ಪ್ರಕೃತಿಯ ಮಡಿಲಲ್ಲಿ ರಮಣೀಯವಾಗಿ ಕಂಗೊಳಿಸುವ ತಾಣ ಕಾಂಬೋಡಿ ಒಳಗುಡ್ಡೆ ದೈವಸ್ಥಾನ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕಾಂಬೋಡಿ ಒಳಗುಡ್ಡೆ ದೈವಸ್ಥಾನದ ಎತ್ತರದ ಗುಡ್ಡದಲ್ಲಿ ನೆಲೆನಿಂತು, ಭಕ್ತರ ಇಷ್ಟಾರ್ಥವನ್ನು ಕರುಣಿಸುತ್ತಾ ಕೂರಿಯಾಳ ಗ್ರಾಮಕ್ಕೆ “ದೈವಲ ಯಾನೇ, ದೇವೆರ್ಲ ಯಾನೇ” ಎಂಬ ಅಭಯವನ್ನಿತ್ತು, ಗ್ರಾಮದ ಜನರನ್ನು ಪೊರೆಯುವ ದೈವ “ಶ್ರೀ ಉಗ್ಗೆದಲ್ತಾಯ”. ಜನಪದದ ಆಯ ಮತ್ತು ದೈವದ ಸಂಧಿ-ಪಾಡ್ದನದ ಆಯದಲ್ಲಿ ನೋಡಿದಾಗ, ಈ ದೈವ ಕೂರಿಯಾಳ ಗ್ರಾಮದಲ್ಲಿ ನೆಲೆಗೊಂಡ ಐತಿಹ್ಯ, ದೈವದ ಪ್ರಸರಣೆ ಮತ್ತು ದೈವದ ಕಲೆ ಕಾರಣಿಕಗಳು ಹೀಗಿವೆ.
ಸುಮಾರು ೯೦೦ ವರ್ಷಗಳ ಹಿಂದಿನ ಕಥೆ. ಮೊಗರನಾಡು ಸೀಮೆಯ ಜತ್ತಣ್ಣ ಬಾರಿ ಬಲ್ಲಾಳ ಎಂಬ ಜೈನ ಅರಸರು ತಮ್ಮ ಬೀಡಿನಲ್ಲಿ, ತಾವು ನಿತ್ಯ ಆರಾಧಿಸುತ್ತಾ ಬಂದ ದೈವ-ದೇವರ ಕೃಪೆಯಿಂದ ಬಹಳ ಚೆನ್ನಾಗಿ ರಾಜ್ಯಭಾರ ಮಾಡಿಕೊಂಡು ಬರುತ್ತಿದ್ದರು. ಆದರೆ ಅವರಿಗೆ ಒಂದು ಕೊರಗಿತ್ತು. ಮದುವೆಯಾಗಿ ಅನೇಕ ವರ್ಷಗಳು ಉರುಳಿದರೂ, ಅವರಿಗೆ ಮಕ್ಕಳಾಗಳಿಲ್ಲ. ಆ ನೋವು ಅವರನ್ನು ಯಾವಾಗಲೂ ಕಾಡುತ್ತಿತ್ತು. ಒಂದು ದಿನ ತಮ್ಮ ಆಪ್ತರೊರ್ವರು, ಮೇಗಿನ ಕೂರಿಯಾಳ ಗುತ್ತಿನ ಪ್ರಸಿದ್ಧ ನಾಟಿ ವೈದ್ಯರೂ, ಮಂತ್ರವಾದಿಯೂ ಆಗಿದ್ದ ಕುಞ್ಞ ಶೆಟ್ಟಿಯಾಲರ (ಕುಞ್ಞತ್ರಾಲರ) ಬಗ್ಗೆ, ಅವರ ಕೈಗುಣದ ಬಗ್ಗೆ ತಿಳಿಸುತ್ತಾರೆ. ಯಾವುದೇ ಕಾಯಿಲೆಗಳಿರಲಿ, ಕುಞ್ಞ ಶೆಟ್ಟಿಯಾಲರು ನೂಲುಮಂತ್ರಿಸಿ ಆ ಸಮಸ್ಯೆಗೊಂದು ದಡೆ ಕಟ್ಟವ ಕಾರ್ಯದಲ್ಲಿ ನಿಪುಣತೆಯನ್ನು ಪಡೆದವರಾಗಿದ್ದರು. ಈ ವಿಷಯವನ್ನು ಅರಿತ ಬಲ್ಲಾಳರು, ಕುಞ್ಞ ಶೆಟ್ಟಿಯಾಲರಿರುವ ಕೂರಿಯಾಳ ಗುತ್ತಿಗೆ ಒಂದು ಓಲೆ ಮಾನಿಯನ್ನು ಕಳುಹಿಸಿ, ಕೂಡಲೆ ತಮ್ಮ ಅರಮನೆಗೆ ಅವರನ್ನು ಬರ ಮಾಡಿಸಬೇಕೆಂದು ಮಂತ್ರಿ ವರ್ಗದವರಿಗೆ ಆದೇಶ ಹೊರಡಿಸುತ್ತಾರೆ. ಅರಸರ ಆದೇಶದಂತೆ, ತಾಳೆಗರಿ ಓಲೆಯಲ್ಲಿ ವಿಷಯವನ್ನು ನಮೂದಿಸಿ, ಓಲೆಮಾನಿಯು ಉಟ್ಟಂತಹ ಬಟ್ಟೆಯ ಸೆರಗಿನಲ್ಲಿ ಈ ಓಲೆಯನ್ನು ಕಟ್ಟಿಸಿ, ಆತನ ದಾರಿ ಖರ್ಚಿಗೆ ಹಣ, ಊಟ-ಉಪಹಾರಗಳನ್ನು ಕಟ್ಟಿ ಕಳುಹಿಸಿಕೊಡುತ್ತಾರೆ.
ಕೂರಿಯಾಳ ಗುತ್ತಿನ ಕಡೆಗೆ ಸಂಚಾರವನ್ನಿತ್ತ ಓಲೆ ಮಾನಿಯು, ಗುತ್ತಿನ ಬಳಿ ಹಾಕಿದಂತಹ ಬೇಲಿಯ ಹೊರನಿಂತು ಕುಞ್ಞ ಶೆಟ್ಟಿಯಾಲರನ್ನು ಕರೆಯುತ್ತಾನೆ. ಒಂದು ಕರೆಗೆ ಮೂರು ಬಾರಿ ಓಗೊಡುತ್ತ ಕುಞ್ಞ ಶೆಟ್ಟಿಯಾಲರು ಬರುತ್ತಾರೆ. “ಎಲ್ಲಿಂದ ಬಂದೆ, ಎತ್ತ ಪಯನ?” ಎಂದು ಕುಞ್ಞ ಶೆಟ್ಟಿಯಾಲರು ಕೇಳಲು, ಓಲೆ ಮಾನಿಯು ತನ್ನ ಬಟ್ಟೆಯ ಸೆರಗಿನಲ್ಲಿ ಕಟ್ಟಿದ್ದ ಓಲೆಯನ್ನು ಬಿಚ್ಚಿ ಕೊಡುತ್ತಾನೆ. ಓಲೆಯನ್ನು ಓದಿ, ವಿಷಯವನ್ನು ಅರಿತ ಕುಞ್ಞ ಶೆಟ್ಟಿಯಾಲರು ತಾವು ಉಟ್ಟ ಬಟ್ಟೆಯನ್ನು ಬದಲಿಸಿ, ಹೊಸ ಬಟ್ಟೆಯನ್ನು ಉಟ್ಟು ಸಿದ್ಧರಾಗುತ್ತಾರೆ. ಬಲ್ಲಾಳರ ಆಹ್ವಾನಕ್ಕೆ ಬೆಲೆಕೊಟ್ಟು ಕುಞ್ಞ ಶೆಟ್ಟಿಯಾಲರು ಜತ್ತಣ್ಣ ಬಾರಿ ಬಲ್ಲಾಳರ ಅರಮನೆಯ ಕಡೆಗೆ ಮುಖ ಮಾಡುತ್ತಾರೆ. ಓಲೆ ಮಾನಿಯನ್ನು ಹಿಂಬಾಲಿಸುತ್ತಾ ಅರಮನೆಗೆ ಬರುತ್ತಾರೆ. ಅಲ್ಲಿ ಜತ್ತಣ್ಣ ಬಾರಿ ಬಲ್ಲಾಳರನ್ನು ನೋಡಿ ಸಂತೋಷದಿಂದ ನಮಸ್ಕರಿಸುತ್ತಾರೆ. ಬೀಡಿನ ಉಯ್ಯಾಲೆಯಲ್ಲಿ (ತುಳುವಿನಲ್ಲಿ ಆಯಂದ ಉಜ್ಜಲ್) ಕುಳಿತು, ಬಲ್ಲಾಳರ ಆತಿಥ್ಯವನ್ನು ಸ್ವೀಕರಿಸಿ, ಮದ್ದು ಮಾಡಲು ನೂಲರೇಖೆಯ ಕಟ್ಟುಪಾಡುಗಳನ್ನು ತಿಳಿಸುತ್ತಾರೆ. ಇದಕ್ಕೆ ತುಳುವಿನಲ್ಲಿ “ಸನ್ನೈ” ಎಂದು ಕರೆಯಲಾಗುತ್ತದೆ ಮತ್ತು ಹಾಗೆ ದಡೆ ಕಟ್ಟುವ ಕ್ರಮಕ್ಕೆ “ನೂಲರೇಖೆದ ಸನ್ನೈ ಕಟ್ಟುನು” ಎಂದು ಸಂಬೋಧಿಸಲಾಗುತ್ತದೆ. ಕುಞ್ಞ ಶೆಟ್ಟಿಯಾಲರು ಬಲ್ಲಾಳರಿಗೆ ಈ ಕಟ್ಟುಪಾಡುಗಳನ್ನು ನೇರವಾಗಿ ತಿಳಿಸದೇ, ಪರೋಕ್ಷವಾಗಿ “ಒಂದು ಸೇರು ಬಂಗಾರದ ಹುಡಿ ಬೇಕಾಗುತ್ತದೆ. ಒಂದು ಸೇರು ಬೆಳ್ಳಿಯ ಹುಡಿ ಬೇಕಾಗುತ್ತದೆ. ಒಂದು ಸೇರು ಕಬ್ಬಿಣದ ಹುಡಿ ಬೇಕಾಗುತ್ತದೆ. ಮೂವರ ಪೃಷ್ಟ ಕಡಿಯಬೇಕಾಗುತ್ತದೆ. ಮೂವರ ನಾಲಿಗೆ ತುಂಡರಿಸಬೇಕಾಗುತ್ತದೆ. ಓರ್ವನ ತಲೆ ತೆಗೆಯಬೇಕಾಗುತ್ತದೆ. ಓರ್ವ ಗರ್ಭಿಣಿಯ ಮಗು ತೆಗೆಯಬೇಕಾಗುತ್ತದೆ” ಎಂದು ಹೇಳಿದಾಗ, ಅರಸ ಜತ್ತಣ್ಣ ಬಾರಿ ಬಲ್ಲಾಳರು ಮತಿ ಭ್ರಮಣೆಗೊಂಡು ಕೆಳಗೆ ಬೀಳುತ್ತಾರೆ. ಇದನ್ನು ನೋಡಿದ ಕುಞ್ಞ ಶೆಟ್ಟಿಯಾಲರು ತಕ್ಷಣ ಬಲ್ಲಾಳರ ಮುಖಕ್ಕೆ ನೀರು ಚಿಮ್ಮಿ ಎಚ್ಚರಿಸಿ, “ಏಕೆ ಬಲ್ಲಾಳರೆ ಗತಿ ತಪ್ಪಿ ಮತಿ ಭ್ರಮಣೆಗೊಂಡು ಬಿದ್ದು ಬಿಟ್ಟಿರಿ ? ಇದಕ್ಕೊಂದು ಪರಿಹಾರ (ಗೊತ್ತು-ಕುಸೆಲ್) ನಾನು ಸೂಚಿಸುತ್ತೇನೆ. ಇದರ ಒಳ ಅರ್ಥ ಬೇರೆಯೇ ಇದೆ” ಎಂದು ಹೇಳುತ್ತಾರೆ. “ಒಂದು ಸೇರು ಬಂಗಾರದ ಹುಡಿ ಎಂದರೇ, ಒಂದು ಸೇರು ಅರಶಿನದ ಹುಡಿ ಎಂದರ್ಥ. ಒಂದು ಸೇರು ಬೆಳ್ಳಿಯ ಹುಡಿ ಎಂದರೇ, ಒಂದು ಸೇರು ಸೇಡಿಯ ಹುಡಿ ಎಂದರ್ಥ. ಒಂದು ಸೇರು ಕಬ್ಬಿಣದ ಹುಡಿ ಎಂದರೇ, ಒಂದು ಸೇರು ಇದ್ದಿಲಿನ ಹುಡಿ ಎಂದರ್ಥ. ಮೂವರ ಪೃಷ್ಟ ಕಡಿಯಬೇಕೆಂದರೇ, ಮೂರು ಸೀಯಾಳದ ಕಡೆ ಕಡಿಯಬೇಕೆಂದು ಅರ್ಥ. ಮೂವರ ನಾಲಿಗೆ ತುಂಡರಿಸಬೇಕೆಂದರೇ, ಮೂರು ಬಾಳೆ ಎಲೆ ಕಡಿಯಬೇಕೆಂದು ಅರ್ಥ. ಓರ್ವನ ತಲೆ ತೆಗೆಯಬೇಕೆಂದರೇ, ಒಂದು ಕೂಗುವ ಕೋಳಿಯನ್ನು (ಕೆಲೆಪಲ್ಲ ಕೋಳಿಯನ್ನು) ಬಲಿ ಕೊಡಬೇಕೆಂದು ಅರ್ಥ. ಓರ್ವ ಗರ್ಭಿಣಿಯ ಮಗು ತೆಗೆಯಬೇಕೆಂದರೇ, ಒಂದು ಅಡಿಕೆ ಮರದಿಂದ ಒಂದು ಹಾಳೆ ಹಿಂಗಾರ ತೆಗೆಯಬೇಕೆಂದು ಅರ್ಥ.” ಇದನ್ನು ಕೇಳಿ, ದಿಗ್ಭ್ರಮೆಗೊಂಡಿದ್ದ ಬಲ್ಲಾಳರು ಸಹಜ ಸ್ಥಿತಿಗೆ ಮರಳುತ್ತಾರೆ. ಕುಞ್ಞ ಶೆಟ್ಟಿಯಾಲರು ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ತರಿಸುತ್ತಾರೆ. ಮಂತ್ರಪಾಂಡಿತ್ಯದ ಚೌಕಟ್ಟನ್ನು ಆಧರಿಸಿ, ಕುಞ್ಞ ಶೆಟ್ಟಿಯಾಲರು ಒಂದು ಕೋಳಿಯನ್ನು ಬಲಿ ಕೊಟ್ಟು, ನೂಲು ಮಂತ್ರಿಸಿ ಕಟ್ಟುತ್ತಾರೆ. ಹೊರಡುವ ಸಮಯದಲ್ಲಿ ಬಲ್ಲಾಳರು ಕುಞ್ಞ ಶೆಟ್ಟಿಯಾಲರಿಗೆ “ನೀವು ನಮ್ಮ ಕರೆಗೆ ಓಗೊಟ್ಟು, ಬಹು ದೂರದಿಂದ ಇಲ್ಲಿಗೆ ಬಂದಿದ್ದೀರಿ. ನೀವು ನಮ್ಮ ಅರಮನೆಯಿಂದ, ಏನನ್ನಾದರೂ ಕೊಂಡು ಹೋಗಬೇಕು. ಬರೀ ಕೈಯಲ್ಲಿ ಹಿಂತಿರುಗುವಂತಿಲ್ಲ. ನಿಮಗೆ ಏನು ಬೇಕು?” ಎಂದು ಕೇಳುತ್ತಾರೆ. ಆಗ ಕುಞ್ಞ ಶೆಟ್ಟಿಯಾಲರು ಯೋಚಿಸಿ, ಅರಸರಲ್ಲಿ ಯಾವುದೇ ರೀತಿಯ ಹಣ ಅಥವಾ ಸಂಪತ್ತಿನ ಆಮಿಷವನ್ನು ಒಡ್ಡದೆ, ಸತ್ಯದಲ್ಲಿ “ನಮ್ಮ ಕೂರಿಯಾಳ ಗ್ರಾಮದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಕಳ್ಳಕಾಕರಿಂದ ನಮ್ಮನ್ನು ಕಾಯುವ ಸಲುವಾಗಿ, ನಿಮ್ಮ ಅರಮನೆಯ ಉಯ್ಯಾಲೆಯಲ್ಲಿ ವಿರಾಜಮಾನವಾಗಿ ಕುಳಿತಿರುವ, ದೈವವನ್ನು ನಮಗೆ ಕೊಡಬಲ್ಲಿರಾ?” ಎಂದು ಕೇಳುತ್ತಾರೆ. ಆಗ ಅರಸರು ಮರುಮಾತಾಡದೆ, ಅದಕ್ಕೆ ಒಪ್ಪಿ, ವೀಳ್ಯದೆಲೆ (ಪಂಚೋಲಿ ಬಚ್ಛಿರೆ)ಯನ್ನು ತರಿಸುತ್ತಾರೆ.
ಆ ವೀಳ್ಯದೆಲೆಯಲ್ಲಿ, ತಮ್ಮ ಅರಮನೆಯಲ್ಲಿ ತಾವು ಆರಾಧಿಸುತ್ತಿದ್ದ ಪಿಲ್ಚಂಡಿ ದೈವದ ರೂಪವನ್ನು ಚಿತ್ರಿಸುತ್ತಾರೆ. ದೈವದ ಕೊಂಡೆ ಕಿವಿ, ಕೊಂಡೆ ಮೂಗು, ದೈವದ ನಿಜರೂಪ, ಪ್ರತಿರೂಪ ಎಲ್ಲವನ್ನೂ ವೀಳ್ಯದೆಲೆಯಲ್ಲಿ ಬರೆದು, ಮಂತ್ರಿಸಿ ಕೊಡುತ್ತಾರೆ. ಅಲ್ಲದೇ ಎರಡು ಷರತ್ತುಗಳನ್ನು ಹೇರುತ್ತಾರೆ.
“1) ನೀವು ಇದನ್ನು ಕೊಂಡುಹೋಗಿ ನಿಮ್ಮ ಗುತ್ತಿನ ಮನೆಮಂಚದಲ್ಲೇ ಇಡಬೇಕು ಹೊರತು ಬೇರೆಲ್ಲಿಯೂ ಇಡುವಂತಿಲ್ಲ. 2) ನೀವು ಹೋಗುವ ದಾರಿಯಲ್ಲಿ ನಿಮ್ಮನ್ನು ಯಾರೂ ಅಡ್ಡ ದಾಟದಂತೆ ನೋಡಿಕೊಳ್ಳಬೇಕು” ಎಂಬ ಎರಡು ಷರತ್ತುಗಳನ್ನು ವಿಧಿಸಿ, ವೀಳ್ಯದೆಲೆಯಲ್ಲಿ ಮಂತ್ರಿಸಿದ ದೈವವನ್ನು ಬಲ್ಲಾಳರು ಕುಞ್ಞ ಶೆಟ್ಟಿಯಾಲರ ಸೆರಗಿಗೆ ಹಾಕುತ್ತಾರೆ. ಕುಞ್ಞ ಶೆಟ್ಟಿಯಾಲರು ಈ ವೀಳ್ಯದೆಲೆಯ ಕಟ್ಟನ್ನು, ತಮ್ಮ ಸುಣ್ಣಜನ ಸರಪೊಳಿ (ಸುಣ್ಣ ಹಾಕುವ ಕರಜನದಂತಹ ಒಂದು ಸಾಧನ. ಈ ಸಾಧನಕ್ಕೆ ಸರಪೊಳಿಯನ್ನು ಕೂಡಿಕೊಂಡು ಚಮಚದಂತೆ ಒಂದು ಕೊಂಡಿ ಇರುತ್ತದೆ) ಇದರ ಒಟ್ಟಿಗೆ ಇಟ್ಟು, ತಮ್ಮ ಕೂರಿಯಾಳ ಗುತ್ತಿನ ಕಡೆಗೆ ಮುಖ ಮಾಡುತ್ತಾರೆ. ದೈವದ ಸಂಧಿಯಲ್ಲಿ ಅವರು ಇಳಿದು ಬರುವ ಹಾದಿಯ ವರ್ಣನೆ ಹೀಗಿದೆ. ಕೋಣ ಇಳಿಸುವ ಹೆದ್ದಾರಿ, ಬಾಕಿ ತಿಮರ ಗದ್ದೆ, ಮೇಗಿನ ಸಂತೆಯ ಗದ್ದೆ, ಕೆಳಗಿನ ಸಂತೆಯ ಗದ್ದೆ, ಸೋಮನಾಥ ದೇವರ ಆಲಯ, ಬಂಟವಾಳ ಕರಿಯದ ಕೂಟೆಲು, ಬಂಟವಾಳದ ಪೇಟೆ, ಏರಿಯದ ಗೋಳಿ ಹುಲಿ ಪಂಜರ, ಕೆಂಪಿನ ಬಡಾಜೆಯ ದೊಡ್ಡ ಪಾದೆ ಕಲ್ಲು, ಪೂಕರೆಮಾರಿನ ಬೆರ್ಮೆರ ಬನ, ಸಾವಿರದ ದೈಗೋಳಿ ಹೀಗೆ ಇವೆಲ್ಲಾ ಜಾಗವನ್ನು ದಾಟಿ, ಕೂರಿಯಾಳ ಗುತ್ತಿನ ಬಳಿ ಬರುತ್ತಾರೆ. ಬಹು ದೂರದ ಸಂಚಾರವಾದ ಕಾರಣ, ಆಯಾಸಗೊಂಡ ಕುಞ್ಞ ಶೆಟ್ಟಿಯಾಲರು ತಮ್ಮ ಕೂರಿಯಾಳ ಗುತ್ತಿನ ಬಾವಿಯ ಬದಿಯಲ್ಲಿ (ತುಳುವಿನಲ್ಲಿ ಗೂವೆದ ಬೈಕಲ್), ತಾವು ತಂದ ವೀಳ್ಯದೆಲೆಯ ಕಟ್ಟನ್ನು ಮತ್ತು ತಮ್ಮ ಸುಣ್ಣಜನ ಸರಪೊಳಿಯನ್ನು ಇಟ್ಟು, ಬಾವಿಯ ನೀರಿನಿಂದ ಮುಖ-ಬೆವರು, ಆಯಾಸವನ್ನು ನೀಗಿಸಿ, ಕಟ್ಟನ್ನು ಅಲ್ಲೇ ಮರೆತು ಕೂರಿಯಾಳ ಗುತ್ತಿನ ಮನೆಗೆ ಬರುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ, ಮನೆಯಲ್ಲಿ ಊಟ ಮುಗಿಸಿ, ಆಯದ ಉಯ್ಯಾಲೆಯಲ್ಲಿ ಕುಳಿತು, ಇನ್ನೇನೂ ಎಲೆ-ಅಡಿಕೆ ತಿನ್ನಬೇಕು ಎಂದುಕೊಳ್ಳುವಷ್ಟರಲ್ಲಿ, ತಮ್ಮ ಸುಣ್ಣಜನ ಸರಪೊಳಿ ಮತ್ತು ಅರಸರು ವೀಳ್ಯದೆಲೆಯಲ್ಲಿ ಮಂತ್ರಿಸಿ ಕೊಟ್ಟ ದೈವದ ನೆನಪಾಗುತ್ತದೆ. ಕೂಡಲೆ ಅಲ್ಲೇ ಪಕ್ಕದಲ್ಲಿದ್ದ ಅವರ ಕೆಲಸದವನಲ್ಲಿ, ಓಡಿಹೋಗಿ ಬಾವಿಯ ಬದಿಯಲ್ಲಿದ್ದ ಕಟ್ಟನ್ನು ತರಲು ಹೇಳುತ್ತಾರೆ. ಕೆಲಸದವ ಬಂದು ನೋಡಿದಾಗ, ಅಲ್ಲಿ ಕಟ್ಟು ಇರುವುದಿಲ್ಲ. ಬದಲಿಗೆ ದೈವವು ಎಮ್ಮೆಯ ಕರುವಿನ ರೂಪದಲ್ಲಿ ಬಾವಿಯಲ್ಲಿ ಈಜಾಡುತ್ತಿದ್ದು, ಬಾವಿಯ ಬದಿಯಲ್ಲಿ ಬೆಳೆದಿದ್ದ ಹುಲ್ಲನ್ನು ಮೇಯುತ್ತಿರುತ್ತದೆ. ಈ ಸೋಜಿಗವನ್ನು ಆತ ಕುಞ್ಞ ಶೆಟ್ಟಿಯಾಲರಿಗೆ ತಿಳಿಸುತ್ತಾನೆ. ತಕ್ಷಣ ಕುಞ್ಞ ಶೆಟ್ಟಿಯಾಲರು, ಇದು ದೈವದ ಕಾರಣಿಕವೆಂದು ತಿಳಿದು, ಚಡಪಡಿಸುತ್ತಾ ಓಡೋಡಿ ಬಂದು ಬಾವಿಯ ಬಳಿ ಕಣ್ಣಿನಲ್ಲಿ ಕಣ್ಣ-ದುಃಖ ಬಿಡುತ್ತಾರೆ. “ಅಯ್ಯೋ! ನನ್ನಿಂದ ತಪ್ಪಾಯಿತಲ್ಲ. ಬಲ್ಲಾಳರು ಈ ಕಟ್ಟನ್ನು ಎಲ್ಲಿಯೂ ಇಡಬಾರದೆಂದು ತಿಳಿಸಿದ್ದರು. ಆದರೆ ನಾನು ಮರೆತು ಈ ಕಟ್ಟನ್ನು ಬಾವಿಯ ದಂಡೆಯ ಮೇಲೆ ಇಟ್ಟೆನಲ್ಲ, ದೈವದ ಕಾರಣಿಕವನ್ನು ನಾನು ತಿಳಿಯದಾದೆನೇ, ಇನ್ನೇನು ಮಾಡುವುದು?” ಎಂದು ಕೊರಗುತ್ತಾರೆ. ಕೂಡಲೆ ಎಮ್ಮೆಯ ಕರುವಿನ ಒರುವಾಗಿದ್ದ ದೈವದ ಮುಂದೆ ನಿಂತು, ತಮ್ಮ ಸೆರಗನ್ನು ಒಡ್ಡಿ ದೈವದ ಬಳಿ ಅರಿಕೆ ಮಾಡುತ್ತಾರೆ. “ಸತ್ಯದಲ್ಲಿ ನನ್ನನ್ನು ಹಿಂಬಾಲಿಸಿಕೊಂಡು ಬಂದ ದೈವ ನೀನು ಹೌದೆಂದಾದರೇ, ನನ್ನ ಸುಣ್ಣಜನ ಸರಪೊಳಿ ಮತ್ತು ಬಲ್ಲಾಳರು ನಿನ್ನನ್ನು ಮಂತ್ರಿಸಿ ಕೊಟ್ಟ ವೀಳ್ಯದೆಲೆಯ ಕಟ್ಟನ್ನು ನನ್ನ ಸೆರಗಿಗೆ ಹಾಕಿಕೊಟ್ಟಿ ಎಂದಾದರೇ, ಮಂಗಳವಾರ ದಿನದಂದು ಗಾಣದ ಕುಞ್ಞನನ್ನು ಕರೆಸಿ, ಇದೇ ಬಾವಿಯ ಬದಿಯಲ್ಲಿ ನಿನಗೆ, ಐದು ಎಲೆ ಹಾಕಿ ಅಗೇಲು ಬಡಿಸುತ್ತೇನೆ” ಎಂದು ಅರಿಕೆ ಮಾಡುತ್ತಾರೆ. ತಕ್ಷಣ ವೀಳ್ಯದೆಲೆಯ ಕಟ್ಟು ಮತ್ತು ಅವರ ಸುಣ್ಣಜನ ಸರಪೊಳಿ ಎರಡೂ ಅವರ ಸೆರಗಿಗೆ ಬಂದು ಬೀಳುತ್ತದೆ. ಬಾವಿಯಲ್ಲಿದ ಎಮ್ಮೆಯ ಕರು ಮಾಯವಾಗುತ್ತದೆ.
ಕೂಡಲೆ ಆ ಕಟ್ಟನ್ನು ತಮ್ಮ ಕೂರಿಯಾಳ ಗುತ್ತಿನೊಳಗೆ ಕೊಂಡುಹೋಗಿ, ದೈವವನ್ನು ಸ್ಥಾಪಿಸಬೇಕೆಂದು ಬಯಸುತ್ತಾರೆ. ಅಷ್ಟು ಹೊತ್ತಿಗೆ ಗುತ್ತಿನಲ್ಲಿದ್ದ ಅವರ ಮಗಳು, ಅವರನ್ನು ಹುಡುಕಿಕೊಂಡು ಬಾವಿಯ ಬಳಿ ಬರಲು, ಮೆಟ್ಟಿಲನ್ನು ಇಳಿಯಲು ಮುಂದಾಗುತ್ತಾಳೆ. “ಮಗು ನೀನು ಮುಂದೆ ಬರಬೇಡ, ನಾನು ದೈವವನ್ನು ಮೇಲೆ ತರುತ್ತಿದ್ದೇನೆ” ಎಂದು ಕುಞ್ಞ ಶೆಟ್ಟಿಯಾಲರು ಕೂಗಿಕೊಂಡರು. ಅವರ ಮಾತು ಮಗುವಿಗೆ ಕೇಳಿಸದೆ ಹೋಯಿತೋ ಏನೋ, ಮಗು ತಿಳಿಯದೆ ಅವರ ಹಾದಿಗೆ ಅಡ್ಡ ಬಂದಾಗ, ದೈವದ ದೃಷ್ಟಿ ಮಗುವಿನ ಮೇಲೆ ಬಿದ್ದು, ಮಗುವಿನ ಅವಸನವಾಗುತ್ತದೆ. ಮಗಳ ಅವಸನದ ದುಃಖ, ಸೂತಕವನ್ನು ಹೊತ್ತಿಕೊಂಡ ಕುಞ್ಞ ಶೆಟ್ಟಿಯಾಲರು, ಕೂರಿಯಾಳ ಗುತ್ತಿನಲ್ಲಿ ದೈವವನ್ನು ಸ್ಥಾಪಿಸಿ, ಆರಾಧಿಸುತ್ತಾರೆ. “ಉಗ್ಗೆಲ್” ಎಂದರೆ ಬಾವಿಯಿಂದ ಉದಿಸಿದ ದೈವ ಎಂಬಾರ್ಥದಲ್ಲಿ ತುಳುವಿನಲ್ಲಿ “ಉಗ್ಗೆಲ್ದಾಯೆ”/ “ಉಗ್ಗೆದಲ್ತಾಯೆ” ಎಂದು ಈ ದೈವವನ್ನು ಕರೆದರು. ನುಡಿದ ಮಾತಿನಂತೆ, ಕುಞ್ಞ ಶೆಟ್ಟಿಯಾಲರು ಕೂರಿಯಾಳ ಗುತ್ತಿನ ಬಾವಿಯ ಬದಿಯಲ್ಲಿ ಗಾಣದ ಕುಞ್ಞನನ್ನು ಕರೆಸಿ ಐದು ಎಲೆ ಹಾಕಿ ಅಗೇಲು ಬಡಿಸುತ್ತಾರೆ. ಇಂದಿಗೂ, ಇದೇ ಬಾವಿಯ ಬದಿಯಲ್ಲಿ ಭಕ್ತಾಧಿಗಳಿಂದ ಅಗೇಲು ಸೇವೆ ನಡೆಯುತ್ತಾ ಬಂದಿದೆ.
ಮುಂದೊಂದು ದಿನ ಕೂರಿಯಾಳ ಗುತ್ತಿನಲ್ಲಿ ಮಾವ-ಅಳಿಯನ (ಸಮ್ಮಲೆ-ಅರ್ವತ್ತೆ) ನಡುವೆ ಮಾತಿನಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಬೇಸತ್ತ ಅಳಿಯ “ಇನ್ನು ಮುಂದೆ ನಾನು ನಿಮಗೆ ಅಳಿಯನಲ್ಲ, ನೀವು ಎನಗೆ ಮಾವನಲ್ಲ” ಎನ್ನುತ್ತಾರೆ. ಹಾಗೆಯೇ ಮಾವನೂ “ನಾನು ನಿನಗೆ ಮಾವನಲ್ಲ, ನೀನು ಎನಗೆ ಅಳಿಯನಲ್ಲ” ಎನ್ನುತ್ತಾರೆ. ಕೋಪದಿಂದ ಅಳಿಯ ಕೂರಿಯಾಳ ಗುತ್ತನ್ನು ಬಿಟ್ಟು ಕೆಳಗಿಳಿದು ಬರುತ್ತಾರೆ. ಕೂರಿಯಾಳ ಗ್ರಾಮದ ಕೆಳಗಿನ ಕರೆಗೆ ಬಂದು, ಈಗಿನ ಕಾಂಬೋಡಿ ಗುತ್ತಿನಲ್ಲಿ ನೆಲೆಗೊಳ್ಳುತ್ತಾರೆ. ಅಳಿಯನನ್ನು ಹಿಂಬಾಲಿಸಿಕೊಂಡು ದೈವವೂ ಬರುತ್ತದೆ. ಮೇಗಿನ ಕೂರಿಯಾಳ ಗುತ್ತಿನಿಂದ ಕೆಳಗಿನ ಕಾಂಬೋಡಿ ಗುತ್ತಿಗೆ ದೈವ ಇಳಿದು ಬರುವಂತಹ ಸಂದರ್ಭದಲ್ಲಿ “ಪುರ್ಸ ಲಚ್ಚಿಲ್” ಎಂಬ ಜಾಗಕ್ಕೆ ಬಂದು ನಿಲ್ಲುತ್ತದೆ. ಅಲ್ಲಿದ್ದ “ಪುರ್ಸ” ಎನ್ನುವ ವ್ಯಕ್ತಿಯನ್ನು ಮಾಯಮಾಡಿ ತನ್ನ ಬಂಟನಾಗಿ ನೇಮಿಸಿಕೊಳ್ಳುತ್ತದೆ. ಮುಂದೆ ಸಾಗಿ ಬರುವಾಗ, “ಅರ್ಬಿ” ಎನ್ನುವಂತಹ ಒಂದು ಬಯಲು ಪ್ರದೇಶದಲ್ಲಿ, ಜೋರಾಗಿ ಮಳೆ ಸುರಿಯುತ್ತಿರುತ್ತದೆ. ಈ ಮಳೆ ನೀರಿನಿಂದಾಗಿ ಪ್ರವಾಹ ಉಕ್ಕಿ ಹರಿಯುತ್ತಿರುತ್ತದೆ. ಅದನ್ನು ದಾಟಿ, ಕಾಂಬೋಡಿ ಗುತ್ತಿಗೆ ಬರಲು ದೈವಕ್ಕೆ ಕಷ್ಟ ಸಾಧ್ಯವಾಗುತ್ತದೆ.
ಆಗ ಪಕ್ಕದಲ್ಲಿದ್ದ ಪುರ್ಸ ದೈವವು ತನ್ನ ಕೈಯಲ್ಲಿದ್ದ ತ್ರಿಶೂಲದಿಂದ ಹರಿಯುವ ನೀರಿನ ಅಡಿಪಾಯದಲ್ಲಿದ್ದ ಬಂಡೆಯನ್ನು ಕೊರೆದು, ಬಂಡೆಯ ಮೇಲೆ ಚಡಿ ಹಾಕಿ, ದಂಡೆಯಂತೆ ಮಾಡಿ ಪ್ರವಾಹದ ನೀರು ಸಡಿಲಗೊಂಡು, ನಿಧಾನಗತಿಯಲ್ಲಿ ಆ ದಂಡೆಯ ಮುಖಾಂತರ ಹಾದು ಹೋಗುವಂತೆ ಮಾಡುತ್ತಾನೆ. ದೈವ ಈ ಬದಿಯಿಂದ ಆ ಬದಿಗೆ ದಾಟಲು ಸಹಾಯ ಮಾಡಿಕೊಡುತ್ತಾನೆ. ಮುಂದೆ ಈ ದೈವಗಳು ಕಾಂಬೋಡಿ ಗುತ್ತಿನ ಮನೆಯನ್ನು ಪ್ರವೇಶಿಸಿ, ಅಲ್ಲಿ ಆರಾಧನೆ ಪಡೆಯುತ್ತದೆ. ಪುರ್ಸ ದೈವವು ಉಗ್ಗೆದಲ್ತಾಯ ದೈವದ ಬಲ ಭಾಗದ ಬಂಟನಾಗಿ ನೆಲೆಗೊಂಡು, ದೈವದ ಒಟ್ಟಿಗೆ ಉತ್ಸವ – ಪರ್ವಾದಿಗಳನ್ನು ಪಡೆದುಕೊಂಡು ಬರುತ್ತದೆ. ಉಗ್ಗೆದಲ್ತಾಯ ದೈವದ ಮುಗ ಏರಿ ನೇಮದಲ್ಲಿ ಪ್ರಥಮದ ಮೂರು ನಲಿಕೆಯವರೆಗೆ (ಇದಕ್ಕೆ ಮೂಡದಾಯ ನಾಟ್ಯ ಎಂದು ಕರೆಯಲಾಗುತ್ತದೆ) ಪುರ್ಸ ದೈವಕ್ಕೆ ನೇಮ. ಪುನಃ ಬೆಳಗಿನ ಜಾವ ದೈವ ಆವಾರ (ಬಾರಣೆ) ಸ್ವೀಕರಿಸುವ ಹೊತ್ತಿನಲ್ಲಿ ಪುರ್ಸ ದೈವದ ಉಪಸ್ಥಿತಿ. ನೆಲದಲ್ಲಿ ಕುಳಿತ ಪುರ್ಸ ದೈವಕ್ಕೂ, ದೈವದ ಒಟ್ಟಿಗೆ ಆವಾರ ಬಡಿಸುವ ಕ್ರಮವಿದೆ. ಇದಲ್ಲದೇ, ಕೆಳಗಿನ ಕರೆಯ ಯಾವುದೇ ಮನೆಯ ಹಟ್ಟಿಯಲ್ಲಿ ದನ ಕರು ಹಾಕಿದರೇ, ದನದಿಂದ ಕರೆದ ಮೊದಲ ಹಾಲನ್ನು ಪುರ್ಸ ದೈವಕ್ಕೆ ತಂದು ಒಪ್ಪಿಸುವ ಕ್ರಮ ಚಾಲ್ತಿಯಲ್ಲಿದೆ. ಒಂದು ವೇಳೆ ಆ ಸಮಯದಲ್ಲಿ ಅವರಿಗೆ ಹಾಲನ್ನು ಒಪ್ಪಿಸಲು ಸಾಧ್ಯವಾಗದಿದ್ದಲ್ಲಿ, ಅದೇ ಹಾಲಿನಿಂದ ತಯಾರಿಸಿದ ತುಪ್ಪವನ್ನು ತಂದು ಒಪ್ಪಿಸುತ್ತಾರೆ.
ಮುಂದೆ ದೈವ ತನ್ನ ಆರಾಧನೆಯ ಕಟ್ಟ್-ಕಟ್ಟಳೆಗಳನ್ನು ನಿರ್ಣಯಿಸುತ್ತದೆ. ಕೂರಿಯಾಳ ಗ್ರಾಮದ ಮೇಗಿನ ಕರೆಯಲ್ಲಿ “ಸಾರದೈಗೋಳಿ” ಎಂಬ ಜಾಗದಲ್ಲಿ, ಕೂರಿಯಾಳ ಗುತ್ತಿನ ಭಂಡಾರದಲ್ಲಿ ಎರಡು ದಿನದ ದೊಂಪದಬಲಿ ನೇಮ ಪಡೆದುಕೊಳ್ಳುತ್ತದೆ. ಕೆಳಗಿನ ಕರೆಯ “ನೋರ್ನಡ್ಕ ಬರಿಬೂಡು” ಎಂಬ ಗಡುಪಾಡಿ ಜಾಗದಲ್ಲಿ ಕಾಂಬೋಡಿ ಗುತ್ತಿನ ಭಂಡಾರದಲ್ಲಿ ಒಂದು ದಿನದ ದೊಂಪದಬಲಿ ನೇಮ ಪಡೆದುಕೊಳ್ಳುತ್ತದೆ. ಮೇಗಿನ ಕರೆಯಲ್ಲಿ ಕೂರಿಯಾಳ ಗುತ್ತು, ನಡು ಬಾಳಿಕೆ, ಪೂಕರೆಮಾರ ಗುತ್ತು, ತೆಂಡೆಮಾರ್, ಪೊಸಮಣ್ಣ್ ಮನೆತನಗಳನ್ನು ಕರೆದು ಕೊಂಡಾಡಿತು. ಕೆಳಗಿನ ಕರೆಯಲ್ಲಿ ಕಾಂಬೋಡಿ ಗುತ್ತು, ಮುಂಡಡ್ಕ ಗುತ್ತು, ಮಾಯಿಲ್ಕೋಡಿ ಗುತ್ತು, ಪಡು ಗುತ್ತು, ಮೂವದ ಮನೆತನವನ್ನು ಕರೆದು ಕೊಂಡಾಡಿತು. ನೂರ್ದಾಳ ಪಟ್ಟದ (ನೂರು ಆಳುಗಳಿದ್ದ ಊರು) ರಾಜ್ಯ ಎರಡೂರಿಗೆ ಕಾಂಬೋಡಿ ಒಳಗುಡ್ಡೆ ವೈಕುಂಠಸ್ಥಾನ ಎಂದು ನಿರ್ಣಯಿಸಿ, ಇದು ಭೂಲೋಕದಲ್ಲಿ ಕಾಶಿ ರಾಮೇಶ್ವರಕ್ಕೆ ಸರಿಸಮಾನವಾದ ಪವಿತ್ರ ಸ್ಥಳವೆಂದು ನಿರ್ಣಯ ಮಾಡಿತು. ರಾಜ್ಯ ಎರಡೂರ ಭಕ್ತಾಧಿಗಳ ಕೈಯಿಂದ ಇಲ್ಲಿ ಬಂಡಿ, ಒಲಸರಿ ನೇಮವನ್ನು ಪಡೆದುಕೊಂಡು ಬಂದಿತು.
ಪ್ರಸ್ತುತ ಮೇಗಿನ ಕರೆಯ ಕೂರಿಯಾಳ ಗುತ್ತಿನಲ್ಲಿ ಶ್ರೀ ಸೀತಾರಾಮ ಸಾಮಾನಿ ಎಂಬುವವರು ದೈವದ ಗಡಿ ಹಿಡಿದವರಾಗಿದ್ದು, ಕೆಳಗಿನ ಕರೆಯ ಕಾಂಬೋಡಿ ಗುತ್ತಿನಲ್ಲಿ ಶ್ರೀ ದಿನಕರ ಆಳ್ವರು, ಮುಂಡಡ್ಕ ಗುತ್ತಿನಲ್ಲಿ ಶ್ರೀ ರತ್ನಾಕರ ಶೆಟ್ಟಿಯವರು ಮತ್ತು ಮಾಯಿಲ್ಕೋಡಿ ಗುತ್ತಿನಲ್ಲಿ ಶ್ರೀ ದಯಾನಂದ ಶೆಟ್ಟಿಯವರು ದೈವದ ಗಡಿ ಹಿಡಿದವರಾಗಿರುತ್ತಾರೆ. ಈ ಕ್ಷೇತ್ರ ಅನೇಕ ಕಾರಣಿಕದ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಅನೇಕ ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಬಂದು ತಮ್ಮ ಇಷ್ಟಾರ್ಥಗಳನ್ನು ನೀಗಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಇಂದಿಗೂ ಹುಲಿಯ ಸಂಚಾರವಿದೆ. ಮೇಗಿನ ಕರೆಯಲ್ಲಿ ಹರಕೆಯ ರೂಪದಲ್ಲಿ ಅಗೇಲು ಸೇವೆಗೆ ಮಹತ್ವದ ಸ್ಥಾನವಿದೆ. ಕೆಳಗಿನ ಕರೆಯಲ್ಲಿ ದೈವದ ಭಂಡಾರದ ಕೊಟ್ಯದಲ್ಲಿ “ಓಮಂಚಜ್ಜಯ” ಎಂಬ ವಿಶೇಷ ಸೇವೆಯನ್ನು ಹರಕೆಯ ರೂಪದಲ್ಲಿ ಭಕ್ತರು ಸಲ್ಲಿಸುತ್ತಾರೆ. ಅದು ಯಾವುದೇ ರೀತಿಯ ಜೀವಕ್ಕೆ ಕುತ್ತು ಬರುವಂತಹ ಸನ್ನಿವೇಶ ಆಗಿರಬಹುದು, ಕಷ್ಟದ ಸನ್ನಿವೇಶ ಆಗಿರಬಹುದು ಅಥವಾ ಖುಷಿಯ ಸನ್ನಿವೇಶ ಆಗಿರಬಹುದು, ಮನಸ್ಸಿನಲ್ಲಿ ಒಮ್ಮೆ ದೈವವನ್ನು ನೆನೆದು “ಓಮಂಚಜ್ಜಯ” ಮಾಡಿಸುತ್ತೇನೆ ಎಂದು ಪ್ರಾರ್ಥಿಸಿದರೇ ಬಂದಂತಹ ಕಷ್ಟ-ಕಾರ್ಪಣ್ಯಗಳು ನೀಗಿ ಹೋದ ಪುರಾವೆಗಳಿವೆ. ಇನ್ನೊಂದು ನೇಮದ ಸಂದರ್ಭದಲ್ಲಿ ಕೊಡುವಂತಹ ವಿಶಿಷ್ಟವಾದ “ಕಂಚಿಲು ಸೇವೆ”. ಹೆರಿಗೆಯ ಸಂದರ್ಭದಲ್ಲಿ ಅಥವಾ ಮಕ್ಕಳ ಜೀವಕ್ಕೇ ಕುತ್ತು ಬರುವ ಸನ್ನಿವೇಶದಲ್ಲಿ ಈ ಹರಕೆಯನ್ನು ಹೇಳಿಕೊಳ್ಳುತ್ತಾರೆ. ನೇಮದ ಸಂದರ್ಭದಲ್ಲಿ ಶುದ್ಧಾಚಾರದಲ್ಲಿದ್ದು, ದೈವಸ್ಥಾನದ ಗೋಪುರದಲ್ಲಿ ಕಂಚಿಲ್ ಕುಳಿತು, ನಂತರ ದೈವ ಸುತ್ತು-ಬಲಿಗೆ ಹೊರಡುವಾಗ, ಮಗುವಿನ ಮಾವ ಅಥವಾ ತಂದೆ ಮಗುವನ್ನು ಭುಜದಮೇಲೆ ಕುಳ್ಳಿರಿಸಿ, ೧೬ ಸುತ್ತಿನ ಅಂಗನ ಬಲಿಗೆ ಮುಖ ಮಾಡಿ ಹಿಂದೆ ಹೆಜ್ಜೆ ಇಡುತ್ತಾ ಬಲಿ ಬರುವಂತಹ ಪದ್ಧತಿ. ನೇಮದ ಸಂದರ್ಭದಲ್ಲಿ ದೈವ ಒಲಸರಿ ಇಳಿದು, ಕಟ್ಟೆ ದೀಪಾರಾಧನೆಯನ್ನು ಸ್ವೀಕರಿಸಿ, ಮೆಟ್ಟಿಲನ್ನು ಹತ್ತಿ ಓಡೋಡಿ ಮೇಲೆ ಬಂದು ರಾಜಾಂಗಣ ಪ್ರವೇಶಿಸುವ ವಿಶೇಷ ಸನ್ನಿವೇಶವನ್ನು ಭಕ್ತರು ಕಾದು ಕುಳಿತು ನೋಡುತ್ತಾರೆ. ಇದಲ್ಲದೇ, ಒಂದು ಕಾಲಾವಧಿಯಲ್ಲಿ ದೈವದ ಭಂಡಾರದ ಕೊಟ್ಯದಲ್ಲಿ ೧೨ ತಿಂಗಳ ೧೨ ಸಂಕ್ರಾಂತಿ ಸೇವೆ, ಚೌತಿ, ಪರ್ಬ ಪಾಡ್ಯದ ಸೇವೆಗಳು ನೆರವೇರುತ್ತದೆ. ಸಹಜವಾಗಿ ಜನವರಿ ತಿಂಗಳಿನಲ್ಲಿ ಮೇಗಿನ ಕರೆಯಲ್ಲಿ ದೊಂಪದಬಲಿ ಸೇವೆ ಜರುಗಿ, ಫೆಬ್ರವರಿ ತಿಂಗಳಿನಲ್ಲಿ ಕೆಳಗಿನ ಕರೆಯಲ್ಲಿ ದೊಂಪದ ಬಲಿ ಸೇವೆ ಜರಗುತ್ತದೆ. ತುಳುವರ ಮಾಯಿ ಹೋಗಿ ಸುಗ್ಗಿ ಬರುವ ಮೀನ ಸಂಕ್ರಮಣದ ದಿನದಂದು ಕ್ಷೇತ್ರಕ್ಕೆ ಸಂಬಂಧ ಪಟ್ಟ ಗದ್ದೆಯಲ್ಲಿ ಕೋಳಿಕುಂಟ ನಡೆದು, ಸುಗ್ಗಿ ೧೦ ಹೋಗುವ ದಿನದಂದು (ಮಾರ್ಚ್ ೨೪ ರಂದು) ಒಳಗುಡ್ಡೆ ದೈವಸ್ಥಾನದಲ್ಲಿ ದೈವದ ಕಾಲಾವಧಿ ಬಂಡಿ, ಒಲಸರಿ ನೇಮ ನಡೆಯುತ್ತದೆ. ನಂತರ ಏಪ್ರಿಲ್ ತಿಂಗಳಿನಲ್ಲಿ ನೋರ್ನಡ್ಕ ಬರಿಬೂಡು ಎಂಬ ಗಡುಪಾಡಿ ಜಾಗದಲ್ಲಿ ಮಾರಿಪೂಜೆ ನೆರವೇರುತ್ತದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬಿ.ಸಿ ರೋಡಿನಿಂದ, ಪೊಳಲಿ ದೇವಾಲಯದ ರಸ್ತೆಯ ಮುಖಾಂತರ ಸಾಗಿದಾಗ, ಕಲ್ಪನೆ ಎಂಬಲ್ಲಿ ಬಲಕ್ಕೆ ಕೊಳತ್ತಮಜಲು ರಸ್ತೆಯಲ್ಲಿ ಒಳಸಾಗಿದಾಗ, ಕಾಂಬೋಡಿ ದೈವಸ್ಥಾನದ ದ್ವಾರ ಕಾಣಸಿಗುತ್ತದೆ. ಅಲ್ಲಿಂದ 1 ಕಿ.ಮೀ ದೂರದಲ್ಲಿ ಕಾಂಬೋಡಿ ಒಳಗುಡ್ಡೆ ದೈವಸ್ಥಾನವಿದೆ.
“ಉದಿಪುಗು ಸಾರದ ದೈಗೋಳಿ, ಅಸ್ತಮೊಗು ನೋರ್ನಡ್ಕ ಬರಿಬೂಡು, ಎರಡು ಕರೆ ನೂರ್ದಾಲೆಗ್ ಕಾಂಬೋಡಿ ಒಳಗುಡ್ಡೆ ವೈಕುಂಠಸ್ಥಾನಂದ್ ಪನ್ಪಿನವು ನಾಗ ನಡೆ, ಸರ್ಪ ಜಿಡೆ, ಬಲಿಪ ಬಾಯಿ, ಒಂಜಿ ಗಿಟ್ಟೆ ಬಂಗಾರೊಗು ಸರಿಸಮಾಯಿಂಚಿ ಪಂಚವರ್ಣದ ನಡೆಂದ್ ಕೋಡೆ ಎಂಕುಲು ಓಲೆ ಕೊರೊಂದು ಬತ್ತಿನವು”- ಶ್ರೀ ದೈವದ ಅಭಯದ ನುಡಿ.
ಬರಹ: ಶರಣ್ ಶೆಟ್ಟಿ ಕೂರಿಯಾಳ ಪಡು