ಕುಂದಾಪುರ ಕ್ಷೇತ್ರ ಎಂದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಎನ್ನುವಷ್ಟರ ಮಟ್ಟಿಗೆ ರಾಜಕೀಯವಾಗಿ ಹೆಗ್ಗುರುತು ಮೂಡಿಸಿದೆ. ಇದಕ್ಕೆ ಕಾರಣ ಹಾಲಾಡಿ ಅವರು ಚುನಾವಣೆಗೆ ನಿಂತ ಎಲ್ಲ ಸಂದರ್ಭಗಳಲ್ಲಿಯೂ ಜಯ ಸಾಧಿಸಿರುವುದು. ಹಾಲಾಡಿ ಅವರು ಪಕ್ಷದ ಚಿಹ್ನೆ ಅಡಿ ಮತ್ತು ಪಕ್ಷೇತರರಾಗಿಯೂ ಸ್ಪರ್ಧಿಸಿ ಜಯ ಸಾಧಿಸಿರುವುದು ವಿಶೇಷ.
ಸಚಿವರಾಗಲಿಲ್ಲ :
5 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಯಾವುದೇ ಸರಕಾರ ಸಚಿವರ ನ್ನಾಗಿಸಲಿಲ್ಲ. ಕುಂದಾಪುರ ಕ್ಷೇತ್ರಕ್ಕೆ ಈವರೆಗೆ ಸಚಿವ ಪದವಿ ದೊರೆಯಲಿಲ್ಲ. ಹಾಲಾಡಿ ಯವರು ಸಚಿವರಾಗುತ್ತಾರೆ ಎಂದೇ ಜನ ನಂಬಿದ್ದರು. ಅದಕ್ಕಾಗಿ ಅವರನ್ನು ಬೆಂಗಳೂರಿಗೂ ಕರೆಸಲಾಗಿತ್ತು. ಆದರೆ ಸಚಿವ ಪದ ದೊರೆಯಲಿಲ್ಲ. ಅವರು ಪಕ್ಷದಲ್ಲಿ ಮುಂದುವರಿಯಲಿಲ್ಲ. ಪಕ್ಷೇತರನಾಗಿ ಸ್ಪರ್ಧಿಸಿ ಮತದಾರರ ಒಲವನ್ನು ತೋರಿಸಿಕೊಟ್ಟರು. ಮರಳಿ ಬಿಜೆಪಿ ಸೇರಿ ಗೆದ್ದರು.
ಸ್ಪರ್ಧೆ :
1999ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ನ ಪ್ರತಾಪಚಂದ್ರ ಶೆಟ್ಟಿ ಅವರಿಗೆ, 2004ರಲ್ಲಿ ಕಾಂಗ್ರೆಸ್ನ ಅಶೋಕ್ ಕುಮಾರ್ ಹೆಗ್ಡೆ, 2008ರಲ್ಲಿ ಕಾಂಗ್ರೆಸ್ನ ಕೆ. ಜಯಪ್ರಕಾಶ್ ಹೆಗ್ಡೆ, 2013ರಲ್ಲಿ ಪಕ್ಷೇತರರಾಗಿ ಕಾಂಗ್ರೆಸ್ನ ಮಲ್ಯಾಡಿ ಶ್ರೀನಿವಾಸ ಶೆಟ್ಟಿ, 2018ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ನ ರಾಕೇಶ್ ಮಲ್ಲಿಗೆ ಸೋಲಿನ ರುಚಿ ತೋರಿಸಿದ್ದರು.
ಗೆಳೆಯ :
1994ರಲ್ಲಿ ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಎ.ಜಿ. ಕೊಡ್ಗಿ ಅವರು ಕಾಂಗ್ರೆಸ್ನ ಪ್ರತಾಪಚಂದ್ರ ಶೆಟ್ಟರ ಎದುರು ಸೋತರು. ಅನಂತರದ ಚುನಾವಣೆಯಲ್ಲಿ ಕೊಡ್ಗಿ ಅವರೇ ಹಾಲಾಡಿ ಅವರನ್ನು ಬಿಜೆಪಿಯಲ್ಲಿ ಸ್ಪರ್ಧಿಸುವಂತೆ ಮಾಡಿ ಜಯ ಬಿಜೆಪಿ ಪಾಲಾಯಿತು. ಅನಂತರ ಈ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಕಹಿ ಗುಳಿಗೆಯಾಗಿತ್ತು.
ಒತ್ತಾಯ :
ಸ್ಪರ್ಧೆಗೆ ನಿರಾಕರಣೆ ಬೆಳವಣಿಗೆ ಹಾಲಾಡಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಹಾಲಾಡಿಯವರೇ ಸ್ಪರ್ಧಿಸಬೇಕು ಎನ್ನುವ ಒತ್ತಡವನ್ನು ಅವರಿಗೆ ಅನೇಕ ಅಭಿಮಾನಿಗಳು, ಹಿತೈಷಿಗಳು ಹಾಕಿದ್ದಾರೆ. ಸೋಮವಾರ ಬೆಳಗ್ಗಿನಿಂದಲೇ ಶಾಸಕರ ಮನೆ ಬಳಿ ಅಭಿಮಾನಿಗಳು ಜಮಾಯಿಸುತ್ತಿದ್ದರು.
ಮತ ಲೆಕ್ಕಾಚಾರ :
1989ರಲ್ಲಿ ಬಿಜೆಪಿಗೆ ದೊರೆತ ಮತಗಳು 3,086. 1994ರಲ್ಲಿ ಎ.ಜಿ.ಕೊಡ್ಗಿ ಸ್ಪರ್ಧೆ ಮಾಡಿದಾಗ ದೊರೆತ ಮತಗಳು 37,770. 2013ರಲ್ಲಿ ಪಕ್ಷೇತರನಾಗಿ ನಿಂತಾಗಿ ಹಾಲಾಡಿ ಗೆಲುವಿನ ಅಂತರ 40,611. ಆಗ ಬಿಜೆಪಿಗೆ ದೊರೆತ ಮತಗಳು 14,524. ಹಾಲಾಡಿಯವರು ಗಳಿಸಿದ್ದು 80,563. ಕಳೆದ ಬಾರಿ ಅಂದರೆ 2018ರಲ್ಲಿ ಹಾಲಾಡಿಗೆ ದೊರೆತ ಮತಗಳು 1,03,434. ಗೆಲುವಿನ ಅಂತರ 56,405.