ಈ ವರ್ಷದ ಅತೀ ನಿರೀಕ್ಷಿತ ತುಳು ಸಿನಿಮಾ, ಗಿರಿಗಿಟ್ ಖ್ಯಾತಿಯ ಬಿಗ್ಬಾಸ್ ಚಾಂಪಿಯನ್ ರೂಪೇಶ್ ಶೆಟ್ಟಿ ನೇತೃತ್ವದ ತಂಡದ ಸರ್ಕಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಗಮನ ಸೆಳೆದಿರುವ ಪುತ್ತೂರಿನ ಬಹುಮುಖ ಪ್ರತಿಭೆ ರಚನಾ ರೈ ಅವರಿಗೆ ಸಿನಿಮಾ ರಂಗದಲ್ಲಿ ಉಜ್ವಲ ಭವಿಷ್ಯ ಇರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತಿದೆ. ಅವರ ಆಕರ್ಷಕ ದೇಹ ಸೌಂದರ್ಯ, ರೂಪ, ಅಭಿನಯ, ಬಹುಮುಖ ರಂಗದಲ್ಲಿ ತೋರಿಸುತ್ತಿರುವ ಕಲಾ ಪ್ರೌಢಿಮೆಗಳೆಲ್ಲವೂ ಅವರ ಭವಿಷ್ಯದ ದಾರಿಯನ್ನು ಉಜ್ವಲಗೊಳಿಸಲಿದೆ.
ಎಳವೆಯಲ್ಲೇ ಕ್ಯಾಮರಾ ಎದುರಿಸಿದ್ದ ಅವರು ಅದೇ ಕಾರಣದಿಂದ ಸರ್ಕಸ್ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರೊಂದಿಗೆ ಕಿಂಚಿತ್ತೂ ಅಳುಕಿಲ್ಲದೆ ನಟಿಸಿ ಉತ್ತಮ ಪ್ರದರ್ಶನವನ್ನೂ ನೀಡಿ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಪತ್ರಿಕೋದ್ಯಮದಲ್ಲಿ ಪದವಿ ಮಾಡಿರುವ ಅವರು ಉತ್ತಮ ಭರತನಾಟ್ಯ ಕಲಾವಿದೆ, ಕ್ರೀಡಾಪಟು ಕೂಡ ಆಗಿರುವ ಇವರು ಪುತ್ತೂರಿನಲ್ಲೇ ಹುಟ್ಟಿ ಬೆಳೆದವರು. ಉಜಿರೆಯ ಎಸ್ಡಿಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ. ವೃತ್ತಿಪರ ಬ್ಯಾಂಡ್ಮಿಂಟನ್ ಮತ್ತು ಫುಟ್ಬಾಲ್ ಕ್ರೀಡಾಪಟು ಕೂಡ ಆಗಿರುವ ಅವರು ಉತ್ತಮ ಚಿತ್ರಕಲಾವಿದೆಯೂ ಆಗಿದ್ದಾರೆ. ಚಿತ್ರಕಲೆಯಲ್ಲಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವ ಕಲಾವಿದೆಯಾಗಿದ್ದಾರೆ.
ಹಾರಾಡಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಗಂಗಾ ಅವರ ಪುತ್ರಿಯಾಗಿರುವ ರಚನಾ ಅವರು ಬಾಲ್ಯದಿಂದಲೇ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದ ಕಾರಣ ಅವರಿಗೆ ಕ್ಯಾಮರಾ ಮುಂದೆ ಪ್ರದರ್ಶನ ನೀಡುವುದು ತುಂಬಾ ಇಷ್ಟವಾಗಿತ್ತು. ಕಲಾಶ್ರೀ ಎಂಬ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ಮೂರು ಸಲ ಚಾಂಪಿಯನ್ ಆಗಿದ್ದ ಇವರು ಕೆಲವು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲೂ ವಿನ್ನರ್ ಆಗಿದ್ದರು. ಇದೆಲ್ಲವೂ ರಚನಾ ಅವರ ಬಹುಮಖ ಪ್ರತಿಭೆಗೆ ಸಾಕ್ಷಿ ಹಾಗೂ ಅವರಿಗೆ ಸಿನಿಮಾ ರಂಗದಲ್ಲಿ ಉಜ್ವಲ ಭವಿಷ್ಯವೂ ಇದೆ ಎಂಬುದಕ್ಕೆ ಸರ್ಕಸ್ನಲ್ಲಿ ಅವರು ತೋರಿರುವ ನಟನೆ ಹಾಗೂ ಅದನ್ನು ಕಂಡು ಅವರಿಗೆ ಸಿಕ್ಕಿರುವ ಬೇಡಿಕೆ ಸಾಬೀತು ಮಾಡುತ್ತದೆ.
ಸಾಹಿತಿ :
ರಚನಾ ರೈ ಅವರು ಸಾಹಿತ್ಯ ಕ್ಷೇತ್ರದಲ್ಲೂ ಕೈಯಾಡಿಸಿದ್ದು, ಓ ಮೈ ಡಾಗ್ ಎಂಬ ಕೃತಿಯೊಂದನ್ನು ಬರೆದಿದ್ದಾರೆ. ಇದು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಇದು ಅವರ ಸಾಹಿತ್ಯದ ಗಟ್ಟಿತನಕ್ಕೆ ಸಾಕ್ಷಿ. ಈ ಕೃತಿಯ 1,000 ಕ್ಕಿಂತಲೂ ಹೆಚ್ಚು ಪ್ರತಿಗಳು ಒಂದೇ ದಿನ ಮಾರಾಟವಾಗಿತ್ತು ಎಂಬುದು ಗಮನಾರ್ಹ ಸಂಗತಿ.
ಪ್ರಾಣಿಪ್ರಿಯೆ :
ರಚನಾ ರೈ ಅವರು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಬಾಲ್ಯದಿಂದಲೇ ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಿರುವ ಅವರು ಎಷ್ಟೋ ಪ್ರಾಣಿಗಳನ್ನು ಸಂಕಷ್ಟ, ಅಪಾಯದಿಂದ ರಕ್ಷಿಸಿದ್ದಾರೆ. ಇದಕ್ಕಾಗಿ ಅವರಿಗೆ ಭಾರೀ ಮೆಚ್ಚುಗೆಯೂ ಸಿಕ್ಕಿದೆ.
ಬಾಕ್ಸ್ :
ನಟನೆಯ ಬಗ್ಗೆ ಮೂಲತಃ ತಾನು ಡ್ಯಾನ್ಸರ್ ಆಗಿದ್ದ ಕಾರಣ ನಟನೆ ಹೆಚ್ಚು ಕಷ್ಟವಾಗಲಿಲ್ಲ. ವಿನೀತ್ ಮತ್ತು ಕದ್ರಿ ರಾಕೇಶ್ ಅವರ ಮೂಲಕ ರೂಪೇಶ್ ಶೆಟ್ಟರ ತಂಡಕ್ಕೆ ಸೇರಿಕೊಂಡೆ. ಅಲ್ಲಿನ ಟೀಂ ವರ್ಕ್ ನನಗೆ ತುಂಬಾ ಖುಷಿ ಕೊಟ್ಟಿದೆ. ಅಂಥಹ ತಂಡದಲ್ಲಿ ಕೆಲಸ ಮಾಡುವುದು ದೊಡ್ಡ ಅದೃಷ್ಟ ಎಂದೇ ಹೇಳಬೇಕು. ಸರ್ಕಸ್ನಲ್ಲಿ ನಟಿಸಿದ ಬಳಿಕ ನನಗೆ ಕನ್ನಡದ ಹಲವಾರು ಸಿನಿಮಾಗಳಿಂದ ಆಫರ್ ಬಂದಿದ್ದು, ಈಗಾಗಲೇ ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಅದರಲ್ಲೊಂದು ಸತೀಶ್ ನೀನಾಸಂ ಅವರ ಸಿನಿಮಾ. ಉಳಿದವುಗಳ ಬಗ್ಗೆ ಸದ್ಯ ಹೇಳಲು ಸಾಧ್ಯವಿಲ್ಲ ಎಂಬುದು ರಚನಾ ಅವರ ಮಾತು. ಸರ್ಕಸ್ ಸಿನಿಮಾ ಅವರಿಗೆ ಹೆಸರು ತಂದು ಕೊಡಲಿದೆ. ಅಷ್ಟರ ಮಟ್ಟಿಗೆ ಅವರು ಅಭಿನಯದಲ್ಲಿ ಪಳಗಿದ್ದಾರೆ.