ಗಜರಾಜ ಅಂದಾಕ್ಷಣ ನೆನಪಿಗೆ ಬರುವುದು ಮೈಸೂರು ದಸರಾ ಹಾಗೂ ಜಂಬೂಸವಾರಿ. ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಶ್ರೀಮಂತ ಸಂಸ್ಕೃತಿ ಪರಂಪರೆಯ ಪ್ರದರ್ಶನಕ್ಕೆ ಸಾಕ್ಷಿಯಾಗಿ 1999 ರಿಂದ 2011 ರ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ 750 ಕೆ. ಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿಯನ್ನು ಹೊತ್ತ ಕೀರ್ತಿ ಗಜರಾಜ ಬಲರಾಮನದ್ದು. ಕೆಲ ದಿನಗಳ ಹಿಂದೆ 67 ವರ್ಷ ಪ್ರಾಯದ ಗಜಪಡೆಯ ಮಾಜಿ ಕ್ಯಾಪ್ಟನ್ ಬಲರಾಮ ಆನೆ ಮೈಸೂರಿನ ಹುಣಸೂರು ಭೀಮನ ಕಟ್ಟೆ ಆನೆ ಶಿಬಿರದಲ್ಲಿ ಮೃತ ಪಟ್ಟ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವು ಹಾಗೂ ನಿರಾಶೆ ಆಯಿತು.
ಹಲವು ವರ್ಷಗಳ ಹಿಂದೆ ಮೈಸೂರು ಪ್ರವಾಸದಲ್ಲಿ ನಾವು ಇದೆ ಬಲರಾಮನ್ನೊಂದಿಗೆ ಕಳೆದ ಸಮಯ ಪುನಃ ನೆನಪಿಗೆ ಬಂತು. ಅಷ್ಟು ಶಾಂತ ಸ್ವಭಾವದವ ಈತ ಎಂಬ ಅರಿವಿಲ್ಲದೆ ಕೆಲ ಹೊತ್ತು ದೂರದಿಂದಲೇ ಮಾವುತರೊಂದಿಗೆ ಮಾತಾಡುತ್ತಾ ಆನೆಗೆ ನೀಡಲು ತಂದ ಆಹಾರವನ್ನು ಮಾವುತರ ಕೈಗೆ ಇತ್ತಾಗ ಇದು ಶಾಂತ ಸ್ವಭಾವದ ಆನೆ ನೀವು ತಿನ್ನಿಸಿ ಎಂದಾಗ ಹೆದರಿ ತಿನ್ನಿಸತೊಡಗಿದೆ. ಎಷ್ಟು ಹೊತ್ತು ಅದರ ಅದಿ ಬದಿಯಲ್ಲಿ ಪೋಟೋ ತೆಗೆದುಕೊಳ್ಳಲು ನಿಂತರು ಸೌಮ್ಯವಾಗಿ ಇದ್ದವನು ಇತ. ಅದೆಲ್ಲ ಇನ್ನೂ ನೆನಪು ಮಾತ್ರ. ಭಾವ ಭಾವಪೂರ್ಣ ಅಶ್ರುತರ್ಪಣದೊಂದಿಗೆ ಅಕ್ಷರ ನಮನ ಸಲ್ಲಿಸಿದೆ.
ಅಂದು ನಾವು ಮೈಸೂರಿಗೆ ಹೋದಾಗ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಗಜಪಡೆಯನ್ನು ಸಜ್ಜು ಗೊಳಿಸಲು ಅಭ್ಯಾಸ ಮಾಡಿಸುವ ಸಂಪ್ರದಾಯ ನಡೆಯುತ್ತಿತ್ತು. ದಸರಾದಲ್ಲಿ ಆನೆ ಅಂಬಾರಿ ಹೊರುವುದನ್ನು ಜನ ವಿಶೇಷವಾಗಿ ನೋಡಿರಬಹುದು ಆದರೆ ಅದೇ ಆನೆಗಳು ಕಾಡಿನಿಂದ ನಾಡಿಗೆ ಬರುವ ದಿನ ಅಂದರೆ ದಸರಾಕ್ಕೆ ಒಂದು ತಿಂಗಳು ಮೊದಲು ಗಜಪಡೆಗಳನ್ನು ನಾಡಿಗೆ ಸ್ವಾಗತಿಸುವ ರೀತಿ ರೀವಾಜುಗಳು ಒಂದು ತರದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಾಣಗೊಳಿಸುತ್ತವೆ.
ಇಲ್ಲಿ ಗಜಪಡೆಯ ಗಂಭೀರ ನಡಿಗೆಗೆ ತಾಲಿಮು ದಸರಾಗೆ ತಿಂಗಳು ಇರುವಾಗಲೇ ಪ್ರಾರಂಭವಾಗುತ್ತದೆ . ಅದ್ದೂರಿ ದಸರಾ ಆಚರಣೆಗೆ ಕಾಡಿನಿಂದ ನಾಡಿಗೆ ಬಂದಿರುವ ಆನೆಗಳಿಗೆ ಬೆಳಿಗ್ಗೆ ಹಾಗೂ ಸಂಜೆ ತಾಲೀಮು ನಡೆಯುತ್ತದೆ. ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಎಷ್ಟು ಸುಂದರವೋ ಅಷ್ಟೇ ಸುಂದರ ನಾಡ ಹಬ್ಬಕ್ಕೆ ಮುನ್ನುಡಿಯಂತಿರುವ ಗಜಪಯಣ. ಅಂದು ಗಜ ಪಡೆಯ ಮುಖಂಡನಾಗಿ ಇದೆ ಬಲರಾಮ ಹೆಜ್ಜೆ ಹಾಕುತ್ತಿದ್ದ.
ಹುಣಸೂರು ತಾಲೂಕಿನ ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದ ವೀರನ ಹೊಸಳ್ಳಿ ವಲಯ ಕೇಂದ್ರದಲ್ಲಿ ಆನೆಗಳ ಪಯಣಕ್ಕೆ ಚಾಲನೆಯ ಮುಹೂರ್ತ ನೀಡಿ. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಗಜಪಯಣ ನಾಗರ ಹೊಳೆ ಹೆಬ್ಬಾಗಿಲು ವೀರನ ಹೊಸಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪೂಜೆ ನೇರವೇರಿಸುವ ಮೂಲಕ ದಸರಾ ಮಹೋತ್ಸವದಲ್ಲಿ ನಾಂದಿ ಹಾಡುವ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಸ್ವಾಗತ ಕೋರಲು ವಿವಿಧ ಕಲಾತಂಡಗಳು, ಮಂಗಳವಾದ್ಯಗಳೊಂದಿಗೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುವ ಬಲರಾಮನ ಪಡೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸಲಾಗುತ್ತದೆ.
ಗಜಪೂಜೆ : ಗಜರಾಜ ಬಲರಾಮ ಮತ್ತು ದಸರಾ ಉತ್ಸವದ ಆನೆಗಳಿಗೆ ಮೈಸೂರಿನಿಂದ ಆಗಮಿಸಿದ ಅರ್ಚಕರೆ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ, ಆನೆಗಳನ್ನು ಸಾಲಾಗಿ ನಿಲ್ಲಿಸಿ ಆನೆಗಳ ಪಾದತೊಳೆದು ಪಾದ ಪೂಜೆ ಮಾಡಿ ಆನೆಗಳ ಹಣೆ, ಸೋಂಡಿಲು, ಪಾದಗಳಿಗೆ ಅರಶಿನ, ಕುಂಕುಮ ಹಾಗೂ ಗಂಧವನ್ನು ಹಚ್ಚಿ ಅಲಂಕರಿಸಲಾಗುತ್ತದೆ. ತೆಂಗಿನ ಕಾಯಿ ಒಡೆದು ಲಿಂಬೆ ಹಣ್ಣು ಸುತ್ತು ತಿರುಗಿಸಿ ದೃಷ್ಟಿ ದೋಷ ತೆಗೆಯುತ್ತಾರೆ. ನಂತರ ಅರಮನೆ ಮಂಡಳಿ, ಅರಣ್ಯಾಧಿಕಾರಿಗಳು , ಶಾಸಕರು, ಸಚಿವರು ಜನಪ್ರದಿನಿಧಿಗಳು, ಮಾವುತರು ಆನೆಗಳಿಗೆ ಹೂವಿನ ಮಾಲೆ ಹಾಕಿ ಆನೆಗಳಿಗೆ ಪಂಚಫಲ ಮತ್ತು ಕಬ್ಬು ತಿನಿಸು ನೈವೇದ್ಯ ನೀಡಿ ಶೋಡಷೋಪಚಾರ ಪೂಜೆ ನೀಡಲಾಗುತ್ತದೆ. ಗಜಪಯಣದ ಅಂಗವಾಗಿ ವಿಶೇಷವಾಗಿ ಶೃಂಗರಿಸಿ ಬಲರಾಮ ಆನೆ ಹಾಗೂ ಸಂಗಡಿಗರಿಗೆ ಚಾಮರ ಬೀಸಲಾಗುತ್ತದೆ. ಇದನ್ನೆಲ್ಲ ಅಲ್ಲೆ ನಿಂತು ಕಣ್ಣು ತುಂಬಿಸಿಕೊಂಡ ಧನ್ಯತೆ ನನ್ನದ್ದು ಊಟದ ಸಮಯವಾದರು ನಾನು ಅಲ್ಲಿಂದ ಕದಲಲ್ಲಿಲ್ಲ. ಗಂಡ ಮಗ ಊಟ ಮಾಡಿ ಬಂದರು ನಾನು ಹಸಿದ ಹೊಟ್ಟೆಯಲ್ಲೆ ಇದನ್ನೇಲ್ಲ ವಿಕ್ಷೀಸುತ್ತಿದ್ದೆ. ಬಲರಾಮ ಇನ್ನಿಲ್ಲ ಎಂಬ ಸುದ್ದಿ ಬಂದಾಗ ಮನದಂಗಳದಲ್ಲಿ ಎಲ್ಲಾ ಚಿತ್ರಣವು ಮರುಕಳಿಸಿತು.
ಅರಮನೆಯ ಅಂಗಳ ಪ್ರವೇಶಿಸುವ ಬಲರಾಮ ಮತ್ತು ದಸರಾ ಗಜಪಡೆಗೆ ಅದ್ದೂರಿಯ ಸ್ವಾಗತಕೊರಿದ ನಂತರ ದಸರಾಕ್ಕೆ ಸಜ್ಜುಗೊಳಿಸಲು ಗಜ ಪಡೆಯನ್ನು ನಿತ್ಯ ಅರಮನೆಯಿಂದ ಬನ್ನಿ ಮಂಟಪದವರೆಗೆ ಭಾರ ಹೊರಿಸುವ ತಾಲೀಮು ಮಾಡಿಸಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಆನೆಗಳು ರಾಜಮಾರ್ಗದಲ್ಲಿ ಹೆಜ್ಜೆ ಹಾಕುತ್ತವೆ. ಕೆಲ ದಿನಗಳ ನಂತರ ಮರಳಿನ ಮೂಟೆ ಹೊರಿಸಿ ಅಭ್ಯಾಸ ಮಾಡಿಸಲಾಗುತ್ತದೆ. ಹಂತ ಹಂತವಾಗಿ ಬಲರಾಮನಿಗೆ ಮೂಟೆಯ ತೂಕವನ್ನು ನಿಧಾನವಾಗಿ ಹೆಚ್ಚಿಸಿ ನಂತರ ಅಂಬಾರಿ ಹೊರಿಸಲಾಗುತ್ತದೆ. ವಿಜಯದಶಮಿಯ ಮುನ್ನ ಅರಮನೆ ಅಂಗಳದಲ್ಲಿ ಜಂಬೂಸವಾರಿ ಮೆರವಣಿಗೆಯ ಅಂತಿಮ ಅಭ್ಯಾಸ ಜರಗಬೇಕಾಗುತ್ತದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ, ನಮ್ದಾ, ಹಾಸಿಗೆ ಸೇರಿ ಒಟ್ಟು ಒಂದು ಸಾವಿರ ಕೆಜಿ ಭಾರ ಹೊತ್ತುಸಾಗ ಬೇಕಾಗುತ್ತದೆ. ಆನೆಗಳ ತೂಕ ಮತ್ತು ಆರೋಗ್ಯವನ್ನು ಗಮನಿಸಿಕೊಳ್ಳಲು ಪಶುವೈದ್ಯಕೀಯ ತಂಡ ಆನೆಗಳ ಜೊತೆಗಿರುತ್ತದೆ. ಆನೆಗಳಿಗೆ ಬಾರಿ ಸಿಡಿಮದ್ದಿನ ಅಭ್ಯಾಸವನ್ನು ನೀಡಲಾಗುತ್ತದೆ.
ಕಾಡಿನಿಂದ ನಾಡಿಗೆ ಪಯಣ ಬೆಳೆಸಿದ ಗಜಪಡೆಯ ದಸರಾ ಮಹೋತ್ಸವದಲ್ಲಿ ಪಾಲ್ಗೋಳ್ಳಲು ತಯಾರಿ ನಡೆಸುವ ಗಜ ಪಡೆಯ ಸದಸ್ಯರು. ಬಲರಾಮ ಮತ್ತು ಎಲ್ಲಾ ಆನೆಗಳನ್ನು ಮನೆ ಮಕ್ಕಳ ರೀತಿ ಉಪಚರಿಸಲಾಗುತ್ತದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಉತ್ತಮ ಆಹಾರ ನೀಡಿ ಪೋಷಿಸಲಾಗುತ್ತದೆ. ಆನೆಗಳಿಗೆ ವಿವಿಧ ಬಗೆಯ ಹುಲ್ಲು, ಎಲೆ, ಕಾಂಡ ಬಿದಿರಿನ ಚಿಗುರೆಲೆ, ಬಾಳೆಗಿಡ, ಕಬ್ಬು, ಕಪ್ಪು ಬೆಲ್ಲ ಆಹಾರ ರೂಪದಲ್ಲಿ ನೀಡಲಾಗುತ್ತದೆ.
750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ದಸರಾ ಗಜಪಡೆಯ ಸಾರಥಿ ಬಲರಾಮ ಸೇರಿದಂತೆ ಇನ್ನುಳಿದ ಆನೆಗಳು ಜಂಬೂ ಸವಾರಿಯಲ್ಲಿ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸುತ್ತವೆ. ಆಗೆಲ್ಲಾ ಮಾವುತರು ಆನೆಗಳೊಂದಿಗೆ ಕಣ್ಣ್ಗಾವಲಾಗಿ ಇರುತ್ತಾರೆ. ಮಹಾರಾಜರು ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿದ ನಂತರ ಜಂಬೂ ಸವಾರಿ ಆರಂಭವಾಗುತ್ತದೆ.
ಚಿನ್ನದ ಅಂಬಾರಿಯ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಸಾಂಪ್ರದಾಯಿಕ ದಸರಾ ಮೆರವಣಿಗೆ ಜಂಬೂ ಸವಾರಿಯಲ್ಲಿ ಬಲರಾಮ ಆನೆ ಹೊತ್ತು ಸಾಗುವುದನ್ನು ನೋಡುವುದೇ ಒಂದು ಸೊಗಸು ಹಾಗೂ ದಸರಾದ ಘನತೆಯನ್ನು ಇನ್ನೂ ಹೆಚ್ಚಿಸಿದೆ. ಬನ್ನಿ ಮಂಟಪಕ್ಕೆ ಹೋಗುವ ಜಂಬೂ ಸವಾರಿಯ ಪ್ರಸಿದ್ಧಿ ಮೈಸೂರು ದಸರಾಕ್ಕೆ ತಿಲಕವಿಟ್ಟಂತೆ.
ಭೂಚರ ಪ್ರಾಣಿಗಳಲ್ಲಿ ಅತೀ ದೊಡ್ಡ , ವಿಶಾಲ ಕಾಯದ, ಅಗಲವಾದ ಕಿವಿ, ಕಂಬದಂತ ಉದ್ದ ಕಾಲುಗಳು ದೊಡ್ಡ ಶರೀರ ಹೊಂದಿದ ಆನೆಗಳ ದವಡೆ ಚಿಕ್ಕದು ಆದರೆ ದವಡೆ ಹಲ್ಲು ಮಾತ್ರ ದೊಡ್ಡದಾಗಿರುತ್ತದೆ. ಸಾಧಾರಣ ಆನೆ 100 ವರ್ಷ ತನಕ ಜೀವಿಸ ಬಲ್ಲದು. ಗಾಂಭೀರ್ಯ ನಡಿಗೆಯ ಮೈತಳೆದಂಥ ಬಲಿಷ್ಠ ಆನೆಗಳು. ರಕ್ಷಿತಾರಣ್ಯ ಪ್ರದೇಶದಲ್ಲಿ ಸ್ವತಂತ್ರವಾಗಿ ಕಾಲ ಕಳೆಯುತ್ತಾ ತಮ್ಮದೇ ಆದ ಸಾಮ್ರಾಜ್ಯದ ಲ್ಲಿ ವಿಹರಿಸುತ್ತವೆ. ಇತಂಹ ಆನೆಗಳು ರೊಚ್ಚಿಗೆದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಆದರೆ ಆನೆಗಳನ್ನು ಪಳಗಿಸಿ ಗಜಪಯಣಕ್ಕೆ ಅಣಿಗೊಳಿಸುವ ಮಾವುತರು ಯಾವುದೆ ಮಹಾ ಗುರುವಿಗೇ ಕಡಿಮೆಯವರಲ್ಲಾ.
ಆದರೆ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಲರಾಮ ಆನೆಗೆ ನೀರು ಆಹಾರ ಸೇವಿಸಲು ಸಾದ್ಯವಾಗದಂತಹ ಸ್ಥಿತಿಯಿಂದ ಕೆಲ ತಿಂಗಳಿಂದ ಬಳಲುತ್ತಿದ್ದು. ನಾಗರ ಹೊಳೆ ಪಶು ವೈದ್ಯ ಡಾ. ರಮೇಶ್ ಅವರು ಭೀಮನ ಕಟ್ಟೆ ಆನೆ ಶಿಬಿರದಲ್ಲಿ ಬಲರಾಮ ಆನೆಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದೆ. ಅಗಲಿದ ಬಲರಾಮನಿಗೆ ಅಕ್ಷರನಮನಗಳು.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.