ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರ ಪ್ರೇರಣೆಯಂತೆ ಗೋವುಗಳ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಿದ್ದು ಜನರು ಆಶೀರ್ವಾದ ನೀಡಿ ಶಾಸಕನನ್ನಾಗಿ ಚುನಾಯಿಸಿದರೆ ಕಾಪು ಕ್ಷೇತ್ರದಲ್ಲಿ ಕರ್ನಾಟಕದ ಮೊದಲ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತದಾರರಿಗೆ ಭರವಸೆ ನೀಡಿದ್ದಾರೆ. ಕಳತ್ತೂರು, ಮುದರಂಗಡಿ, ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಢೆ ಮನೆ ಮನೆ ಭೇಟಿ, ಕಾರ್ಯಕರ್ತರ ಜತೆಗೆ ಸಮಾಲೋಚನೆ ಮತ್ತು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜ ಸೇವಾ ಕಾರ್ಯಗಳಿಗೆ ತಾಯಿಯ ಪ್ರೇರಣೆಯೇ ಪೂರಕವಾಗಿದೆ. ಅವರ ಇಚ್ಛೆಯಂತೆ ನಾವು ಮನೆಯಲ್ಲೇ ಗೋವುಗಳನ್ನು ಸಾಕುತ್ತಿದ್ದು ಗುರ್ಮೆ ಗೋ ವಿಹಾರಧಾಮ ಸ್ಥಾಪಿಸಿ ಅನಾಥ ಗೋವುಗಳೂ ಸೇರಿದಂತೆ ನೂರಾರು ಗೋವುಗಳಿಗೆ ರಕ್ಷಣೆ ನೀಡುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿಯೂ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡುವುಕ್ಕಾಗಿ ಸುಸಜ್ಜಿತ ಗೋ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ ನೀಡಿದ್ದೇವೆ. ನುಡಿದಂತೆ ನಡೆದು ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬಿಜೆಪಿಯನ್ನು ಬೆಂಬಲಿಸುವಂತೆ ಅವರು ನಾವು ಬದ್ಧರಿದ್ದೇವೆ ಎಂದರು.


ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರ್, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಕುತ್ಯಾರು ಬೂತ್ ಅಧ್ಯಕ್ಷ ಧೀರಜ್ ಕುಲಾಲ್, ಬಿಜೆಪಿ ಪ್ರಚಾರಕ ಪ್ರಸಾದ್ ಶೆಟ್ಟಿ, ಕುತ್ಯಾರು ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಖ್ಯಸ್ಥ ಅಚ್ಯುತ್ ಆಚಾರ್ಯ, ಕೇಚಾರಾಯ ಆಚಾರ್ಯ, ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಮುದರಂಗಡಿ – ಪಿಲಾರು – ಕುಂಜಿಗುಡ್ಡೆ ಪರಿಸರದಲ್ಲಿ ಮತಯಾಚನೆ:
ಗುರ್ಮೆ ಸುರೇಶ್ ಶೆಟ್ಟಿ ಅವರು ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲಾರು ಕುಂಜಿಗುಡ್ಡೆ ಪರಿಸರದಲ್ಲಿ ಮತಯಾಚನೆ ನಡೆಸಿದರು. ಈ ಸಂಧರ್ಭ ಮಾತನಾಡಿದ ಅವರು, ಕಾಪು ಕ್ಷೇತ್ರ ಅಭಿವೃದ್ಧಿಯ ತಾಣವಾಗಬೇಕು. ನವ ಕಾಪು ನಿರ್ಮಾಣ ಘೋಷಣೆಯೊಂದಿಗೆ ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಷಿಯಾದ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಕಾಪು ಕ್ಷೇತ್ರವನ್ನು ರಾಜ್ಯಕ್ಕೇ ಮಾದರಿಯಾಗುವಂತಹ ಕ್ಷೇತ್ರವನ್ನಾಗಿ ಪರಿವರ್ತಿಸಬೇಕೆಂಬ ಕಲ್ಪನೆಯಿದೆ. ಅದಕ್ಕಾಗಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಬಿಜೆಪಿ ವಿಕಾಸದತ್ತ ದೃಷ್ಟಿ ಮಾಡಿದ್ದರೆ, ಕಾಂಗ್ರೆಸ್ ವಿನಾಶದತ್ತ ಮುಖ ಮಾಡಿದೆ. ಬಿಜೆಪಿ ರಾಷ್ಟ್ರಧರ್ಮದ ಚಿಂತನೆಯನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸುತ್ತಿದೆ. ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಬಹುಮತಗಳಿಂದ ಗೆಲ್ಲಿಸುವ ಮೂಲಕ ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಮತ್ತಷ್ಟು ವೇಗ ದೊರಕಿಸಿ ಕೊಡಲು ಕೈ ಜೋಡಿಸುತ್ತಾರೆ ಎಂಬ ಭರವಸೆಯಿದೆ ಎಂದರು.
ಮುದರಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರತ್ ಶೆಟ್ಟಿ, ಮುದರಂಗಡಿ ಶಕ್ತಿಕೇಂದ್ರ ಅಧ್ಯಕ್ಷ ಶಿವರಾಮ್ ಭಂಡಾರಿ, ಗ್ರಾ.ಪಂ. ಪೆರ್ನಾಲ್ ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಪ್ರಮುಖರಾದ ರವೀಂದ್ರ ಪ್ರಭು, ಮೋಹಿನಿ ಹೆಗ್ಡೆ, ಉದಯ್, ಬೆಳ್ಮಣ್ ಗ್ರಾ.ಪಂ. ಸದಸ್ಯ ಶಂಕರ್ ಕುಂದರ್ ಸೂಡ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಚಾರಗಳ ಪ್ರಚಾರವಾಗಬೇಕೇ ವಿನಃ ಅಪಪ್ರಚಾರವಲ್ಲ
ಚುನಾವಣೆ ಸಂದರ್ಭದಲ್ಲಿ ವಿಚಾರಗಳ ಪ್ರಚಾರವಾಗಬೇಕೇ ಹೊರತು ಯಾರ ಬಗ್ಗೆಯೂ ಅಪಪ್ರಚಾರ ನಡೆಯ ಕೂಡದು. ಈ ಬಾರಿಯ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿದೆ. ಇಲ್ಲಿ ಯಾರ ಬಗ್ಗೆಯೂ ಅಪಪ್ರಚಾರ ಸಲ್ಲದು. ಅಪ್ರಚಾರಕ್ಕೆ ಉತ್ತರವನ್ನೂ ಕೊಡಬಾರದು. ನಾವು ನಮ್ಮ ವಿಚಾರಗಳನ್ನು ಮುಂದಿಟ್ಟುಕೊಂಡು, ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಅಭಿವೃದ್ಧಿ ನಡೆಸುವ ಭರವಸೆಯೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ. ಎದುರಾಳಿಗಳ ಅಪಪ್ರಚಾರಕ್ಕೆ ಮತದಾರರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.








































































































