ಹೈಕೋರ್ಟು ನ್ಯಾಯಮೂರ್ತಿಯಾಗಿ ರಾಜೇಶ್ ರೈ ಕಲ್ಲಂಗಳ ಅವರು ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯ ಪಾಲರಿಂದ ಮುಖ್ಯಮಂತ್ರಿಗಳ ಮತ್ತು ಮುಖ್ಯ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೈಕೋರ್ಟು ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರಿಗೆ ಜಯಕರ್ನಾಟಕ ಸಂಘಟನೆಯ ಕೃಷ್ಣಾನಂದ ಶೆಟ್ಟಿ ಅವರು ಅವರ ಕಚೇರಿಗೆ ತೆರಳಿ ಶುಭ ಹಾರೈಸಿದರು.

ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕಲ್ಲಂಗಳ ನಿವಾಸಿಯಾಗಿರುವ ರಾಜೇಶ್ ರೈ ಕಲ್ಲಂಗಳ (48) ಅವರು ಹೈಕೋರ್ಟು ನ್ಯಾಯಮೂರ್ತಿಯಾಗಿ ಅತೀ ಸಣ್ಣ ವಯಸ್ಸಿನಲ್ಲಿ ಆಯ್ಕೆಗೊಂಡು, ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಥಮ ಹಾಗೂ ಅತೀ ಚಿಕ್ಕ ವಯಸ್ಸಿನ ಹೈಕೋರ್ಟು ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ನೇರವಾಗಿ ಅತೀ ಕಿರಿಯ ವಯಸ್ಸಿನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲಿಗರಾಗಿದ್ದಾರೆ. ರಾಜೇಶ್ ರೈ ಕಲ್ಲಂಗಳ ಅವರು ಬಾಲ್ಯದಿಂದಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜಪರ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ಕಲಾಪೋಷಕರಾಗಿರುವ ಇವರು ಯಕ್ಷಗಾನ ಮತ್ತು ಇತರ ಕಲೆಗಳ ಬಗ್ಗೆ ಬಹಳಷ್ಟು ಅಭಿಮಾನ ಹೊಂದಿರುತ್ತಾರೆ.
ಕಳೆದ 23 ವರ್ಷಗಳಿಂದ ಬೆಂಗಳೂರಿನಲ್ಲಿರುವ ಇವರು ಪತ್ನಿ ರೇಷ್ಮಾ ರಾಜೇಶ್ ಮತ್ತು ಮಕ್ಕಳಾದ ಸಾನಿಧ್ಯ ಆರ್.ರೈ ಮತ್ತು ಶಾಶ್ವತ್ ಆರ್.ರೈ ಜೊತೆಗೆ ನೆಲೆಸಿದ್ದಾರೆ. ರಾಜೇಶ್ ರೈ ಅವರ ಸಹೋದರ ಸತೀಶ್ ರೈ ಅವರು ಬಂಟ್ಸ್ ಅಸೋಸಿಯೇಷನ್ ಪುಣೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.





































































































