‘ಮರಗಿಡಗಳ ಕಲೆಯ ಒರೆಸಿ, ಹಿಮ ಬಿದ್ದ ನೆಲವ ಒರೆಸಿ’ ಎಂಬ ಕವಿವಾಣಿಯು ಹೇಗೆ ಸೂರ್ಯನಿಗೆ ಅನ್ವಯಿಸುತ್ತದೆಯೋ ಹಾಗೆಯೇ ತಮ್ಮ ಕ್ರೀಡಾ ಸಾಧನೆಯ ಕಿರೀಟದೊಂದಿಗೆ ಅನೇಕ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿರುವ ಹೆಮ್ಮೆಯ ಬಂಟ ಕ್ರೀಡಾ ಸಾಧಕ ಡಾ.ಕರುಣಾಕರ ಶೆಟ್ಟಿಯವರು 15-05-1983 ರಲ್ಲಿ ವಿಠಲ್ ಶೆಟ್ಟಿ ಮತ್ತು ಕುಮುದಾಕ್ಷಿ ಶೆಟ್ಟಿ ದಂಪತಿಗಳ ದ್ವಿತೀಯ ಪುತ್ರನಾಗಿ ಬೆಳ್ತಂಗಡಿ ತಾಲೂಕಿನ ಮುಂಡಾಡಿಯಲ್ಲಿ ಜನಿಸಿದರು. ಕರುಣಾಕರ ಶೆಟ್ಟಿ ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ ವಿದ್ಯಾಲಯ ಮಡಂತ್ಯಾರಿನಲ್ಲಿ ವ್ಯಾಸಂಗ ಮಾಡಿ ತನ್ನ B.P.Ed ಪದವಿಯನ್ನು ಆಳ್ವಾಸ್ ಕಾಲೇಜು ಮೂಡಬಿದಿರೆಯಲ್ಲಿ ಮುಗಿಸಿದರು. ನಂತರ ತಮ್ಮ M.P.Ed ಪದವಿಯನ್ನು 2006-2008 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು.
ಶಾಲಾ ದಿನಗಳಲ್ಲಿ ಊರಿನ ವಿವಿಧ ಸಂಘ ಸಂಸ್ಥೆಗಳು ಆಯೋಜಿಸುತ್ತಿದ್ದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಹಿರಿಯ ಕ್ರೀಡಾಪಟುಗಳ ಆಟದ ಶೈಲಿಯು ಡಾ.ಕರುಣಾಕರ ಶೆಟ್ಟಿಯವರ ಕ್ರೀಡಾ ಬಲವನ್ನು ಹೆಚ್ಚಿಸಿತ್ತು. ಆದರೆ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಮತ್ತು ತರಬೇತಿ ಸಿಗದೆ ಶಾಲಾ ಹಂತದಲ್ಲೇ ಕಬಡ್ಡಿ ಆಟದ ಕಡೆಗೆ ಒಲವಿದ್ದರೂ ಹೆಚ್ಚಿನ ಸಾಧನೆಗೆ ಸಾಧ್ಯವಾಗಿರಲಿಲ್ಲ. ನಂತರ ಕಾಲೇಜು ಹಂತದಲ್ಲಿ ಸ್ಪರ್ಧಿಸಲು ಪ್ರಾರಂಭಿಸಿ ಕಬಡ್ಡಿಯಲ್ಲಿ ತಮ್ಮ ಗೆಲುವಿನ ನಾಗಲೋಟವನ್ನು ಪ್ರಾರಂಬಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದಿರೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಕಬಡ್ಡಿ ತರಬೇತುದಾರರಾಗಿ 2008 ರಿಂದ 2011 ರವರೆಗೆ ಕರ್ತವ್ಯ ನಿರ್ವಹಿಸಿ 2011 ರಿಂದ ಕೆ.ಎಸ್ ಹೆಗ್ಡೆ ಮೆಡಿಕಲ್ ವಿದ್ಯಾಲಯ ದೇರಳಕಟ್ಟೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿಯೊಂದಿಗೆ 2014 ರಲ್ಲಿ NET ಪರೀಕ್ಷೆಯಲ್ಲಿ ತೇರ್ಗಡೆ ಪಡೆದು 2012-2019 ರಲ್ಲಿ ಡಾ.ಎಂ ಪುಷ್ಪರಾಜನ್ ರವರ ಮಾರ್ಗದರ್ಶನದಲ್ಲಿ ಕರ್ಪಗಮ್ ಉನ್ನತ ಶಿಕ್ಷಣ ಅಕಾಡೆಮಿ ಕೊಯಮತ್ತೂರಿನಿಂದ Ph.D ಪದವಿಯನ್ನು ಪಡೆದರು. 2005-2006 ರಲ್ಲಿ ಆಳ್ವಾಸ್ ಕಾಲೇಜಿನಿಂದ ‘Best outgoing student’ ಎಂಬ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಇವರು ಹಲವಾರು ಪ್ರಶಸ್ತಿ ಪತ್ರಗಳಿಗೂ ಭಾಜನರಾಗಿದ್ದಾರೆ. 2012 ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 2019 ರಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ವತಿಯಿಂದ 2003 ರಲ್ಲಿ ನಡೆದ ಎನ್.ಸಿ.ಸಿ ಸರ್ಟಿಫಿಕೇಟ್ ಬಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಇವರ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಮೂರು ಸಂಶೋಧನಾ ಪತ್ರಿಕೆಗಳು ಇದುವರೆಗೆ ಪ್ರಕಟಗೊಂಡಿವೆ. ಸಾಧನೆಯ ಶಿಖರವನ್ನೇರಿದ ಡಾ.ಕರುಣಾಕರ ಶೆಟ್ಟಿಯವರ ಕ್ರೀಡಾ ಸಾಧನೆಗಳ ವಿವರ ಇಂತಿದೆ:
2004 ರಲ್ಲಿ ಉತ್ತರಾಂಚಲ್ ನಲ್ಲಿ ನಡೆದ ರಾಷ್ಟ್ರೀಯ ಕರಾವಳಿ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ. 2006-2007 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ನಡೆದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ.
2007-08 ರಲ್ಲಿ ಪೆರಿಯಾರ್ ವಿಶ್ವವಿದ್ಯಾನಿಲಯ ಸೇಲಂನಲ್ಲಿ ನಡೆದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ. 2007-08 ರಲ್ಲಿ ಎಸ್.ಡಿ.ಎಂ ಕಾಲೇಜು ಉಜಿರೆಯಲ್ಲಿ ನಡೆದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ. 2007-08 ರಲ್ಲಿ ಎಮ್.ಜಿ.ಎಮ್ ಕಾಲೇಜು ಉಡುಪಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ. ಯಾವುದೇ ಫಲಾಪೇಕ್ಷೆಯನ್ನು ಬಯಸದೆ ಸಂಘ ಸಂಸ್ಥೆಗಳ ಪರವಾಗಿ ತರಬೇತುದಾರರಾಗಿ ನೂರಕ್ಕೂ ಹೆಚ್ಚು ಯುವ ಪ್ರತಿಭೆಗಳನ್ನು ಸಾಧನೆಯ ಗೆರೆಗೆ ತಲುಪಿಸಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಶಸ್ತಿಗಳಿಗೆ ಅಪೇಕ್ಷಿಸದೆ ತಮ್ಮ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಮುನ್ನಡೆಸುತ್ತಾ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತಹ ಇವರ ಅಸಾಧಾರಣ ಗುಣ ಇತರರಿಗೂ ಸ್ಪೂರ್ತಿಯಾಗಿದೆ.
ಇವರ ತರಬೇತಿಯಲ್ಲಿ ಪಳಗಿದ ಕಬಡ್ಡಿ ಕ್ರೀಡಾಪಟುಗಳಾದ ಸುಕೇಶ್ ಹೆಗ್ಡೆ, ಸಚಿನ್ ಸುವರ್ಣ, ದಿವಿಶ್, ರೋಹಿತ್ ಮಾರ್ಲ, ಸತ್ಯನ್, ಚೇತನ್ ಸುವರ್ಣ ಇಂದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಉದ್ಯೋಗವನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಅಷ್ಟೇ ಅಲ್ಲದೆ ಸ್ವಸ್ಥಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ವತಿಯಿಂದ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ರಾಣಿ ಅಬ್ಬಕ್ಕ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.
“ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ” ಎನ್ನುವ ಮಾತಿನಂತೆ ಕ್ರೀಡೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ದೃಢ ಶರೀರದ ಜೊತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತದೆ. ಆಟೋಟಗಳಿಗೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನವಿದೆ. ಅವಕಾಶಗಳೂ ಕೂಡಾ ಅಪರಿಮಿತ. ಮಾರ್ಗದರ್ಶನ ಪಡೆಯಲು ಸಿಗುವ ಅನೇಕ ಅವಕಾಶಗಳನ್ನು ವಿನಿಯೋಗಿಸಿಕೊಂಡು ಕ್ರೀಡೆಯ ಜೊತೆಗೆ ಕಲಿಕೆಯ ಕಡೆಗೂ ಗಮನಹರಿಸುವುದು ಅತೀ ಮುಖ್ಯ. ಕ್ರೀಡಾಕ್ಷೇತ್ರದಲ್ಲಿ ಸಿಗುವ ಸಣ್ಣ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡರೆ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವ ಅವಕಾಶಗಳು ಒದಗುತ್ತದೆ” ಎನ್ನುವುದು ಯುವಪ್ರತಿಭೆಗಳಿಗೆ ಇವರ ಕಿವಿಮಾತು. ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಸಂಘದ ಜೊತೆ ಕಾರ್ಯದರ್ಶಿಯಾಗಿ, ಕ್ರೀಡಾ ಭಾರತಿ ಮಂಗಳೂರು ಸಂಸ್ಥೆಯ ಸಕ್ರಿಯ ಸದಸ್ಯನಾಗಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಘದ ಅಜೀವ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ.ಕರುಣಾಕರ ಶೆಟ್ಟಿಯವರು ತಮ್ಮ ಪತ್ನಿ ಎ.ಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ವಿಶ್ಮಿತಾ ಶೆಟ್ಟಿ ಹಾಗೂ ಮಗಳು ಶನಾಯ ಶೆಟ್ಟಿ ಇವರೊಂದಿಗೆ ಸುಖಮಯ ಜೀವನ ಸಾಗಿಸುತ್ತಿದ್ದಾರೆ. ಅದೆಷ್ಟೋ ಕ್ರೀಡಾ ಪ್ರತಿಭೆಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣರಾದ ಡಾ. ಕರುಣಾಕರ ಶೆಟ್ಟಿಯವರ ಕೀರ್ತಿ ಪತಾಕೆ ಇನ್ನೂ ಎತ್ತರಕ್ಕೆ ಸಾಗಲಿ. ಇವರ ಸಾಧನೆಯ ಹಾದಿ ಇತರರಿಗೂ ಸ್ಪೂರ್ತಿಯಾಗಲಿ. ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲಿ. ಇವರ ಮಾರ್ಗದರ್ಶನದಲ್ಲಿ ಇನ್ನೂ ಅನೇಕ ಕ್ರೀಡಾಪ್ರತಿಭೆಗಳು ಹೊರ ಹೊಮ್ಮಲೆನ್ನುವುದೇ ನಮ್ಮೆಲ್ಲರ ಆಶಯ. ಬಂಟ ಸಮಾಜದ ತೆರೆಮರೆಯ ಯಶಸ್ವಿ ಸಾಧಕರಲ್ಲಿ ನೀವು ಒಬ್ಬರು. ನಿಮಗೆ ಬಂಟ್ಸ್ ನೌ ತಂಡದ ಪರವಾಗಿ ಧನ್ಯವಾದಗಳು.
Next Article ನಾಳೆ ವೀರ ರಾಣಿ ಅಬ್ಬಕ್ಕ ಉತ್ಸವ