ಅರ್ಹ ವ್ಯಕ್ತಿಗಳಿಗೆ ಮಾತ್ರ ಇಂತಹ ಗ್ರಂಥ ರಚನೆಯಾಗಿ ಅರ್ಪಣೆಯಾಗುತ್ತದೆ. ಬಡತನದಿಂದ ಮೇಲೆದ್ದು ಕಠಿಣ ಪರಿಶ್ರಮದಿಂದ ತಮ್ಮ ಉದ್ಯಮದಲ್ಲಿ ಸಾಧನೆಯೊಂದಿಗೆ ಸಮಾಜಮುಖಿಯಾಗಿ ಬದುಕು ಕಟ್ಟಿಕೊಂಡಿರುವ ಶ್ರೇಷ್ಠ ವ್ಯಕ್ತಿತ್ವದ ಕುಸುಮೋದರ ಶೆಟ್ಟಿ ಅವರಿಗೆ ಗೌರವ ಗ್ರಂಥ ಅರ್ಪಣೆಯಾಗಿರುವುದು ತುಂಬಾ ಸಂತೋಷವಾಗಿದೆ. ಕುಸುಮೋದರ ಶೆಟ್ಟಿಯವರ ತಾಯಿ ಭವಾನಿ ಶೆಟ್ಟಿ ಅವರು ತಮ್ಮ ಸಂಸಾರಕ್ಕೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರವನ್ನು ನೀಡಿದ್ದಾರೆ. ಅದನ್ನು ಕುಸುಮೋದರ ಶೆಟ್ಟಿಯವರು ತನ್ನ ಜೀವನದಲ್ಲಿ ಮೈಗೂಡಿಸಿಕೊಂಡು ಬೆಳೆದಿದ್ದರಿಂದ ಅವರು ಇಂದು ಈ ಗೌರವ ಗ್ರಂಥ ಸ್ವೀಕರಿಸುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮಹಾರಾಷ್ಟ್ರದ ನೆಲದಲ್ಲಿ ತನ್ನ ತಾಯಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಬಡವರ ಕಣ್ಣೀರು ಒರೆಸುವ ಕಾಯಕವನ್ನು ಕುಸುಮೋದರ ಶೆಟ್ಟಿ ಹಾಗೂ ಅವರ ಪರಿವಾರದವರು ಮಾಡುತ್ತಾ ಬಂದಿರುವುದು ಅಭಿನಂದನೀಯ. ದೇವರು ಕುಸುಮೋದರ ಶೆಟ್ಟಿ ಅವರಿಗೆ ದುಡ್ಡು ಸಂಪತ್ತಿನ ಜೊತೆಗೆ ಮಾನವೀಯ ಗುಣವನ್ನು ಅನುಗ್ರಹಿಸಿದ್ದಾರೆ. ಆದ್ದರಿಂದ ಅವರು ಧರ್ಮ ಕಾರ್ಯ- ಸತ್ಕಾರ್ಯಗಳಿಗೆ ತಮ್ಮ ಸಂಪತ್ತಿನ ಆಲ್ಫಾಂಶವನ್ನು ವಿನಿಯೋಗಿಸುತ್ತಾ ಬಂದಿದ್ದಾರೆ. ಬಡವರ ಕಣ್ಣೀರು ಒರೆಸಿ ಎಲ್ಲರೊಂದಿಗೆ ಬೆರೆತು ಪ್ರೀತಿಯನ್ನು ಹಂಚಿ ಬಾಳುವ ಕುಸುಮೋದರ ಶೆಟ್ಟಿ ಅವರದ್ದು ಆದರ್ಶ ವ್ಯಕ್ತಿತ್ವ. ಶ್ರೇಷ್ಠ ಸಾಧಕ ಹಾಗೂ ಸಮಾಜ ಸೇವಕ ಕುಸುಮೋದರ ಶೆಟ್ಟಿ ಅವರ ಜೀವನ ಚರಿತ್ರೆಯನ್ನು ಗ್ರಂಥದಲ್ಲಿ ಉತ್ತಮವಾಗಿ ದಾಖಲಿಸಿದ ಡಾ| ದಿನೇಶ್ ಶೆಟ್ಟಿ ರೆಂಜಾಳ ಕೂಡಾ ಅಭಿನಂದನೀಯರು ಎಂದು ತುಳು ಸಂಘ ಬರೋಡಾ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ ನುಡಿದರು. ಅವರು ವಿದ್ಯಾನಗರಿ ಕಲೀನಾ ಮುಂಬಯಿ ವಿಶ್ವವಿದ್ಯಾಲಯದ ಕವಿ ಕುಸುಮಾಗ್ರಜ ಸಭಾಂಗಣ, ಮರಾಠಿ ಭಾಷಾ ಭವನ ಇಲ್ಲಿ ಮುಂಬಯಿ ವಿಶ್ವವಿದ್ಯಾಲಯ ಪ್ರಕಟಿತ ಡಾ| ಅಶೋಕ್ ಆಳ್ವ ಹಾಗೂ ಡಾ| ದಿನೇಶ್ ಶೆಟ್ಟಿ ರೆಂಜಾಳ ಪ್ರಧಾನ ಸಂಪಾದಕತ್ವದಲ್ಲಿ ರಚನೆಗೊಂಡ ‘ಕುಸುಮೋದರ’ ಗೌರವ ಗ್ರಂಥವನ್ನು ಬಿಡುಗಡೆಗೊಳಿಸಿದ ಬಳಿಕ ಅದನ್ನು ಕುಸುಮೋದರ ಶೆಟ್ಟಿಯವರಿಗೆ ಆರ್ಪಿಸಿ ಮಾತನಾಡಿದರು. ಮುಂಬೈ ಬಂಟರ ಸಂಘದ ಬಂಟರ ವಾಣಿ ಮಾಸಪತ್ರಿಕೆಯ ಗೌರವ ಸಂಪಾದಕರಾದ ಅಶೋಕ್ ಪಕ್ಕಳ ಗ್ರಂಥವನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಕುಸುಮೋದರ ಶೆಟ್ಟಿ ಹಾಗೂ ಸರಿತಾ ಶೆಟ್ಟಿ ದಂಪತಿಯನ್ನು ವಿಶೇಷ ರೀತಿಯಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕುಸುಮೋದರ ಶೆಟ್ಟಿ ದಂಪತಿಯ ಪುತ್ರ ಜೀಕ್ಷಿತ್ ಕೆ ಶೆಟ್ಟಿ, ಪುತ್ರಿ ಶಿಖಾ ಎ ಶೆಟ್ಟಿ, ಅಳಿಯ ಅಭಿಷೇಕ್ ಆನಂದ್ ಶೆಟ್ಟಿ, ಸೊಸೆ ಪ್ರಿಯಾಂಕಾ ಜಿ ಶೆಟ್ಟಿ, ಮೊಮ್ಮಗ ಖೈಯಾಂಶ್ ಜಿ ಶೆಟ್ಟಿ ಉಪಸ್ಥಿತರಿದ್ದರು.

ಮುಂಬಯಿ ಮಹಾನಗರದ ಈ ವಿಶ್ವವಿದ್ಯಾಲಯದಲ್ಲಿ ಡಾ ಜಿ. ಎನ್ ಉಪಾಧ್ಯ ಕನ್ನಡವನ್ನು ಕಟ್ಟುವ, ಕನ್ನಡದ ಮನಸ್ಸನ್ನು ಬೆಸೆಯುವ ಕಾಯಕವನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಇಂದು ಒಳ್ಳೆಯ ವ್ಯಕ್ತಿತ್ವದ ಕುಸುಮೋದರ ಶೆಟ್ಟಿ ಅವರಿಗೂ ಗೌರವ ಗ್ರಂಥ ಅರ್ಪಣೆಯಾಗಿದೆ. ಇಂತಹ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರಲು ಅದರ ಹಿಂದೆ ಅನೇಕ ಪ್ರೀತಿಯ ಕಾರಣಗಳ ಜೊತೆಗೆ ಜೀವಂತಿಕೆ ಕೂಡಾ ಇರಬೇಕಾಗುತ್ತದೆ. ಕುಸುಮೋದರ ಶೆಟ್ಟಿ ಅವರು ಮಾಡಿರುವ ಸಾಧನೆ ದೊಡ್ಡದು. ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ವೃತ್ತಿ ಬದುಕಿನಲ್ಲಿ 30- 35 ವರ್ಷಗಳನ್ನು ಪ್ರಾಮಾಣಿಕವಾಗಿ ಕಳೆದವರ ವ್ಯಕ್ತಿತ್ವದಲ್ಲಿ ಒಂದು ತಾತ್ವಿಕ ಆಕೃತಿಗಳು ರೂಪುಗೊಳ್ಳುತ್ತದೆ. ಮುಂದೆ ಅಂತಹ ವ್ಯಕ್ತಿಗಳನ್ನು ತಾತ್ವಿಕ ಆಕೃತಿಯ ಪ್ರಭಾವಲಯದ ಪರಿಧಿಯಲ್ಲಿ ಸಮಾಜ ಗುರುತಿಸುತ್ತದೆ ಎನ್ನುವುದಕ್ಕೆ ಇವತ್ತು ಇಲ್ಲಿ ನಡೆದ ಅಭಿನಂದನಾ ಗ್ರಂಥದ ಅರ್ಪಣೆಯ ಕಾರ್ಯಕ್ರಮವೇ ಸಾಕ್ಷಿ. ಕುಸುಮೋದರ ಶೆಟ್ಟಿ ಅವರ ನಿಸ್ವಾರ್ಥ ಸೇವೆ, ಸಾಮಾಜಿಕ ಕಳಕಳಿ ದಾನ ಧರ್ಮ, ದೀನ ದುರ್ಬಲರಲ್ಲಿ ಆತ್ಮಸ್ಥೈರ್ಯ ತುಂಬಿಸುವ ಕಾಯಕವನ್ನು ಪ್ರಜ್ಞಾವಂತ ನಾಗರೀಕರಾದ ನಾವೆಲ್ಲಾ ಮೆಚ್ಚಲೇಬೇಕು. ಸಮಾಜಕ್ಕೆ ಕುಸುಮೋದರ ಶೆಟ್ಟಿಯವರವರದ್ದು ಕಾಲೋಚಿತ ಹಾಗೂ ಕಾಲಾತೀತ ಕರ್ತವ್ಯಗಳಾಗಿವೆ. ನಾವು ಬಡತನವನ್ನು ಸಹಿಸಿಕೊಳ್ಳುವುದು ಕಷ್ಟವಲ್ಲ. ಆದರೆ ಬಡತನದ ಹಿಂದಿನ ಅವಮಾನವನ್ನು ಅರಿತುಕೊಂಡರೆ ಬದುಕಿನಲ್ಲಿ ನಾವು ಏನಾದರೂ ಸಾಧನೆ ಮಾಡಬಹುದೆಂಬುದನ್ನು ಕುಸುಮೋದರ ಶೆಟ್ಟಿಯವರು ತೋರಿಸಿಕೊಟ್ಟಿದ್ದಾರೆ. ನಮ್ಮ ಬದುಕಿನಲ್ಲಿ ಎಲ್ಲದರಲ್ಲೂ ನಾವು ಖುಷಿ ಪಡಬೇಕು. ಆದರೆ ಸಾಧನೆ ವಿಚಾರದಲ್ಲಿ ಮಾತ್ರ ನಮ್ಮಲ್ಲಿ ಅತೃಪ್ತಿ ಇರಬೇಕು. ಸಾಧನೆಯ ವಿಚಾರದಲ್ಲಿ ನಾವು ತೃಪ್ತಿಯನ್ನು ಪಡಕೊಂಡರೆ ಅದು ಸ್ಥಾಯಿ ಆಗುತ್ತದೆ. ಇದನ್ನು ನಾವು ಕುಸುಮೋದರ ಶೆಟ್ಟಿಯವರ ಕೃತಿಯಲ್ಲಿ ಕಾಣಬಹುದು. ಪಡೆಯುವ ಸುಖಕ್ಕಿಂತ ನೀಡುವ ಸುಖ ಬಹಳ ದೊಡ್ಡದು ಎಂದು ಕುಸುಮೋದರ ಶೆಟ್ಟಿ ಅವರು ಅರಿತು ಬಾಳಿದವರು. ಯುವ ಜನತೆಗೆ ಕುಸುಮೋದರ ಶೆಟ್ಟಿ ಅವರ ಬದುಕು ಮಾದರಿ ಎಂದು ಡಾ. ಮಂಜುನಾಥ್ ಕೋಟ್ಯನ್ ಹೇಳಿದರು.
ಅಹ್ಮದ್ ನಗರದ ಅತಿಥಿ ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಸರ್ವಿಸಸ್ ಇದರ ಆಡಳಿತ ನಿರ್ದೇಶಕ ಕೆ. ಕೆ ಶೆಟ್ಟಿ ಮಾತನಾಡಿ, ಕುಸುಮೋದರ ಶೆಟ್ಟಿ ಅವರ ಗುರುಗಳು ಹಾಗೂ ತಂದೆ ತಾಯಿಯರು ಧನ್ಯರು. ಗುರುಗಳ ಮಾರ್ಗದರ್ಶನ, ತಂದೆ ತಾಯಿಯರು ನೀಡಿರುವ ಸಂಸ್ಕೃತಿ- ಸಂಸ್ಕಾರವನ್ನು ಜೀವನದಲ್ಲಿ ಆಳವಡಿಸಿಕೊಂಡು ಸಮಾಜಮುಖಿ ಕೆಲಸವನ್ನು ಮಾಡುವುದರ ಜೊತೆಗೆ ಉದ್ಯಮದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ. ಅವರೋರ್ವ ಸರಳ ವ್ಯಕ್ತಿ. ಅಂತಹ ವ್ಯಕ್ತಿಯ ದೊಡ್ಡ ಮಟ್ಟದ ಈ ಕಾರ್ಯಕ್ರಮವನ್ನು ವಿಶ್ವ ವಿದ್ಯಾಲಯದಲ್ಲಿನ ವಿದ್ಯಾ ದೇಗುಲದಲ್ಲಿ ಆಯೋಜಿಸಿರುವುದರಿಂದ ಈ ಗೌರವ ಗ್ರಂಥ ಅರ್ಪಣೆಯ ಕಾರ್ಯಕ್ರಮದ ಮೆರಗು ಹೆಚ್ಚಾಗಿದೆ ಎಂದರು. ಮುಲುಂಡ್ ಬಂಟ್ಸ್ ನ ನಿಕಟಪೂರ್ವ ಅಧ್ಯಕ್ಷ ಶಾಂತರಾಮ್ ಬಿ ಶೆಟ್ಟಿಯವರು ಮಾತನಾಡಿ, ಕುಸುಮೋದರ ಶೆಟ್ಟಿಯವರ ಅಪೂರ್ವ ವ್ಯಕ್ತಿತ್ವ ಕೇವಲ ಬಂಟ ಸಮಾಜದವರಲ್ಲದೇ ಇತರ ಎಲ್ಲಾ ಸಮಾಜದವರನ್ನು ಪ್ರೀತಿಸುವ ಸಹಾಯ ಮಾಡುವ ದೊಡ್ಡ ಗುಣ ಕುಸುಮೋದರ ಶೆಟ್ಟಿಯವರಲ್ಲಿದೆ. ಕಳೆದ ಎರಡು ದಶಕಗಳಿಂದ ನಾನು ಇವರ ಒಡನಾಟದಲ್ಲಿದ್ದೇನೆ. ಸಾಮಾಜಿಕವಾಗಿ ಕೆಲಸ ಮಾಡುವಾಗ ಅವರಿಂದ ಬಹಳಷ್ಟು ಕಲಿಯಲು ಸಿಗುತ್ತದೆ. ಅವರು ಬಂಟರ ಸಂಘವನ್ನು ದೇಗುಲವೆಂದು ನಂಬಿ ತುಂಬಾ ಪ್ರೀತಿ ಮಾಡಿದವರು. ಸಂಘದಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಪ್ರತಿಯೊಂದು ಸೇವಾ ಕಾರ್ಯದಲ್ಲಿ ಕೈಜೋಡಿಸಿದವರು. ಅಂತಹ ಶ್ರೇಷ್ಠ ವ್ಯಕ್ತಿತ್ವದ ಕುಸುಮೋದರ ಶೆಟ್ಟಿ ಅವರಿಗೆ ಗೌರವ ಗ್ರಂಥ ಅರ್ಪಣೆ ಮಾಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅದಕ್ಕಾಗಿ ಡಾ| ಜಿ.ಎನ್ ಉಪಾಧ್ಯ ಹಾಗೂ ಡಾ| ದಿನೇಶ್ ಶೆಟ್ಟಿ ರೆಂಜಾಳ ಅವರನ್ನು ಅಭಿನಂದಿಸುತ್ತೇನೆ. ಮರಾಠಿ ಮಣ್ಣಿನಲ್ಲಿ ತಾನು ಸಂಪಾದಿಸಿದ ಹಣವನ್ನು ಜಾತಿ- ಧರ್ಮ, ಭಾಷೆಯ ಭೇದವಿಲ್ಲದೆ ಹಂಚಿ ಬಾಳುವ ಕುಸುಮೋದರ ಶೆಟ್ಟಿಯವರಿಗೆ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದರು.
ಕರ್ನಾಟಕ ಮಲ್ಲ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ ಮಾತನಾಡಿ, ವಿಶ್ವವಿದ್ಯಾಲಯ ಮುಂಬಯಿ ಕನ್ನಡ ವಿಭಾಗ ಎಂಬುದು ಈ ಮುಂಬಯಿ ಮಹಾನಗರದಲ್ಲಿ ತುಳು- ಕನ್ನಡಿಗರನ್ನು ಒಗ್ಗೂಡಿಸುವ ಒಂದು ದೊಡ್ಡ ವೇದಿಕೆ. ಈ ವೇದಿಕೆಯಲ್ಲಿ ಅದೆಷ್ಟೋ ಸಾಧಕರ, ಸಮಾಜ ಸೇವಕರ ಅಭಿನಂದನಾ ಗ್ರಂಥಗಳು, ವಿದ್ಯಾರ್ಥಿಗಳ ಪುಸ್ತಕಗಳು, ಮುಂಬಯಿ ಸಾಹಿತಿಗಳ ಕೃತಿಗಳು ಬೆಳಕು ಕಂಡಿವೆ. ಆ ಮೂಲಕ ನಮ್ಮ ನಾಡಿಗೆ, ಸಾಹಿತ್ಯಿಕ ಲೋಕಕ್ಕೆ ದೊಡ್ಡ ಕೊಡುಗೆಯನ್ನು ಡಾ| ಜಿ. ಎನ್ ಉಪಾಧ್ಯ ಅವರು ಕೊಟ್ಟಿದ್ದಾರೆ. ಕುಸುಮೋದರ ಶೆಟ್ಟಿಯವರಿಗೆ ಅರ್ಪಣೆಯಾದ ಕುಸುಮೋದರ ಗೌರವ ಗ್ರಂಥ ಮುಂದಿನ ಪೀಳಿಗೆಗೆ ದಾರಿದೀಪ ಆಗಬಹುದು. ಮುಂಬಯಿಗೆ ಹೆಚ್ಚಿನವರು ಕಷ್ಟದಲ್ಲಿಯೇ ವಲಸೆ ಬಂದವರಾಗಿದ್ದಾರೆ. ಈ ಮಹಾನಗರದಲ್ಲಿ ಕಷ್ಟದಲ್ಲಿ ಬೆಳೆದು ಕಠಿಣ ಪರಿಶ್ರಮದಿಂದ ದುಡಿದು ಸಾಧನೆಯನ್ನು, ಸಮಾಜಕ್ಕೆ ಸೇವೆಯನ್ನು ಹೇಗೆ ಮಾಡಬಹುದೆಂಬುದನ್ನು ಕುಸುಮೋದರ ಶೆಟ್ಟಿ ಅವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ನಾನು ಮೂರು ದಶಕಗಳಿಂದ ಕುಸುಮೋದರ ಶೆಟ್ಟಿಯವರನ್ನು ಬಲ್ಲವನಾಗಿದ್ದೇನೆ. ಅವರು ನೇರ ನಡೆ ನುಡಿಯ ಸ್ವಭಾವದವರು. ಆ ಕಾರಣದಿಂದಲೇ ಅವರು ಸಮಾಜದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲು ಸಾಧ್ಯವಾಗಿದೆ ಎಂಬುದು ನನ್ನ ಭಾವನೆ. ಬಡತನದ ನೋವು, ಸಾಮಾಜಿಕ ಕಾಳಜಿ, ಸಮಾಜದ ಬಗ್ಗೆ ಅನುಕಂಪ, ಚಿಂತನೆಯೊಂದಿಗೆ ಕುಸುಮೋದರ ಶೆಟ್ಟಿಯವರು ಬದುಕು ನಡೆಸಿದವರು. ಆದ್ದರಿಂದಲೇ ಅವರು ಎಲ್ಲರ ಪ್ರೀತಿ ಗೌರವನ್ನು ಗಳಿಸಿದ್ದಾರೆ. ದುಡ್ಡು ಮತ್ತು ಸಂಪತ್ತು ಸಮಾಜದ ಹೆಚ್ಚಿನ ಜನರಲ್ಲಿದೆ. ಆದರೆ ಎಲ್ಲರಲ್ಲೂ ಬಡವರ ಕಣ್ಣೀರು ಒರೆಸುವ ಹಾಗೂ ಇದ್ದುದನ್ನು ಹಂಚಿ ಬಾಳುವ ಗುಣ ಇರೋದು ಬಹಳ ವಿರಳ. ಆ ನಿಟ್ಟಿನಲ್ಲಿ ಕುಸುಮೋದರ ಶೆಟ್ಟಿ ಅವರದ್ದು ಶ್ರೇಷ್ಠ ವ್ಯಕ್ತಿತ್ವ. ಮಾನವೀಯತೆಯ ಸೇವಾ ಕಾರ್ಯಗಳು ಕುಸುಮೋದರ ಶೆಟ್ಟಿ ಅವರಿಂದ ನಿರಂತರವಾಗಿ ನಡೆಯುತ್ತಿರಲಿ ಎಂದರು.
ಕುಸುಮೋದರ ಶೆಟ್ಟಿ ಅವರ ಪಾಲಿಗೆ ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ. ಅವರು ಬಡತನದಲ್ಲಿದ್ದು, ರಾತ್ರಿ ಶಾಲೆಯಲ್ಲಿ ಕಲಿತು, ಕಠಿಣ ಪರಿಶ್ರಮದ ದುಡಿಮೆಯಿಂದ ತಮ್ಮ ಉದ್ಯಮದಲ್ಲಿ ಸಾಧನೆಯನ್ನು ಮಾಡಿ, ಸಾಮಾಜಿಕ ಚಿಂತನೆಯೊಂದಿಗೆ ಸೇವೆಯನ್ನು ಸಲ್ಲಿಸುತ್ತಾ ಉನ್ನತ ಮಟ್ಟಕ್ಕೆ ಬೆಳೆದು ಇಂದು ಗೌರವ ಗ್ರಂಥ ಸ್ವೀಕರಿಸುತ್ತಿರುವುದು ಅಭಿನಂದನೀಯ. ಕುಸುಮೋದರ ಶೆಟ್ಟಿ ಓರ್ವ ನಿಷ್ಠುರವಾದಿ. ಆದರೆ ಅವರು ಸತ್ಯಕ್ಕೆ ಬೆಲೆ ನೀಡುವವರು. ಸಮಾಜ ಪರ ಯೋಜನೆ- ಯೋಚನೆಯೊಂದಿಗೆ ಸೇವೆ ಸಲ್ಲಿಸಿ ಕುಸುಮೋದರ ಶೆಟ್ಟಿಯವರು ಬದುಕು ನಡೆಸಿರುವುದರಿಂದ ಅವರಿಗಿಂದು ಇಷ್ಟೊಂದು ದೊಡ್ಡ ಗೌರವ ಸಂದಿದೆ. ಕುಸುಮೋದರ ಶೆಟ್ಟಿಯವರ ಮಾನವೀಯತೆಯ ವ್ಯಕ್ತಿತ್ವಕ್ಕೆ ಗೌರವವನ್ನು ನೀಡಿ ಗಣ್ಯರು ದೂರದ ಊರಿನಿಂದ ಬಂದು ಈ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಕಷ್ಟವನ್ನು ಅರಿತವರು ಹಾಗೂ ಅದರ ನೋವನ್ನು ಉಂಡವರು ಯಾವತ್ತೂ ಜೀವನದಲ್ಲಿ ಸೋಲದೆ ಸಾಧನೆಯನ್ನು ಮಾಡುತ್ತಾರೆ, ಗೌರವಾಭಿಮಾನಕ್ಕೆ ಪಾತ್ರರಾಗುತ್ತಾರೆ ಎಂಬುದಕ್ಕೆ ಕುಸುಮೋದರ ಶೆಟ್ಟಿಯವರು ಉದಾಹರಣೆಯಾಗಿದ್ದಾರೆ. ದಾನ ಧರ್ಮದ ಮೂಲಕ ಸಮಾಜಕ್ಕೆ ಅವರು ದೊಡ್ಡ ಶಕ್ತಿಯಾಗಿದ್ದಾರೆ. ನಮ್ಮ ಬಂಟರ ಸಂಘದ ದೊಡ್ಡ ಅಭಿಮಾನಿ ಹಾಗೂ ದಾನಿಯಾಗಿರುವ ಕುಸುಮೋದರ ಶೆಟ್ಟಿ ಅವರ ಬದುಕು ಸದಾ ಯಶಸ್ಸನ್ನು ಕಾಣಲಿ ಎಂದು ದೀಪವನ್ನು ಪ್ರಜ್ವಲಿಸಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹೇಳಿದರು.
ನಾವು ಜೀವನದಲ್ಲಿ ಎಷ್ಟೇ ಶ್ರೀಮಂತಿಕೆಯನ್ನು ಹೊಂದಿದರೂ ನಮ್ಮ ಆ ಹಿಂದಿನ ಕಷ್ಟದ ದಿನಗಳನ್ನು ಹಾಗೂ ನಮಗೆ ನೆರವಾದವರನ್ನು ಯಾವತ್ತೂ ಮರೆಯಬಾರದು. ನನ್ನ ಜೀವನದ ಆರಂಭದಲ್ಲಿ ಎದುರಾದ ಕಷ್ಟ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅದನ್ನೆಲ್ಲಾ ನಾನು ಛಲದಿಂದ ಎದುರಿಸಿ, ಸತ್ಯ ಧರ್ಮದ ಹಾದಿಯಲ್ಲಿ ನಡೆದು ಕರ್ತವ್ಯ ನಿಷ್ಠೆಯಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಸಂಪತ್ತಿನಿಂದ ಯಾವತ್ತೂ ದೊಡ್ಡವನಾಗಿಲ್ಲ. ನನ್ನ ತಾಯಿ ಭವಾನಿಯವರ ಪ್ರೇರಣೆ, ಮಾರ್ಗದರ್ಶನ, ಆಶೀರ್ವಾದದಿಂದ ಹಾಗೂ ಮಡದಿ ಸರಿತಾ ಶೆಟ್ಟಿ ಮತ್ತು ಮಕ್ಕಳು ಸಾಮಾಜಿಕವಾಗಿ ನನಗೆ ಮುನ್ನಡೆಯಲು ನೀಡಿರುವ ಪ್ರೋತ್ಸಾಹದಿಂದ ನಾನಿಂದು ಹೃದಯ ಶ್ರೀಮಂತಿಕೆಯಿಂದ ದೊಡ್ಡವನಾಗಿದ್ದೇನೆ. ಭವಾನಿ ಗ್ರೂಪ್ ಆಫ್ ಕಂಪನಿಯ ಪರಿವಾರ ನನ್ನ ಜೊತೆಗಿರುವ ದೊಡ್ಡ ಶಕ್ತಿ. ನಾನು ಜೀವನದಲ್ಲಿ ನಡೆದು ಬಂದ ಹಾದಿಯ ಬಗ್ಗೆ ಗ್ರಂಥ ರಚನೆ ಆಗಬಹುದು ಎಂಬುದನ್ನು ಯಾವತ್ತೂ ಊಹಿಸಿರಲಿಲ್ಲ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದದಿಂದ ಗ್ರಂಥ ಸ್ವೀಕರಿಸುವ ಭಾಗ್ಯ ನನಗೆ ಒದಗಿ ಬಂದಿದೆ. ಗ್ರಂಥ ಪ್ರಕಟಕ್ಕೆ ಕಾರ್ಣಿಕರ್ತರಾದ ಡಾ| ಅಶೋಕ್ ಆಳ್ವ, ಡಾ| ದಿನೇಶ್ ಶೆಟ್ಟಿ ರೆಂಜಾಳ, ಮುಂಬಯಿ ವಿಶ್ವ ವಿದ್ಯಾಲಯ ಹಾಗೂ ಅದರ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ, ಐಲೇಸಾ ತಂಡ ಇವರಿಗೆಲ್ಲಾ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಗ್ರಂಥವನ್ನು ಪ್ರೀತಿಯಿಂದ ಸ್ವೀಕರಿಸಿ ನನ್ನ ಮಾತಾ-ಪಿತರಿಗೆ, ಗುರುಗಳಿಗೆ ಅರ್ಪಿಸುತ್ತೇನೆ ಎಂದು ಭವಾನಿ ಫೌಂಡೇಶನ್ ಸಂಸ್ಥಾಪಕ, ಭವಾನಿ ಗ್ರೂಪ್ ಆಫ್ ಕಂಪನಿಯ ಚೆಲ್ಲಡ್ಕ ಕುಸುಮೋದರ ಶೆಟ್ಟಿ ನುಡಿದರು.
ಪತ್ರಕರ್ತ, ಕುಸುಮೋದರ ಗ್ರಂಥದ ಪ್ರದಾನ ಸಂಪಾದಕ ಡಾ| ದಿನೇಶ್ ಶೆಟ್ಟಿ ರೆಂಜಾಳ ಮಾತನಾಡಿ, ಕುಸುಮೋದರ ಶೆಟ್ಟಿಯವರ ಸಿದ್ದಿ ಸಾಧನೆಗಳ ಬಗ್ಗೆ ಗ್ರಂಥವೊಂದು ಬರಬೇಕು ಎಂದು ಹೇಳಿ ಆ ಜವಾಬ್ದಾರಿಯನ್ನು ನನಗೆ ನೀಡಿದ ಗುರುಗಳಾದ ಡಾ| ಜಿ. ಎನ್ ಉಪಾಧ್ಯ ಅವರು ನನ್ನ ಮೇಲಿಟ್ಟ ನಂಬಿಕೆಯನ್ನು ಪ್ರಾಮಾಣಿಕವಾಗಿ, ಶ್ರದ್ದಾಪೂರ್ವಕವಾಗಿ ನಿಭಾಸಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಗೌರವ ಸಂಪಾದಕರಾದ ಡಾ| ಅಶೊಕ್ ಆಳ್ವ ಅವರ ಸಹಕಾರವನ್ನು ಮರೆಯುವಂತಿಲ್ಲ. ಸಕಾಲದಲ್ಲಿ ಲೇಖನಗಳನ್ನು ನೀಡಿದ ಎಲ್ಲಾ ಬಂಧುಗಳಿಗೆ, ಇಂದಿನ ಸಮಾರಂಭ ಮತ್ತು ರೆಂಜಾಳದಲ್ಲಿ ಯಶಸ್ವಿಯಾಗಿ ಕುಸುಮೋತ್ಸವ ನಡೆಸಲು ಸಹಕರಿಸಿದ ಟೀಮ್ ಐಲೇಸಾ ಹಾಗು ನನ್ನೊಂದಿಗಿದ್ದು ಸಹಕರಿಸಿದ ಎಲ್ಲಾ ಮನಸ್ಸುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು. ಸಮಾರಂಭದಲ್ಲಿ ಕುಸುಮೋದರ ಗ್ರಂಥದ ಪ್ರಧಾನ ಸಂಪಾದಕ ಡಾ| ದಿನೇಶ್ ಶೆಟ್ಟಿ ರೆಂಜಾಳರವರನ್ನು ಸನ್ಮಾನಿಸಲಾಯಿತು. ಮಂಗಳೂರು ಯಮುನ ಬಿಲ್ಡರ್ಸ್ ಪುರುಷೋತ್ತಮ್ ಶೆಟ್ಟಿ, ನ್ಯಾಯವಾದಿ ಚಿದಾನಂದ, ಡೊಂಬಿವಲಿ ದ್ವಾರಕಾ ಹೋಟೆಲ್ ವಿಜಿತ್ ಶೆಟ್ಟಿ, ವೇಣುಗೋಪಾಲ್ ರೈ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ವಿಶ್ವ ಹಿಂದೂ ಪರಿಷತ್ ನವಿಮುಂಬಯಿ ಅಧ್ಯಕ್ಷ ಸಂಜೀವ ಎನ್ ಶೆಟ್ಟಿ, ಭವಾನಿ ಫೌಂಡೇಶನ್ ಟ್ರಸ್ಟಿ, ವಾಸ್ತು ಮಾರ್ತಾಂಡ ನವೀನ್ ಚಂದ್ರ ಸನಿಲ್, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಡೊಂಬಿವಲಿ ಗೋಪಾಲ್ ಶೆಟ್ಟಿ, ಹೋಟೆಲ್ ಉದ್ಯಮಿ ರವೀಶ್ ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಉದಯ್ ಶೆಟ್ಟಿ ಪೇಜಾವರ, ಬೊಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ, ಇನ್ನ ಬೀಡು ರವೀಂದ್ರ ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು, ಪತ್ರಕರ್ತ ರವೀಂದ್ರ ಶೆಟ್ಟಿ, ಪ್ರಶಾಂತ್ ಅಮೀನ್, ಅಂಬರ್ ನಾಥ್ ನಿಜಲಿಂಗಪ್ಪ ಶಾಲೆಯ ತಿಲಕ್ ಚೆಲುವಾದಿ, ಮುಖ್ಯೋಪಾಧ್ಯಾಯನಿ ಅನಿತಾ ರಾಜವಳಿ ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು, ಚೆಲ್ಲಡ್ಕ ಮನೆತನದ ಸಂಕಪ್ಪ ಶೆಟ್ಟಿ, ಕಾರ್ಕಳ ಮಹೇಂದ್ರ ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ವಿ ಶೆಟ್ಟಿ ಮತ್ತು ಕುಸುಮೋದರ ಶೆಟ್ಟಿ ಅವರ ರೇಖಾ ಚಿತ್ರವನ್ನು ಬಿಡಿಸಿರುವ ಆದಿತ್ಯ ಸಾಲಿಯಾನ್ ಮೊದಲಾದ ಅನೇಕ ಗಣ್ಯರನ್ನು ಗೌರವಿಸಲಾಯಿತು. ವಿವಿಧ ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಪ್ರತಿಷ್ಠಿತ ಉದ್ಯಮಿಗಳು, ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು, ಕುಸುಮೋದರ ಶೆಟ್ಟಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಲಾ ಸಂಘಟಕ ತ್ರಿರಂಗ ಸಂಗಮದ ರೂವಾರಿ ಕರ್ನೂರು ಮೋಹನ್ ರೈ ನಿರೂಪಿಸಿದರು.