ಅನಾದಿ ಕಾಲದಿಂದಲೂ ದಕ್ಷಿಣ ಭಾರತದ ಜನರು ಪ್ರಕೃತಿಯ ಅರಾಧಕರಾಗಿದ್ದರು. ಪ್ರಾಚೀನ ಪರಂಪರೆಯ ಹಲವಾರು ಕ್ಷೇತ್ರಗಳು, ಭೂಮಿ ತಾಣಗಳು, ಹರಿಯುವ ನದಿಗಳು ಮುಂತಾದ ಹತ್ತು ಹಲವಾರು ಪ್ರಕೃತಿದತ್ತವಾದ ಪರಿಸರಗಳು ವಿವಿಧತೆಯಿಂದ ಪಾವಿತ್ರ್ಯತೆಯನ್ನು ಯಾ ಪರಂಪರೆಯನ್ನು ಹೊಂದಿತ್ತು. ಇಲ್ಲಿರುವ ವಿವಿಧ ಧರ್ಮಕ್ಷೇತ್ರಗಳು ತಮ್ಮದೇ ಆದ ವರ್ಚಸ್ಸಿನಲ್ಲಿ ಮೆರೆಯುತ್ತಿದೆ.
ಧಾರ್ಮಿಕ ಪರಂಪರೆಯನ್ನು ಅವಲೋಕಿಸುವಾಗ ಆಚರಣೆಯ ದೇವರ ಪೂಜಾ ವಿಧಿ-ವಿಧಾನಗಳಲ್ಲಿ ಕಾಲ ಚಕ್ರದಂತೆ ಯಾವುದೇ ಒಂದು ಸೀಮಿತ ಸಮುದಾಯಕ್ಕೆ ಅಂಟಿಕೊಳ್ಳದೆ ತಮ್ಮದೇ ಆದ ಬದಲಾವಣೆಯ ಆಚರಣೆಯ ರೀತಿಯನ್ನು ಅನುಸರಿಸುತ್ತಿರುವುದು ಇಂದಿನ ಶೈಲಿಯ ಪದ್ದತಿಯಾಗಿದೆ.
ಇದರಂತೆ ಕಳೆದ 17 ವರ್ಷಗಳ ಹಿಂದೆ ಮೀರಾರೋಡ್ ಸೆಕ್ಟರ್ 4ರ ಸಿ 19, ನಂ. 002 ನ ಪ್ರೇಮ್ ಜ್ಯೋತ್ ಸೊಸೈಟಿ ಮೀರಾರೋಡ್ ಇಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ಚಾಮುಂಡೇಶ್ವರೀ ಪ್ರಸನ್ನ ಎಂಬ ಸಾನಿಧ್ಯವು ಇದೀಗ ಭಕ್ತರಾಲಯವಾಗಿದೆ. ದಿನದಿಂದ ದಿನಕ್ಕೆ ಶ್ರೀ ಕ್ಷೇತ್ರವು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪಾಕಟಾಕ್ಷದ ಅನುಗ್ರಹ ಭಕ್ತಾಧಿಗಳಿಗೆ ಲಭ್ಯವಾಗುತ್ತಿದೆ. ಯಾವುದೇ ಪಂಗಡ ಯಾ ಜಾತೀಯತೆಯನ್ನು ಅನುಸರಿಸದೆ ಕ್ಷೇತ್ರದ ಅಭಯ ಹಸ್ತ ಪ್ರಸಾದದಿಂದ ತನ್ನ ನಿಜ ಲೀಲೆಯನ್ನು ನಂಬಿ ಬಂದ ಭಕ್ತರಿಗೆ ಇಂಬನ್ನು ಒದಗಿಸಿದೆ.
ಸಾಮಾನ್ಯ ರೀತಿಯ ಪೂಜೆ ಪುರಸ್ಕಾರಗಳಿಂದ ಪೀಡಿತ ಭಕ್ತರ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರತೀತಿ ಹೊಂದಿದೆ. ವಿವಾಹ ಅಡಚಣೆ, ದೈಹಿಕ ತೊಂದರೆ, ಸರ್ಪದೋಶ, ವಿದ್ಯಾಭ್ಯಾಸ, ಜಾಗ, ಉದ್ಯಮ ಮುಂತಾದ ಹತ್ತು ಹಲವಾರು ಸಮಸ್ಯೆಗಳ ಪರಿಹರಾದಿಗಳು ಶ್ರೀ ಕ್ಷೇತ್ರದ ಪ್ರಸಾದ ಸ್ವರೂಪವು ಭಾದಿತರಿಗೆ ಪುನರ್ಜನ್ಮ ನೀಡಿದೆ. ಇದರಿಂದಲೇ ಸಾವಿರಾರು ಭಕ್ತರು ಈ ತಾಣವನ್ನು ಧನ್ಯತಾ ಮನೋಭಾವದಿಂದ ಕಾಣುತ್ತಿದ್ದಾರೆ.
ವಾರದ ಪ್ರತೀ ಮಂಗಳವಾರ ಮತ್ತು ಶುಕ್ರವಾರದ ದಿನದಂದು ಸಂಜೆ ಭಜನಾ ಕಾರ್ಯಕ್ರಮದೊಂದಿಗೆ ದೇವಿ ದರ್ಶನ ಸೇವೆ ನಡೆಯುತ್ತಿದೆ. ಉಳಿದ ದಿನಗಳಲ್ಲಿ ಭಕ್ತರಿಗಾಗಿ ಸದಾ ತೆರೆಯಲ್ಪಟ್ಟಿರುವ ಈ ಕ್ಷೇತ್ರದಲ್ಲಿ ಕಷ್ಟ-ಸಂಕಷ್ಟಗಳ ಪರಿಹಾರ ಕಾರ್ಯಾದಿಗಳು ನಡೆಯುತ್ತಿದೆ.
ವರ್ಷದಲ್ಲಿ ನಾಗರ ಪಂಚಮಿ, ಗಣೇಶೋತ್ಸವ, ನವರಾತ್ರಿ ಉತ್ಸವ ಹಾಗೂ ಇನ್ನಿತರ ಧಾರ್ಮಿಕ ದಿನಗಳು ಮಾತ್ರವಲ್ಲದೆ ವಾರ್ಷಿಕ ಮಹಾಪೂಜೆ ಈ ಕ್ಷೇತ್ರದ ವಿಶೇಷ ಮೆರಗು.
ಈ ಕ್ಷೇತ್ರದ ಧಾರ್ಮಿಕ ರಕ್ಷಕ – ಸಂಸ್ಥಾಪಕ ಲಕ್ಷ್ಮಣ ಜೆ. ಶೆಟ್ಟಿಯವರು ಕಾರ್ಕಳದ ನಲ್ಲೂರಿನವರು. ತಂದೆ ಕೃಷಿಕರಾಗಿದ್ದರೂ ರಾಜನ್ ದೈವದ ಗಡಿ ಹಿಡಿದಿದ್ದವರು. ಲಕ್ಷ್ಮಣ ಶೆಟ್ಟಿಯವರ ಓದು ಪ್ರಾರ್ಥಮಿಕ ಶಿಕ್ಷಣದವರೆಗೆ ಮಾತ್ರ. 1983 ರಲ್ಲಿ ಮುಂಬಯಿಗೆ ಆಗಮಿಸಿದ ಇವರು ಪಾನ್ ಅಂಗಡಿಯಲ್ಲಿ ದುಡಿದು ಜೀವನ ನಿರ್ವಹಿಸುತ್ತಿದ್ದರು. ಬಾಲ್ಯದಿಂದಲೇ ಭಜನಾಸಕ್ತರಾದ ಇವರು ದೇವಿ ಆರಾಧಕರು. ಧಾರ್ಮಿಕ ಕ್ಷೇತ್ರಗಳಲ್ಲಿ ದೇವಿ ಇವರ ಮೈಮೇಲೆ ಬರುತ್ತಿದ್ದು ಪ್ರಾರಂಭದಿಂದಲೇ ಮೀರಾರೋಡ್ ನಲ್ಲಿಯೇ ವಾಸವಾಗಿದ್ದರು. ಹಲವಾರು ವರ್ಷಗಳ ಹಿಂದೆ ಒಂದು ದಿನ ದೇವಿ ಕನಸ್ಸಿನಲ್ಲಿ ಪ್ರತ್ಯಕ್ಷಳಾಗಿ ನೀನು ನೆಲೆ ನಿಂತ ಜಾಗದಲ್ಲಿಯೇ ನನ್ನನ್ನು ಪ್ರತಿಷ್ಟಾಪಿಸಿ ನನ್ನ ಸೇವೆಯನ್ನು ಸದಾ ಮಾಡುತ್ತಿರು ಎಂದು ಅಭಯ ಹಸ್ತದ ವರದಾನವಿತ್ತದ್ದು ಇವರ ಪಾಲಿನ ಸ್ಮರಣೀಯ.
ಅಂದಿನಿಂದ ಇಂದಿನವರೆಗೂ ದಿನನಿತ್ಯ ಪಾದರಕ್ಷೆಯನ್ನು ಧರಿಸದೆ ದೇವಿ ಕೈಂಕರ್ಯಗಳನ್ನು ಚಾಚೂ ತಪ್ಪದೆ ಪುಣ್ಯ ಕ್ಷೇತ್ರಗಳನ್ನು ಸುತ್ತುತ್ತಾ ಇದ್ದಾರೆ.
ಗಣೇಶಪುರಿ ನಿತ್ಯಾನಂದ ಸ್ವಾಮಿಯ ಪಾದಯಾತ್ರೆ, ಕಾಶಿ, ಶಬರಿಮಲೆ ಯಾತ್ರೆ ಸದಾ ಮಾಡುತ್ತಿರುವ ಇವರ ಕ್ಷೇತ್ರದಲ್ಲಿ ನಡೆಯುವ ಪೂಜಾ ವಿಧಿಗಳಿಗೆ ಹೆಸರಾಂತ ಪುರೋಹಿತರುಗಳನ್ನು ಕರೆಯಿಸಿ ಸಮರ್ಪಕವಾದ ದೇವಿಯ ಸೇವೆಯನ್ನು ಗೈಯ್ಯುತ್ತಿದ್ದಾರೆ.
ಸಮೂಹ ಭಜನೆ, ಸತ್ಯನಾರಾಯಣ ಮಹಾಪೂಜೆ, ಶನಿಪೂಜೆ ಈ ಕ್ಷೇತ್ರದ ವಿಶೇಷ ಪೂಜಾ ಪುರಸ್ಕಾರಗಳು. ರಾಜಕೀಯ ನೇತಾರಿಂದ ಸಾಮಾನ್ಯ ವರ್ಗದ ಭಕ್ತಾಧಿಗಳು ಈ ಕ್ಷೇತ್ರದ ಆರಾಧಕರು.
ಇದೇ ಬರುವ ಮಾ.5 ಆದಿತ್ಯವಾರದಂದು ಬೆಳಿಗ್ಗೆ 9 ರಿಂದ ಕ್ಷೇತ್ರದ 18ನೇ ವಾರ್ಷಿಕ ಉತ್ಸವ ಹಾಗೂ ಮಹಾಪೂಜೆಯು ನಡೆಯಲಿದೆ. ಅಂದು ಬೆಳಿಗ್ಗೆ ಅಲಕಾರ ಸೇವೆ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ದರ್ಶನ ಸೇವೆ, ವಿಜಯ್ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾಮೃತ, ಮಹಾಮಂಗಳಾರತಿ ಹಾಗೂ ಅನ್ನ ಪ್ರಸಾದ ಸಂತರ್ಪಣೆ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು.
ವೈ ಟಿ ಶೆಟ್ಟಿ ಹೆಜಮಾಡಿ