ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ವತಿಯಿಂದ ಅಕ್ಟೋಬರ್ 28 ಮತ್ತು 29 ರಂದು ಉಡುಪಿ ಅಜ್ಜರಕಾಡುವಿನಲ್ಲಿ ವಿಶ್ವ ಬಂಟರ ಸಮ್ಮಿಲನ, ಕ್ರೀಡಾ ಸಂಗಮ ಹಾಗೂ ಸಾಂಸ್ಕೃತಿಕ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಅಂಬಾಗಿಲು ಅಮೃತಾ ಗಾರ್ಡನ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೂರ್ವ ಭಾವಿ ಸಭೆಗಳನ್ನು ನಡೆಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಜಗತ್ತಿನಾದ್ಯಂತ ಇರುವ 150 ಬಂಟರ ಸಂಘಗಳ ಪ್ರತಿನಿಧಿಗಳು ಭಾಗವಹಿಸಲಿರುವರು. ಮುಂಬಯಿ, ಪುಣೆ, ಬೆಂಗಳೂರು, ಮೈಸೂರು ಹುಬ್ಬಳ್ಳಿ-ದಾರಾವಾಡ, ಯುಎಇ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 10-15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕ್ರೀಡಾ ಸಂಗಮದಲ್ಲಿ ತ್ರೋಬಾಲ್, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟವನ್ನು ಏರ್ಪಡಿಸಲಾಗುತ್ತದೆ. ಅದೇ ರೀತಿ ಸಾಂಸ್ಕೃತಿಕ ಸಂಭ್ರಮದಲ್ಲಿ ತಂಡಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಮುದಾಯದ ಹಲವು ದಾನಿಗಳು ಸಂಪೂರ್ಣ ನೆರವು ನೀಡಲಿದ್ದಾರೆ ಎಂದರು.
ಈ ಹಿಂದಿನ ಬಿಜೆಪಿ ಸರಕಾರಕ್ಕೆ ಬಂಟರ ಅಭಿವೃದ್ಧಿ ನಿಗಮ ರಚಿಸುವಂತೆ ಮನವಿ ಸಲ್ಲಿಸಲಾಗಿತ್ತು. ಚುನಾವಣೆ ಅವಧಿಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೂ ಬಂಟರ ಅಭಿವೃದ್ಧಿ ನಿಗಮ ರಚಿಸುವುದಾಗಿ ಘೋಷಿಸಿತ್ತು, ಈ ಸಂಬಂಧ ಮತ್ತೆ ಸರಕಾರಕ್ಕೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಐಕಳ ಹರೀಶ್ ಶೆಟ್ಟ ನುಡಿದರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಸಾಂಸ್ಕೃತಿಕ ಸಂಭ್ರಮದ ಸಂಚಾಲಕ ಚಂದ್ರಹಾಸ ಶೆಟ್ಟಿ ಬಂಟ್ವಾಳ, ಕ್ರೀಡಾ ಸಂಗಮ ಸಂಚಾಲಕರಾಗಿ ಗಿರೀಶ್ ಶೆಟ್ಟಿ ತೆಳ್ಳಾರ್, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಲಯ, ತಾಲೂಕು ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಶೀಘ್ರದಲ್ಲೇ ಮಹಿಳೆಯರ ಘಟಕವನ್ನೂ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.