ಇಂದು ಎಲ್ಲರ ಮನೆಯಲ್ಲೂ ಸಕ್ಕರೆ ಕಾಯಿಲೆ ತಳ ಊರಿದೆ. ಹೊತ್ತು ಹೊತ್ತಿಗೆ ಮಾತ್ರೆ, ವ್ಯಾಯಾಮ, ಪಥ್ಯ- ಇವು ಶುಗರ್ ಪೇಷೆಂಟ್ಗಳನ್ನು ಹೈರಾಣಗೊಳಿಸಿದೆ. ಒಮ್ಮೆ ಶುಗರ್ ಬಂದ್ರೆ ಜೀವ ಇರುವ ತನಕ ಹೋಗೋದೇ ಇಲ್ಲ ಎಂಂದು ಎಲ್ಲರೂ ನಂಬಿದ್ದಾರೆ. ಆದರೆ, ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಅವರು ಮಧುಮೇಹವನ್ನು ಸಂಪೂರ್ಣವಾಗಿ ಗೆದ್ದಿದ್ದಾರೆ. ತಮ್ಮ ದೇಹವನ್ನೇ ಪ್ರಯೋಗಕ್ಕೆ ಗುರಿಪಡಿಸಿ, ‘ರಿವರ್ಸ್ ಡಯಾಬಿಟಿಸ್’ ಅಳವಡಿಸಿಕೊಂಡು ಈ ಸಾಧನೆ ಮಾಡಿದ್ದಾರೆ. ಶೆಟ್ಟರು ಆ ರಹಸ್ಯವನ್ನು ಇಲ್ಲಿ ತೆರೆದಿಟ್ಟಿದ್ದಾರೆ…
ಇಂದು ಎಲ್ಲರ ಮನೆಯಲ್ಲೂ ಸಕ್ಕರೆ ಕಾಯಿಲೆ ತಳ ಊರಿದೆ. ಹೊತ್ತು ಹೊತ್ತಿಗೆ ಮಾತ್ರೆ, ವ್ಯಾಯಾಮ, ಪಥ್ಯ- ಇವು ಶುಗರ್ ಪೇಷೆಂಟ್ಗಳನ್ನು ಹೈರಾಣಗೊಳಿಸಿದೆ. ಒಮ್ಮೆ ಶುಗರ್ ಬಂದ್ರೆ ಮತ್ತೆ ಹೋಗೋದೇ ಇಲ್ಲ ಎಂದು ಎಲ್ಲರೂ ನಂಬಿದ್ದಾರೆ. ಆದರೆ, ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಅವರು ಮಧುಮೇಹವನ್ನು ಸಂಪೂರ್ಣವಾಗಿ ಗೆದ್ದಿದ್ದಾರೆ. ತಮ್ಮ ದೇಹವನ್ನೇ ಪ್ರಯೋಗಕ್ಕೆ ಗುರಿಪಡಿಸಿ, ‘ರಿವರ್ಸ್ ಡಯಾಬಿಟಿಸ್’ ಅಳವಡಿಸಿಕೊಂಡು ಈ ಸಾಧನೆ ಮಾಡಿದ್ದಾರೆ. ಶೆಟ್ಟರು ಆ ರಹಸ್ಯವನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಇಪ್ಪತ್ತೇಳು ವರುಷಗಳ ಹಿಂದಿನ ಕಥೆ. ಆಗ ನಂಗಿನ್ನೂ ವಯಸ್ಸು ನಲ್ವತ್ತೆರಡು. ಸ್ವತಃ ವೈದ್ಯನಾಗಿದ್ದ ಕಾರಣ ಫಿಟ್ ಆ್ಯಂಡ್ ಫೈನ್ ಆಗಿಯೇ ಇದ್ದೆ. ನಿತ್ಯವೂ ವರ್ಕೌಟ್ ತಪ್ಪಿಸಿದ್ದೇ ಇಲ್ಲ. ನಿಮ್ಗೆ ಗೊತ್ತಾ? ದೇಹದಲ್ಲಿಒಂದು ಸಣ್ಣ ಆತಂಕವೂ ಇರಲಿಲ್ಲ. ಕನ್ನಡಿ ಮುಂದೆ ನಿಂತಾಗ ಯಾವ ಹೀರೋಗೂ ಕಮ್ಮಿಯಿಲ್ಲಅನ್ನೋ ಭಾವ ಉಕ್ಕಿ, ‘ಹೆಲ್ತಿ ಮ್ಯಾನ್, ಹೆಲ್ತಿ ಡಾಕ್ಟರ್’ ಎನ್ನುತ್ತಾ ಎದೆ ಉಬ್ಬಿಸಿಕೊಳ್ತಿದ್ದೆ.
ನನ್ನ ದೇಹದೊಳಗೆ ಡಯಾಬಿಟಿಸ್ ಇದ್ದಿದ್ದು ನಂಗೆ ಗೊತ್ತೇ ಇರಲಿಲ್ಲ. ಒಮ್ಮೆ ಪರೀಕ್ಷೆಯಲ್ಲಿ ಮಧುಮೇಹ ಇರೋದು ಖಾತ್ರಿಯಾಗಿ ನಿಮ್ಮಂತೆ ನಾನೂ ಗಾಬರಿಬಿದ್ದೆ. ‘‘ಶೆಟ್ರೇ… ಸಕ್ರೆ ಕಾಯಿಲೆ ಬಂದ್ರೆ ಜೀವನ ಪರ್ಯಂತ ಮಾತ್ರೆ ನುಂಗ್ಬೇಕ್ರೀ…’’ ಎಂದು ಕಂಡಕಂಡವರೆಲ್ಲ ಬಿಟ್ಟಿ ಸಲಹೆ ಕೊಡ್ತಿದ್ರು. ಜಗತ್ತೆಲ್ಲ ಹೇಳಿದ ಮೇಲೆ ಇನ್ನು ನಂದೇನು? ನಾನೂ ಸೂಕ್ತ ಮಾತ್ರೆಗಳನ್ನು ಗುಳಕ್ಕನೆ ನುಂಗ್ತಿದ್ದೆ. ನಿತ್ಯವೂ ಬೆವರಿಳಿಸುವ ಕಸರತ್ತು ನಡೆಸ್ತಿದ್ದೆ. ಕುಚ್ಚಲಕ್ಕಿ ಅನ್ನ ಪ್ರಿಯನಾಗಿದ್ದ ನಾನು ಅದನ್ನೂ ದೂರವಿಟ್ಟೆ. ಕಟ್ಟುನಿಟ್ಟಾದ ಪಥ್ಯ. ಎಲ್ಲ ಸರ್ಕಸ್ ಮಾಡಿದ ಮೇಲೂ ಒಮ್ಮೊಮ್ಮೆ ಸಕ್ಕರೆಮಟ್ಟ ಕಂಟ್ರೋಲ್ಗೆ ಬರೋದು, ಮತ್ತೊಮ್ಮೆ ಮೇಲೇರೋದು, ಇನ್ನೂ ಕೆಲವೊಮ್ಮೆ ಇಳಿಯೋದು ಆಗ್ತಲೇ ಇತ್ತು. ನಿಜಕ್ಕೂ ರೋಸಿ ಹೋಗಿದ್ದೆ. ಈ ಸಕ್ಕರೆ ಕಾಯಿಲೆ ಜತೆ ಜೀವನಪೂರಾ ಹೆಜ್ಜೆ ಹಾಕ್ಬೇಕಲ್ಲ ಅಂತನ್ನಿಸಿ ಬೇಸರ ಆಗ್ತಿತ್ತು.
ಅಚ್ಚರಿ ಗೊತ್ತಾ? ಕಳೆದ ಒಂದು ವರ್ಷದಿಂದ ನಂಗೆ ಸಕ್ಕರೆ ಕಾಯಿಲೆಯೇ ಇಲ್ಲ! ಡಯಾಬಿಟಿಸ್ ಗೆದ್ದಿದ್ದೇನೆ. ಇದು ಉತ್ಪ್ರೇಕ್ಷೆಯಲ್ಲ. ಒಬ್ಬ ವೈದ್ಯನಾಗಿ ನನ್ನ ದೇಹವನ್ನೇ ನಾನು ಪ್ರಯೋಗಕ್ಕೆ ಒಡ್ಕೊಂಡು ಈ ಸಫಲತೆ ಕಂಡಿದ್ದೇನೆ. ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವ ಮಾತು ಅಕ್ಷರಶಃ ನಿಜ. ಊಟ ಹೇಗೆ? ಎಷ್ಟು? ಯಾವುದನ್ನು ತಿನ್ಬೇಕು ಅನ್ನೋದನ್ನು ತಿಳಿದುಕೊಂಡ್ರೆ ಸುಲಭವಾಗಿ ಸಕ್ಕರೆ ಕಾಯಿಲೇನ ಸೋಲಿಸ್ಬಹುದು. ಇದು ನಾನು ನನ್ನ ಪ್ರಯೋಗವಾದ ‘ರಿವರ್ಸ್ ಡಯಾಬಿಟಿಸ್’ನಿಂದ ಕಲಿತ ಪಾಠ. ಆ ರಹಸ್ಯ ಏನು ಅನ್ನೋದನ್ನು ನಿಮ್ಗೆ ಒಂದೊಂದಾಗಿ ಹೇಳ್ತಾ ಹೋಗ್ತೀನಿ ಕೇಳಿ…
ಏನು ರಿವರ್ಸ್ ಡಯಾಬಿಟಿಸ್?
ಇದು ನಾನು ಅಳವಡಿಸಿಕೊಂಡ ಆಹಾರ ಕ್ರಮ. ಮಧುಮೇಹ ಹಿಂದಿರುಗಿಸುವ ಪ್ರಕಿಯೆಯಲ್ಲಿ ಯಾವುದೇ ಔಷಧಿ ಇಲ್ಲ. ಕೇವಲ ಆಹಾರ ಪದ್ಧತಿ ಮೂಲಕ ಸಕ್ಕರೆ ಕಾಯಿಲೆಯನ್ನು ಸಂಪೂರ್ಣ ಗೆಲ್ಲಬಹುದು. ಯಾರು ಬೇಕಾದರೂ ಇದನ್ನು ಮಾಡಬಹುದು. ದಿನನಿತ್ಯ ಸೇವಿಸೋ ಆಹಾರದಲ್ಲಿಯೇ, ಆಯ್ಕೆ ಮಾಡಿಕೊಂಡು ಸೇವಿಸುವುದೊಂದೇ ಡಯಾಬಿಟಿಸ್ ಗೆಲ್ಲೋ ಸರಳ ಸೂತ್ರ. ಇನ್ನೊಂದು ಸೀಕ್ರೆಟ್ ಹೇಳಲೇ… ರಿವರ್ಸ್ ಡಯಾಬಿಟಿಸ್ಗೆ ನೀವು ಹೆಚ್ಚು ದುಡ್ಡು ಸುರಿಯೋ ಅವಶ್ಯಕತೆಯೇ ಇಲ್ಲ.
ಇದು ನಿಮ್ಗೆ ಮೊದಲು ಗೊತ್ತಿರ್ಲಿ…
ನಾವು ದಿನನಿತ್ಯ ಅಗತ್ಯಕ್ಕಿಂತಲೂ ಕಾರ್ಬೋಹೈಡ್ರೇಟ್ ತಿನ್ತಿದ್ದೇವೆ. ಅಕ್ಕಿ, ಗೋಧಿ ಮತ್ತು ರಾಗಿಯಿಂದ ಮಾಡಿದ ಎಲ್ಲ ಬಗೆಯ ಪದಾರ್ಥಗಳು, ಸಿಹಿ ತಿನಿಸುಗಳೆಲ್ಲಾ ಕಾರ್ಬೋಹೈಡ್ರೆಟ್ಗಳು. ನಮ್ಮ ಬಾಡೀಲಿ ಸಮರ್ಪಕ ಇನ್ಸುಲಿನ್ ಉತ್ಪಾದನೆಯಾದ್ರಷ್ಟೇ ಇವು ಜೀರ್ಣ ಆಗ್ತವೆ. ಆದರೆ, ನಾವು ನಮ್ಮ ದೇಹಕ್ಕೆ ಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಕಾರ್ಬೋಹೈಡ್ರೆಟ್ ಆಹಾರ ತಿನ್ತಿದ್ದೇವೆ. ಎಷ್ಟೋ ಸಲ ಈ ಕಾರ್ಬೋಹೈಡ್ರೆಟ್ ಪ್ರಮಾಣ ಶೇಕಡಾ.80ಕ್ಕೂ ಮೀರಿ ನಮ್ಮ ದೇಹ ಸೇರುತ್ತೆ. ಆದರೆ, ನಮ್ಗೆ ಬೇಕಿರೋದು ಕೇವಲ ಶೇ. 40-60ರಷ್ಟು ಮಾತ್ರ. ಇದನ್ನೆಲ್ಲ ಜೀರ್ಣಪಡಿಸಲು ಇನ್ಸುಲಿನ್ ಅಗತ್ಯವಿದೆ. ಇದು ಉತ್ಪಾದನೆಯಾಗದೇ ಇದ್ದಾಗ ಮಧುಮೇಹ ಹೆಚ್ಚುತ್ತೆ.
ನಾನು ಸಕ್ಕರೆ ಅಂಶವಿರುವ ಆಹಾರವನ್ನು ಸಂಪೂರ್ಣ ಬಿಟ್ಟಿದ್ದೇನೆ. ಸಕ್ಕರೆ ಮಿಶ್ರಿತ ಚಹಾ, ಹಣ್ಣಿನ ಜ್ಯೂಸ್, ಕೋಲಾ, ಸಿಹಿ ಪದಾರ್ಥಗಳನ್ನು ಅಪ್ಪಿತಪ್ಪಿಯೂ ತಿನ್ನೋದಿಲ್ಲ. ಊಟ, ತಿಂಡಿ ಮಾಡೋಕ್ಕೂ ಮುಂಚೆ ಒಂದು ಬೌಲ್ ತರಕಾರಿಗಳನ್ನು ಗಾಣದ ಎಣ್ಣೆ ಅಥವಾ ತುಪ್ಪದಲ್ಲಿ ಚೆನ್ನಾಗಿ ಬೇಯಿಸಿ ತಿನ್ನೋದನ್ನು ರೂಢಿಸಿಕೊಂಡಿದ್ದೇನೆ. ಸಂಸ್ಕರಿಸಿದ ಎಣ್ಣೆ ಬಳಸೋದೇ ಇಲ್ಲ. ಅನ್ನ, ರಾಗಿ, ಜೋಳ, ಗೋಧಿ ಅಗತ್ಯಕ್ಕಿಂತ ಕಡಿಮೆ ಬಳಸ್ತೀನಿ. 1 ಬೌಲ್ ಅನ್ನ ತಿಂದ್ರೆ, 2 ಬೌಲ್ ತರಕಾರಿ ತಿನ್ತೀನಿ. ಇದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್ ಕಮ್ಮಿ ಆಗುತ್ತೆ.
ಚಿಕನ್, ಫಿಶ್ ಧಾರಾಳ
ಮೊಟ್ಟೆ, ನಾಟಿ ಕೋಳಿ, ಮಾಂಸ, ಮೀನುಗಳನ್ನು ಧಾರಾಳವಾಗಿ ತಿನ್ತೀನಿ. ಪ್ರತಿನಿತ್ಯ ತರಕಾರಿ ಜತೆ ಮೊಟ್ಟೆ ಹಾಕಿ ಸೇವಿಸ್ತೀನಿ. ಸಮಯಕ್ಕೆ ಸರಿಯಾಗಿ ಊಟ ಮಾಡುವ ಬದಲು, ಹಸಿವಾದಾಗ ಊಟ ಮಾಡೋದನ್ನು ರೂಢಿಸಿಕೊಂಡಿದ್ದೇನೆ. ಮೊದಲ 3-4 ತಿಂಗಳು ಈ ರೀತಿಯ ಆಹಾರ ಪದ್ಧತಿಗೆ ಹೊಂದಿಕೊಳ್ಳೋದು ಕಷ್ಟ ಆಗುತ್ತೆ. ಆದರೆ, ಒಮ್ಮೆ ಅಡ್ಜಸ್ಟ್ ಆದ್ರೆ ನಿತ್ಯ ಅಭ್ಯಾಸ ಆಗುತ್ತೆ. ಇದು ಡಯಾಬಿಟಿಸ್ ನಿಯಂತ್ರಿಸಲು ಇರೋ ಸಿಂಪಲ್ ಸೀಕ್ರೆಟ್.
ಮಾಂಸಾಹಾರ ಅಪಾಯ ಅಲ್ಲ
– ಆರೋಗ್ಯಕರ ಫ್ಯಾಟ್ ಆಹಾರ ಸೇವಿಸುವುದರಿಂದ ತೊಂದರೆ ಇಲ್ಲ. ತುಪ್ಪ, ಬೆಣ್ಣೆ ಸಹ ಆರೋಗ್ಯಕರ ಫ್ಯಾಟ್ಗಳು.
– ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಹಾನಿಕರ ಅನ್ನೋ ತಪ್ಪು ಭಾವ ಹಲವರಲ್ಲಿದೆ. ಆದರೆ, ನಾನ್ವೆಜ್ ನನ್ನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ಇದನ್ನು ಎಷ್ಟು ಪ್ರಮಾಣದಲ್ಲಿ ತಿನ್ತೀವಿ ಅನ್ನೋದಷ್ಟೇ ಮುಖ್ಯ.
– ಇನ್ನೊಂದು ವಿಚಾರ ಅಂದ್ರೆ, ನಾವು ನಾನ್ವೆಜ್ ಜತೆಗೆ ಕಾರ್ಬೋಹೈಡ್ರೇಟ್ ಅಂಶ ಅಧಿಕವಾಗಿರುವ ಮುದ್ದೆ, ಅನ್ನ, ಚಪಾತಿ, ದೋಸೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತೇವೆ. ಆಗ ಮಾತ್ರವೇ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತೆ. ಇಲ್ಲದಿದ್ದರೆ ಏನೂ ತೊಂದರೆ ಇಲ್ಲಪ್ಪಾ.
ನಾನು ಹೆಚ್ಚಾಗಿ ಸೇವಿಸೋ ಪದಾರ್ಥಗಳು
– ಪಾನೀಯಗಳು: ಗ್ರೀನ್ ಟೀ, ಗ್ರೀನ್ ಕಾಫಿ, ಹರ್ಬಲ್ ಟೀ, ಜೋನ್ ಬ್ರೋತ್, ಸಕ್ಕರೆ ರಹಿತ ಕಾಫಿ ಮತ್ತು ಟೀ
– ಒಣ ಬೀಜಗಳು: ಬಾದಾಮಿ, ವಾಲ್ನಟ್ಸ್, ಬ್ರಸಿಲ್ ನಟ್ಸ್, ಪೀಕಲ್ಸ್, ಪೈಸ್ ಬೀಜಗಳು
ಡೈರಿ ಉತ್ಪನ್ನಗಳು: ಬೆಣ್ಣೆ, ಚೀಸ್, ಪನ್ನೀರ್, ಕೆನೆ ಮೊಸರು, ತುಪ್ಪ, ಸಂಪೂರ್ಣ ಕೊಬ್ಬು ಇರುವ ಹಾಲು
ಪರ್ಯಾಯ ಡೈರಿ ಉತ್ಪನ್ನ: ತೆಂಗಿನಕಾಯಿ ಹಾಲು, ಸೋಯಾ ಹಾಲು, ಪೀನಟ್ ಬಟರ್, ಬಾದಾಮಿ ಹಾಲು.
ಎಣ್ಣೆಗಳು (ಗಾಣದ ಎಣ್ಣೆ): ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ, ಕನೋಲಾ ಎಣ್ಣೆ, ಸಾಸಿವೆ ಎಣ್ಣೆ.
ತರಕಾರಿಗಳು: ಎಲೆ ಕೋಸು, ಹೂ ಕೋಸು, ಮೆಣಸಿನ ಕಾಯಿ, ಬದಕನೆ ಕಾಯಿ, ಟೊಮೇಟೊ, ಹಸಿರು ಸೊಪ್ಪು, ಬೆಂಡೆಕಾಯಿ, ದಪ್ಪ ಮೆಣಸಿನಕಾಯಿ, ಸೌತೆಕಾಯಿ, ಈರುಳ್ಳಿ, ಅಣಬೆ.
ಹಣ್ಣುಗಳು: ಮರಸೇಬು, ತಾಳೆ ಹಣ್ಣು, ನಿಂಬೆ, ಬೆಟ್ಟದ ನೆಲ್ಲಿಕಾಯಿ, ನಕ್ಷತ್ರ ಹಣ್ಣು, ನೇರಳೆ ಹಣ್ಣು.
ಇವುಗಳನ್ನು ಕಂಪ್ಲೀಟಾಗಿ ಬಟ್ಬಿಟ್ಟೆ..
– ಸಕ್ಕರೆ ಪಾನೀಯಗಳು: ಹಣ್ಣಿನ ಪಾನೀಯ, ಎನರ್ಜಿ ಡ್ರಿಂಕ್ಸ್
ಬೇಳೆ-ಕಾಳುಗಳು: ಬೇಳೆಗಳು, ಸಿರಿಧಾನ್ಯಗಳು, ಓಟ್ಸ್, ಅವಲಕ್ಕಿ, ರವೆ, ಅಕ್ಕಿ ಮತ್ತು ಆಕ್ಕಿಯ ಉತ್ಪನ್ನಗಳು, ಸಿರಿಧಾನ್ಯ ಮತ್ತು ಸಿರಿಧಾನ್ಯದ ಉತ್ಪನ್ನಗಳು, ಗೋಧಿ ಮತ್ತು ಗೋಧಿಯ ಉತ್ಪನ್ನಗಳು, ರಾಗಿ ಮತ್ತು ರಾಗಿ ಉತ್ಪನ್ನಗಳು. ಹಣ್ಣುಗಳು: ಮಾವಿನ ಹಣ್ಣು, ಅನಾನಸ್, ಬಾಳೆಹಣ್ಣು, ಕಿತ್ತಳೆ ಹಣ್ಣು, ದ್ರಾಕ್ಷಿ, ಡ್ರೈಫ್ರೂಟ್ಸ್
ಮಾಂಸಗಳು: ಹೆಚ್ಚು ಸಂಸ್ಕರಿಸಿದ ಹಂದಿ ಮಾಂಸದ ಪದಾರ್ಥ.
– ಸಕ್ಕರೆ: ಪಾನೀಯಗಳು, ಚಾಕ್ಲೆಟ್, ಐಸ್ ಕ್ರೀಂ, ಪೇಸ್ಟ್ರಿಗಳು.
– ಇತರೆ: ಸಿಹಿಮೊಸರು, ಶೀಥಲೀಕರಿಸಿದ ಮೊಸರು, ಕೃತಕ ಸಿಹಿ, ಯಾವುದೇ ಕರಿದ ಪದಾರ್ಥ. ಬೇಕರಿ ಪದಾರ್ಥ: ಬ್ರೆಡ್/ ಬನ್/ ಬಿಸ್ಕತ್, ಕೇಕ್.
– ಎಣ್ಣೆ: ಸೂರ್ಯಕಾಂತಿ ಎಣ್ಣೆ , ಕಡಲೇಕಾಯಿ ಎಣ್ಣೆ, ಡಾಲ್ಡಾ, ಪಾಮ್ ಎಣ್ಣೆ.
ಮಧುಮೇಹ ಹಿಂದಿರುಗಿಸುವ ಚಿಕಿತ್ಸಾಲಯ
ಡಾ. ಭುಜಂಗ ಶೆಟ್ಟಿ ಅವರು ನಾರಾಯಣ ನೇತ್ರಾಲಯದಲ್ಲಿ‘ಮಧುಮೇಹ ಹಿಂದಿರುಗಿಸುವ ಚಿಕಿತ್ಸಾಲಯ’ ಎಂಬ ಪರಿಕಲ್ಪನೆ ಆರಂಭಿಸಿದ್ದಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಚಿಕಿತ್ಸಾಲಯದಲ್ಲಿಚಿಕಿತ್ಸೆ ಪಡೆದಿದ್ದು, 404 ಜನರು ಈಗಾಗಲೇ ಮಧುಮೇಹ ಗೆದ್ದಿದ್ದಾರೆ.
ನಾನೂ ಡಯಾಬಿಟಿಸ್ ಗೆದ್ದೆ!
ಹೆಚ್ಚಾಗಿ ತರಕಾರಿ ತಿನ್ನಬೇಕು. ಜತೆಗೆ ದೈಹಿಕ ವ್ಯಾಯಮ ಕೂಡ ಮಾಡಬೇಕು. ಕಟ್ಟುನಿಟ್ಟಿನಿಂದ ಮಧುಮೇಹ ಹಿಂದಿರುಗಿಸುವ ಸೂತ್ರವನ್ನು ಒಂದು ತಿಂಗಳು ಮಾಡಿದರೆ ಫಲಿತಾಂಶ ತಿಳಿಯುತ್ತದೆ. ಕಳೆದ 9 ವರ್ಷದಿಂದ ಮಧುಮೇಹದಿಂದ ಬಳಲುತ್ತಿದ್ದ ನಾನು, ಈಗ ಸಂಪೂರ್ಣ ಗುಣಮುಖಳಾಗಿದ್ದೇನೆ ಎಂದು ದಂತ ವೈದ್ಯೆ ಡಾ. ಮಮತಾ ಗಿರಿಧರ್ ಹೇಳಿದ್ದಾರೆ.