“ಸೃಜನಾ” ಈ ಹೆಸರು ಸಂಸ್ಥೆಗೆ ನಿಜವಾಗಿಯೂ ಸಾರ್ಥಕ. ಸೃಷ್ಟಿಯಲ್ಲಿ ಸ್ತ್ರೀ ಇಲ್ಲದಿದ್ದರೆ ಸೃಷ್ಟಿ ಸಾಧ್ಯವಾಗುವುದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ, ಪುರುಷರಿಬ್ಬರ ರಚನೆ ಬೇರೆ, ಆನುವಾದಕ ಬೇರೆ, ಆದರೆ ಅದರಲ್ಲಿ ಸಾಮರಸ್ಯವಿದೆ. ಹೆಣ್ಣು ಮಕ್ಕಳಿಗೆ ಶಾಸ್ತ್ರದಲ್ಲಿ ಕೊಟ್ಟ ಸ್ಥಾನ ಮೊದಲಾಗಿದೆ. ಅದು ಮಾತೃಭಾವವೂ ಹೌದು. ನಮ್ಮ ವೇದ ಪುರಾಣದಲ್ಲಿ ಕೂಡಾ ಸ್ತ್ರೀ ಪುರುಷರ ಬಗ್ಗೆ ಚಿಂತನೆ ಮಾಡಿದೆ ಹೊರತು ಬರೇ ಪುರುಷರ ಚಿಂತೆ ಮಾಡಿಲ್ಲ. ಸ್ತ್ರಿ ಇಲ್ಲದಿದ್ದರೆ ಪುರುಷ ಅರ್ಧ, ಹಾಗೆನೇ ಪುರುಷ ಇಲ್ಲದಿದ್ದರೆ ಸ್ತ್ರೀ ಅರ್ಧ. ಇದು ನಮ್ಮ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಎಂದು ಬಹುಭಾಷಾ ಪಂಡಿತ ನಾಗರಹಳ್ಳಿ ಪ್ರಹ್ಲಾದಾಚಾರ್ಯ ತಿಳಿಸಿದರು. ಜೂನ್ 10 ರ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಮೊದಲ ಮಹಡಿಯ ಕಿರು ಸಭಾಗೃಹದಲ್ಲಿ ಮುಂಬಯಿ ಕನ್ನಡ ಲೇಖಕಿಯರ ಬಳಗ ಸೃಜನಾ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಗೋಷ್ಠಿಯನ್ನು ಉದ್ಘಾಟಿಸಿ ಪ್ರಹ್ಲಾದಾಚಾರ್ಯ ಮಾತನಾಡಿದರು.
ಸೃಜನಾ ಸಂಚಾಲಕಿ ಪದ್ಮಜಾ ಮಣ್ಣೂರ ಮಾರ್ಗದರ್ಶನದಲ್ಲಿ ಜರುಗಿದ ‘ಕಥಾ ಸಾಹಿತ್ಯದಲ್ಲಿ ಮಹಿಳಾ ಚಿತ್ರಣ’ ವಿಚಾರಗೋಷ್ಠಿಯಲ್ಲಿ ಸಾಹಿತಿ, ಪ್ರಸಿದ್ಧ ಅನುವಾದಕಿ, ಶ್ಯಾಮಲಾ ಮಾಧವ ಅವರು ಇಂಗ್ಲಿಷ್ ಕಥೆಗಳ ಬಗ್ಗೆ ತಮ್ಮ ಅನುಭವದ ಸಾರವನ್ನು ಹಂಚಿಕೊಳ್ಳುತ್ತಾ ಕೃಷಿ ನೀಡುವ ಸಂತೃಷ್ತಿ ಮತ್ತು ಭೂಮಿ ಕೊಡುವ ಭಾಗ್ಯ, ಕೃಷಿಕರ ತಾಳ್ಮೆ, ಕರುಣೆ, ಪ್ರಕೃತಿ ಹಾಗೂ ಮನುಷ್ಯನ ಸಂಬಂಧದ ಒಳಿತು ಬೆಳಕನ್ನು ನೀಡುವ ಒಂದು ಸ್ಪರ್ಶ ಅದ್ಭುತವಾದುದು. ತಾಳ್ಮೆಯ ಪ್ರತಿಮೆಯಾಗಿದ್ದರೂ, ಎಳೆಯಲ್ಲಿಯೇ ಸಿರಿವಂತನಿಗೆ ಮಾರಲ್ಪಟ್ಟ ಕಥಾನಾಯಕಿ ದುಡಿಮೆ ಎಂದರೆ ನೀರು ಕೂಡಿದಂತೆ. ಮೃದು ಸ್ವಭಾವದವಳಾದರೂ ಧೈರ್ಯವಂತಳು ಎಂದು ಕಥೆಗಳ ಸಾರಗಳನ್ನು ನುಡಿದರು.
ಕವಿ, ಸಾಹಿತಿ, ರಂಗನಿರ್ದೇಶಕ, ನಟ ಸಾ.ದಯಾ ಅವರು ಕನ್ನಡ ಕಥೆಗಳಲ್ಲಿನ ಒಳ ಹೊರನೋಟದ ಬಗ್ಗೆ ಮಾತನಾಡಿ ಸಮಾಜದಲ್ಲಿ ಪುರುಷ ಪ್ರಧಾನ ಮಹತ್ವವಿದ್ದರೂ ಕಾರಂತರು ತಮ್ಮ ಕಾದಂಬರಿಗಳಲ್ಲಿ ಸ್ತ್ರೀಯರಿಗೆ ಅತೀ ಮಹತ್ವವನ್ನು ನೀಡಿರುವರು. ಸ್ರೀಯರನ್ನು ತನ್ನ ಕಾದಂಬರಿಗಳಲ್ಲಿ ಹಿಡಿದಿಟ್ಟ ಬಗ್ಗೆ ಬಣ್ಣಿಸಿದರು. ಕನ್ನಡ ಮರಾಠಿ ಸಾಹಿತಿ, ಖ್ಯಾತ ಅನುವಾದಕಿ ಅಕ್ಷತಾ ಪ್ರಸಾದ್ ದೇಶಪಾಂಡೆ ಅವರು ಮರಾಠಿ ಕಥೆಗಳಲ್ಲಿನ ವಿಚಾರ ವಿಷಯ ಮಾತನಾಡಿ ಕಥೆ ಅನ್ನೋದು ಎಲ್ಲರಿಗೂ ಇಷ್ಟದ ವಿಚಾರವಾಗಿದೆ. ಕಥೆಗಳನ್ನು ಓದಿ ತಿಳಿಯುವುದು ಬದುಕಿಗೆ ಪ್ರೇರಣೆಯಾಗುತ್ತದೆ. ಕಥೆಗಳನ್ನು ಹತ್ತಿರದಿಂದ ತಿಳಿದಾಗ ಬದುಕು ಬದಲಾಯಿಸಿಕೊಳ್ಳಲು ಸಾಧ್ಯ ಎಂದು ಕನ್ನಡ ಮನಸ್ಸುಗಳಿಗೆ ಮರಾಠಿಯ ಸಚಿನ್ ಪಾಟೀಲ್ ಅವರ ಕಥೆಯಲ್ಲಿನ ಸ್ತ್ರೀ ಪಾತ್ರಗಳ ಮನಸ್ಥಿತಿ ಹಾಗೂ ಕೆಲವು ಪರಿಸ್ಥಿತಿಗಳನ್ನು ತಿಳಿ ಹೇಳಿದರು. ಉಪಾಸನ ಕಥೆಯ ರತ್ನ ಪಾತ್ರದ ತವಕ, ತಲ್ಲಣ ಹಾಗೂ ಉಮಾಳ ಕಥೆಯಲ್ಲಿ ಬರುವ ಪುಷ್ಪಕ್ಕಾ ಬಗ್ಗೆ ಸೊಗಸಾಗಿ ಪ್ರೇಕ್ಷಕರ ಮನ ಮುಟ್ಟುವಂತೆ ವಿಚಾರ ಮಂಡಿಸಿದರು.
ವೇದಿಕೆಯಲ್ಲಿ ಸೃಜನಾದ ಖಜಾಂಚಿ ಡಾ| ದಾಕ್ಷಾಯಣಿ ಯಡಹಳ್ಳಿ, ಸಹ ಸಂಚಾಲಕಿ ಡಾ| ಜಿ.ಪಿ ಕುಸುಮ, ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಜೊತೆ ಕಾರ್ಯದರ್ಶಿ ಕುಸುಮ ಚಂದ್ರ ಪೂಜಾರಿ ಆಸೀನರಾಗಿದ್ದರು. ಹಿರಿಯ ಲೇಖಕಿ, ಸೃಜನಾ ರೂವಾರಿ ಡಾ| ಸುನೀತಾ ಎಂ.ಶೆಟ್ಟಿ ಹಾಗೂ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಗೈದರು. ಪದ್ಮಜಾ ಮಣ್ಣೂರ್ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಡಾ| ದಾಕ್ಷಾಯಣಿ ಯಡಹಳ್ಳಿ ಹಾಗೂ ಲತಾ ಸಂತೋಷ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಡಾ| ಜಿ.ಪಿ ಕುಸುಮ ಕಾರ್ಯಕ್ರಮ ನಿರೂಪಿಸಿದರು. ಲತಾ ಸಂತೋಷ್ ಶೆಟ್ಟಿ ವಂದನಾರ್ಪಣೆಗೈದರು.