ಗುರ್ಮೆ ಸುರೇಶ್ ಶೆಟ್ಟರ ಬಗ್ಗೆ ಎಷ್ಟು ಬರೆದರೂ, ಮಾತಾಡಿದರೂ ಕಡಿಮೆ. ಸರ್ವರನ್ನೂ ಪ್ರೀತಿಯಿಂದ, ಆಪ್ತತೆಯಿಂದ ಮಾತಾಡಿಸುವ ಸುರೇಶಣ್ಣ ಒಂದು ರೀತಿಯಲ್ಲಿ ಹಸುವಿನಂತವರು ಅಥವಾ ಹಸುಗೂಸಿನಂತವರು. ಕೊಟ್ಟ ಕೊಡುಗೆಯ ನೆನಪಿಡದ ದಾನಿ ಸುರೇಶಣ್ಣ. ವಿಧಾನಸೌಧದ ವಿಧಾನ ಮಂಡಲದಲ್ಲಿ ಸುರೇಶಣ್ಣನಂತಹ ಜ್ಞಾನಿಗಳು, ವಾಕ್ಪಟುಗಳು, ಸಜ್ಜನರು ಇದ್ದಾಗಲೇ ಅದಕ್ಕೊಂದು ಗೌರವ.
ನಿನ್ನೆ ಯಾರೋ ಕಾಪುವಿನಲ್ಲಿ ಜಾತಿ ಲೆಕ್ಕಾಚಾರದ ಬಗ್ಗೆ ಮಾತಾಡುತ್ತಿದ್ದರು. ನಾನು ಹೇಳಿದೆ ಸುರೇಶಣ್ಣನ ಜಾತಿಯೇ ಬೇರೆ, ಅವರದ್ದು ಮಾನವೀಯತೆಯ ಮೌಲ್ಯವನ್ನು ಒಪ್ಪಿ ಅಪ್ಪಿಕೊಂಡ ಜಾತಿ. ಅದು ಪಕ್ಷಾತೀತ ನೆಲೆಯಲ್ಲಿಯೂ ಚಾಚಿಕೊಂಡಿದೆ. ಕಾಪು ಸುರೇಶಣ್ಣನ ಹುಟ್ಟೂರು. ಕಾಪುವಿನ ಜನರಿಗೆ ಅದೊಂದು ಅಸ್ಮೀತೆ. ವಿನಯ್ ಕುಮಾರ್ ಸೊರಕೆ ಎಷ್ಟೇ ಆದರೂ ಪುತ್ತೂರಿನವರು. ಪುತ್ತೂರಿನ ಸೊರಕೆಯವರಿಗಿಂತ ಹುಟ್ಟೂರಿನ ಸುರೇಶಣ್ಣನನ್ನೇ ಕಾಪು ಕ್ಷೇತ್ರದ ಜನ ನೆಚ್ಚಿಕೊಳ್ಳುತ್ತಾರೆ. ಅಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಸುರೇಶಣ್ಣನನ್ನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ. ಇಡೀ ಬಿಜೆಪಿ ಒಂದು ಕುಟುಂಬವಾಗಿ ಹಗಲಿರುಳು ಶ್ರಮಿಸುತ್ತಿದೆ.
ಇನ್ನು ಜಾತಿ ಲೆಕ್ಕಕ್ಕೆ ಬರುವುದಾದರೆ ಅಲ್ಲಿ ಬಿಲ್ಲವ ಮತಗಳೇ ಮುಖ್ಯ. ಬಿಜೆಪಿ ಅಥವಾ ಸಂಘ ಪರಿವಾರದ ಹಿನ್ನೆಲೆಯಲ್ಲಿರುವ ಬಿಲ್ಲವರು ಎಂದೂ ಜಾತಿ ನೋಡಿ ಮತ ನೀಡಿದ ಇತಿಹಾಸವಿಲ್ಲ. ಅದಕ್ಕೆ ನಿಚ್ಚಳವಾದ ಉದಾಹರಣೆ ಮಂಗಳೂರಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಜನಾರ್ಧನ ಪೂಜಾರಿಯವರ ನಡುವಿನ ಚುನಾವಣೆ. ಪೂಜಾರಿಯವರು ಸಜ್ಜನರು, ಸಮಾಜಕ್ಕಾಗಿ ದೊಡ್ಡ ಕೊಡುಗೆ ಕೊಟ್ಟವರು, ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ಸಿದ್ದಾಂತಗಳಲ್ಲಿ ಬದುಕಿದವರು. ಹಾಗಂತ ಪೂಜಾರಿಯವರು ನಮ್ಮ ಜಾತಿಯವರು ಎನ್ನುವ ಕಾರಣಕ್ಕೆ ಮಂಗಳೂರ ಬಿಲ್ಲವರು ಜನಾರ್ಧನ ಪೂಜಾರಿಯವರನ್ನ ಗೆಲ್ಲಿಸಲಿಲ್ಲ, ಜಾತಿ ಮಾಡಿ ಬಂಟರ ನಳೀನ್ ಕುಮಾರ್ ಕಟೀಲರಿಗೆ ಮೋಸ ಮಾಡಲಿಲ್ಲ! ಒಂದೊಮ್ಮೆ ಬಿಲ್ಲವರು ಜಾತಿ ಮಾಡಿದ್ದೇ ಹೌದಾಗಿದ್ದರೆ ಯಾವ ರೀತಿಯಲ್ಲಿಯೂ ನಳೀನ್ ಕುಮಾರ್ ಕಟೀಲ್ ಗೆಲ್ಲುವುದು ಸಾಧ್ಯವೇ ಇದ್ದಿರಲಿಲ್ಲ. ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾರ ವಿಷಯಕ್ಕೇ ಬರೋಣ, ಅಲ್ಲಿ ಬಿಲ್ಲವರು ಮನಸು ಮಾಡಿದ್ದರೆ ಅವರದೇ ವರ್ಗದ ಕೆ.ವಸಂತ ಬಂಗೇರರನ್ನ ಗೆಲ್ಲಿಸುವುದು ಅತ್ಯಂತ ಸುಲಭದ ಕೆಲಸವಾಗಿತ್ತು! ಬಂಟನಾದ ಪೂಂಜಾರಿಗೆ ಬಿಲ್ಲವರು ಮೋಸ ಮಾಡಲಿಲ್ಲ, ಆ ಕಾರಣಕ್ಕೆ ಪೂಂಜಾ ಕೂಡ ದೊಡ್ಡ ಮಟ್ಟದಲ್ಲಿ ಗೆದ್ದು ವಿಜಯದ ನಗೆ ಬೀರಿದರು. ಕಾಪುವಿನಲ್ಲಿಯೂ ಯಾವುದೇ ಜಾತಿ ಲೆಕ್ಕಾಚಾರಗಳು ನಡೆಯುವುದಿಲ್ಲ.
ಯಾರ ಬಾಯಲ್ಲಿ ಕೇಳಿದರೂ ’ಗುರ್ಮೆ ಎಡ್ಡೆ ಜನ ಮಾರ್ರೆ’ ಎಂಬ ಮಾತೇ ಕೇಳಿ ಬರುತ್ತಿದೆ, ಅದೇ ದೊಡ್ಡ ಮಟ್ಟದ ಬಾಯಿ ಪ್ರಚಾರವಾಗಿದೆ, ಗುರ್ಮೆ ಶಾಸಕರಾದರೂ ಯಾರಿಗೂ ಅನ್ಯಾಯ ಮಾಡದ ವ್ಯಕ್ತಿ, ಅವರು ಅನ್ಯಾಯ ಮಾಡುವುದನ್ನ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಕಾಪು ಕ್ಷೇತ್ರದ ಬಗ್ಗೆ ಗುರ್ಮೆ ಸುರೆಶಣ್ಣನಿಗೆ ಅಪಾರವಾದ ಕನಸುಗಳಿವೆ. ಕಾಪುವನ್ನು ಕರಾವಳಿಯ ಸಾಂಸ್ಕೃತಿಕ ತಾಣವಾಗಿ, ಪ್ರವಾಸಿತಾಣವಾಗಿ, ಮಾದರಿ ಕ್ಷೇತ್ರವಾಗಿ ರೂಪಿಸಲು ಅಜಾತಶತ್ರುವಿನ ಜೊತೆಗೆ ಆ ಭಾಗದ ಪ್ರಜ್ಞಾವಂತ ಮತದಾರರು ನಿಲ್ಲಬೇಕು. ಸಜ್ಜನ ರಾಜಕಾರಣಿಗಳು ರಾಜಕಾರಣದ ಪಡಸಾಲೆಗೆ ಬರಬೇಕು. ಅದಕ್ಕಾಗಿ ಗುರ್ಮೆ ಸುರೇಶಣ್ಣ ಗೆಲ್ಲಲೇ ಬೇಕು.
ವಸಂತ್ ಗಿಳಿಯಾರ್