ತುಳು ರಂಗಭೂಮಿ ಹಾಗೂ ಚಿತ್ರರಂಗದ ಮೇರು ನಿರ್ದೇಶಕ, ನಿರ್ಮಾಪಕ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವದೂತೆ ಗುಳಿಗೆ ನಾಟಕದಲ್ಲೇ ಮಗ್ನರಾಗಿದ್ದರು. ನಿರೀಕ್ಷೆಗೂ ಮೀರಿದ ಬೇಡಿಕೆಯಿಂದಾಗಿ ಅದ್ಭುತ ಯಶಸ್ಸು ಗಳಿಸಿರುವ ಶಿವದೂತೆ ಗುಳಿಗೆ ನಾಟಕವು ಸುಮಾರು 500 ಪ್ರದರ್ಶನಗಳ ಸನಿಹದಲ್ಲಿದೆ. ಆ ಮೂಲಕ ಎಲ್ಲರ ಗಮನವನ್ನೂ ತುಳು ರಂಗಭೂಮಿಯತ್ತ ಸೆಳೆದಿದ್ದಾರೆ. ಈ ನಾಟಕವು ಕನ್ನಡಕ್ಕೂ ಡಬ್ಬಿಂಗ್ ಆಗಿದ್ದು, ಮಲಯಾಳ, ಮರಾಠಿಯಲ್ಲೂ ಪ್ರದರ್ಶನ ಕಾಣಲಿದೆ. ದೇಶದ ಪ್ರಮುಖ ನಗರಗಳಲ್ಲಿ ದಿನವೊಂದರಲ್ಲೇ 2-3 ಪ್ರದರ್ಶನ ನೀಡಿ ಸುದ್ದಿಯಾಗಿದ್ದ ಈ ನಾಟಕವು ವಿದೇಶದಲ್ಲೂ ಭರ್ಜರಿ ಸದ್ದು ಮಾಡಿತ್ತು. ಈ ಎಲ್ಲ ಕಾರಣಗಳಿಂದ ಹೊಸ ನಾಟಕ ಪ್ರದರ್ಶನಕ್ಕೆ ಅವರಿಗೆ ಅವಕಾಶ ಸಿಗಲಿಲ್ಲ. ಎಲ್ಲರೂ ಶಿವದೂತ ಗುಳಿಗನನ್ನೇ ಕೇಳುವವರು.
ಈಗ ಅವರ ಹೊಸ ನಾಟಕ “ಮೈತಿದಿ” ಪ್ರದರ್ಶನಕ್ಕೆ ಸಿದ್ಧವಾಗಿದೆ. ಇದನ್ನು ಹಿಂದೆಯೇ ರಚಿಸಿ ಸಿದ್ಧಪಡಿಸಿದ್ದ ವಿಜಯಕುಮಾರ್ ಅವರು ಗುಳಿಗನ ಕಾರಣದಿಂದ ಮುನ್ನೆಲೆಗೆ ತರಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮೈತಿದಿಗೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟಂಬರ್ನಲ್ಲಿ ಈ ನಾಟಕ ಪ್ರದರ್ಶನ ಆರಂಭಿಸಲಿದ್ದು, ಮೊದಲ ದಿನವೇ ಮೂರು ಪ್ರದರ್ಶನ ನೀಡಲಿದೆ ಎಂಬುದು ಹೆಮ್ಮೆಯ ಸಂಗತಿ. ಈಗಾಗಲೇ ಈ ನಾಟಕದ 50ಕ್ಕೂ ಮಿಕ್ಕಿದ ಕ್ಯಾಂಪ್ ನಿಗದಿಯಾಗಿದೆ. ಇದು ಕೊಡಿಯಾಲ್ಬೈಲ್ ಅವರ ನಾಟಕಕ್ಕೆ ಇರುವ ಶಕ್ತಿಯನ್ನು ತೋರಿಸುತ್ತದೆ.
ಮೈತಿದಿ ನಾಟಕವು ಸಾಮಾಜಿಕವಾಗಿದ್ದು, ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನೂ ನೀಡಲಿದೆ. ಗುಳಿಗ ಖ್ಯಾತಿಯ ಸ್ವರಾಜ್ ಶೆಟ್ಟಿ ಈ ನಾಟಕದಲ್ಲಿಯೂ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದು, ರೂಪಾ ವರ್ಕಾಡಿ, ಚಂದ್ರ ಶೇಖರ ಸಿದ್ದಕಟ್ಟೆ ಸಹಿತ “ಶಿವದೂತೆ ಗುಳಿಗೆ” ನಾಟಕದ ಎಲ್ಲಾ ಕಲಾವಿದರು ಮೈತಿದಿಗೆ ಶಕ್ತಿ ತುಂಬಲಿದ್ದಾರೆ. ಹಿಂದಿನಂತೆ ಎ.ಕೆ. ವಿಜಯ್ (ಕೋಕಿಲಾ) ಅವರ ಸಂಗೀತ ಈ ನಾಟಕಕ್ಕಿದೆ.
ಹೊಸ ಚಿಂತನೆ :
ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನಾಟಕದ ಚಿಂತನೆಯೇ ಭಿನ್ನವಾಗಿರುತ್ತದೆ. ಅದರಲ್ಲಿ ಗಟ್ಟಿ ತಿರುಳು, ಸಮಾಜಕ್ಕೊಂದು ಸಂದೇಶ, ಹಾಸ್ಯ, ಜತೆಗೆ ನವರಸಗಳ ಮನೋರಂಜನೆಗೆ ಕೊರತೆ ಇರುವುದಿಲ್ಲ. ಇಂಥ ಭಿನ್ನತೆಯೇ ಅವರ ಎಲ್ಲ ನಾಟಕ ಮತ್ತು ಸಿನೆಮಾಗಳನ್ನು ಜನ ಮೆಚ್ಚಿ ಕೊಂಡಾಡಲು ಪ್ರಮುಖ ಕಾರಣ. ಈಗ “ಮೈತಿದಿ” ಕೂಡ ಅದಕ್ಕೆ ಭಿನ್ನವಾಗಿಲ್ಲ ಎಂಬುದು ಕಲಾಸಂಗಮದ ಅಭಿಪ್ರಾಯ. ರಂಗಭೂಮಿ ಪ್ರಿಯರು ಕೂಡ ಮೈತಿದಿಗಾಗಿ ಕಾಯುತ್ತಿದ್ದಾರೆ. ಇದು ಬಿಡುಗಡೆಯಾದ ಬಳಿಕ ಭರ್ಜರಿ ಯಶಸ್ಸಿನ ಮೂಲಕ ತುಳು ರಂಗಭೂಮಿಗೆ ಮತ್ತೊಂದು ಪ್ರಬುದ್ಧ ಕಲಾಕಾಣಿಕೆಯಾಗಲಿದೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ.
“ಮೈತಿದಿ” ನಾಟಕದ ಬುಕ್ಕಿಂಗ್ 9449664389 ಆರಂಭಗೊಂಡಿದೆ.