ಪ್ರಕೃತಿಯ ಮಡಿಲಲ್ಲಿ ಒಂದಾಗಿ ಬದುಕುತ್ತಿದ್ದ ಮಾನವ ತನ್ನ ದಿನಚರಿಗಳನ್ನು ಅನೇಕ ಆಚರಣೆಗಳ ಮೂಲಕ ಪ್ರಾರಂಭಿಸುತ್ತಿದ್ದ. ನಾಗರಿಕ ಪ್ರಪಂಚದಲ್ಲಿ ಆಧುನಿಕತೆಯ ಪ್ರಭಾವ ಹೆಚ್ಚುತ್ತಾ ಹಿರಿಯರು ಅನುಸರಿಸಿಕೊಂಡು ಬಂದ ರೀತಿ ನೀತಿಯ ಕೆಲವು ಮೌಲ್ಯ ಮಾಯವಾಗಿ ಕೆಲವು ಸಂಪ್ರದಾಯ ಕಣ್ಮರೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಕುಂದಾಪುರದ ಆಸು ಪಾಸಿನ ಊರುಗಳ ಮನೆ ಮನೆಯಲ್ಲಿ ಜಕಣಿ ಅಂದರೆ ಕುಟುಂಬದ ಸದಸ್ಯರು ತೀರಿಕೊಂಡವರ ಆತ್ಮಗಳಿಗೆ ಊಣ ಬಡಿಸುವ ಕೌಟುಂಬಿಕ ಬಾಂಧವ್ಯದ ಸಂಕೇತ ಜಕಣಿ ಆಚರಣೆ. ಇಂದಿಗೂ ಈ ಆಚರಣೆ ಜೀವಂತವಾಗಿದ್ದು, ಜನಮಾನಸದಲ್ಲಿ ಉಳಿದಕೊಂಡಿದೆ.
ವೃಷಭ ಸಂಕ್ರಮಣದಿಂದ ಮಿಥುನ ಸಂಕ್ರಮಣದವರೆಗೆ ಭಯ – ಭಕ್ತಿಯಿಂದ ನಂಬಿಕೆಯೊಂದಿಗೆ ಪ್ರತಿವರ್ಷ ಬ್ಯಾಸಿ ತಿಂಗಳಲ್ಲಿ ಆಚರಿಸುವ ಜಕಣಿ, ಅಳಿಯ ಸಂತಾನ ವ್ಯವಸ್ಥೆಯ ಮಾತೃಪ್ರಧಾನ ಸಮಾಜದಲ್ಲಿ ಮುಖ್ಯವಾಗಿ ಆಚರಣೆಯಲ್ಲಿದೆ.
ಆಚರಣೆಯ ಕ್ರಮ- ಜಕಣಿಯ ದಿನ ಸಂಜೆ ಮನೆಯ ಗಂಡಸರು, ಹಾಗೂ ಗಂಡು ಮಕ್ಕಳು ಮನೆಯಿಂದ ಸ್ವಲ್ಪ ದೂರ ನಿರ್ದಿಷ್ಟ ಕಾಡು ಪ್ರದೇಶದಲ್ಲಿ ಇರುವ ಅವರವರ ಕುಟುಂಬದ ಜಕಣಿಕಲ್ಲು, ಭೂತದ ಕಲ್ಲು ಅಥವಾ ಗಡಿಕಲ್ಲುಗಳಿಗೆ ಮನೆಯಿಂದ ಕೊಂಡುಹೋದ ತೆಂಗಿನ ಕಾಯಿ ಒಡೆದು, ಕೆಂಪು ದಾಸವಾಳ ಮತ್ತು ಮುಖ್ಯವಾಗಿ ಕೆಸ್ಕರ ಹೂವಿನಿಂದ (ಕೇಪಳ) ಭೂತದ ಕಲ್ಲನ್ನು ಶೃಂಗರಿಸಿ, ಅರೆ ಬೆಂದ ಅನ್ನ (ಚರು) ಕೆಲವು ಮನೆತನಗಳಲ್ಲಿ ಮಡಿವಾಳರು ತಂದ ಚರುವನ್ನು ಬಡಿಸುವ ಕ್ರಮಇದೆ. ಮಡಿವಾಳರಿಗೆ ಇಂತಹ ಸೇವೆಗಳಿಗಾಗಿ ಹಿರಿಯರು ಭೂಮಿ ಉಂಬಳಿ ಬಿಟ್ಟಿರುತ್ತಾರೆ. ಇನ್ನೂ ಕೆಲವು ಮನೆಯಲ್ಲಿ ಮನೆಯ ಗಂಡಸರು ಶುದ್ದಾಚಾರದಲ್ಲಿ ಮಾಡಿದ ಚರು ಜಕಣಿಗೆ ಬಡಿಸುವ ಕ್ರಮ ಇದೆ. ಚರುವನ್ನು ಕೊಡಿ ಬಾಳೆ ಎಲೆಗೆ ಹಾಕಿ, ತೆಂಗಿನ ಕಾಯಿ ಒಡೆದು, ನೇಣೆ ಕೋಲು ದೀಪ ಹಚ್ಚಿ, ಜಕಣಿಗೆ ಕೋಳಿ ಕೋಯ್ಯುವಾಗ ಊರು ಕೋಳಿ (ನಾಟಿ ಕೊಳಿ) ಯೇ ಆಗಬೇಕು. ಅರಶಿಣ ಮತ್ತು ಸುಣ್ಣದ ನೀರಿನ ಮಿಶ್ರಿತವನ್ನು ಹಾನದ ಕೊಟ್ಟೆ ಅಂದರೆ ಅಡಿಕೆ ಹಾಳೆಯನ್ನು ನೀರಿನಲ್ಲಿ ನೆನೆ ಹಾಕಿ ತೆಗೆದು ಎರಡು ಬದಿಗೆ ಚಿಕ್ಕ ಕಡ್ಡಿ ಸಿಕ್ಕಿಸಿ ಕೊಟ್ಟೆಯ ರೂಪ ಕೊಟ್ಟು ಅದಕ್ಕೆ ಸುರಿದು ಜಕಣಿ ಕಲ್ಲು ಅಥವಾ ಭೂತದ ಕಲ್ಲಿನ ಎದುರು ಇಟ್ಟು, ಕೋಳಿ ಕೊಯ್ದು ಅದರ ರಕ್ತವನ್ನು ಹಾನದ ಕೊಟ್ಟೆಗೆ ಚುಮ್ಮುವಂತೆ ಮಾಡುತ್ತಾರೆ.
ಅಲ್ಲಿ ಇರುವ ಎಲ್ಲರೂ ಕೈಯಲ್ಲಿ ಅಕ್ಕಿ ಕಾಳು ಹಿಡಿದು ಜಕಣಿಗಳನ್ನು ಅಂದರೆ ಕುಟುಂಬದ ಸದಸ್ಯರ ತೀರಿಹೋದ ಆತ್ಮಗಳನ್ನು ಪ್ರಾರ್ಥಿಸಿ. “ಮಕ್ಕಳು ಮರಿ, ಊರ – ಪರ ಊರಲ್ಲಿ ನೆಲೆ ನಿಂತ ಕುಟುಂಬದ ಸದಸ್ಯರು, ದನ ಕರು, ಬೆಳೆ ಬಿತ್ತಿನಲ್ಲಿ ಸಮೃದ್ದಿ ಆಗುವಂತೆ ಕಾಪಾಡಿ ಹಾಗೂ ರೋಗ ರುಜಿನಗಳಿಂದ ಮುಕ್ತವಾಗಲು ಪಿತೃಗಳು ಸಹಕರಿಸಿ, ಅನುಗ್ರಹಿಸಿ ಎಂದು, ನಮ್ಮಲ್ಲಿ ಯಾವುದೇ ತಪ್ಪಾಗಿದ್ದರೂ ಕ್ಷಮಿಸ ಬೇಕು ಯಾವುದೇ ತರಹದ ಉಪದ್ರ ಬರಬಾರದು” ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಸ್ಥಳಕ್ಕೆ ಹೆಣ್ಣು ಮಕ್ಕಳು , ಗರ್ಭಿಣಿ ಹೆಂಗಸರು , ಹೊಸ ಮದುಮಗ ಹೋಗಬಾರದು ಎಂಬ ನಿಯಮವಿದೆ.
ಹಾಡಿಯಲ್ಲಿ ಕೊಯ್ದ ಕೋಳಿ, ತೆಂಗಿನಕಾಯಿಯನ್ನು ಮನೆಗೆ ತಂದು ಪದಾರ್ಥ ಮಾಡಿ ಅಗತ್ಯವಾಗಿ ಅಂದು ಹಲಸಿನ ಹಣ್ಣಿನ ಕಡಬು, ಕೊಚ್ಚಲು ಅಕ್ಕಿಯ ಅನ್ನ, ಉದ್ದಿನ ಕಡಬು ಮಾಡಿ ಕೊಡಿ ಬಾಳೆ ಎಲೆ ಎದುರು ಮಣೆ ಇಟ್ಟು ಪಿತೃಗಳಿಗೆ ಎಡೆ ಇಡುವುದು ಅಥವಾ ಮಿಸಲು ಇಡುವುದು ಅಥವಾ ಹಾಕ್ ಬಚ್ಚುವುದು ಎನ್ನುವ ಕ್ರಮದ ನಂತರ ಮನೆ ಮಂದಿಯೆಲ್ಲ ಊಟ ಮಾಡ ಬಹುದು. ಜಕಣಿಯಂದು ನೆಂಟರು ಇಷ್ಟರು, ಊರಿನ ಆತ್ಮೀಯರನ್ನು ಊಟಕ್ಕೆ ಕರೆಯುವ ಕ್ರಮ ಹಾಗೂ ಮನೆ ಕೆಲಸದ ಆಳುಗಳು ಹಾಗೂ ಅವರ ಮನೆಯವರನ್ನು ಊಟಕ್ಕೆ ಕರೆಯುತ್ತಾರೆ. ಇನ್ನೂ ಕೆಲವು ಮನೆತನಗಳಲ್ಲಿ ಭೂತಕ್ಕೆ ಕೊಯ್ಯವ ಕೋಳಿಯನ್ನು ಅಲ್ಲಿಯೇ ಪದಾರ್ಥ, ಅನ್ನ ಮಾಡಿ ಬಳಿಸುವ ಕ್ರಮ ಇದ್ದು ಉಳಿದ ಅನ್ನ ಪಲ್ಯವನ್ನು ಅಲ್ಲೇ ಉಂಡು ಬರಬೇಕು ಮನೆಗೆ ತರಬಾರದು ಎಂಬ ಕ್ರಮವೂ ಇದೆ.
ಜಕಣಿ ದಿನ ಮಾಡುವ ಹೆಲಸಿನ ಹಿಟ್ಟಿಗೆ ಸೊಳೆ ತೆಗೆಯುವಾಗ ಯಾರೂ ಸೊಳೆ ತಿನ್ನುವಂತಿಲ್ಲ, ಅಂದರೆ ಹಿಟ್ಟು ಮಾಡಿ ಬಡಿಸುವ ತನಕ ಹಲಸಿನ ಹಣ್ಣಿನ ಸಾರಿ (ಸುಪ್ಪೆ) ಯನ್ನು ದನಕರುಗಳಿಗು ಹಾಕುವಂತಿಲ್ಲ. ಜಕಣಿಗೆ ಮಿಸಲು ( ಪಿತೃಗಳಿಗೆ ನೀರು ತಳಿಯುವುದು) ಇಟ್ಟ ಮೇಲೆ ಸಾರಿ, ದಾಣಿಗಳನ್ನು ಉಪಯೋಗಿಸಬಹುದು.
ಜಕಣಿ ಊಟ ಆದ ಮೇಲೆ ಮುಂದಿನ ವರ್ಷದ ಜಕಣಿಗೆ ಅಂತ ಕೋಳಿ ಕಾಲು ತೊಳೆದು ಕೋಳಿ ಬಿಡುವ ಕ್ರಮವೂ ಇದೆ. ಯಾವುದೇ ಕಾರಣಕ್ಕೂ ಜಕಣಿಗಿಂತ ಮೊದಲು ಬಿಟ್ಟ ಕೋಳಿಯನ್ನು ಕೊಯ್ಯುವಂತಿಲ್ಲ. ಒಟ್ಟಿನಲ್ಲಿ ನಂಬಿಕೆ, ಬಾಂಧವ್ಯದ ಸಂಕೇತ ಜಕಣಿ ಆಚರಣೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.