ಭೂಮಿಯನ್ನು ಹೆಣ್ಣು ಎನ್ನುವ ಭಾವನೆಯೊಂದಿಗೆ ಪ್ರೀತಿ ಗೌರವ ನೀಡಿ ನಮ್ಮಪೊರೆವ ತಾಯಿಯೆಂದು ನಂಬಿಕೊಂಡು ಬಂದ ಮಾತೃಪ್ರಧಾನ ಸಮಾಜ ತಲೆ ಎತ್ತಿ ನಿಂತ ತುಳುನಾಡಿನಲ್ಲಿ ಭೂಮಿ ಮೈನರೆವಳೆಂಬ ನಂಬಿಕೆ ಅಥವಾ ಭೂಮಿತಾಯಿ ರಜಸ್ವಲೆಯಾಗುವ ದಿನದ ಹಬ್ಬ ತುಳುವರ ಆಚರಣೆಯ ಕೆಡ್ಡಸ . ವರ್ಷದಲ್ಲೊಮ್ಮೆ ಭೂಮಿಯು ಮುಟ್ಟಾಗುತ್ತಾಳೆ ಎನ್ನುವ ತುಳುವರ ಪ್ರತೀತಿ ಇದೆ. ಆ ಸಮಯದಲ್ಲಿ ಪ್ರಕೃತಿಯಲ್ಲಿ ವಿಶೇಷ ಬದಲಾವಣೆ ಆಗುವುದು ಇಲ್ಲಿ ಗಮನಿಸಬೇಕಾದ ವಿಚಾರ. ಗಿಡ ಮರಗಳಲ್ಲಿ ಚಿಗುರು ಮೂಡಿ ಫಲವತ್ತತೆಗೆ ಅಣಿಯಾಗುವ ಸಂಭ್ರಮದ ಕಾಲ.
ಪ್ರಕೃತಿಯನ್ನು ಹೆಣ್ಣುಎಂದು ನಂಬಿದವರು ತುಳುವರು ಆಕೆ ವರ್ಷಕ್ಕೊಮ್ಮೆ ಮುಟ್ಟಾಗುವ ದಿನವೆ ಕೆಡ್ಡಸ ಎಂದು ಆಚರಿಸುವ ಹಬ್ಬ. ಮಕರ ಮಾಸದ 27 ನೇ ದಿನದ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಮೂರು ದಿನಗಳವರೆಗೆ ಆಚರಿಸುತ್ತಾರೆ. ಭೂಮಿಯನ್ನು ಅಕ್ಕರೆಯಿಂದ ಪೂಜಿಸುವದಿನವಿದು .
ಭೂಮಿ ಮುಟ್ಟಾದಳು ಎಂಬ ನಂಬಿಕೆಯಲ್ಲಿ ಆಚರಿಸುವ ಮೂರುದಿನದಲ್ಲಿ ಕೆಡ್ಡಸ, ನಡುಕೆಡ್ಡಸ, ಕಡೆಕೆಡ್ಡಸ ಎಂದು ಸಮೃದ್ಧಿ ಮತ್ತು ಫಲಾಪೇಕ್ಷೆಯ ಆಶಯದ ಆಚರಣೆ. ಈ ಮೂರು ದಿನಗಳಲ್ಲಿ ಭೂಮಿತಾಯಿಗೆ ಯಾವುದೇ ತರದಲ್ಲಿ ನೋವಾಗ ಬಾರದೆಂದು ಹಾರೆ, ಪಿಕಾಸೆಯಿಂದ ಮಣ್ಣು ಅಗೆಯುವಂತಿಲ್ಲ. ಮರಕಡಿಯ ಬಾರದು ಭೂಮಿಯಿಂದ ತರಕಾರಿಕೀಳ ಬಾರದು ಹಾಗೂ ಕೃಷಿ ಕರಿಗೆ ವಿರಾಮದ ದಿನಗಳಲ್ಲಿ ಮಣ್ಣು ಅಗೆಯುವಂತೆಯು ಇಲ್ಲ.
ಕೆಡ್ಡಸದ ಮೊದಲ ದಿನ =ಭೂಮಿ ರಜಸ್ವಲೆಯಾ ಗುವ ಹಬ್ಬ ಕೆಡ್ಡಸದ ಮೊದಲ ದಿನ ಬೆಳಿಗ್ಗೆ ಹೆಂಗಸರು ನವಧಾನ್ಯಗಳನ್ನು ಹುರಿದು ಬೆಲ್ಲ ತೆಂಗಿನ ಕಾಯಿ ಚೂರುಗಳನ್ನು ಬೆರಸಿ ಬಾಳೆಯೆಲೆಯಲ್ಲಿ ಭೂದೇವಿಗೆ ಅರ್ಪಿಸಲು ರಂಗೋಲಿ ಬರೆದು ಮಣೆ ಇಟ್ಟು ಬಡಿಸುವುದು ಸಂಪ್ರದಾಯ ಇದಕ್ಕೆ ಕುಡು ಅರಿ ಎನ್ನುತ್ತಾರೆ. ಅಂದು ಪುರುಷರು ಕತ್ತಿ, ನೊಗ, ನೇಗಿಲು, ಹಾರೆ ಪೂಜಿಸುವ ಕ್ರಮವಿದೆ. ಬೆಳಿಗ್ಗೆ ಮಹಿಳೆಯರು ತುಳಸಿಕಟ್ಟೆಯ ಎದುರು ದನದ ಸೆಗಣಿಯಿಂದ ಶುಚಿಗೊಳಿಸಿ ಹಿರಿಯ ಮಹಿಳೆ ಬಾಳೆಎಲೆ ಇಟ್ಟು ಮಣೆಯ ಮೇಲೆ ತೆಂಗಿನ ಎಣ್ಣೆ ಸವರಿ ಕುಂಕುಮ ಸೀಗೆ ಕಾಯಿ ಇಡುತ್ತಾರೆ. ಭೂಮಿ ತಾಯಿ ಸೀಗೆ ಕಾಯುಹಾಕಿ ಕೊಂಡು ಸಾನ್ನ ಮಾಡಿ ಬಂದವಳಿಗೆ 9 ಬಗೆಯ ಧಾನ್ಯ ಗಳನ್ನು ಬಾಳೆ ಎಲೆಯಲ್ಲಿ ಇಡುವ ಕ್ರಮವಿದೆ. ಗಜ್ಜೆ ಕತ್ತಿ, ಕಳಶ, ಅರಶಿನ , ಕುಂಕುಮ ಹೂಗಳನ್ನು ಇಡುವ ಸಂಪ್ರದಾಯವು ಇದೆ.
ನಡು ಕೆಡ್ಡಸ = ಇದು ಕೆಡ್ಡಸದ 2 ನೇ ದಿನ ಊರಿನ ಒಂದೆಡೆ ಸೇರಿ ತೆಂಗಿನ ಕಾಯಿ ಹೂ ಇಟ್ಟು ಕಾಡು ದೈವವನ್ನು ನೆನೆದು ಪ್ರಾರ್ಥಿಸುತ್ತಾರೆ. ನಂತರ ಕಾಡಿನೊಳಗೆ ಬೊಬ್ಬೆ ಹಾಕುತ್ತಾ ಬೇಟೆ ಪ್ರಾಣಿಗಳ ಹುಡುಕಾಟದಲ್ಲಿ ತೊಡಗುತ್ತಾರೆ. ಹೀಗೆ ಬೇಟಿಯಾಡಿದ ಮಾಂಸವನ್ನು ಕಾಡುದೇವರಿಗೆ ಅಲ್ಲೆ ಅಡುಗೆ ತಯಾರಿಸಿ ಬಡಿಸಿ ಉಳಿದ ಮಾಂಸವನ್ನು ಹಂಚಿಕೊಂಡು ಮನೆ ಮನೆಯಲ್ಲಿ ಅಂದು ಮಾಂಸದ ಅಡುಗೆ ಊಟ ತಯಾರಿಸುತ್ತಾರೆ.
ಮೂರನೆ ದಿನ = ಮುತ್ತದೈಯರು ಲೋಳೆರಸವುಳ್ಳ ಸೊಪ್ಪನ್ನು ಸಾಲಾಗಿರಿಸಿ ದೀಪ ಹಚ್ಚಿ ಅದರ ಎದುರಲ್ಲಿ ದೀಪ ಇಟ್ಟು ಅರಶಿಣ, ಕುಂಕುಮ, ಕಾಡಿಗೆ, ಎಣ್ಣೆ ಸೀಗೆ, ಬಾಗೆಮರದ ತೊಗಟೆ, ಹೆಸರು ಬೇಳೆ, ವೀಳ್ಯದೆಲೆ, ಕನ್ನಡಿ ಬಾಚಣಿಗೆ ಹಾಗೂ ಕರಿಮಣಿ, ಬಳೆ ಇಡುವ ಸಂಪ್ರದಾಯವಿದೆ. ಹಾಗೆ ಭೂಮಿಗೆ ಕುಡುಯಲು ಎಳನೀರು, ಸಿಹಿತಿಂಡಿ ಇಡುವಕ್ರಮವು ಇದೆ. ಅಂದು ನುಗ್ಗೆಕಾಯಿ ಬದನೆ ಪಲ್ಯ ಮಾಡುತ್ತಾರೆ.
ಬೇಟೆ = ಕೆಡ್ಡಸದ ಬಹುಮುಖ್ಯಭಾಗ ಬೇಟೆ. ಕೆಡ್ಡಸ ಬೇಟೆಯ ಸಂದರ್ಭದಲ್ಲಿ ಕಾಡುಪ್ರಾಣಿಗಳಿಗೆ ಕಾಲು ಒಡೆಯುವ ರೋಗ ಅಂದರೆ ಚಳಿಗಾಲದಲ್ಲಿ ಅವುಗಳ ಕಾಲು ಒಡೆಯುತ್ತದೆ. ಅಷ್ಟೇ ಅಲ್ಲದೆ ಕೆಡ್ಡಸ ಸಮಯದಲ್ಲಿ ತಂಗಾಳಿ ಹೆಚ್ಚಾಗಿ ಬೀಸುವುದರಿಂದಲೂ ಪ್ರಾಣಿಗಳ ಕಾಲು ಒಡೆಯುತ್ತದೆ. ಕೆಡ್ಡಸದ ಬೇಟಿಯಲ್ಲಿ ಪುಂಡದ ಹಕ್ಕಿಯನ್ನು ಬೇಟೆ ಆಡಲಾಗುತ್ತದೆ. ಇದರ ಮಾಂಸ ತಿನ್ನುವುದರಿಂದ ಶರೀರಗಟ್ಟಿಯಾಗಿ ಮೂಳೆ ಧೃಡವಾಗುತ್ತದೆ. ಹಾಗೆ ಈ ದಿನ ಕಾಡುಹಂದಿ ಬೇಟೆ ಆಡುತ್ತಾರೆ.
ಕೆಲವು ಊರುಗಳಲ್ಲಿ ಕೆಡ್ಡಸ ಭೂಮಿ ತಾಯಿ ಮದಿಮಲಾಪಿನ ದಿನಕ್ಕೆ ಹೇಳಿಕೆಗೆಂದು ನಿರ್ದಿಷ್ಟ ಜಾತಿಯವರು ಮನೆ ಮನೆಗೆ ಬಂದು ಕರೆ ಕೋಡುವ ಕ್ರಮವಿದೆ. ಪ್ರಕೃತಿ ಆರಾಧನೆಯಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುವ ತುಳುವರ ಈ ಹಬ್ಬ ನಿಜಕ್ಕೂ ಗೌರವ ದ ಸಂಕೇತ ಅಂದು ಮನೆ ಮಂದಿಯೆಲ್ಲಾ ಕುಚ್ಚಲಕ್ಕಿ ಹುಡಿಮಾಡಿ ಅದಕ್ಕೆ ತೆಂಗು ಬೆಲ್ಲ ಹಾಕಿ ತಿನ್ನುವ ಕ್ರಮವಿದೆ.
ನಾನಂತು” ಕೆಡ್ಡಸ ಬತ್ತ್ಂಡ್ಯೆ ಯೆ ಭೂಮಿಗೆ ಕೆಡ್ಡಸ ಬತ್ತಂಡಯೆ ಭೂಮಿಗ್ ಎಂದು ಡಾ. ಸುನೀತ ಶೆಟ್ಟಿಯವರು ಬರೆದ ಹಾಡನ್ನು ಮುಂಬಯಿಯಲ್ಲಿ ಕೇಳಿದ್ದೆ. ಆದರೆ ಕಳೆದ ವರ್ಷ ಮಣಿಪಾಲದ ನಮ್ಮ ಮನೆಯಲ್ಲಿ ಕುಳಿತ್ತಿದ್ದವಳಿಗೆ ಸುನಂದ ಆಳ್ವರ phone ಬಂತು ಎಲ್ಲಿದ್ದಿಯಾ ನಾನು ಅಜ್ಜಿ ಮನೆಗೆ ಕೆಡ್ಡಸಕ್ಕೆ ಹೋಗುತ್ತಿದ್ದೇನೆ ಬರುತ್ತಿಯಾ ಎಂದರು.. ಹೌದು ಬರುತ್ತೇನೆ ಎಂದೆ . ನನಗೆ “ಕೆಡ್ಡಸ” ದ ತಲೆ ಬುಡವೇ ಗೊತ್ತಿಲ್ಲ ಸುನೀತಕ್ಕ ಬರೆದ ಪದ್ಯಕೇಳಿ ಗೊತ್ತು. ಇಲ್ಲಿ.. ನನಗೆ ಸುನಂದ ಆಳ್ವರ ಅಜ್ಜಿ ಮನೆಗೆ ಹೋಗುವ ತವಕವಲ್ಲ ಕೆಡ್ಡಸದ ಬೆನ್ನು ಹತ್ತಿ ಹೋದವಳು ನಾನು . ಕೆಡ್ಡಸದ ಬಗ್ಗೆ ಅರಿವು ಮೂಡಿಸಿಕೊಳ್ಳುವ ತವಕ ಇತ್ತು.
ಅಂದು ಆಳ್ವರ ಮನೆ ಅಂಗಳಕ್ಕೆ ಇಳಿಯುತ್ತಲೆ ಸೆಗಣಿ ಸಾರಿಸಿದ ಅಂಗಳ ಕಂಡೆ. ಇತ್ತೀಚಿಗೆ ಎಲ್ಲ ಅಂಗಳ ಸಿಮೆಂಟ್ ಮಯ . ತುಳಸಿ ಕಟ್ಟೆಯೆದುರು ದೊಡ್ಡ ಎಲೆ ಯನ್ನು ಮಣೆಯ ಮೇಲೆ ಇಟ್ಟು ಕೆಡ್ಡಸ ಬಳಸಲು ಅಜ್ಜಿ ಸೀರೆ ನೇರಿಗೆ ಸೊಂಟಕ್ಕೆ ಸಿಕ್ಕಿಸಿ ಕೊಂಡು ರೆಡಿಯಾಗಿದ್ದರು.
ನಿಜವಾಗಿಯು ಇದು ಅರ್ಥ ಗರ್ಭಿತ ಹಬ್ಬಗಳ ಆಚರಣೆ . ಜನ್ಮದಿನ ಆಚರಿಸಿ ಕೇಕ್ ಕತ್ತರಿಸಲು ಕರೆಯುವ ಗೆಳತಿಯರ ಎದುರು ಸುನಂದ ಆಳ್ವರು ಹಾಗೂ ಅವರ ಕುಟುಂಬ ನನಗೆ ಅತಿ ಎತ್ತರದಲ್ಲಿ ಕಂಡರು . ಮೊದಲು ಜನ್ಮ ಭೂಮಿ ನಂತರ ಮತ್ತೇಲ್ಲ .ಈ ತರದ ಆಚರಣೆಗೆ ಬೆಲೆ ಕೊಟ್ಟು ಆಚರಿಸುವುದಕ್ಕೆ ಮೆಚ್ಚುಗೆ ನೀಡಬೇಕೆನಿಸಿತು.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.