ಕರಾವಳಿಯ ಉದ್ಯಮದಲ್ಲಿ ಹೆಚ್ಚು ಲಾಭ ತರುವಂತಹ ಮತ್ತು ಪಶುಗಳ ಸಾಕಾಣಿಕೆ ಪ್ರಥಮ ಸ್ಥಾನ ಗಳಿಸುತ್ತಿರುವ ಕರಾವಳಿ ಕೆಎಂಎಫ್ ಗೆ ಹೆಚ್ಚು ಲಾಭವನ್ನು ನೀಡುತ್ತಿರುವ ಹಳ್ಳಿಗಳು ಇಂದಿಗೂ ಹೈನುಗಾರಿಕೆಯನ್ನು ಉಸಿರಾಗಿಸಿಕೊಂಡು ಅದರಲ್ಲಿಯೇ ತಮ್ಮ ಜೀವನವನ್ನು ಕಟ್ಟಿಕೊಂಡು ಬದುಕು ನಡೆಸುತ್ತಿರುವ ಸಾವಿರಾರು ಮಂದಿಯಲ್ಲಿ ಹಳ್ಳಿಗರ ಸರ್ವ ಪಾಲು ಬಹಳಷ್ಟು ಇದೆ. ಗೋ ಸೇವೆಯಲ್ಲಿ ತನ್ನನ್ನೇ ತಾನೇ ತೊಡಗಿಸಿಕೊಂಡು ಬದುಕಿನ ಜೊತೆಗೆ ಗೋವುಗಳ ಲಾಲನೆ ಪಾಲನೆ ಯೊಂದಿಗೆ ಹೈನುಗಾರಿಕೆ ಇಂದು ಬೆಟ್ಟದಷ್ಟು ಬೆಳೆದಿದೆ. ಅಂತಹ ಸೇವೆ ಹಾಗೂ ಕಾರ್ಯನಿರ್ವಹಣೆಯೊಂದಿಗೆ ಬದುಕಿನ ಜೊತೆಗೆ, ಹೈನುಗಾರಿಕೆಯ ಕರ್ತವ್ಯದ ಜೊತೆಗೆ ಕೃತಕ ಗರ್ಭಧಾರಣೆ ಕರ್ತವ್ಯ ಮೈಗೂಡಿಸಿಕೊಂಡ ಇವರು ಹಳ್ಳಿಗರ ನೋವುಗಳಿಗೆ ಸ್ಪಂದಿಸುತ್ತಾ ಸೇವೆ ನೀಡುತ್ತಿದ್ದಾರೆ ಇನ್ನೂ ಅಲ್ಲಿ ಇವರ ಬದುಕು ಜ್ವಲಂತ ಸಾಕ್ಷಿ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಕೃತಕ ಗರ್ಭಧಾರಣೆಯ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಲೇಖಾ ಎಸ್. ಶೆಟ್ಟಿ ಇವರಿಗೆ ಇತ್ತೀಚಿಗೆ ತಾಲ್ಲೂಕಿನ ಶ್ರೇಷ್ಠ ಕೃತಕ ಗರ್ಭಧಾರಣೆ ಕಾರ್ಯಕರ್ತೆಯಾಗಿ ಘೋಷಿಸಲಾಗಿದೆ.ಇವರು ಕೈಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ 2002 ರಿಂದ ಕಾರ್ಯನಿರ್ವಹಿಸುತ್ತಿದ್ದು, 21 ವರ್ಷಗಳ ಸುದೀರ್ಘ ಕಾರ್ಯನಿರ್ವಣೆಯೊಂದಿಗೆ, ಪ್ರಸ್ತುತವಾಗಿ ಕೃತಕ ಗರ್ಭಧಾರಣೆ ಕಾರ್ಯಕರ್ತೆಯಾಗಿ ಸುಮಾರು 11 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದರು. ಇದರಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಕೃತಕ ಗರ್ಭಧಾರಣೆ ಯು ಸಾಕ್ಷಿಯಾಗಿದೆ. ಪ್ರಸ್ತುತ ಇವರು ದಕ್ಷಿಣ ಕನ್ನಡ ಹಾಲು ಒಕ್ಕೂಟದ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟಿಯಾಗಿ, ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ಜನ ಜಾಗೃತಿ ಸಮಿತಿಯ ಸದಸ್ಯಯಾಗಿ ಹಾಗೂ ಕುಂದಾಪುರ ತಾಲೂಕು ನೌಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ನಿರಂತರ ಚಟುವಟಿಕೆ ಹಾಗೂ ಬಹಳ ಆತ್ಮೀಯತೆಯಿಂದ ಗೋ ಗಳ ಪಾಲನೆ ಪೋಷಣೆ, ಕೃತಕ ಗರ್ಭಧಾರಣೆ ಪ್ರಕ್ರಿಯೆ ಮಾಡುತ್ತಿರುವ ತನ್ನಿಮಿತ ಇವರಿಗೆ ಸಂದ ಗೌರವವಾಗಿ ಕೈಲ್ಕೆರೆ ಹಾ.ಉ.ಸಂಘದ ಕೃತಕ ಗರ್ಭಧಾರಣೆ ತಜ್ಞೆ(A.I.Technician) -2022/23ರ ಸಾಲಿನ ತಾಲೂಕು ಮಟ್ಟದ ಶ್ರೇಷ್ಠ ಕೃತಕ ಗರ್ಭಧಾರಣೆ ಕಾರ್ಯಕರ್ತೆ ಪ್ರಶಸ್ತಿ ಶ್ರೀಮತಿ ಸುಲೇಖಾ ಎಸ್. ಶೆಟ್ಟಿ ಇವರಿಗೆ ಸಂದಿದೆ.
ಇವರನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ, ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಹಾಲು ಒಕ್ಕೂಟದ ಅಧಿಕಾರಿಗಳು ಸಂದರ್ಭದಲ್ಲಿ ಶ್ರೇಷ್ಠ ಕೃತಕ ಗರ್ಭಧಾರಣೆ ಪ್ರಶಸ್ತಿಯನ್ನು ಹಸ್ತಾಂತರಿಸಿ ಶುಭಾಶಯ ಕೋರಿದರು. ಕೈಲ್ಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಗೆ ಬರುವಂತಹ ಗ್ರಾಮಗಳಲ್ಲಿ ಜನರೊಂದಿಗಿನ ಆತ್ಮೀಯತೆಯ ಬಾಂಧವ್ಯ ಹಾಗೂ ಸಂಘಟನಾ ಶಕ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸದಾ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಸುಲೇಖ ಅವರಿಗೆ ಈ ಪ್ರಶಸ್ತಿ ಇನ್ನಷ್ಟು ಸಾಧನೆಗೆ ಹಂಬಲವಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಕೂಡ ಇವರ ಸೇವೆಯು ಅನವರತವಾಗಿ ಸಾಗುವುದರೊಂದಿಗೆ ಇನ್ನಷ್ಟು ಪ್ರಶಸ್ತಿಗಳು ಇವರ ಮುಡಿಗೆ ಸಿಗಲಿ ಎನ್ನುವುದೇ ಆಶಯ.