ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಎಲ್ಲಾ ಕಾರ್ಯಕರ್ತರು ತಮ್ಮ ಜವಾಬ್ಧಾರಿಯನ್ನು ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ. ಮುಂಬಯಿ ಸಮಿತಿ ಹಾಗೂ ಜಿಲ್ಲೆಗಳ ಸಮಿತಿಯ ಎಲ್ಲರೂ ಅವರವರ ಕಾರ್ಯವನ್ನು ಸಮಿತಿಯ ಹೆಸರಿಗೆ ಧಕ್ಕೆಯಾಗದ ರೀತಿಯಲ್ಲಿ ಯಶಸ್ವಿಯಾಗಿ ನೆರವೇರಿಸುತ್ತಿರುವುದು ಅಭಿನಂದನೀಯ. ಇದೇ ರೀತಿ ಎಲ್ಲರೊಂದಿಗೆ ಸಹಬಾಳ್ವೆ ಮತ್ತು ಒಗ್ಗಟ್ಟಿನಿಂದ ನಮ್ಮ ಸಂಘಟನೆಯನ್ನು ಮುನ್ನಡೆಸೋಣ. ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಕೆಲವು ನಿರ್ಧಾರವನ್ನು ಸಂಸ್ಥಾಪಕರ ಮಾರ್ಗದರ್ಶನದಂತೆ ಕೈಗೊಂಡಿರುವ ಸಾಧ್ಯತೆಯಿದೆ. ಆದರೂ ನಮಗೆ ನಮ್ಮ ಹಿರಿಯ ಸದಸ್ಯರು ಸಲಹೆ ಸೂಚನೆ ನೀಡುವುದಾದರೆ ಸ್ವಾಗತಾರ್ಹ. ಕಳೆದ 25 ವರ್ಷಗಳಿಂದ ಸಮಿತಿಯು ಜಿಲ್ಲೆಗಳಿಗೆ ವಿದ್ಯುತ್, ಹೆದ್ದಾರಿ, ರೈಲು, ಉದ್ಯೋಗಾವಕಾಶ ನೀಡಿದ್ದು, ಜನರು ಇದನ್ನು ಗಮನಿಸಬೇಕಾಗಿದೆ. ನಮ್ಮ ಕಾರ್ಯಚಟುವಟಿಕೆಗಳು ಹೆಚ್ಚುತ್ತಿದ್ದು ಸಮಿತಿಯ ಸಂಘಟನೆಯ ತಿದ್ದುಪಡಿಯ ಅಗತ್ಯವಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ನುಡಿದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ವಾರ್ಷಿಕ ಮಹಾಸಭೆಯು ಮುಂಬಯಿ ಸಾಕಿನಾಕಾದ ಪೆನಿನ್ಸುಲಾ ಗ್ರಾಂಡ್ ಹೋಟೆಲು ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆದಿದ್ದು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡಿ, ನಮ್ಮ ಸಮಿತಿಯಲ್ಲಿರುವವರೆಲ್ಲರೂ ಅವರವರ ಸಮಾಜದ ಸಂಘಟನೆಗಳಲ್ಲಿ ಉನ್ನತ ಪದವಿಯನ್ನು ಅಲಂಕರಿಸಿದವರು. ಮಾತ್ರವಲ್ಲದೇ ನಮ್ಮ ಸಮಿತಿಯ ಎಲ್ಲಾ ಸದಸ್ಯರು ಉನ್ನತ ಮಟ್ಟದ ವ್ಯಾಸಂಗ ಮಾಡಿ ಸುಪ್ರೀಂ ಕೋರ್ಟಿನ ವಕೀಲರಂತಹ ಉನ್ನತ ಮಟ್ಟದ ಹುದ್ದೆಯಲ್ಲಿದ್ದವರು. ಎಲ್ಲಾ ಸಮುದಾಯದವರಿಂದಾಗಿ ಸಮಿತಿಯು ಇಂದು ಗಟ್ಟಿಯಾಗಿದೆ. ಜಿಲ್ಲೆಗಳಲ್ಲಿ ಕೋಮುವಾದ ನಿರ್ಮೂಲನದ ಬಗ್ಗೆ ಸರಕಾರ ಹಾಗೂ ಪೊಲೀಸ್ ಇಲಾಖೆಯ ಸಂಪೂರ್ಣ ಬೆಂಬಲ ನಮಗಿದೆ. ಜಿಲ್ಲೆಗಳ ಅಭಿವೃದ್ಧಿಗೆ ನಾವು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಕ್ರಿಯಾಶೀಲರಾಗಿದ್ದೇವೆ. ಸಮಿತಿಯು ಯಾವುದೇ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತೊಡಗಿದ್ದಲ್ಲಿ ಅದನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದೆ. ಇನ್ನು ಮುಂದೆಯೂ ನಾವೆಲ್ಲರೂ ಒಂದಾಗಿ ಜಿಲ್ಲೆಗಳ ಅಭಿವೃದ್ದಿಗೆ ಶ್ರಮಿಸೋಣ ಎಂದು ನುಡಿದರು.
ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲಾ ಸಮಿತಿಯಲ್ಲಿ ನಾನು ಅಧಿಕಾರ ವಹಿಸಿದ ನಂತರ ಈಗಾಗಲೇ ಮಂಗಳೂರು ವಿಮಾನ ನಿಲ್ದಾಣದಿಂದ ಬಸ್ಸಿನ ವ್ಯವಸ್ಥೆ, ನೇತ್ರಾವತಿ ನೀರು ಸೇರಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕೆಲವು ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಅದೆಲ್ಲವನ್ನೂ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದಲ್ಲದೆ ಇನ್ನೂ ಹಲವಾರು ಯೋಜನೆಗಳನ್ನು ಈಡೇರಿಸುವಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಮ್ಮ ಸಮಿತಿಯ ಮುನ್ನಡೆಯುತ್ತಿದೆ ಎಂದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಗತ ವರ್ಷದ ವಾರ್ಷಿಕ ಮಹಾಸಭೆಯ ವರದಿಯನ್ನು ಮತ್ತು ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ ಅವರು ಗತ ವರ್ಷದ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು. ಸಮಿತಿಯ ಸಲಹೆಗಾರರಾದ ಪ್ರವೀಣ್ ಭೋಜ ಶೆಟ್ಟಿ, ಸೂರ್ಯಕಾಂತ್ ಜಯ ಸುವರ್ಣ ಮತ್ತು ಲಕ್ಷ್ಮಣ್ ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು. ಸಭಿಕರ ಪರವಾಗಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ಹಾಗೂ ಸಮಿತಿಯ ಸಂಘಟನೆಯ ತಿದ್ದುಪಡಿಯ ಪ್ರಮುಖರಾದ ಶ್ರೀನಿವಾಸ ಸಾಫಲ್ಯರು ಎಲ್ಲಾ ಸಮುದಾಯದವರನ್ನು ಒಂದೆಡೆ ಸೇರಿಸಿ, ಒಂದು ಸಂಘಟನೆಯನ್ನು ರೂಪಿಸಿ, ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರನ್ನು ಒಗ್ಗಟ್ಟಿನಿಂದ ಮುಂದಕ್ಕೆ ಕೊಂಡೊಯ್ಯುವ ನಮ್ಮ ಸಮಿತಿಯ ಕಾರ್ಯ ನಿಜಕ್ಕೂ ಪ್ರಶಂಸನೀಯವಾಗಿದೆ. ಇದಕ್ಕೆ ಪ್ರಮುಖ ಕಾರಣರಾಗಿರುವವರು ನಮ್ಮ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು. ಸಮಿತಿಯು ಯಾವುದೇ ನಿರ್ಣಯವನ್ನು ಕೈಗೊಳ್ಳುವಾಗ, ಅದನ್ನು ಸಮಿತಿಯ ಸಭೆಯಲ್ಲಿ ಮಂಜೂರು ಮಾಡುವ ಸಂಪ್ರದಾಯವಿದ್ದು, ಇದರ ಮೂಲಕ ಎಲ್ಲಾ ಸದಸ್ಯರು ಅದರ ಬಗ್ಗೆ ಪೂರ್ವ ಮಾಹಿತಿ ಹೊಂದಿರುತ್ತಾರೆ. ಸಮಿತಿಯ ಸಂಘಟನೆಯ ತಿದ್ದುಪಡಿಯ ಉದ್ದೇಶ ಹಾಗೂ ಅವಶ್ಯಕತೆ ಕುರಿತು ಸೂಕ್ತವಾದ ಮಾಹಿತಿಯನ್ನು ಸಭೆಯಲ್ಲಿ ನೀಡಿದರು.
ರಾಜ್ಯ ಸಂಯೋಜಕರಾದ ಕೆ.ಪಿ ಜಗದೀಶ್ ಅಧಿಕಾರಿಯವರು ಮಾತನಾಡುತ್ತಾ, ಜಿಲ್ಲೆಗಳ ಅಭಿವೃದ್ದಿಯಲ್ಲಿ ಧಾರ್ಮಿಕ ಕೇಂದ್ರಗಳು ಮಹತ್ತರವಾದ ಕಾರ್ಯ ನಿರ್ವಹಿಸುತ್ತದೆ. ಅದಕ್ಕಾಗಿ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ರೀತಿಯಲ್ಲಿ ಮಾರಕವಾಗಬಾರದು. ನಮ್ಮ ಜಿಲ್ಲಾ ಸಮಿತಿಯು ಜಿಲ್ಲೆಗಳ ಅಭಿವೃದ್ದಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಜಿಲ್ಲಾ ಸಮಿತಿಯ ಕಾರ್ಯ ಪ್ರಶಂಸನೀಯ ಎಂದರು. ನ್ಯಾ. ಶಶಿಧರ ಕಾಪು, ಉಪಾಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ, ಸಿಎಸ್ ಗಣೇಶ್, ಸಮಿತಿಯ ವಕ್ತಾರ ದಯಾಸಾಗರ ಚೌಟ, ಮಾತನಾಡುತ್ತಾ, ಸಮಿತಿಯ ಬೆಳ್ಳಿ ಹಬ್ಬ ಸಮಾರಂಭ ಹಾಗೂ ಮುಂದಿನ ಯೋಜನೆ ಬಗ್ಗೆ ಸೂಕ್ತ ಮಾಹಿತಿಯಿತ್ತರು. ಗೌರವ ಕಾರ್ಯದರ್ಶಿ ದೇವದಾಸ ಕುಲಾಲ್ ಅವರು ಸರ್ವ ಸದಸ್ಯರನ್ನು ಸ್ವಾಗತಿಸಿದರು. ಸಿಎಸ್ ಗಣೇಶ್ ಶೆಟ್ಟಿ ವಂದನಾರ್ಪಣೆ ಮಾಡಿದರು.
ವರದಿ : ದಿನೇಶ್ ಕುಲಾಲ್