
ಸ್ವದೇಶಿ ದೃಷ್ಟಿಕೋನದಲ್ಲಿ ವಿಕಸಿತ ಭಾರತ ನಿರ್ಮಾಣವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಪರಂಪರೆಯ ನಿಜ ದರ್ಶನ ನೀಡುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕೆಂದು ಎಂದು ಮೈಸೂರು ಹಾಗೂ ಕೊಡಗು ಸಂಸದ ಯದುವೀರ್ ಅಭಿಪ್ರಾಯ ಪಟ್ಟರು. ಬೆಂಗಳೂರಿನ ರಾಮೋಹಳ್ಳಿಯ ಯೂನಿವರ್ಸಲ್ ಸಮೂಹ ಸಂಸ್ಥೆಯ ಸಂಸ್ಥಾಪನ ದಿನಾಚರಣೆ ಹಾಗೂ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿಯೊಡನೆ ಭಾರತವು ಎಲ್ಲಾ ರಂಗಗಳಲ್ಲೂ ಉನ್ನತಿ ಸಾಧಿಸುತ್ತಿದೆ. ಈ ವಿಕಾಸ ಪರ್ವವು ದೇಶದ ಭವ್ಯ ಪರಂಪರೆ ಸಂಸ್ಕೃತಿಯನ್ನು ಇಮ್ಮಡಿಗೋಳಿಸುವಂತೆ ಇರಬೇಕು. ಸ್ವಂತಿಕೆ, ಸ್ವಾಭಿಮಾನ ಉದ್ದೀಪನಗೊಳಿಸುವಂತಿರಬೇಕು. ಹಾಗಾಗಿ ಸ್ವತಂತ್ರ ಪೂರ್ವದ ಮೆಕಾಲೆ ಶಿಕ್ಷಣ ನೀತಿ ಪರಿಷ್ಕರಿಸುವ ಅಗತ್ಯತೆ ಇದೆ ಎಂದರು. ಕಾನೂನು ರೂಪಿಸುವುದು ಶಾಸಕಾಂಗದ ಕಾರ್ಯ. ಅದರ ಯಶಸ್ಸು ಹಾಗೂ ಸೋಲು ಅಧಿಕಾರಿ ವರ್ಗದ ಮೇಲೆ ನಿಂತಿದೆ. ನಿಷ್ಠಾವಂತ ಅಧಿಕಾರಿಗಳಿಂದಲೇ ಮೈಸೂರು ಸಂಸ್ಥಾನ ಇಂದಿಗೂ ಜನಮನ್ನಣೆ ಗಳಿಸಿದೆ ಎಂದರು. ಇದೆ ವೇಳೆ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಹೀರೋಗಳಂತೆ ಮೆರೆಸುವ ಮನಸ್ಥಿತಿಯೂ ಮಾರಕ ಎಂದು ತಿಳಿಸಿದರು. ಜಿ ರಾಮ್ ಜಿ ಯೋಜನೆ ಗ್ರಾಮೀಣ ಉದ್ಯೋಗಾವಕಾಶದ ಜೊತೆಗೆ ಕೌಶಲ್ಯ ಅಭಿವೃದ್ಧಿಗೂ ಒತ್ತು ನೀಡುತ್ತಿದೆ ಎಂದು ಪ್ರಶಂಸಿದರು.

ಯೂನಿವರ್ಸಲ್ ಸಮೂಹ ಸಂಸ್ಥೆಯ ಚೇರ್ಮನ್ ಆರ್ ಉಪೇಂದ್ರ ಶೆಟ್ಟಿ ಮಾತನಾಡಿ, ತ್ಯಾಗ ಮತ್ತು ಪರಿಶ್ರಮದ ಫಲವಾಗಿ ಯೂನಿವರ್ಸಲ್ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಇಲ್ಲಿನ 8000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಅಧಿಕಾರಿಗಳಾಗಿ ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಮರಿಸಿದರು. ಅತ್ಯುತ್ತಮ ಅಂಕ ಗಳಿಸಿದ 100 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿ ಘೋಷಿಸಿದರು. ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ 10 ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಂ ಆರ್ ಜಿ ಗ್ರೂಪ್ ಛೇರ್ಮನ್ ಡಾ|ಪ್ರಕಾಶ್ ಶೆಟ್ಟಿ, ಐ.ಆರ್.ಎಸ್ ಅಧಿಕಾರಿ ಕೊಟ್ರಸ್ವಾಮಿ, ಅಶೋಕ್ ಚನ್ನೇಗೌಡ, ಪ್ರಗತಿ ಉಪೇಂದ್ರ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.





















































































































