ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ ಅವರ ಕಿರಿಯ ಪುತ್ರಿ ಪಡುವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ, ಬಹರೈನ್ ನಲ್ಲಿ ನೆಲೆಸಿದ್ದ ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ (46) ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ.
ಕಲಾವಿದರ ಕುಟುಂಬದಲ್ಲಿ ಜನಿಸಿದ ಆಸ್ತಿಕಾ ರೈ ಪದಡ್ಕ ವಿಶ್ವಕಲಾನಿಕೇತನದಲ್ಲಿ ಕಲಿತು ನೃತ್ಯ, ಯಕ್ಷಗಾನದಲ್ಲಿ ಪಳಗಿದ್ದರು. ಭರತನಾಟ್ಯ ಕಲಾವಿದೆಯಾಗಿ, ಯಕ್ಷಗಾನ ಕಲಾವಿದೆಯಾಗಿ ಬಹರೈನ್ ದೇಶದಲ್ಲಿ ಸುದೀರ್ಘ ಕಾಲ ಕಲಾಸರಸ್ವತಿಯನ್ನು ಆರಾಧಿಸುತ್ತಾ ಬಂದಿದ್ದರು.
ಬಹರೈನ್ ಯಕ್ಷಗಾನ ರಂಗದಲ್ಲಿ ಅವರು ಸುಧನ್ವ ಮೋಕ್ಷದ ಕೃಷ್ಣನಾಗಿ, ಕೋಟಿ ಚೆನ್ನಯದ ಕಿನ್ನಿದಾರುವಾಗಿ, ಶಾಂಭವಿ ವಿಲಾಸದ ಶಾಂಭವಿಯಾಗಿ ಮೊದಲಾದಿ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದರು. ಪುತ್ತೂರಿನಲ್ಲಿ ಇರುವಾಗ ತಂದೆ ವಿದ್ವಾನ್ ವಿಶ್ವನಾಥ ರೈ ಹಾಗೂ ತಾಯಿ ವಿದುಷಿ ನಯನಾ ವಿ. ರೈ ಅವರೊಂದಿಗೆ ನೃತ್ಯ ರಂಗದಲ್ಲಿ ಗುರುತಿಸಿಕೊಂಡಿದ್ದರು.