ಸಮಾಜದ ಬಗ್ಗೆ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಸಮಾಜದ ಬಲವರ್ಧನೆಗೆ ಎಲ್ಲರೂ ಸದಸ್ಯರಾಗ ಬೇಕು. ಶೇಕಡಾ 90 ರಷ್ಟು ಮಂದಿ ಸದಸ್ಯರಾಗದೆ ಉಳಿದಿದ್ದಾರೆ. ಅಂತವರನ್ನು ಒಟ್ಟು ಸೇರಿಸಿ ಸಮಾಜವನ್ನು ಕಟ್ಟುವ ಕೆಲಸ ನಡೆಯಬೇಕು. ಪರಸ್ಪರ ಬಾಂಧವ್ಯ, ಪ್ರೀತಿ, ವಿಶ್ವಾಸ, ಸಹಕಾರ ಬಂಟ ಸಮಾಜದ ಅಡಿಪಾಯವಾಗಿದ್ದು, ಅದು ಅಳಿವಿನಂಚಿನಲ್ಲಿದೆ. ನಮ್ಮ ಉನ್ನತ ಆಚಾರ ವಿಚಾರ, ಸಂಸ್ಕಾರ ಉಳಿಸ ಬೇಕು. ಈ ನಿಟ್ಟಿನಲ್ಲಿ ಬಾಂಧವ್ಯವನ್ನು ಬೆಸೆಯುವ ಸದುದ್ದೇಶದಿಂದ ಬಾಂಧವ್ಯ ಎಂಬ ಮಾಹಿತಿ ಸಂಗ್ರಹ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ವಠಾರದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ 102 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಬಂಟ ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವು ಪ್ರವರ್ಗ 2 ಎಯಲ್ಲಿ ಸೇರಲು ಅರ್ಹರಾಗಿದ್ದರೂ ನಮ್ಮನ್ನು ಪ್ರವರ್ಗ 3 ಬಿಯಲ್ಲಿ ಸೇರಿಸಿರುವ ಕಾರಣ ಬಂಟ ಸಮಾಜವು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗಿ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ. ನಮ್ಮನ್ನು ಪ್ರವರ್ಗ 3 ಬಿಯಿಂದ ಪ್ರವರ್ಗ 2ಎಗೆ ಸೇರ್ಪಡೆಗೊಳಿಸಲು ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಮೀಸಲಾತಿಯಲ್ಲಿ ಸೇರಿಸುವ ಉದ್ದೇಶದಿಂದ ನಮ್ಮ ಸಮಾಜದ ನಿಜವಾದ ಸ್ಥಿತಿಗತಿಯನ್ನು ಸರಕಾರದ ಗಮನಕ್ಕೆ ತರುವಂತೆ ಮಾಡಲಾಗುವುದು ಎಂದವರು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಕೃಷ್ಣ ಪ್ರಸಾದ್ ರೈ 2021-2022 ರ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಮಂಡನೆ ಮಾಡಿದರು. ಬಳಿಕ ವಿದ್ಯಾರ್ಥಿ ಭವನಗಳ, ಶಾಲಾ ಕಾಲೇಜುಗಳ ಹಾಗೂ ತಾಲೂಕು ಸಮಿತಿಗಳ ವಾರ್ಷಿಕ ವರದಿ ಮಂಡನೆ ನಡೆಯಿತು. ಉಮೇಶ್ ರೈ, ಶಾಲಿನಿ ಶೆಟ್ಟಿ, ಚೇತನ್ ಶೆಟ್ಟಿ, ಡಾ ಸಂಜೀವ ರೈ, ಕಾವು ಹೇಮನಾಥ ಶೆಟ್ಟಿ, ಉಲ್ಲಾಸ್ ಆರ್ ಶೆಟ್ಟಿ, ಜೈರಾಜ್ ಬಿ ಹೆಗ್ಡೆ, ಎ ಸುಧಾಕರ ಶೆಟ್ಟಿ, ಬಿ ಮಣಿರಾಜ್ ಶೆಟ್ಟಿ, ದಯಾನಂದ ರೈ ಮನವಳಿಕೆಗುತ್ತು, ರಾಮಣ್ಣ ರೈ, ಮುಕ್ತಾನಂದ ರೈ ಮೊದಲಾದವರು ಆಯಾಯಾ ತಾಲೂಕು ಸಮಿತಿಯ ವರದಿಯನ್ನು ಮಂಡಿಸಿದರು. ಬಳಿಕ ಲೆಕ್ಕಪರಿಶೋಧಕರ ಮತ್ತು ಆಂತರಿಕ ಲೆಕ್ಕ ಪರಿಶೋಧಕರ ನೇಮಕಾತಿ ನಡೆಯಿತು. ತದನಂತರ 2022-2025 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ನೂತನ ಕಾರ್ಯದರ್ಶಿ ಕೆ ಎಂ ಶೆಟ್ಟಿ, ಕೋಶಾಧಿಕಾರಿ ರಾಮ್ ಮೋಹನ್ ರೈ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಕಿರಣ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.