ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ 2022- 23ನೇ ಸಾಲಿನ ವೀರ ರಾಣಿ ಅಬ್ಬಕ್ಕ ಉತ್ಸವ ಫೆ. 4ರಂದು ಶನಿವಾರ ಉಳ್ಳಾಲದ ಮಹಾತ್ಮಾಗಾಂಧಿ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಫೆ. 4ರಂದು ಬೆಳಗ್ಗೆ 8.30ಕ್ಕೆ ತೊಕ್ಕೊಟ್ಟು ಮೇಲ್ಸೇತುವೆಯಿಂದ ವೀರರಾಣಿ ಅಬ್ಬಕ್ಕ ಉತ್ಸವ ವೇದಿಕೆಗೆ ಜಾನಪದ ದಿಬ್ಬಣ ಹೊರಡಲಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಸಿ. ಸೋಮಶೇಖರ್ ಮತ್ತು ಕೆಎಸ್ಆರ್ಪಿ ಕಮಾಂಡೆಂಟ್ ಬಿ.ಎಂ. ಪ್ರಸಾದ್ ದಿಬ್ಬಣ ಉದ್ಘಾಟಿಸಲಿದ್ದಾರೆ ಎಂದರು. ಬೆಳಗ್ಗೆ 10ಕ್ಕೆ ಮಂಗಳೂರು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾಂತಾರ ಚಲನಚಿತ್ರ ಖ್ಯಾತಿಯ ನಟಿ ವಿದುಷಿ ಮಾನಸಿ ಸುಧೀರ್ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬ್ಯಾರಿ ಭಾಷಾ ಸಾಂಸ್ಕೃತಿಕ ಕಾರ್ಯಕ್ರಮ, ಬಹು ಬಾಷಾ ಕವಿ- ಕಾವ್ಯ-ಗಾಯನ, ಸ್ಥಳೀಯ ಪ್ರತಿಭೆಗಳ ಮತ್ತು ಅಬ್ಬಕ್ಕ ಉತ್ಸವ ಸಮಿತಿಯ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಯು.ಟಿ. ಖಾದರ್ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಉಳ್ಳಾಲ ಮೋಹನ್ ಕುಮಾರ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ, ಗೌರವ ಅಧ್ಯಕ್ಷ ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಅಸೈಗೋಳಿ, ಉಪಾಧ್ಯಕ್ಷ ಯು.ಪಿ. ಆಲಿಯಬ್ಬ, ದೇವಕಿ ಆರ್. ಉಳ್ಳಾಲ ಪತ್ರಿಕಾಗೋಷ್ಠಿಯಲ್ಲಿದ್ದರು.