ಸಿನಿಮಾದ ಟ್ರೇಲರ್ ನಂತೆ ಕೃತಿಯ ಸಮೀಕ್ಷೆ ಇರಬೇಕು. ಸಮೀಕ್ಷೆಯಿಂದ ಕೃತಿಯನ್ನು ಓದುವ ಕೂತೂಹಲ, ಇಡೀ ಪುಸ್ತಕವನ್ನು ಓದಿಯೇ ಬಿಡಬೇಕೆಂದು ಅನಿಸಬೇಕು. ಕೃತಿಯ ಭವಿಷ್ಯ ಪತ್ರಕರ್ತರ ಕೈಯಲ್ಲಿರುತ್ತದೆ. ಇಂತಹ ಕೃತಿ ಸಮೀಕ್ಷೆಗಳಿಂದ ಸಾಹಿತಿಗಳಿಗೆ ಪ್ರೊತ್ಸಾಹ ಕೊಟ್ಟಂತಾಗುತ್ತದೆ. ಅವರಿಂದ ಹೊಸ ಕೃತಿಗಳು ಬರಲು ಸಹಾಯಕವಾಗುತ್ತದೆ ಎಂದು ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಅವರು ಅಭಿಪ್ರಾಯ ಪಟ್ಟರು. ಅವರು ಸೃಜನಾ ಬಳಗದ ಆಶ್ರಯದಲ್ಲಿ ನವೆಂಬರ್ 29 ರಂದು ಮೈಸೂರು ಅಸೊಸಿಯೇಷನ್ ನ ಸಭಾಗೃಹದಲ್ಲಿ ಸಂಜೆ 5.30 ಕ್ಕೆ ಜರುಗಿದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಕಟಿಸಿದ ಒಂಬತ್ತು ಕೃತಿಗಳ ಸಮೀಕ್ಷಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಒಂಬತ್ತು ಲೇಖಕಿಯರು ಉತ್ತಮ ರೀತಿಯಲ್ಲಿ ಕೃತಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವು ಸಾರ್ಥಕವಾದಂತೆ ಎನಿಸಿತು ಎಂದು ಸಂತೋಷ ಪಟ್ಟರು. ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಗೌ. ಕಾರ್ಯದರ್ಶಿ ವಿಶ್ವನಾಥ್ ದೊಡ್ಡಮನೆ ಮಾತನಾಡುತ್ತಾ, 23 ವರ್ಷದ ಸೃಜನಾ ಬಳಗ ಹಾಗೂ 16 ವರ್ಷದ ಮಯೂರವರ್ಮ ಪ್ರತಿಷ್ಠನಾ ಒಟ್ಟಾಗಿ ಮಾಡಿದ ಈ ಕಾರ್ಯಕ್ರಮವು ಸಂತಸ ತಂದಿದೆ. ನಾವೆಲ್ಲರೂ ಒಂದೇ ಬಳಗದವರು, ಸಾಹಿತ್ಯಾಭಿಮಾನಿಗಳು ಎಂದು ಹೇಳುತ್ತಾ ತಮ್ಮ ಸಾಹಿತ್ಯ ಕಾಯಕದ ಅನುಭವಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಅವರ ಮಗಳೂ ಉಪಸ್ಥಿತರಿದ್ದರು. ಆರಂಭದಲ್ಲಿ ಸೃಜನಾ ಬಳಗದ ಸದಸ್ಯೆ ಶಾಂತಾ ಎನ್ ಶೆಟ್ಟಿ ಅವರು ಪ್ರಾರ್ಥನೆಗೈದರು. ಸಮೀಕ್ಷಾ ಸಭಾ ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಪದ್ಮಜಾ ಮಣ್ಣೂರ ಅವರು ಸ್ವಾಗತ ಹಾಗೂ ಪ್ರಸ್ತಾವಣೆಗೈದರು. ಒಂಬತ್ತು ಕೃತಿಗಳ ಸಮೀಕ್ಷೆಯನ್ನು ಸೃಜನಾ ಬಳಗದ ಲೇಖಕಿಯರು ಮಾಡಿದರು.

ಸೂರ್ಯ ಪ್ರಭೆ ಪೌರಾಣಿಕ ನಾಟಕ ಕೃತಿಯ ಸಮೀಕ್ಷೆಯನ್ನು ಡಾ. ದಾಕ್ಷಾಯಣಿ ಯಡಹಳ್ಳಿ (ಸೃಜನಾ ಬಳಗದ ಗೌ. ಕೋಶಾಧಿಕಾರಿ), ಹೊರನಾಡಿನಲ್ಲಿ ತುಳುವರು ಕೃತಿಯ ಸಮೀಕ್ಷೆಯನ್ನು ಡಾ. ಜಿ.ಪಿ ಕುಸುಮಾ (ಸೃಜನಾ ಬಳಗದ ಸಹ ಸಂಚಾಲಕಿ), ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ ಕೃತಿಯ ಸಮೀಕ್ಷೆಯನ್ನು ಲಲಿತಾ ಪ್ರಭು ಅಂಗಡಿ, ಸೌಹಾರ್ದ ಸೇತು ಕೃತಿಯ ಸಮೀಕ್ಷೆಯನ್ನು ಶಾರದಾ ಅಂಬೆಸಂಗೆ, ಕನ್ನಡ ಶಾಲೆಯ ಸವಿ ನೆನಪುಗಳು ಕೃತಿಯ ಸಮೀಕ್ಷೆಯನ್ನು ಲತಾ ಸಂತೋಷ್ ಶೆಟ್ಟಿ ಮುದ್ದುಮನೆ (ಸೃಜನಾ ಬಳಗದ ಗೌ ಕಾರ್ಯದರ್ಶಿ), ಸನಾತನ ಧರ್ಮವು ಪ್ರಕೃತಿ ಆರಾಧನೆಯೂ ಕೃತಿಯ ಸಮೀಕ್ಷೆ ಸುಶೀಲಾ ದೇವಾಡಿಗ, ಯಾರೂ ಆಳಿದರೇನು ನಾವು ರಾಗಿ ಬೀಸೋದು ತಪ್ಪುತ್ತಾ ಕೃತಿಯ ಸಮೀಕ್ಷೆಯನ್ನು ಅಶ್ವಿತಾ ಶೆಟ್ಟಿ, ನನ್ನ ಭಾರತ ನನ್ನ ಪರಂಪರೆ (ವ್ಯಕ್ತಿ ಚಿತ್ರ ಮಾಲೆ) ಕೃತಿಯ ಸಮೀಕ್ಷೆಯನ್ನು ರಶ್ಮಿ ಭಟ್, ದಶಧಾರೆ (ನನ್ನೂರು ನನ್ನ ಶಹರ) ಕೃತಿಯ ಸಮೀಕ್ಷೆಯನ್ನು ದೀಪಾ ಶೆಟ್ಟಿಯವರು ಮಾಡಿದರು. ಲೇಖಕಿಯರೆಲ್ಲರೂ ಕೃತಿಗಳ ಸಮೀಕ್ಷೆಯನ್ನು ಸಾಹಿತ್ಯಾಭಿಮಾನಿಗಳಿಗೆ ಕೂತೂಹಲ ಮೂಡುವಂತೆ ಮಾಡಿ ಮೆಚ್ಚುಗೆ ಪಡೆದರು. ಕೃತಿ ಸಮೀಕ್ಷೆ ಮಾಡಿದ ಲೇಖಕಿಯರಿಗೆ ಅತಿಥಿ ಗಣ್ಯರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಮಯೂರವರ್ಮ ಪ್ರತಿಷ್ಠಾನದ ಅಧ್ಯಕ್ಷರಾದ ವಿಶ್ವನಾಥ್ ದೊಡ್ಡಮನೆ ಅವರಿಗೆ ಪದ್ಮಜಾ ಮಣ್ಣೂರ ಹಾಗೂ ಬಳಗದ ಕೋಶಾಧಿಕಾರಿ ಡಾ. ದಾಕ್ಷಾಯಿಣಿಯವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ವೇದಿಕೆಯಲ್ಲಿ ಸೃಜನಾ ಬಳಗದ ಜೊತೆ ಕಾರ್ಯಕಾರಿ ಸಮಿತಿಯ ಸದಸ್ಯೆಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸೃಜನಾ ಬಳಗದ ಸದಸ್ಯೆ ಕುಮುದಾ ಶೆಟ್ಟಿ ಅವರು ಮಾಡಿದರು.
ಈ ಸಂದರ್ಭದಲ್ಲಿ ಸೃಜನಾ ಬಳಗದ ಗೌ. ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಇವರ ಪ್ರವಾಸ ಕಥನ “ಯಶಸ್ವಿ ಪಯಣ” ಸೃಜನಾ ಬಳಗಕ್ಕೆ ಅರ್ಪಣೆ ಮಾಡಿದರು. ಅದನ್ನು ಬಳಗದ ಹಿರಿಯ ಸದಸ್ಯರಾದ ಮುಂಬಯಿಯ ಹಿರಿಯ ಸಾಹಿತಿ ಶ್ಯಾಮಲ ಮಾಧವ ಹಾಗೂ ಬಳಗದ ಸಂಚಾಲಕಿಯರಿಗೆ ಕಾರ್ಯಕ್ರಮದಲ್ಲಿ ಕೃತಿ ಹಸ್ತಾಂತರಿಸಿದರು. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ. ಎಸ್ ನಾಯಕರು ತಮ್ಮ ಸಂಘದ ಹೊಸ ಕಟ್ಟಡದ ಬಗ್ಗೆ ಹಾಗೂ ಮುಂದೆ ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸೃಜನಾ ಬಳಗದ ಸದಸ್ಯೆ ಶ್ಯಾಮಲಾ ಮಾಧವ್ ಅವರು ಕರ್ನಾಟಕದ ಕನ್ನಡ ಲೇಖಕಿಯರ ಬಳಗದ ಚುನಾವಣೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳಗದ ಸದಸ್ಯರು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು. ಸೃಜನಾ ಬಳಗದ ಸದಸ್ಯೆ ಯಶೊದಾ ಶೆಟ್ಟಿಯವರು ಧನ್ಯವಾದಗೈದರು.











































































































