ಭೂಮಿಯ ತಾಪಮಾನ ಇತ್ತೀಚೆಗೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು ಅದರಲ್ಲೂ ದಕ್ಷಿಣ ಕನ್ನಡದ ತಾಪಮಾನ ದಾಖಲೆಯ ಗರಿಷ್ಠ ಉಷ್ಣತೆ 39.5 ಡಿಗ್ರಿ ಸೆಲ್ಸಿಯಸ್ ಮಾರ್ಚ್ ಒಂದರಂದು ದಾಖಲಾಗಿದೆ. ದಿನೆ ದಿನೆ ತಾಪಮಾನ ಏರಿಕೆ ಕಂಡು ಬರುತ್ತಿದ್ದು ಕರಾವಳಿಗರು ಬಿಸಿಗಾಳಿ, ನೆತ್ತಿ ಸುಡುವ ಬಿಸಿಲ ಹೊಡೆತ್ತಕ್ಕೆ ತತ್ತರಿಸಿ ಕಂಗಾಲಾಗಿದ್ದಾರೆ. ಈಗಿಂದಲೇ ಪ್ರಾಕೃತಿಕ ಸಮತೋಲನ ಕಾಯ್ದು ಕೊಳ್ಳುವತ್ತ ಚಿತ್ತಹರಿಸಬೇಕಾದ ಅಗತ್ಯವಿದೆ. ದಿನದಿಂದ ದಿನಕ್ಕೆ ಹವಾಮಾನ ವೈಪರೀತ್ಯವೂ ಜನಜೀವನದ ಮೇಲೆ ಅಡ್ಡ ಪರಿಣಾಮ ಬೀರಿದೆ. ತಾಪಮಾನ ಏರಿಕೆಯ ಹದಗೆಟ್ಟ ವಾತಾವರಣದ ಪರಿಣಾಮದಿಂದ ಪರಿಸರ ಸಂರಕ್ಷಿಸದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ.
ಪ್ರಕೃತಿಯ ಸಮತೋಲನಕ್ಕೆ ಪರಿಸರ ರಕ್ಷಣೆ ಪೂರಕ. ಪರಿಸರವನ್ನು ನಾವು ಅವಲಂಬಿಸಿದ್ದೇವೆಯೆ ಹೊರತು ಅದು ನಮ್ಮನ್ನು ಅವಲಂಬಿಸಿಲ್ಲ ಎಂಬುದನ್ನು ಮೊದಲು ಗಮನಿಸಿಕೊಳ್ಳಬೇಕು. ಭೂರಮೆಯ ಒಡಲು ವಿಸ್ಮಯಗಳ ಆಗರ ಆದರೆ ಮಾನವನ ಅತಿ ಆಸೆಯಿಂದ ಪ್ರಕೃತಿಯ ಮೇಲಿನ ವಿಧ್ವಂಸಕ ಕೃತ್ಯಗಳು ಮಿತಿ ಮೀರಿ ಅಕ್ರಮಣವಾಗುತ್ತಿದ್ದು ಎಲ್ಲವನ್ನು ಸಹಿಸಿಕೊಂಡ ಭೂಮಿ ಜೀವರಾಶಿಗಳನ್ನು ಕಾಪಾಡಿಕೊಂಡು ಬರುತ್ತಿದೆಯಾದರೂ ಒಂದಲ್ಲ ಒಂದು ರೂಪದಲ್ಲಿ ಆಕ್ರಮಿಸಿ ಬುದ್ದಿ ಕಲಿಸುತ್ತಿದೆ. ಭೂಮಿಯ ತಾಪಮಾನ ಏರುತ್ತದೆ ಎಂಬ ಸೂಕ್ಷ್ಮತೆಯ ಬಗ್ಗೆ ಚಿಂತಿಸದೆ ನಿಸರ್ಗದ ಉಳಿವಿಗಾಗಿ ಹೊರಡಬೇಕಾದ ಮಾನವನೆ ನಿಸರ್ಗದ ಅನಾಹುತಕ್ಕೆ ಕಾರಣವಾಗುತ್ತಿರುವುದು ವಿಪರ್ಯಾಸ. ಪೃಕೃತಿಯನ್ನು ಅರಿತು ಯಾಕೆ ಬಾಳುತ್ತಿಲ್ಲ ನಾವು. ಹಲವು ಪಾಠ ಕಲಿಸಿದ ಪ್ರಕೃತಿಯೆದುರು ಮೂರ್ಖರಾಗುವುದೇಕೆ?
ಕಂಡು ಕೇಳರಿಯದ ಭೀಕರ ಬಿಸಿಲ ಝಳ ಹಿಂದೆಂದೂ ಕಂಡರಿಯದಂತ ದಯನೀಯ ಸ್ಥಿತಿ ಇಂದು ಎಲ್ಲೆಡೆ ಆಧುನಿಕತೆಯ ಧಾವಂತದಲ್ಲಿ ನಗರವಾಗಿ ಪರಿವರ್ತಿಸಲ್ಪಟ್ಟ ಹಳ್ಳಿಗಳು ಕೂಡ ದಿನದಿಂದ ದಿನಕ್ಕೆ ಹೀನಾಯ ಸ್ಥಿತಿಯತ್ತ ಸಾಗುತ್ತಿದ್ದು ಗಿಡ, ಮರಗಳು ಭೂಮಿಯ ಒಡಲಿನ ನೀರನ್ನು ಬೇರಿನ ಮುಖಾಂತರ ಹೀರಿಕೊಂಡು ಎಲೆಗಳಿಂದ ಅದನ್ನೆಲ್ಲಾ ಆವಿಯಾಗಿಸಿ, ಆವಿ ಮೋಡವಾಗಿ, ಮೋಡ ಮಳೆಯಾಗಿ ಪುನಃ ಭೂಮಿಗೆ ಜೀವ ಜಗಕ್ಕೆ ತಂಪನ್ನೆತೆಯುತ್ತದೆ.
ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಲೇ ಇದ್ದು ಅಭಿವೃದ್ಧಿಯ ಹೆಸರಿನಲ್ಲಿ ಸ್ವಾರ್ಥ ಸಾಧನೆಗೆ ಹೊರಟಿದ್ದೇವೆ ಎನ್ನುವುದರ ಅರಿವಿಲ್ಲದೆ ಇಡುತ್ತಿರುವ ಹೆಜ್ಜೆಗಳು ನಿಸರ್ಗದ ಪರಿಸ್ಥಿತಿ ಕೆಡಲು ಕಾರಣವಾಗಿದೆ. ಪ್ರಕೃತಿ ಮುನಿದಾಗ ಮಾನವ ಬಹುದೊಡ್ಡ ಸವಾಲು ಎದುರಿಸಲೇ ಬೇಕಾಗುತ್ತದೆ. ಪರಿಸರನಾಶದ ನೇರ ಪರಿಣಾಮವೇ ಪ್ರಕೃತಿ ವಿಕೋಪಗಳಿಗೆ ಕಾರಣ. ಜಾಗತಿಕ ತಾಪಮಾನದ ಹೆಚ್ಚಳ, ಅಂರ್ತಜಲದ ಮಟ್ಟದಲ್ಲಿ ಕುಸಿತ, ಹವಾಮಾನ ವೈಪರೀತ್ಯ, ಪ್ರಾಕೃತಿಕ ದುರಂತ, ಹಸಿರುಗದ್ದೆ ಬೆಟ್ಟ- ಗುಡ್ಡಗಳು ಮಾಯವಾಗಿ ಪ್ರಾಕೃತಿಕ ವೈಭವಕ್ಕೆ ಕತ್ತರಿ ಬಿದ್ದಿದ್ದು ನಶಿಸುತ್ತಿರುವ ಅರಣ್ಯ ಪ್ರದೇಶ, ಬತ್ತುತಿರುವ ಜಲಮೂಲ ಹೆಚ್ಚುತ್ತಿರುವ ವಾಯುಮಾಲಿನ್ಯ ಇವೆಲ್ಲಾ ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ಇದಕ್ಕೆಲ್ಲ ಕಾರಣ ನಮ್ಮೆಲ್ಲರ ಜೀವನ ಶೈಲಿ ಹಾಗೂ ಆಡಂಬರದ ಬದುಕು ಕಟ್ಟಿಕೊಳ್ಳಲು ಬಳಸಿದ ಮಾರ್ಗದಲ್ಲಿ ಮುಂದೆ ಸಾಗಲು ಭೂರಮೆಯ ನಗ್ನಗೊಳಿಸಿದ್ದು.
ಪ್ರಕೃತಿಯ ಸಮತೋಲನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಾಕೃತಿಕ ಅನಾಹುತಗಳು ಖಂಡಿತ. ಇಂದು ಭೌತಿಕ, ಜೈವಿಕ ಹಾಗೂ ಭೌಗೋಳಿಕ ಪರಿಸರದ ಆರೋಗ್ಯ ಕೆಟ್ಟಿದ್ದು. ಕುಡಿವ ನೀರು ಸೇವಿಸುವ ಗಾಳಿ, ನಡೆದಾಡುವ ಭೂಮಿ ಮಲಿನಗೊಂಡು ತಾಪಮಾನ ಎರಿಕೆ ಆಗುತ್ತಿದೆ. ಸಮತೋಲನ ತಪ್ಪಿದ ಪರಿಸರದಿಂದ ಮುಂದಾಗ ಬಹುದಾದ ಅನಾಹುತಗಳು ಬಹುಗಂಭೀರ. ಪರಿಸರ ಹಾನಿ ಇದರ ಅರ್ಥವೇ ಜೀವ ಕೋಟಿಗಳ ಅವನತಿ. ಪರಿಸರ ರಕ್ಷಣೆಯ ಕೂಗು ನಿನ್ನೆ ಮೊನ್ನೆಯದಲ್ಲವಾದರೂ ಮಾನವರ ದುಷ್ಕೃತ್ಯಗಳನ್ನು ತಡೆಯಲಾರದೆ ಪ್ರಥ್ವಿ ನಲುಗುತ್ತಿದೆ.
ಮಾನವ ತನ್ನ ಪ್ರಗತಿಯ ಬಗ್ಗೆ ಯೋಚಿಸುತ್ತಾ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ ಪರಿಸರವನ್ನು ಸ್ವೇಚ್ಛೆಯಾಗಿ ನಾನಾ ತರದಲ್ಲಿ ಬಳಸಿಕೊಳ್ಳುತ್ತಿದ್ದಾನೆ. ಮಾನವನ ದುಷ್ಕತ್ಯಗಳನ್ನು ತಡೆಯಲಾರದೆ ಪೃಥ್ವಿ ನಲುಗುತ್ತಿದೆ. ಸೃಷ್ಟಿಯ ಚಲನೆಗೆ ಮನುಷ್ಯ ಜೀವನಕ್ಕೆ ಉಪಯುಕ್ತವಾಗಿರುವ ಪ್ರಕೃತಿ ಕಲಿಸಿದ ಪಾಠ ಮರೆಯದಿದ್ದರೆ ಉತ್ತಮ ಭವಿಷ್ಯ ನಮ್ಮ ಮುಂದೆ ಇದೆ. ಆದರೆ ಮಾನವ ನಿರ್ಮಿತ ಅನಾಹುತ ಒಂದೆ ಎರಡೆ ಪ್ರಕೃತಿ ವಿಕೋಪದ ಮುಂದೆ ಮನುಷ್ಯ ಶಕ್ತಿ ಗೌಣ. ಪ್ರಕೃತಿಯ ಮೇಲೆ ನಡೆಸಿದ ದುರಾಕ್ರಮಣ ಈ ಸ್ಥಿತಿಗೆ ಕಾರಣ. ಭೂಮಿಯಲ್ಲಿನ ಪರಿಸರ ಮನುಷ್ಯನ ಜೀವನಾಡಿ ಅವುಗಳ ಸಂರಕ್ಷಿಸಿ ಉಳಿಸುವ ಕೆಲಸ ಪ್ರತಿಯೊಬ್ಬ ನಾಗರಿಕನದ್ದು ಆಗಿದೆ ಮಾನವ ಆರೋಗ್ಯವಾಗಿ ಬದುಕಲು ಬೇಕಾದ ಉತ್ತಮ ಪರಿಸರ, ಪರಿಶುದ್ಧ ಗಾಳಿ,ನೀರು ಸಿಗಲೇಬೇಕೆಂದರೆ ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಲೇಬೇಕು.
ಭೂಮಿ ಹಾಗೂ ಪರಿಸರ ಮುಂದಿನ ತಲೆಮಾರಿನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಇದರ ದುರ್ಬಳಕೆ ಅನಾಹುತಕ್ಕೆ ಆಹ್ವಾನ. ಮಾನವ ವಿಕಾಸದತ್ತ ಸಾಗುತ್ತಾ ಹೋದಂತೆ ಪರಿಸರ ಕಡೆಗಣಿಸಿ ಸ್ವಾರ್ಥ ಮೆರೆದು ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ತುಂಡರಿಸಿ ರಸ್ತೆ ಅಗಲಿಕರಣ, ಅಣೆಕಟ್ಟು, ಕಾಲುವೆ, ವಿದ್ಯುತ್ ಉತ್ಪಾದನೆ, ದೂರ ಸಂಪರ್ಕ ಮೊದಲಾದ ಕಾರಣದಿಂದ ಎಲ್ಲೆಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡು ಕಾಡುತ್ತಿರುವ ಬೆನ್ನಲ್ಲೇ ವಿಶ್ವಸಂಸ್ಥೆ ಪರಿಸರ ಸಂರಕ್ಷಣೆಯ ಕುರಿತು ಎಚ್ಚರಿಕೆ ನೀಡಿದ್ದು ಅರಣ್ಯ ಉಳಿಸಿ ಇಲ್ಲವೇ ಮುಂದಿನ ದಿನಗಳಲ್ಲಿ ಪರಿತಪಿಸ ಬೇಕಾಗುತ್ತದೆ ಎಂದು ತಿಳಿಸಿದೆ. ಭೂರಮೆಯ ಒಡಲು ವಿಸ್ಮಯಗಳ ಆಗರ ಅದರ ಸಂರಕ್ಷಣೆಯ ಅವಶ್ಯಕತೆ ತುಂಬಾ ಇದೆ.
ವಿಜ್ಞಾನ ಹಾಗೂ ತಂತ್ರಗಾರಿಕೆಯಲ್ಲಿ ಅಮೋಘ ಆವಿಷ್ಕಾರಗಳನ್ನು ಮಾಡುವ ಕನಸಿನಲ್ಲಿ ಪ್ರಗತಿ ಎಂಬ ಹಣೆಪಟ್ಟಿ ಸೇರಿಸಿಕೊಂಡು ಕೈಗಾರಿಕೆಗಳಿಂದಾಗಿ ಫಲವತ್ತಾದ ಭೂಮಿ ಕಳಕೊಂಡೆವು. ಕಾಲ ಇನ್ನೂ ಮಿಂಚಿಲ್ಲ ನಿರ್ಲಪ್ತತೆಯಿಂದ ಕುಳಿತು ಕೊಂಡರೆ ನಮ್ಮ ಭೂಮಿಯನ್ನು ರಕ್ಷಿಸುವವರು ಯಾರು? ಪ್ರಕೃತಿಯ ಮೇಲೆ ಮನುಷ್ಯ ಮಾಡುವ ಹಸ್ತ ಕ್ಷೇಪವನ್ನು ನಿಲ್ಲಸಬೇಕು. ಮಾನವ ಕುಲ ನೆಮ್ಮದಿಯಿಂದ ಉಸಿರಾಡ ಬೇಕಾದರೆ ಅರಣ್ಯ ಹಾಗೂ ಜೀವ ವೈವಿಧ್ಯತೆಯ ರಕ್ಷಣೆ ಅಗತ್ಯ. ಕೃಷಿ ಭೂಮಿ ಹಡಲು ಬೀಳಿಸಿ ಸ್ವಾರ್ಥ ದುರಾಶೆಗೆ ಗುಡ್ಡ, ಬೆಟ್ಟ, ನದಿಗಳನ್ನು ತನಗೆ ಹೇಗೆ ಬೇಕೊ ಹಾಗೆ ಉಪಯೋಗಿಸುತ್ತಾ ಹೋದರೆ ಪ್ರಕೃತಿ ಖಂಡಿತವಾಗಿ ಕಠಿಣ ಪಾಠಕಲಿಸುತ್ತದೆ ಮುನ್ನೆಚ್ಚರಿಕೆಯ ಗಂಟೆಯಾಗಿ ನಾವೆಲ್ಲರೂ ಜಾಗ್ರತರಾದರೆ ಭೂಮಿ ಉಳಿದಿತು. ದಿನೆ ದಿನೆ ಏರುತ್ತಿರುವ ತಾಪಮಾನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕ ಬೇಕಾಗಿದೆ.ಭತ್ತದ ಕಣಜವಾಗಿದ್ದ ನಮ್ಮೆಲ್ಲರ ಊರುಕೇರಿಗಳು ಇಂದು ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಾಗಿ ಉಪಯೋಗಿಸಿ ಆಧುನಿಕ ಕೃಷಿಯ ಭ್ರಾಮಕ ಲೋಕದ ಆಕರ್ಷಣೆಯಿಂದ ಭೂಮಿಗೆ ರಾಸಾಯನಿಕ ಗೊಬ್ಬರ, ಕೀಟ ನಾಶಕಗಳನ್ನು ಸುರಿದು ಫಲವತ್ತತೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಭೂಮಾತೆಯ ಒಡಲು ವಿಷವಾಗುತ್ತಿದೆ. ಒಟ್ಟಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಸ್ವಾರ್ಥ ಸಾಧನೆಗೆ ತೊಡಗಿ ಪ್ರಕೃತಿ ವಿನಾಶಕ್ಕೆ ನಾಂದಿ ಹಾಡಿದ ಮಾನವ.
ಜೀವವೈವಿಧ್ಯ ಸಂಪತ್ತು ತುಂಬುವ ಅರಣ್ಯಸಂಪತ್ತನ್ನು ವ್ಯವಹಾರಿಕವಾಗಿ ಬಳಸಿದನೊ ಆಗಿನಿಂದಲೇ ಇಂತಹ ಪೃಕೃತಿ ವಿಕೋಪಗಳನ್ನು ಕಾಣುತ್ತಾ ಬಂದಿದೆ. ಭಾರಿ ಪ್ರಮಾಣದಲ್ಲಿ ಅರಣ್ಯನಾಶ ಮಿತಿಮೀರುತ್ತಿರುವ ವಾಣಿಜ್ಯಬೆಳೆ ಮನುಷ್ಯನಲ್ಲಿ ಹೆಮ್ಮರವಾಗಿ ಬೆಳೆದ ದುರಾಶೆ ಎಂತಹ ಹೀನಕೃತ್ಯಕ್ಕು ಪ್ರೇರೇಪಿಸುತ್ತದೆ. ಒಂದು ಕಾಲದಲ್ಲಿ ನಮ್ಮ ನಾಡು ಕೆರೆಗಳ ತಾಣ ವಾಗಿತ್ತು. ಪ್ರತಿಯೊಂದು ಊರಿನಲ್ಲಿ ತುಂಬಿ ತುಳುಕುವ ಕೆರೆಗಳಲ್ಲಿ ಕಮಲದ ಹೂ ಅರಳಿ ಚೆಲುವು ಸೂಸುತ್ತಿದ್ದವು. ವೈವಿಧ್ಯಮಯ ಜೀವರಾಶಿಗಳಿಗೆ ಆಶ್ರಯವಿದ್ದ ಕೆರೆಗಳು ಮಾಯವಾಗುತ್ತಿದೆ. ಮೂರು ಬೆಳೆಗೆ ಆಸರೆಯಾಗಿದ್ದ ಕೆರೆ ಕಾಲಕಾಲಕ್ಕೆ ಹೂಳು ತೆಗೆದು ನಿರ್ವಹಣೆ ಮಾಡದೆ ಬತ್ತಿ ಹೋಗಿದೆ . ಸುತ್ತಮುತ್ತ ಪರಿಸರ ತಂಪಾಗಿರಿಸಿದ ಕೆರೆಗಳು ಮಾಯವಾಗಿ ವಾತಾವರಣ ಗಂಭೀರಗೊಳ್ಳುವ ಮುನ್ನ ಕಣ್ತೆರೆಯಬೇಕಾಗಿದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ