ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್ಗಳು ಬಡ್ಡಿ ದರ ಏರಿಕೆ ಮುಂತಾದ ಬಿಗಿ ವಿತ್ತೀಯ ಕ್ರಮಗಳ ಮೊರೆ ಹೋಗುತ್ತಿರುವುದರ ಹಿನ್ನೆಲೆಯಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಡಬಹುದು ಎಂದು ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಎಚ್ಚರಿಕೆ ನೀಡಿದೆ. 1970ರಲ್ಲಿ ಉಂಟಾದ ಆರ್ಥಿಕ ಹಿಂಜರಿತದ ಅನಂತರ ಅತೀ ಗರಿಷ್ಠ ಹಿಂಜರಿತ 2024 ರಲ್ಲಿ ಆಗಬಹುದು ಎಂದು ವಿಶ್ವಬ್ಯಾಂಕ್ನ ವರದಿಯೊಂದು ಅಭಿಪ್ರಾಯಪಟ್ಟಿದೆ. ಅಭಿವೃದ್ಧಿಶೀಲ ದೇಶಗಳಿಗೆ ಇದರ ಬಿಸಿ ಹೆಚ್ಚಾಗಿ ತಟ್ಟಲಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ಇದೇ ವೇಳೆ ಹಣದುಬ್ಬರಕ್ಕೆ ಕಡಿವಾಣ ಹಾಕಲು ಉತ್ಪಾದನೆ ಹೆಚ್ಚಳ ಹಾಗೂ ಪೂರೈಕೆ ಸರಪಳಿ ಅಡಚಣೆ ನಿರ್ಮೂಲನೆಯಂತಹ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದೆ. ರಷ್ಯಾ-ಉಕ್ರೇನ್ ಕದನ, ಜಾಗತಿಕ ಆಹಾರ ಪೂರೈಕೆಯಲ್ಲಿ ಅಡಚಣೆ, ಕೃಷಿ ಉತ್ಪಾದನೆಯಲ್ಲಿ ಕುಂಠಿತ, ಕೊರೊನಾ ಹೀಗೆ ಹಲವು ಕಾರಣಗಳಿಂದಾಗಿ ಹಣದುಬ್ಬರ ಉಂಟಾಗಿ ನಿರೀಕ್ಷಿತ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಣಬಹುದು ಎಂಬ ಭಯದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಇಂಥ ಬೆಳವಣಿಗೆಗಳ ಮುನ್ಸೂಚನೆ ಲಭಿಸಲಾರಂಭಿಸಿದೆ. ಆದರೆ ಭಾರತದ ಮೇಲೆ ಈ ಆರ್ಥಿಕ ಹಿಂಜರಿತ ಅಷ್ಟೇನೂ ಪರಿಣಾಮ ಬೀರಲಾರದು ಎಂದು ಆರ್ಥಿಕ ತಜ್ಞರು ಮತ್ತು ಸರಕಾರ ಆಶಾವಾದವನ್ನು ವ್ಯಕ್ತಪಡಿಸಿದೆ. ಆತ್ಮನಿರ್ಭರ ಭಾರತ ಪರಿಕಲ್ಪನೆ ನಿರೀಕ್ಷಿಸಲಾದ ಆರ್ಥಿಕ ಹಿಂಜರಿತದ ಕನಿಷ್ಠ ಪರಿಣಾಮಗಳೊಂದಿಗೆ ಭಾರತವನ್ನು ಮುನ್ನೆಡಸಲಿದೆಯಾ ಎಂಬುದು ಸದ್ಯದ ಯಕ್ಷಪ್ರಶ್ನೆ.
1990 ರಲ್ಲಿ ಹುಸಿಯಾದ ಭವಿಷ್ಯವಾಣಿ :
ರವಿಭಾತ್ರಾ ಅವರು 1985ರಲ್ಲಿ ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ … ಬೆಸ್ಟ್ ಸೆಲ್ಲರ್ ಪಟ್ಟಿಯನ್ನು ಪ್ರವೇಶಿಸಿದ ಪುಸ್ತಕ “1990ರ ಮಹಾ ಕುಸಿತ’ ಒಂದು ಮಹಾ ದುರಂತದ ಮನ್ಸೂಚನೆಯನ್ನು ತೆರೆದಿಟ್ಟಿತ್ತು. ಆದರೆ ಅಂದಿನ ಭವಿಷ್ಯವಾಣಿ ಸುಳ್ಳಾಯಿತು. ಇದು ಸಾಮಾನ್ಯವಾಗಿ ಭವಿಷ್ಯ ನುಡಿಯುವ ಪ್ರಾಮಾಣಿತ ಸೂತ್ರವನ್ನು ಅನುಸರಿಸಿದೆ ಎಂದು ಆರ್ಮ್ಸ್ಟ್ರಾಂಗ್ 1988ರಲ್ಲಿ ಬರೆದಿದ್ದರು. ಒಂದು ವೇಳೆ ಅನಾಹುತ ಸಂಭವಿಸಿದರೆ “ನಾನು ಹೇಳಿದ್ದೇನೆ’ ಎಂದು ಹೇಳಬಹುದು. ಅದು ಸಂಭವಿಸದಿದ್ದರೆ “ಮುನ್ಸೂಚನೆ ನೀಡಿದ ಪರಿಣಾಮವಾಗಿ ನನ್ನ ಸಲಹೆಯಂತೆ ಮುಂಜಾಗರೂಕತ ಹೆಜ್ಜೆಗಳಿಂದಾಗಿ ದೊಡ್ಡ ದುರಂತ ತಪ್ಪಿತು’ ಎನ್ನುತ್ತಾರೆ. ಆದರೆ ನಾವು ಆಯ್ದುಕೊಂಡ ರಚನಾತ್ಮಕ ಹೆಜ್ಜೆಗಳು ಜಾಗತಿಕ ಹಿಂಜರಿತದ ಬಿಸಿಯಿಂದ ನಮಗೆ ರಕ್ಷಣೆ ಕೊಡಲಿದೆಯಾ ಎಂದು ಕಾದು ನೋಡಬೇಕಾಗಿದೆ.
ಹೊಣೆಯರಿತ ಹೆಜ್ಜೆಯಿರಲಿ :
ಭಾರತದಲ್ಲಿ ಹಣದುಬ್ಬರ ಹೆಚ್ಚುತ್ತಿರುವುದು, ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದು ಆರ್ಥಿಕ ದುಃಸ್ಥಿತಿಯ ಸೂಚಕವೆಂದು ಪರಿಗಣಿಸಲಾಗಿದೆ. ಸರಕಾರ ಇನ್ನೂ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಆರ್ಥಿಕ ಪ್ರಗತಿಯ ದಾರಿ ಹಳಿ ತಪ್ಪಿ ಉರುಳುವ ಅಪಾಯ ಇದ್ದೇ ಇದೆ. ನಮ್ಮ ನೆರೆಯ ಶ್ರೀಲಂಕಾದಲ್ಲೂ ಹಲವು ವರ್ಷಗಳ ಹಿಂದೆಯೇ ಆರ್ಥಿಕ ಮಗ್ಗಟ್ಟು ಸೃಷ್ಟಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದರು. ಆದರೆ ಸರಕಾರ ಅದನ್ನು ನಿರ್ಲಕ್ಷಿಸಿ ಜನಪ್ರಿಯ ಯೋಜನೆಗಳ ಮೂಲಕ ಮತದಾರರನ್ನು ಓಲೈಸುವತ್ತ ಗಮನ ನೀಡಿತು. ಪರಿಣಾಮವಾಗಿ ಈಗ ಶ್ರೀಲಂಕಾ ಅರ್ಥಿಕ ವಿನಾಶದ ಅಂಚಿನಲ್ಲಿದೆ.
ಭಾರತಕ್ಕೆ ಒತ್ತಡದ ಆರ್ಥಿಕ ಸವಾಲುಗಳು ಆಂತರಿಕವಾಗಿಯೇ ಉಳಿದಿರುವುದು ಧನಾತ್ಮಕ ಅಂಶ. ಯಾಕೆಂದರೆ ನಮ್ಮ ಆರ್ಥಿಕ ಸಮಸ್ಯೆಗಳು ನಮ್ಮ ನೇರ ನಿಯಂತ್ರಣದಲ್ಲಿವೆ. ಆಂತರಿಕವಾದ ಸಮಸ್ಯೆಗಳಾದ ಸಣ್ಣ ಉದ್ಯಮಗಳ ಸ್ಪರ್ಧಾತ್ಮಕತೆ, ಆರ್ಥಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುವುದು ಮತ್ತು ರಾಜ್ಯಗಳ ವಿತ್ತೀಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಸವಾಲುಗಳು ಹೊಸದಲ್ಲದಿರುವುದು ಆತಂಕಕ್ಕೆ ಕಾರಣ. ಆತ್ಮನಿರ್ಭರ ಭಾರತ ಪರಿಕಲ್ಪನೆ ಭಾರತವನ್ನು ನಿರೀಕ್ಷಿಸಲಾದ ಆರ್ಥಿಕ ಹಿಂಜರಿತದ ಕನಿಷ್ಠ ಪರಿಣಾಮಗಳೊಂದಿಗೆ ಮುನ್ನಡೆಸಲಿ ಎಂಬುದೇ ನಮ್ಮ ಹಾರೈಕೆ.
-ಡಾ| ಎ. ಜಯ ಕುಮಾರ ಶೆಟ್ಟಿ, ಉಜಿರೆ