ವಸುದೈವ ಕುಟುಂಬಕಂ ತತ್ವವನ್ನು ಪ್ರತಿಪಾದಿಸುವ ಕಾರಣದಿಂದ ಪ್ರಸ್ತುತ ಭಾರತ ವಿಶ್ವಗುರು ಸ್ಥಾನದಲ್ಲಿದೆ. ಸ್ವಾರ್ಥವಿಲ್ಲದ ಮನಸ್ಥಿತಿಯಿಂದ ಸರ್ವರ ಏಳಿಗೆಯನ್ನು ಬಯಸುವುದು, ಎಲ್ಲರೂ ಸುಖವಾಗಿರಬೇಕು ಎಂಬುದು ನಮ್ಮ ಪ್ರಾರ್ಥನೆಯಾಗಬೇಕು. ಈ ಬಗೆಯ ನಿಷ್ಕಲ್ಮಶ ಭಕ್ತಿ ಮಾತ್ರವೆ ದೇವರಿಗೆ ತೃಪ್ತಿ ನೀಡುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು. ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಪ್ರಯುಕ್ತ ನಡೆದ “ಸಮರ್ಪಣ ದಿವಸ್’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಒಳಿತಿಗೆ ಮಾಡುವ ಎಲ್ಲ ಧಾರ್ಮಿಕ ಕೆಲಸವನ್ನು ದೇವರು ಸ್ವೀಕರಿಸಿ, ಅನುಗ್ರಹಿಸುತ್ತಾರೆ. ಭಕ್ತ ವರ್ಗದ ಸಂಕಲ್ಪದಂತೆ ನಡೆಸುತ್ತಿರುವ ಈ ಅತಿರುದ್ರ ಮಹಾಯಾಗದಿಂದ ಸಮಾಜಕ್ಕೆ ಒಳಿತಾಗಲಿದೆ ಎಂದು ಹಾರೈಸಿದರು.
ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ತುಳುಕೂಟ ಬರೋಡಾ ಅಧ್ಯಕ್ಷ ಶಶಿಧರ್ ಶೆಟ್ಟಿ ವಹಿಸಿದ್ದರು. ಮಣಿಪಾಲ ಸ್ಟೋರ್ ನ ಆತ್ಮಾರಾಮ ನಾಯಕ್, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ರವಿರಾಜ್ ಆಚಾರ್ಯ, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ, ಯು. ಸತೀಶ್ ಶೇಟ್, ರವಿ ಕುಮಾರ್ ಮತ್ತು ದೇಗುಲದ ಆಡಳಿತ ಮೊಕ್ತೇಸರ ಸುಭಾಕರ ಸಾಮಂತ್, ಎಸ್. ದಿನೇಶ್ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್, ಕಾರ್ಯದರ್ಶಿ ಎಂ. ಸುರೇಶ್ ಶ್ಯಾನುಭಾಗ್, ಅತಿರುದ್ರ ಮಹಾಯಾಗ ಸಮಿತಿಯ ಕೋಶಾಧಿಕಾರಿ ಸತೀಶ್ ಪಾಟಿಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮಹಾಯಾಗ ಸಮಿತಿ ಪದಾಧಿಕಾರಿಗಳಾದ ಪ್ರಕಾಶ್ ಕುಕ್ಕೆಹಳ್ಳಿ ಸ್ವಾಗತಿಸಿ, ರತ್ನಾಕರ್ ಇಂದ್ರಾಳಿ ವಂದಿಸಿ, ಸುಚೇತಾ ನಾಯಕ್ ನಿರೂಪಿಸಿದರು.
180 ವೈದಿಕರು ಭಾಗಿ
ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ಪ್ರಾಸ್ತಾವಿಕ ಮಾತನಾಡಿ, ಅತಿರುದ್ರ ಮಹಾಯಾಗದ ತಯಾರಿ ಅಂತಿಮ ಹಂತದಲ್ಲಿದ್ದು, ಎಲ್ಲ ಪೂರ್ವ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆದಿದೆ. 180ಕ್ಕೂ ಅಧಿಕ ವೈದಿಕರು ಭಾಗವಹಿಸಲಿದ್ದಾರೆ. 12 ದಿನಗಳ ಕಾಲ 11 ಪರಿಕುಂಡಗಳಲ್ಲಿ ಮಹಾಯಾಗ ನಡೆಯಲಿದೆ. ಈ ಮಹಾತ್ ಕಾರ್ಯಕ್ಕೆ ತುಪ್ಪ, ಎಳ್ಳು, ಭತ್ತ, ಎಳ್ಳೆಣ್ಣೆ, ಗೇರುಬೀಜ, ಒಣದ್ರಾಕ್ಷಿ, ತೆಂಗಿನಕಾಯಿ, ಅಕ್ಕಿ ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗಬೇಕಿದೆ. ಭಕ್ತಾದಿಗಳಿಂದ ಸೇವಾರೂಪದಲ್ಲಿ ಸ್ವೀಕರಿಸಲಾಗುವುದು. ಫೆ.22ರಿಂದ ಮಾ.5ರವರೆಗೆ ನಿತ್ಯ 2ಲಕ್ಷ ಮಂದಿ ಭಕ್ತರು ಸೇರುವ ನಿರೀಕ್ಷೆ ಇದೆ ಎಂದರು.
ಶಿವಪಾಡಿಯಲ್ಲಿ ಶಿವೋತ್ಸವ
ಶಿವಪಾಡಿ ದೇವಸ್ಥಾನದಲ್ಲಿ ಎಲ್ಲೆಂದರಲ್ಲಿ ಶಿವನ ವೇಷ ಧರಿಸಿದ ಬಾಲ ಈಶ್ವರರು ಕಣ್ಮನ ಸೆಳೆದರು. ಜಿಲ್ಲಾ ಮಟ್ಟದ ಅಂಗನವಾಡಿ, ಪ್ರಾಥಮಿಕ ಹಂತದ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ವೇಷ ಭೂಷಣ ಬಾಲಶಿವ ಸ್ಪರ್ಧೆ ಏರ್ಪಡಿಸಲಾಗಿತ್ತು. ಉಡುಪಿ, ಮಣಿಪಾಲ, ಪರ್ಕಳ ಸುತ್ತಮುತ್ತಲಿನ ಹಲವು ಪೋಷಕರು ತಮ್ಮ ಮಕ್ಕಳಿಗೆ ಶಿವನ ವೇಷ ತೊಡಿಸಿ ಕರೆ ತಂದಿದ್ದರು.