ಪುಣೆ ತುಳು ಕನ್ನಡಿಗರ ಆಶೋತ್ತರದಂತೆ ನೂತನ ಸಂಸ್ಥೆಯೊಂದರ ಉದಯವಾಗಿದ್ದು ನೂತನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ತುಳು ಕನ್ನಡಿಗರ ಕಣ್ಮಣಿ, ಪುಣೆ ತುಳು ಕೂಟದ ಮಾಜಿ ಅಧ್ಯಕ್ಷ, ಸಮಾಜಸೇವಕ, ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು. ನಗರದ ವಾರ್ಜೆಯಲ್ಲಿರುವ ಹೋಟೆಲ್ ಕನಿಷ್ಕಾ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆಯನ್ನು ನಡೆಸಲಾಯಿತು.
ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಪುಣೆಯಲ್ಲಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡ ಮೇರು ವ್ಯಕ್ತಿತ್ವದ ವ್ಯಕ್ತಿ. ಪುಣೆಯಲ್ಲಿ ಉದ್ಯಮ ರಂಗದಲ್ಲಿ ಯಶಸ್ಸನ್ನು ಸಾಧಿಸಿದ ರಾಜ್ ಕುಮಾರ್ ಎಂ ಶೆಟ್ಟಿಯವರು 2010 ರಿಂದ 2014 ರ ವರೆಗೆ ಪುಣೆ ತುಳುಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪುಣೆ ತುಳುಕೂಟದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಸಾಧಕನೆಂದರೆ ತಪ್ಪಾಗಲಾರದು. ಯಾಕೆಂದರೆ ತುಳುನಾಡ ಭಾಷೆ, ಸಂಸ್ಕೃತಿಯ ಆರಾಧಕರಾಗಿದ್ದ ರಾಜ್ ಕುಮಾರ್ ಶೆಟ್ಟಿಯವರು ಪುಣೆ ತುಳುಕೂಟದ ಚುಕ್ಕಾಣಿಯನ್ನು ವಹಿಸಿಕೊಂಡು ಪುಣೆಯಲ್ಲಿರುವ ತುಳುನಾಡ ಬಾಂಧವರೆಲ್ಲರನ್ನು ಜಾತಿ ಮತ ಭೇದವಿಲ್ಲದೆ ಒಗ್ಗೂಡಿಸಿದ್ದಲ್ಲದೆ ತುಳುನಾಡಿನ ಭಾಷೆ, ಸಂಸ್ಕೃತಿಯನ್ನು ಅನುಸಂಧಾನಿಸಿಕೊಂಡು ಹೊಸ ಹೊಸ ಯೋಚನೆ, ಯೋಜನೆಗಳೊಂದಿಗೆ ಹತ್ತು ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪುಣೆ ತುಳು ಕನ್ನಡಿಗರೆಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಕಾರ್ಯಾವಧಿಯಲ್ಲಿ ಪುಣೆಯಲ್ಲಿ ತುಳು ಕನ್ನಡಿಗರ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ತುರ್ತಾಗಿ ಧಾವಿಸಿ ನೆರವಿನ ಹಸ್ತವನ್ನು ನೀಡಿ ಮಾನವೀಯತೆಯನ್ನು ಮೆರೆದ ಸಾಮಾಜಿಕ ಬದ್ಧತೆಯನ್ನು ರೂಢಿಸಿಕೊಂಡ ಅಪರೂಪದ ನಾಯಕರಾಗಿ ಗುರುತಿಸಿಕೊಂಡ ನಾಯಕರಾಗಿ ಎಲ್ಲರಿಗೂ ಚಿರಪರಿಚಿತ ವ್ಯಕ್ತಿತ್ವ ಅವರದ್ದಾಗಿತ್ತು.
ಪುಣೆಯಲ್ಲಿ ಆಜಾತ ಶತ್ರುವೆಂದೇ ಕರೆಯಲ್ಪಡುತ್ತಿದ್ದ ಅವರು ಸರಳ ನಿರಾಂಡಬರ ವ್ಯಕ್ತಿತ್ವದೊಂದಿಗೆ ವ್ಯವಹರಿಸುತ್ತಾ ಸಾಮಾಜಿಕವಾಗಿ ಹಿಂದುಳಿದ ಅದೆಷ್ಟೋ ಜನರಿಗೆ ಆಪತ್ಬಾಂಧವರಾಗಿ ನೆರವಿನ ಹಸ್ತವನ್ನು ನೀಡುತ್ತಾ ಬಂದಿರುತ್ತಾರೆ. ಕಷ್ಟದಲ್ಲಿರುವ ಜನರಿಗೆ ತುರ್ತು ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ತುಳುನಾಡಿನ ದೈವ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಸಹಕಾರ, ಪುಣೆಯ ವಿವಿಧ ಸಂಘ ಸಂಸ್ಥೆಗಳಿಗೆ ಸಹಕಾರವನ್ನು ನೀಡುತ್ತಾ ಮಾದರಿ ಸಮಾಜ ಸೇವಕನಾಗಿ ಗುರುತಿಸಿಕೊಂಡ ಹೆಗ್ಗಳಿಕೆ ಅವರದ್ದಾಗಿದೆ. ಇದೀಗ ಪುಣೆ ತುಳು ಕನ್ನಡಿಗರೆಲ್ಲರ ಅಪೇಕ್ಷೆಯ ಮೇರೆಗೆ ಮತ್ತೊಮ್ಮೆ ಸಾಮಾಜಿಕ ಜವಾಬ್ದಾರಿಯ ಸಾರಥ್ಯವನ್ನು ಅವರಿಗೆ ವಹಿಸಲಾಗಿದ್ದು ನೂತನ ಸಂಘ “ತುಳುನಾಡ ಸಂಘ ಪುಣೆ” ಇದರ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದಕ್ಕೆ ಸಮಸ್ತ ಬಂಟ ಸಮಾಜದ ಪರವಾಗಿ ಶುಭಾಶಯಗಳನ್ನು ಕೋರುತ್ತಿದ್ದೇವೆ.
ವರದಿ : ಕಿರಣ್ ರೈ ಪುಣೆ