ಒಂದು ಮಾತಿದೆ – ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವುದು ಎಂದು. ಈಗೀಗ ನಮ್ಮ ಸುಶಿಕ್ಷಿತ, ಬುದ್ಧಿವಂತ ಯುವಜನತೆ ಟ್ರೋಲ್ ಪ್ರಿಯರಾಗುತ್ತಿರುವುದನ್ನು ಕಂಡಾಗ ಈ ಮಾತು ನೆನಪಾಗುತ್ತದೆ. ಟ್ರೋಲ್ ಮಾಡುವುದು ಈಗೊಂದು ಒಂದು ಫ್ಯಾಷನ್ನಂತಾಗಿದೆ. ತಮ್ಮ ವಿರೋಧಿಗಳು (ಅದು ವೈಯಕ್ತಿಕ ಇರಬಹುದು, ರಾಜಕೀಯ, ವೃತ್ತಿ ಇಂಥ ಯಾವುದೇ ಕ್ಷೇತ್ರದ ವಿರೋಧಿಗಳೂ ಆಗಿರಬಹುದು) ಏನು ಹೇಳಿದರೂ ಅದಕ್ಕೆ ರೆಕ್ಕೆಪುಕ್ಕ ಸೇರಿಸಿ, ಯಾವ್ಯಾವುದೋ ಹಾಸ್ಯ ಕಲಾವಿದರ ಚಿತ್ರವನ್ನೂ ಸೇರಿಸಿ ಕೊಂಡು ತಮಗೆ ತೋಚಿದಂತೆ ಬರೆದು ಅವಮಾನಪಡಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮಾತಾಡುವಾಗ ಒಂದಿಷ್ಟು ಎಡವಿದರೂ ಅದನ್ನೂ ತುಂಬಾ ಕೀಳು ಮಟ್ಟದಲ್ಲಿ ಚಿತ್ರಿಸಿ ಟ್ರೋಲ್ ಮಾಡಲಾಗುತ್ತದೆ. ಇದು ಈಗ ಎಲ್ಲ ಇತಿಮಿತಿಯನ್ನೂ ದಾಟಿ ಸಾಗುತ್ತಿದ್ದು, ಸಮಾಜದ ಆರೋಗ್ಯಕ್ಕೆ ದೊಡ್ಡ ಸವಾಲಾಗುವ ಲಕ್ಷಣ ಕಂಡು ಬರುತ್ತಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಆಪ್ತ ಬಳಗದವರನ್ನೂ ಟ್ರೋಲ್ಗೆ ಬಳಸುವುದೂ ಇದೆ.
ನಾವು ಬುದ್ಧಿವಂತರಾದರೂ ವಿವೇಕದಿಂದ ವರ್ತಿಸುವ ಬಗ್ಗೆ ಅಜ್ಞಾನಿಗಳೇ ಆಗಿದ್ದೇವೆ. ಎಲ್ಲವೂ ಅವಸರದ ನಿರ್ಧಾರ. ನಾವು ಮಾಡುವ ಕೆಲಸದಿಂದ ಆಗಬಹುದಾದ ಪರಿಣಾಮ, ಅಪಾಯ, ಒಳಿತು-ಕೆಡುಕಿನ ಬಗ್ಗೆ ಚಿಂತಿಸುವುದೇ ಇಲ್ಲ. ಆದ್ದರಿಂದಲೇ ಟ್ರೋಲ್ ಮಾಡಿ ಕಾನೂನು ಸುಳಿಗೆ ಸಿಕ್ಕಿಬಿದ್ದ ಸಾಕಷ್ಟು ಉದಾಹರಣೆಗಳಿವೆ. ಒಂದು ಕ್ಷಣದ ಅವಿವೇಕದ ಕೆಲಸದಿಂದ ಅನಗತ್ಯವಾಗಿ ಸಮಸ್ಯೆಯನ್ನು ಮೈಗೆಳೆದುಕೊಳ್ಳುವುದು ನಿಜಕ್ಕೂ ಮೂರ್ಖತನವೇ.
ಗಣ್ಯಾತಿಗಣ್ಯರನ್ನೂ ಇಂಥ ಟ್ರೋಲ್ಗೆ ಒಳಪಡಿಸಿ ಅವರ ವೈಯಕ್ತಿಕ ಘನತೆ ಹಾಗೂ ಅವರು ಹೊಂದಿರುವ ಹುದ್ದೆಯ ಘನತೆಯನ್ನೂ ನಾವು ಕೇವಲವಾಗಿ ಮಾಡುವುದಿದೆ. ಇದು ನಿಜಕ್ಕೂ ಅಕ್ಷಮ್ಯ. ಎಷ್ಟೋ ಬಾರಿ ಬೇನಾಮಿ ಹೆಸರಿನಿಂದ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ತೆರೆದು ಇಂಥ ತೀಟೆಯನ್ನು ತೀರಿಸುವುದೂ ಇದೆ. ಒಬ್ಬ ಇಂಥದ್ದೊಂದು ತಪ್ಪು ಮಾಡಿದರೆ ಹಿಂದು ಮುಂದು ನೋಡದೆ ಅದಕ್ಕೆ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿ ಅದನ್ನು ಅಳತೆಗೆ ಸಿಗದಷ್ಟು ಉದ್ದ, ಎತ್ತರಕ್ಕೆ ಎಳೆಯು ವವರೂ ಇದ್ದಾರೆ. ಕೆಲವರು ಮೂಲ ಹೇಳಿಕೆಯನ್ನು ತಿರುಚಿ ಟ್ರೋಲ್ ಮಾಡುವುದೂ ಇದೆ. ನಮ್ಮ ದೇಶದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಹಾಗೂ ಕಾನೂನಿನ ಭೀತಿಯಿಲ್ಲದೆ ಇರುವುದು ಕೂಡ ಇಂಥ ಕೃತ್ಯಗಳು ಹೆಚ್ಚಾಗಲು ಪ್ರಮುಖ ಕಾರಣ.
ಟ್ರೋಲಿಗರಿಗಿಂತ ಹೆಚ್ಚಾಗಿ ಟ್ರೋಲ್ಗೆ ಒಳಗಾದವರು ಅನುಭವಿಸುವ ಕಿರಿ ಕಿರಿ ಅಸಹನೀಯ. ಟ್ರೋಲ್ಗೆ ಒಳಗಾದವರೂ ಒಂದು ಕುಟುಂಬದ ಸದಸ್ಯ ಎಂಬುದನ್ನು ಮರೆತು ನಮ್ಮ ಜನರು ವರ್ತಿಸುತ್ತಿರುವುದು ಆಕ್ಷೇಪಾರ್ಹ ಹಾಗೂ ಅಪಾಯಕಾರಿ ನಡೆಯಾಗಿದೆ. ಬೇಜವಾಬ್ದಾರಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ಒಳಿತಿಗಿಂತ ಹೆಚ್ಚಾಗಿ ಕೆಡುಕಿಗೆ ಬಳಸುತ್ತಿರುವುದು ಈಗಾಗಲೇ ಸಾಬೀತಾಗಿದೆ. ಅದರಲ್ಲಿ ಅವರು ಹೊಂದಿರುವ ಸೃಷ್ಟಿಶೀಲತೆಯೂ ಆಶ್ಚರ್ಯ ಮೂಡಿಸುತ್ತಿದೆ. ಇಂಥ ಬುದ್ಧಿವಂತರು ಟ್ರೋಲ್ ಮಾಡುವುದರ ಬಗೆಗಿನ ಅಪಾಯವನ್ನು ಯಾಕೆ ತಿಳಿದುಕೊಳ್ಳುತ್ತಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಒಂದು ಸಣ್ಣ ಟ್ರೋಲ್ ಕಿಡಿ ಭುಗಿಲೆದ್ದು ಎಷ್ಟೆಷ್ಟೋ ಅನಾಹುತ ಮಾಡಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ ಅದೆಲ್ಲ ನಮಗೆ ಸಂಬಂಧ ಪಟ್ಟ ದ್ದಲ್ಲ ಎಂಬ ಭಾವನೆ ನಮ್ಮನ್ನು ಮತ್ತಷ್ಟು ಅಪಾಯಕ್ಕೆ ನೂಕುತ್ತಿವೆ.
ಜಾಗೃತಿ ಅಗತ್ಯ :
ಟ್ರೋಲ್ ಮಾಡುವುದರ ಬಗೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದರ ಮೂಲಕ ಆಗುವಂಥ ಮಾನಹಾನಿ, ಅದಕ್ಕೆ ಕಾನೂನಿನಲ್ಲಿರುವಂಥ ಶಿಕ್ಷೆಯ ಅವಕಾಶಗಳ ಬಗ್ಗೆ ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಜತೆಗೆ ಸಮಾಜದ ಹಿತ ಹಾಗೂ ಆರೋಗ್ಯಕ್ಕೆ ಚ್ಯುತಿ ತರುವ ಇಂಥ ಟ್ರೋಲ್ಗೆ ಬ್ರೇಕ್ ಹಾಕಲು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿ ಕೊಂಡು ಕಾನೂನು ಕ್ರಮ ಕೈಗೊಳ್ಳು ವುದೂ ಅಗತ್ಯವಾಗಿದೆ. ಇಂಥವರಿಗೆ ಕಾನೂನಿನ ಬಿಸಿ ಮುಟ್ಟದೆ ಇದ್ದರೆ ಅದು ಸರಿದಾರಿಗೆ ಬರುವುದು ಕಷ್ಟ. ಟ್ರೋಲಿಗರಿಗೆ ಇದೇ ರೀತಿ ಸ್ವಾತಂತ್ರ್ಯ ಮುಂದುವರಿಸಿದರೆ ಮುಂದೆ ಸಾಕಷ್ಟು ದೊಡ್ಡ ಸಾಮಾಜಿಕ ಅಪಾಯಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕಾದೀತು. ಆದ್ದರಿಂದ ಯುವ ಜನರು ಇಂಥದ್ದಕ್ಕೆಲ್ಲ ಸ್ಪಂದಿಸ ಬಾರದು. ಈ ಹೊತ್ತಿನಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಈಶವಿಠಲದಾಸ ಶ್ರೀಗಳು ಉಪನ್ಯಾಸವೊಂದರಲ್ಲಿ ಹೇಳಿದ “ನಾವು ಟ್ರೋಲ್ ಮಾಡೆಲ್ ಆಗ ಬಾರದು, ರೋಲ್ ಮಾಡೆಲ್ ಆಗ ಬೇಕು’ ಎಂಬ ಸಾಮಾಜಿಕ ಕಾಳಜಿಯ ಮಾತು ನೆನಪಾಗುತ್ತದೆ. ಈ ಮಾತಿನಂತೆ ನಡೆದಾಗ ಜೀವನದ ಸೌಂದರ್ಯದ ಅನುಭವವಾದೀತು.
-ಪುತ್ತಿಗೆ ಪದ್ಮನಾಭ ರೈ,