ಗುಜರಾತ್ ನ ವಾಪಿ ಕನ್ನಡ ಸಂಘದ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಿದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2023-25 ರವರೆಗೆ ಹೊಸ ಕಾರ್ಯಕಾರಿ ಸಮಿತಿಯ ರಚನೆಯಾಗಿತ್ತು. ಮೇ 25 ರಂದು ಕಾರ್ಯಭಾರ ಹಸ್ತಾಂತರ ನಡೆಯಿತು. ನಿಶಾ ಶೆಟ್ಟಿ ಅಧ್ಯಕ್ಷೆ, ಲಲಿತಾ ಕಾರಂತ ಉಪಾಧ್ಯಕ್ಷೆ, ಗೌ. ಕಾರ್ಯದರ್ಶಿ ವಿದ್ಯಾಧರ ಭಟ್, ಪ್ರಫುಲ್ಲಾ ಶೆಟ್ಟಿ ಸಹಕಾರ್ಯದರ್ಶಿ, ಪರಮೇಶ್ವರ ಬೆಳಮಗಿ ಖಜಾಂಚಿ, ಸುಜಾತಾ ಶ್ರೀನಿವಾಸ ಸಹ ಖಜಾಂಚಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ಚಂದ್ರಿಕಾ ಕೋಟ್ಯಾನ್, ವಸಂತಿ ಭಟ್ ಕಾರ್ಯದರ್ಶಿ ಮತ್ತು ನೀತಾ ಮರ್ಬಳ್ಳಿ ಖಜಾಂಚಿಯಾಗಿ ನೇಮಕಗೊಂಡರು.
ಮೇ 25 ರಂದು ಜರುಗಿದ ಕಾರ್ಯಭಾರ ಹಸ್ತಾಂತರದ ಸಮಯದಲ್ಲಿ ನಿರ್ಗಮನ ಅಧ್ಯಕ್ಷ ಟಿ.ಕೆ ವಿನಯಕುಮಾರ್ ಮಾತನಾಡುತ್ತಾ ತಮ್ಮ ಎರಡು ವರ್ಷಗಳ ಅವಧಿಯಲ್ಲಿ ಸಂಘದ ಅಭಿವೃದ್ಧಿಯಲ್ಲಿ ಸಭಾಭವನದ ಮೇಲ್ಚಾವಣಿ ನವಿಕರಣ, ಸಂಘ ಸಂಸ್ಥೆಗಳಿಗೆ ಕಡ್ಡಾಯವಾಗಿ ಬೇಕಾಗಿರುವ ಫೈಯರ್ ಹೈಡ್ರಂಟ್ ಅಳವಡಿಕೆ ಮತ್ತು ಜನರೇಟರ್ ಹೀಗೆ ಕೆಲವು ಕಾರ್ಯಗಳನ್ನು ಮಾಡಿದ ತೃಪ್ತಿ ತಮಗಿದ್ದು ಇನ್ನೂ ಉಳಿದ ಕೆಲವೊಂದು ಕಾರ್ಯಗಳನ್ನು ಹೊಸ ಸಮಿತಿ ನಿರ್ವಹಿಸುವಲ್ಲಿ ತಮ್ಮ ಸಹಕಾರವಿರುತ್ತದೆ ಎಂಬ ಭರವಸೆಯ ಮಾತಿನೊಂದಿಗೆ 2021-23 ರ ಖರ್ಚುವೆಚ್ಚ, ಸ್ಥಿರಚರ ಆಸ್ತಿ ಪಟ್ಟಿ ಮತ್ತು ಕೆಲವು ನಿಯಮಿತ ಕಡತಗಳನ್ನು ಹೊಸ ಅಧ್ಯಕ್ಷೆ ಯಾದ ನಿಶಾ ಎನ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಮೇಲೆ ಭರವಸೆ ಇಟ್ಟು ತಮಗೆ ನೀಡಿದ ಜವಾಬ್ದಾರಿಯನ್ನು ತಮ್ಮ ಅಧ್ಯಕ್ಷರ ಮತ್ತು ಸರ್ವ ಸದಸ್ಯರ ಸಹಕಾರದಿಂದ ನಿರ್ವಹಿಸಿದ ಸಂತಸವನ್ನು ಗೌ. ಕಾರ್ಯದರ್ಶಿ ಪರಮೇಶ್ವರ ಬೆಳಮಗಿ ಮತ್ತು ಖಜಾಂಚಿ ವಿದ್ಯಾಧರ ಭಟ್ ಎಲ್ಲರೊಂದಿಗೆ ಹಂಚಿಕೊಂಡರು.
ನೂತನ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ ನಿಶಾ ಶೆಟ್ಟಿ ಮಾತನಾಡುತ್ತಾ ತಾನು ಎರಡು ವರ್ಷಗಳ ಹಿಂದೆ ಅಧ್ಯಕ್ಷೆಯಾಗಿದ್ದೆ. ಆದರೆ ಆವಾಗ ಕೊರೋನ ಮಹಾಮಾರಿ ಹರಡಿದ್ದರಿಂದ ಯಾವುದೇ ಕೆಲಸಗಳನ್ನು ಮಾಡಲಾಗದ ಆತೃಪ್ತಿ ನನ್ನನು ಕಾಡುತಿತ್ತು. ಈಗ ಮತ್ತೆ ತಾವೆಲ್ಲಾ ಸೇರಿ ಮತ್ತೊಂದು ಅವಕಾಶವನ್ನು ನೀಡಿದ್ದಕ್ಕೆ ಕೃತಜ್ಞತೆ ಹೇಳುತ್ತ ನನ್ನ ಶಕ್ತಿ ಮೀರಿ ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಮತ್ತು ನನ್ನ ಮನದಲ್ಲಿಯ ಕೆಲವೊಂದು ಕೆಲಸಗಳನ್ನು ತಮ್ಮೊಂದಿಗೆ ಹಂಚಿಕೊಂಡು ನಿರ್ವಹಿಸುವ ಧೃಡ ನಿಶ್ಚಯ ಮಾಡಿದ್ದೇನೆ ಎಂದು ತಿಳಿಸಿದರು.
ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ಆಯ್ಕೆಯಾದ ಚಂದ್ರಿಕಾ ಕೋಟ್ಯಾನ್ ಮಾತನಾಡುತ್ತಾ, ಮಹಿಳಾ ವಿಭಾಗವು ಕನ್ನಡ ಸಂಘದ ಅವಿಭಾಜ್ಯ ಅಂಗವಾಗಿದ್ದು ಎಲ್ಲಾ ಕೆಲಸ ಕಾರ್ಯಗಳಿಗೂ ನಮ್ಮ ಸಹಕಾರವಿರಲಿದ್ದು ವಿಶ್ವಸ್ಥರು, ಅಧ್ಯಕ್ಷೆ ಮತ್ತು ಹಿರಿಯರೊಂದಿಗೆ ಚರ್ಚಿಸಿ ಧನ ಸಂಗ್ರಹಣೆ, ಕಾರ್ಯಕ್ರಮಗಳನ್ನು ಈ ಅವಧಿಯಲ್ಲಿ ಮಾಡುವ ಯೋಚನೆ ಹೊಂದಿರುವುದಾಗಿ ತಿಳಿಸಿದರು.
ವಿಶ್ವಸ್ಥರಾದ ಪಿ. ಎಸ್. ಕಾರಂತ, ನಾರಾಯಣ ಶೆಟ್ಟಿ, ಮಲ್ಹಾರ ನಿಂಬರಗಿ, ಸಂಜಯ ಮರ್ಬಳ್ಳಿ ಮತ್ತು ಮಾಜಿ ಅಧ್ಯಕ್ಷರುಗಳಾದ ಎ. ಎನ್. ರಾವ್, ಚಂದ್ರಶೇಖರ ಗೋಸಿ, ವಿಶ್ವನಾಥ ಭಂಡಾರಿ, ಕೆ. ಪಿ ಹೆಬ್ಳೆ, ಗಣೇಶ್ ಶೆಟ್ಟಿ, ಮಮತಾ ಮಲ್ಹಾರ, ಜಾನಕಿ ರಾವ್, ವಾಣಿ ಶೇಖರ್, ನಾಗರಾಜ ಶೆಟ್ಟಿ, ಮುಕುಂದ ಹಂದಿಗೋಳ ಮುಂತಾದವರು ಉಪಸ್ಥಿತರಿದ್ದರು. ಎರಡು ವರ್ಷದ ಅವಧಿಯಲ್ಲಿ ತಮಗೆ ಸಹಕರಿಸಿದ ಎಲ್ಲ ಹಿರಿಕಿರಿಯರ ಗೌರವಾರ್ಥವಾಗಿ ನಿರ್ಗಮನ ಅಧ್ಯಕ್ಷರಾದ ಟಿ. ಕೆ.ವಿನಯಕುಮಾರ ಏರ್ಪಡಿಸಿದ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.