ನಾವು ಅಪರೂಪದಲ್ಲಿ ಅಪರೂಪವಾಗಿರುವ ಎರಡು ರೂಪಾಯಿ ವೈದ್ಯರು, ಐದು ರೂಪಾಯಿ ವೈದ್ಯರ ಬಗ್ಗೆಯೆಲ್ಲಾ ಕೇಳಿದ್ದೇವೆ. ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ಮಂಗಳೂರು ತಾಲೂಕಿನ ಉಚ್ಚಿಲ- ಕೆ.ಸಿ.ರೋಡ್ ಎಂಬಲ್ಲಿ ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಶೆಟ್ಟಿ ಡಾಕ್ಟರ್ರ ಬಗ್ಗೆಯೂ ಕೇಳಿದ್ದೆವು. ಇಂತವರಿಗಿಂತಲೂ ವಿಶಿಷ್ಟ ಉಚಿತ ಡಾಕ್ಟರ್ ಒಬ್ಬರು ಮಂಗಳೂರು ನಗರದಲ್ಲೇ ಇದ್ದಾರೆ. ಅವರೇ ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ.ಬಿ.ಸಂಜೀವ ರೈ.
ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಡೀನ್ ಆಗಿದ್ದು, ಅಕಾಡೆಮಿಕ್ ವಲಯದಲ್ಲಿ ಇವರ ಅತ್ಯುನ್ನತ ಸಾಧನೆಗಳಿಂದ ಮತ್ತು ಒಳ್ಳೆಯ ಮಕ್ಕಳ ತಜ್ಞರೆಂದು ಇವರು ಪ್ರಸಿದ್ಧರಾಗಿದ್ದರೂ ಇವರ ಮಾನವೀಯ ಸೇವೆಗಳು ಎಲ್ಲೂ ಪ್ರಚಾರಕ್ಕೆ ಬಂದಿಲ್ಲ. ಅವರು ತಾನು ನೀಡುತ್ತಿರುವ ಮಾನವೀಯ ಸೇವೆಯನ್ನು ಈವರೆಗೆ ಪ್ರಚಾರ ಮಾಡಿದ್ದೂ ಇಲ್ಲ. ಅವರದಕ್ಕೆ ಪ್ರಚಾರವನ್ನು ಬಯಸಿಯೂ ಇಲ್ಲ.
ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿರುವ ಮೆಡಿಕೇರ್ ಎಂಬ ಕಟ್ಟಡದ ಮಾಲಕರೂ ಆಗಿರುವ ಡಾ.ಬಿ.ಸಂಜೀವ ರೈ ಅದೇ ಕಟ್ಟಡದಲ್ಲಿ ತನ್ನದೊಂದು ಮಕ್ಕಳ ಚಿಕಿತ್ಸಾಲಯವನ್ನಿಟ್ಟು ವೃತ್ತಿ ನಿರತರಾಗಿದ್ದಾರೆ. ಅವರು ವೃತ್ತಿ ನಿರತರಾಗಿದ್ದಾರೆ ಎನ್ನುವುದಕ್ಕಿಂತಲೂ ಅಲ್ಲಿ ಅವರು ಸೇವೆ ನೀಡುತ್ತಿದ್ದಾರೆ ಎನ್ನುವುದು ಹೆಚ್ಚು ಸೂಕ್ತ. ಅವರು ತನ್ನ ಕ್ಲಿನಿಕಿಗೆ ಚಿಕಿತ್ಸೆಗೆಂದು ಬರುವ ಮಕ್ಕಳ ಹೆತ್ತವರಿಂದ ನಯಾ ಪೈಸೆಯ ಶುಲ್ಕ ಪಡೆಯುವುದಿಲ್ಲ. ಔಷಧಿಗಳನ್ನು ಫಾರ್ಮಸಿಗಳಿಗೆ ಬರೆದು ಕೊಡುತ್ತಾರೆ. ತನ್ನ ಬಳಿ ಸ್ಯಾಂಪಲ್ಗಳಿದ್ದರೆ ಅದನ್ನೂ ಉಚಿತವಾಗಿ ನೀಡುತ್ತಾರೆ. ಅಗತ್ಯ ಬಿದ್ದರೆ ಮಾತ್ರ ಔಷಧಿ ಬರೆಯುತ್ತಾರೆ. ಎಷ್ಟೋ ಮಕ್ಕಳಿಗೆ ಔಷಧಿಯೇ ಬೇಡ ಎನ್ನುತ್ತಾರೆ. ಆದರೆ ಈ ಡಾಕ್ಟರ್ ಔಷಧಿ ನೀಡುವುದಿಲ್ಲ ಎಂದು ಕೆಲವರಿಗೆ ಅಸಮಾಧಾನವಾಗುವುದೂ ಇದೆ. ವೃತ್ತಿಯನ್ನು ವಾಣಿಜ್ಯೀಕರಿಸದ್ದರಿಂದ ಅಗತ್ಯವಿರುವವರಿಗೆ ಮಾತ್ರ ಔಷಧಿ ಬರೆಯುತ್ತಾರೆ.
ಅವರಿಗೆ ತನ್ನ ಕಟ್ಟಡದಿಂದ ಬಾಡಿಗೆ ಬರುತ್ತದೆ, ಇನ್ನೊಂದೆಡೆ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಡೀನ್ ಆಗಿದ್ದುದರಿಂದ ಒಳ್ಳೆಯ ಸಂಬಳ ಬರುತ್ತದೆ. ಈ ನೆಲೆಯಲ್ಲಿ ತನ್ನಿಂದ ಸಮಾಜಕ್ಕೆ ಒಂದಿಷ್ಟು ಸೇವೆಯಿರಲಿ ಎಂದು ಅವರು ಶುಲ್ಕವನ್ನೇ ಪಡೆಯದೆ ಸೇವೆ ನೀಡುತ್ತಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ಬೂಡಿಯಾರ್ ಎಂಬ ಹಳ್ಳಿಯವರಾದ ಇವರದ್ದು ಪ್ರತಿಷ್ಠಿತ ಬಂಟ ಮನೆತನ. ಆದರೆ ಬಂಟರ ಗುತ್ತಿನ ಗತ್ತಾಗಲಿ, ಪ್ರತಿಷ್ಟಿತ ವೈದ್ಯಕೀಯ ಕಾಲೇಜೊಂದರ ಶೈಕ್ಷಣಿಕ ಮುಖ್ಯಸ್ಥನೆಂಬ ಅಹಂ ಆಗಲೀ ಡಾ.ಬಿ.ಸಂಜೀವ ರೈಯವರ ಮಾತಿನಲ್ಲೋ, ವರ್ತನೆಯಲ್ಲೋ ಕಾಣಲು ಸಾಧ್ಯವಿಲ್ಲ. ಅವರು ಫಾದರ್ ಮುಲ್ಲರ್ಸ್ ಕಾಲೇಜಿನ ಡೀನ್ ಆಗಿದ್ದ ಕಾಲದಲ್ಲಿ ಅದೆಷ್ಟೋ ಬಡವರಿಗೆ ಆಸ್ಪತ್ರೆಯಲ್ಲಿ ಸಹಾಯ ಮಾಡುತ್ತಿದ್ದರೆನ್ನುವುದನ್ನು ಹಲವರಿಂದ ಕೇಳಿ ಬಲ್ಲೆ.
ಫಾದರ್ ಮುಲ್ಲರ್ಸ್ ಕಾಲೇಜಿನಲ್ಲಿ, ಆಸ್ಪತ್ರೆಯಲ್ಲಿ ಚಿಕ್ಕ ಪುಟ್ಟ ಗುಮಾಸ್ತ, ಜವಾನ, ಹೌಸ್ ಕೀಪಿಂಗ್ ಹುದ್ದೆಗಳಿಗಾಗಿ ಅರ್ಜಿ ಹಾಕುವವರಿಗೆ ಸ್ವಯಂ ಆಸಕ್ತಿಯಿಂದ ಉದ್ಯೋಗವನ್ನೂ ಕೊಡಿಸುತ್ತಿದ್ದರು. ಅಲ್ಲಿನ ಹೌಸ್ ಕೀಪಿಂಗ್ ಸಿಬ್ಬಂದಿಗಳೊಂದಿಗೂ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಎಂದು ಅವರ ಒಡನಾಟವಿದ್ದ ಕಸ ಗುಡಿಸುವ ಮಹಿಳೆಯರಿಂದ ಅರಿತು ಬಲ್ಲೆ. ಆದರೆ ಅವರು ಯಾವತ್ತೂ ತಾನು ಮಾಡಿದ ಉಪಕಾರಗಳನ್ನು ಹೇಳಿಕೊಂಡು ನಡೆದವರಲ್ಲ.
ಕೆಲವು ವೈದ್ಯರ ಧನದಾಹದಿಂದ ವೈದ್ಯರೆಂದರೆ ಹಾಗೆಯೇ ಜನರನ್ನು ಸುಲಿಯಲೆಂದೇ ಇರುವವರು ಎಂಬ ಆರೋಪವಿರುವ ಈ ಕಾಲದಲ್ಲೂ ಮಂಗಳೂರಿನಂತಹ ವಾಣಿಜ್ಯ ನಗರದಲ್ಲಿ ಇಂತಹ ಮಾನವೀಯ ಮುಖದ ವೈದ್ಯರಿದ್ದಾರೆ ಎಂದರೆ ಎಂತವರಿಗೂ ಆಶ್ಚರ್ಯವಾಗದಿರದು. ಡಾ.ಬಿ.ಸಂಜೀವ ರೈ ಯವರಂತಹವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ.