ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ಅಭಿಮಾನಿಗಳು, ಉತ್ಸಾಹಿ ಕಾರ್ಯಕರ್ತರೊಂದಿಗೆ ಮಾಜಿ ಸಚಿವ ಬಿ. ರಮಾನಾಥ ರೈ ಗುರುವಾರ ಅದ್ದೂರಿ ಪಾದಯಾತ್ರೆ ನಡೆಸಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 9ನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಶ್ರೀ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ, ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಸ್ಥಾನ, ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್, ಮಿತ್ತಬೈಲು ಮಸೀದಿ, ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ವೈಭವಯುತ ಪಾದಯಾತ್ರೆ ಯೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಸಾಗಿ ಬಂದರು. ಕೊಂಬು, ಚೆಂಡೆ, ವಾದ್ಯಘೋಷ ಮೆರುಗು ತಂದವು.
ಋಣ ತೀರಿಸುವುದು ಅಸಾಧ್ಯ
ರಮಾನಾಥ ರೈ ಅವರು ಕಾರ್ಯಕರ್ತ ರನ್ನುದ್ದೇಶಿಸಿ ಮಾತನಾಡಿ, ನನ್ನ ಸುದೀರ್ಘ ಜನಸೇವೆಯ ಬದುಕಿನಲ್ಲಿ 9ನೇ ಬಾರಿ ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ. ಜಿಲ್ಲೆಯಿಂದ ಕಾಂಗ್ರೆಸ್ನಿಂದ ಒಬ್ಬನೇ ಆರಿಸಿಬಂದಂತಹ ಕಠಿನ ಪರಿಸ್ಥಿತಿಯಲ್ಲೂ ನನಗೆ ಬೆಂಬಲವಾಗಿ ನಿಂತ ನಿಮ್ಮ ಋಣವನ್ನು ಜನ್ಮ ಜನ್ಮಾಂತರಕ್ಕೂ ತೀರಿಸಲು ಸಾಧ್ಯವಿಲ್ಲ ಎಂದು ಭಾವುಕರಾಗಿ ಹೇಳಿದರು.
ಇಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನನ್ನೊಂದಿಗೆ ಪಾದಯಾತ್ರೆಯಲ್ಲಿ ಭಾಗ ವಹಿಸಿ, ನನ್ನನ್ನು ಆಶೀರ್ವದಿಸಿದ್ದೀರಿ, ಶಾಸಕನಾಗಿ, ಸಚಿವನಾಗಿ ಅಧಿಕಾರದಲ್ಲಿ ದ್ದಾಗ ನಾನು ಮಾಡಿರುವ ಜನಪರ ಕೆಲಸಗಳನ್ನು ನೀವು ಮರೆತಿಲ್ಲ, ಮತ ದಾರರಿಗಾಗಲೀ ಕಾರ್ಯಕರ್ತರಿಗಾಗಲಿ ಅಗೌರವವನ್ನುಂಟು ಮಾಡುವ ಯಾವುದೇ ಕೆಲಸ ಮಾಡಿಲ್ಲ ಎಂದರು. ಮೆರವಣಿಗೆಯ ಆರಂಭದಿಂದಲೂ ಕ್ಷೇತ್ರದ ಗ್ರಾಮ ಗ್ರಾಮಗಳಿಂದ ತಂಡೋಪ ತಂಡವಾಗಿ ಆಗಮಿಸಿದ್ದು, ಕೊನೆಯವರೆಗೂ ಪಾಲ್ಗೊಂಡಿದ್ದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಎಐಸಿಸಿ ಕಾರ್ಯದರ್ಶಿ ರೋಝಿ ಎಂ. ಜಾನ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಸುಳ್ಯ ಅಭ್ಯರ್ಥಿ ಕೃಷ್ಣಪ್ಪ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ, ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್. ರಾಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಪ್ರಮುಖರಾದ ರಾಕೇಶ್ ಮಲ್ಲಿ, ಎ.ಸಿ. ಭಂಡಾರಿ, ಅಶ್ವನಿ ಕುಮಾರ್ ರೈ, ಪದ್ಮಶೇಖರ್ ಜೈನ್, ಮಮತಾ ಗಟ್ಟಿ, ರೈ ಅವರ ಪತ್ನಿ ಧನಭಾಗ್ಯ ರೈ ಮೊದಲಾದವರು ಪಾಲ್ಗೊಂಡಿದ್ದರು.
ಋಣವನ್ನು ಮರೆಯಲು ಸಾಧ್ಯವಿಲ್ಲ: ರೈ
ಕಳೆದ ಬಾರಿ ಅಪಪ್ರಚಾರದ ಮೂಲಕ ನನ್ನನ್ನು ಸೋಲಿಸಲಾಗಿದ್ದು, ಸೋಲಿಸಿದ ರೀತಿಗೆ ಅತ್ಯಂತ ಬೇಸರವಿದೆ. ದೊಡ್ಡ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರ ಋಣವನ್ನು ಜನ್ಮ ಜನ್ಮಾಂತರ ಕಾಲದಲ್ಲೂ ಮರೆಯಲು ಸಾಧ್ಯವಿಲ್ಲ. ಮತ್ತೆ ನನ್ನನ್ನು ಜನತೆ ಅತ್ಯಧಿಕ ಮತಗಳೊಂದಿಗೆ ಗೆಲ್ಲಿಸುವ ಆತ್ಮವಿಶ್ವಾಸ ನನಗಿದೆ.