ಭಾರತೀಯರು ಆಚರಿಸುವ ಹಬ್ಬ ಹರಿದಿನಗಳು ಇಹ-ಪರ ಉನ್ನತಿಯ ಹಿನ್ನಲೆಯುಳ್ಳವು. ಹಿಂದೂ ಹಬ್ಬಗಳಲ್ಲಿ ಉಪವಾಸ, ಸಂಯಮ, ಮನೋನಿಯಂತ್ರ ಣ ನಿಷ್ಠೆಯಿಂದ ಆಚರಿಸುವುದನ್ನು ಕಾಣಬಹುದು. ಶಿವಭಕ್ತಿಯೊಂದಿಗೆ ವಿಷಕಂಠನ ಜಪಕ್ಕೆ ವೈಜ್ಞಾನಿಕ ಆಯಾಮವು ಇದ್ದು ಭಕ್ತರ ಇಷ್ಟಕೋರಿಕೆಯನ್ನು ನೆರವೇರಿಸುವ ಮಂಗಳ ಸ್ವರೂಪಿ ಶಿವಧ್ಯಾನ ಮಹಾಶಿವರಾತ್ರಿ ಆಚರಣೆಯ ಹಿಂದಿನ ಪ್ರತೀತಿ. ಪ್ರಕೃತಿ ಪುರುಷ ಲೀಲಾ ಫಲಶೃತಿಯಿಂದಲೆ ಈ ಜಗತ್ತು ನಿರ್ಮಾಣವಾಗಿ ಜಗತ್ತಿನ ಮಾತಾಪಿತರೆನಿಸಿದ ಶಿವ – ಪಾವರ್ತಿಯರ ಆರಾಧನಾ ದಿನವೆ ಮಹಾಶಿವರಾತ್ರಿ. ಈ ದಿನದಂದು ಮಹಾಶಿವನಿಗೆ ಒಂದುದಳ ಬಿಲ್ವಪತ್ರೆ ಅರ್ಪಿಸಿದರೆ ತೃಪ್ತನಾದ ಶಿವನ ಪೂರ್ಣಾನುಗೃಹ ಸಿಗುತ್ತದೆ ಎಂಬ ನಂಬಿಕೆ. ತನ್ನ ದೇಹದ ಅರ್ಧಭಾಗವನ್ನೆ ಹೆಂಡತಿಗೆ ಬಿಟ್ಟು ಕೊಡುವಷ್ಟು ಸಮಾನತೆ ಪ್ರತಿಪಾದಕ ಶಿವ ಪಾರ್ವತಿದೇವಿಯನ್ನು ವಿವಾಹವಾದ ದಿನವಿದು. ಕೈಲಾಸದಿಂದ ಭೂಮಿಗೆ ಶಿವನು ಆಗಮಿಸಿ ಸಕಲ ಇಷ್ಟಾರ್ಥ ಪೂರೈಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ.
ನಾಲ್ಕು ವೇದಗಳನ್ನು ಕದ್ದು ಸಮುದ್ರದಲ್ಲಿ ಅಡಗಿ ಕುಳಿತ ಸೋಮಾಕಾಸುರನನ್ನು ವಧಿಸಲು ವಿಷ್ಣುವು ಮತ್ಸ್ಯ ವತಾರತಳೆದು ನಾಲ್ಕು ವೇದಗಳನ್ನು ನಾಲ್ಕು ಮಕ್ಕಳಂತೆ ಮಾಡಿ ಹಿಡಿದು ಕೊಂಡು ಮೇಲೆ ಬರುವಾಗ ಸೋಮಕನೊಡನೆ ಕಾದಾಡಲು ಕಷ್ಟವಾಯಿತಂತೆ .ಆಗ ವಿಷ್ಣುವು ಸಂಹಾರ ಕಾರ್ಯಕ್ಕೆ ಅನುವಾಗುವಂತೆ ಶಿವನನ್ನು ಪ್ರಾರ್ಥಿಸಲು ಶಿವನು ರಾಕ್ಷಸನನ್ನು ಕಾಲ ಕೆಳಗೆ ತುಳಿದು ಕುಳಿತ ಆಗ ವೇದಗಳು ಸನಕ, ಸನಂದ, ಸತತ್ಕುಮಾರ, ಸನತ್ಸುಜಾತ ರೆಂಬವರಾಗಿ ಶಿವನ ಪಾದದಡಿ ಕುಳಿತರು ಎಂಬ ಕಥಾ ಭಾಗ ಶಿವಪುರಾಣದಲ್ಲಿದೆ.
ಭಸ್ಮ= ಶಿವನಿಗೆ ಅತ್ಯಂತ ಪ್ರಿಯವಾದ ಅಲಂಕಾರಗಳಲ್ಲಿ ಭಸ್ಮವು ಒಂದು. ಇದರಲ್ಲಿ ನಿರುಪಾಧಿಕ ಮತ್ತು ಗೋಮಯದಿಂದ ತಯಾರಿಸಿದ ಭಸ್ಮ ವನ್ನು ಸೋಪಾಧಿಕದು ಕರೆಯುತ್ತಾರಂತೆ .ವಿಭೂತಿ ಧರಿಸಿದ ವ್ಯಕ್ತಿ ಎಂದೂ ದರದ್ರನಾಗಲಾರನಂತೆ.
ಶಿವರಾತ್ರಿ ಹಿನ್ನೆಲೆ= ಶಿವರಾತ್ರಿಯಂದು ಶಿವನ ಆರಾಧನೆ ಮಾಡುವುದರಿಂದ ಮಾಡಿದ ಪಾಪ ಕರ್ಮ ಗಳು ದೂರಾಗುತ್ತದೆ ಎನ್ನುತ್ತಾರೆ. ತ್ರಯೋದಶಿಯು ಶಕ್ತಿ ರೂಪ, ಚತುರ್ದಶಿಯು ಶಿವರೂಪ. ಈವೆರಡು ಒಂದರೊಳಗೊಂದು ಅಂತರ್ಗತವಾದಗಲೆ ಶಿವಶಕ್ತಿಯೋಗ ಅದೆ ಶಿವರಾತ್ರಿಯ ಸಮಯವೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಶಿವರಾತ್ರಿಯ ದಿನ ತನ್ನನ್ನು ಯಾರು ಪೂಜಿಸುವರೊ ಅವರ ಪಾಪಗಳು ಪರಿಹಾರವಾಗುತ್ತದೆ ಎಂದು ಸ್ವತಃ ಶಿವನೆ ತಿಳಿಸಿದ್ದಾನೆ ಎಂಬುದು ಶಾಸ್ತ್ರೋಕ್ತಿಯಲ್ಲಿದೆ. ಈ ದಿನದಂದು ಬ್ರಹ್ಮ, ವಿಷ್ಣುಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವ ಸ್ವತಃ ನನ್ನ ಪ್ರಿಯ ದಿನ ಶಿವರಾತ್ರಿ ಎಂದು ಒಪ್ಪಿಕೊಂಡಿರುವನಂತೆ . ಶಿವರಾತ್ರಿಯಂದು ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ. ಭೂಮಿಯಲ್ಲಿನ ಸ್ಥಾವರ ಜಂಗಮ ಲಿಂಗಗಳಲ್ಲಿ ಐಕ್ಯಗೊಂಡು ಭಕ್ತರನ್ನು ಹರಸುತ್ತಾನೆ ಎಂಬ ನಂಬಿಕೆಯು ಇದೆ.
ದೇವ- ಧಾನವರ ನಡುವೆ ನಡೆದ ಸಮುದ್ರ ಮಂಥನ ಕಾಲದಲ್ಲಿ ಉತ್ಪತ್ತಿಯಾದ ಹಾಲಾಹಲ ಇಡಿ ನಭೋಮಂಡಲವನ್ನೇ ನಾಶಮಾಡ ಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಲೋಕ ಕಲ್ಯಾಣಕ್ಕಾಗಿ ಪರಶಿವನೇ ಈ ಹಾಲಾಹಲವನ್ನು ಕುಡಿದು ಬಿಟ್ಟ. ಆದೇ ಸಮಯಕ್ಕೆ ಪಾರ್ವತಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು.ಶಿವನು ರಾತ್ರಿ ನಿದ್ದೆ ಜಾರಿದರೆ ವಿಷ ಬೇಗನೆ ಶರೀರ ವ್ಯಾಪಿಸಲಿದೆ ಯೆಂದು ಆ ರಾತ್ರಿ ದೇವತೆಗಳು ಭಜನೆಯಲ್ಲಿ ತೊಡಗಿದರು. ಅಂದಿನಿಂದ ಈ ದಿನದಂದು ತ್ರಿದಳ ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮಧ್ಯಾನ, ಜಾಗರಣೆ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ.
ಬಿಲ್ವಪತ್ರೆ= ಶಿವಲಿಂಗದಲ್ಲಿ ಅಹಿತನಾದ ಮತ್ತು ಅನಾಹತನಾದ ಎಂಬ ಪತಿಕಗಳಿರುತ್ತವೆ.ಈ ಎರಡು ಪವಿತ್ರಗಳು ಮತ್ತು ಬಿಲ್ವಪತ್ರೆಯಲ್ಲಿನ ಪವಿತ್ರಕ ಹೀಗೆ ಮೂರು ಪವಿತ್ರಕಗಳನ್ನು ಆಕರ್ಷಿಸಲು 3 ಎಲೆಗಳುಳ್ಳ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಎಳೆಯ ಬಿಲ್ವಪತ್ರೆಯು 3 ಧ್ವನಿಯನ್ನು ಒಂದು ಗೂಡಿಸಬಲ್ಲದು . ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಇಟ್ಟಾಗ ಮೂರು ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವಾಗ ಬಿಲ್ವಪತ್ರೆಯ ಸುಗುಣ ಶಿವತತ್ವವು ಜಾಗೃತವಾಗಿ ಅದರೊಂದಿಗಿನ ಚೈತನ್ಯ ಮತ್ತು ಶಿವತ್ತತ್ವ ಕೂಡುತ್ತದೆ. ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತಾ ಒಂದೊಂದು ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಿಬೇಕು ಭಕ್ತಿಯಿಂದ.
ಉಪವಾಸ= ಪ್ರತಿನಿತ್ಯ ಸೇವಿಸುವ ಆಹಾರವನ್ನು ತ್ಯಜಿಸಿ ಸಂಪೂರ್ಣವಾಗಿ ನಿರಾಹಾರಿಯಾಗಿರುವುದೇ ಉಪವಾಸದ ಆಚರಣೆ. ಶಿವರಾತ್ರಿ ಹಬ್ಬದ ಮಹತ್ವದ ಅಂಶಗಳಲ್ಲಿ ಉಪವಾಸವು ಹೌದು ಉಪ ಅಂದರೆ ಸಮೀಪ, ವಾಸ ಅಂದರೆ ಇರುವುದು ಎಂದರ್ಥ. ಉಪವಾಸ ಎಂದರೆ ಭಕ್ತರು ಭಗವಂತನ ಧ್ಯಾನದಲ್ಲಿ ಅವನ ಹತ್ತಿರ ಇರುವುದು ಎಂದರ್ಥ ಅಂದರೆ ಮನಸಾ ಭಗವಂತನ ಹತ್ತಿರ ಭಾಜಿಸುವುದು. ಶಿವನಿಗೆ ಭಕ್ತಿ ಯಿಂದ ಹತ್ತಿರವಾಗುವ ಅನುಭವವೆ ಉಪವಾಸ. ಶಿವರಾತ್ರಿಯಂದು ಉಪವಾಸ, ಧ್ಯಾನ ಮತ್ತು ದೇವರನ್ನು ಆರಾಧಿಸುತ್ತಾ ಭಕ್ತಿ ಭಾವವನ್ನು ನಿರಂತರ ಕಾಯ್ದುಕೊಳ್ಳವದು ಜಾಗರಣೆ. ತ್ರಯೋದಶಿಯಂದು ಒಪ್ಪತ್ತು ಊಟ, ಚರ್ತುದಶಿಯ ದಿನ ಪೂರ್ಣ ಉಪವಾಸ. ಪ್ರದೋಷ ಕಾಲದಲ್ಲಿ ಶಿವಾಲಯಕ್ಕೆ ಹೋಗಿ ರಾತ್ರಿ ಪೂರ, ಹರಿಕಥೆ, ಕೇಳುತ್ತಾ ಶಿವನನ್ನು ಧ್ಯಾನಿಸುವ ರಾತ್ರಿ ಶಿವರಾತ್ರಿ. ಉಪವಾಸವು ಮಾನವನಲ್ಲಿ ರಜಗುಣಗಳಾದ ಸಿಟ್ಟು ,ಅಸೂಯೆ ಮತ್ತು ತಾಮಸಗುಣಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ನಮ್ಮ ದೇಶದಲ್ಲಿ ಹನ್ನೆರಡು ಜ್ಯೋತಿ ರ್ಲಿಂಗಗಳಾದ ಸೋಮನಾಥ, ಮಹಾಕಾಳೇಶ್ವರ, ಶೀಶೈಲದ ಮಲ್ಲಿಕಾರ್ಜುನ, ಶ್ರೀ ಓಂಕಾರೇಶ್ವರ, ಶ್ರೀ ವೈದ್ಯನಾಥ, ಶ್ರೀ ಭೀಮಶಂಕರ್,ರಾಮೇಶ್ವರ, ನಾಗೇಶ್ವರ, ವಿಶ್ವೇಶ್ವರ, ತ್ರೈಂಬಕೇಶ್ವರ, ಘೃಷ್ಣೇಶ್ವರ, ಕೇದಾರೇಶ್ವರ ಹಾಗೂ ಎಲ್ಲ ಶಿವಾಲಯದಲ್ಲಿ ಶಿವರಾತ್ರಿಯಂದು ಅಭಿಷೇಕ ಪ್ರಿಯ ಶಿವನಿಗೆ ಅಭಿಷೇಕದೊಂದಿಗೆ ವಿವಿಧ ಪೂಜೆಗಳು ನಡೆಯುತ್ತದೆ.ಹಾಗೆ ಶಿವನಿಗೆ ಶಂಕರ,ಜಗದೀಶ, ಈಶ್ವರ, ಶಂಭು, ಮೃತ್ಯುಂಜಯ, ರುಂಢಮಾಲ,ವಿಷವನ್ನು ಗಂಟಲಲ್ಲಿ ತಡೆದ ನೀಲಕಂಠ,ಗಂಗೆ ಮತ್ತು ಚಂದ್ರರನ್ನೊಳಗೊಂಡ ತ್ರಿಶೂಲಧರ ಇನ್ನೂ ಅನೇಕಾನೇಕ ಹೆಸರುಗಳಿವೆ ಶಿವನಿಗೆ .ಹಾಗೆ ರಾಮಾಯಣದಲ್ಲಿ ರಾಕ್ಷಸರನ್ನು ನಿಗ್ರಹಿಸಲು ರಾಮನು ಶಿವನನ್ನು ಪೂಜಿಸಿದನಂತೆ.
ಬೇಡರ ಕಣ್ಣಪ್ಪ ನ ಶಿವ ಭಕ್ತಿ = ಶಿವರಾತ್ರಿ ಆಚರಣೆ ಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಗಳಲ್ಲಿ ಇದು ಒಂದು. ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ಹೋದಾಗ ಎಷ್ಟೇ ಅಲೆದರೂ ಅವನಿಗೆ ಬೇಟೆ ಸಿಗಲಿಲ್ಲ ದಾರಿ ತಪ್ಪಿ ಅರಣ್ಯದಲ್ಲಿ ಅಲೆಯ ತೊಡಗಿದ .ರಾತ್ರಿ ಯಾಯಿತು. ಕ್ರೂರ ಪ್ರಾಣಿಗಳು ಆತನ ಹಿಡಿದು ತಿನ್ನುವ ಭಯವಾಗಿ ಮರವೇರಿದ ಬೇಡನಿಗೆ ಇನ್ನೊಂದು ಚಿಂತೆ ಆವರಿಸಿತು ಈ ಮರದಲ್ಲಿ ಕುಳಿತ ನಾನು ನಿದ್ದೆ ಬಂದು ಬಿದ್ದರೆ ಹಲ್ಲು, ಮೂಳೆ ಒಂದು ಉಳಿಯಲಿಕ್ಕಿಲ್ಲ.ಎನು ಮಾಡಲಿ ಎಂದು ಯೋಚಿಸಿ ಮರದ ಎಲೆಗಳನ್ನು ಒಂದೊಂದಾಗಿ ಊದುರಿಸಲು ಪ್ರಾರಂಭಿಸಿದ.ಕಾಕಾತಾಳಿಯ ಎಂಬಂತೆ ಅದು ಬಿಲ್ವಪತ್ರೆ ಯ ಮರವಾಗಿದ್ದು ಆ ಮರದ ಕೆಳಗೆ ಒಂದು ಶಿವ ಲಿಂಗವಿದ್ದು ಈ ಬೇಡ ಮರದಿಂದ ಕಿತ್ತು ತೆಗೆದು ಕೆಳಗೆ ಹಾಕುತ್ತಿದ್ದ ಎಲೆ ಶಿವ ಲಿಂಗದ ಮೇಲೆ ಬೀಳುತ್ತಿತ್ತು..ಇಡಿ ರಾತ್ರಿ ಮರದಿಂದ ಕೆಳಗೆ ಬೀಳ ಬಾರದೆಂದು ಜಾಗರಣೆ ಮಾಡಿದುದರ ಫಲ ಸಿಕ್ಕಿತ್ತು ಅದರ ಫಲವಾಗಿ ಬೇಡಾ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ನಂತೆ.
(ಮಹಾಶಿವರಾತ್ರಿಯ ಧಾರ್ಮಿಕ ವಿಚಾರ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಈ ಲೇಖನ ಬರೆಯಲು ಸಹಕರಿಸಿದ ಭಾಯಂಧರ್ ಶಿವ ಶಂಭೊದೇವಾಲಯದ ಅರ್ಚಕ ವೃಂದಕ್ಕೆ ನಾನು ಋಣಿ)
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ