“ಗಜಮುಖನೆ ಗಣಪತಿಯೇ ನಿನಗೆ ವಂದನೆ, ನಂಬಿದವರ ಪಾಲಿನ ಕಲ್ಪತರು ನೀನೆ….!”ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ವಾಡಿಕೆ ಬರುವಂತಹ ವಿಶೇಷ ಶ್ಲೋಕ….!ಅದೇ ರೀತಿ ಗಣಪತಿ ಮತ್ತು ಇನ್ನಿತರ ದೇವತೆಗಳನ್ನು ಸ್ಮರಿಸುವುದಾದರೆ ಗಣಪತಿಗೆ ಮೊದಲ ಪಂತಿಯ ಅಗ್ರಸ್ಥಾನ ಹಾಗೂ ಗಣಪತಿಗೆ ಮೊದಲ ಆರಾಧಿತ ಎಂದು ಕರೆಯುತ್ತೇವೆ. ಮೋದಕ ಗಣೇಶ, ಹಾಗೆ ಹೊಟ್ಟೆ ಗಣೇಶ, ಜಡೆ ಗಣೇಶ, ಇವುಗಳಲ್ಲಿ ವಿಶೇಷವಾದಂತಹ ಗಣಪತಿಯು ಮಾನವನ ಬದುಕಿನ ಜೊತೆಗೆ ಅವಿನಾಭವ ಸಂಬಂಧವನ್ನು ಹೊಂದಿದೆ. ಯಾಕೆಂದರೆ ಮನುಷ್ಯನಿಗೆ ಕಷ್ಟಗಳು ಬಂದಾಗ ಮೋದಕ ಪ್ರಿಯನಾ ನೆನಪು ಮಾಡಿಕೊಂಡು, ಆ ಕಷ್ಟವನ್ನ ಭಗವಂತನಲ್ಲಿ ಸ್ಮರಿಸುತ್ತೇವೆ. ಕಷ್ಟಗಳು ನಿವಾರಣೆಯಾದಾಗ ಗಣಪತಿಗೆ ಹರಿಕೆ ರೂಪದಲ್ಲಿ ಹಣ್ಣು ಕಾಯಿಯನ್ನ ಅರ್ಪಿಸಿ ನಾವು ನಮಸ್ಕರಿಸುತ್ತೇವೆ. ಅದೇ ರೀತಿ ವಿಶೇಷವಾದ ಗಣಪತಿಯನ್ನು ನಾವಿಂದು ತಿಳಿದುಕೊಳ್ಳಾದರೆ ನೇರವಾಗಿ ಚಿತ್ರದುರ್ಗ ಜಿಲ್ಲೆಯತ್ತ ಧಾವಿಸಿದರೆ, ನಮಗೆ ಜಡೆ ಗಣಪತಿಯಾ ದರುಶನವಾಗುತ್ತದೆ. ಬದುಕಿನ ಸಂಕಷ್ಟಗಳನ್ನ ನಿವಾರಿಸುವ ಜಡೆ ಗಣಪತಿಯು ಜಿಲ್ಲೆಯ ಸಮಸ್ತ ಭಕ್ತಾದಿಗಳನ್ನ ತನ್ನತ್ತ ಸೆಳೆದುಕೊಳ್ಳುವ ಚಾಕ ಚಕ್ಯತೆ ಈ ಗಣೇಶನಿಗೆ ಇದೆ. ಯಾಕೆಂದರೆ ಹಲವಾರು ಬಾರಿ ಭಕ್ತಾದಿಗಳು ಹರಕೆಯನ್ನು ಹೊತ್ತು ಬಂದಾಗ ಕ್ಷಣಾರ್ಧದಲ್ಲೇ ತಮ್ಮ ಕಷ್ಟವನ್ನು ನೀಗಿಸುವಂತಹ ಪರಿಹಾರ ಕರ್ತನಾಗಿ ಇದುವರೆಗೂ ದರ್ಶನ ನೀಡುತ್ತಿರುವುದು ಭಕ್ತಾದಿಗಳ ಭಾಗ್ಯ ಅಂತಾನೆ ಹೇಳಬಹುದು.
“ಇಲ್ಲಿ ಕಂಡುಬರುವ ವಿನಾಯಕ ಎಲ್ಲರಂಥಲ್ಲ. ಜಡೆಯೇ ಇವನ ವಿಶೇಷ. ಅದಕ್ಕಾಗಿಯೇ ಈತ `ಜಡೆ ಗಣಪ’. ಗಣಪತಿ ಮೂರ್ತಿ ಹಿಂದೆ ಜಡೆ ಇದ್ದು, ಇದು ಸ್ತ್ರೀ ರೂಪ ಅಂದರೆ ಸಾಕ್ಷಾತ್ ಪಾರ್ವತಿಯ ಸ್ವರೂಪವಾಗಿದೆ. ಉಗ್ರ ನರಸಿಂಹ ಸ್ವಾಮಿಯು ಗಣಪತಿಯ ಕೈಯಲ್ಲೇ ಆಸೀನನಾಗಿದ್ದಾನೆ. ಭಕ್ತರಿಗೆ ಅಭಯ ನೀಡುತ್ತಿರುವ ಅಪೂರ್ವ ಗಣೇಶ ಕೂಡ ಈತ.
ಕುಜ ದೋಷ ಮತ್ತು ಕೇತು ದೋಷ ಪರಿಹಾರಕ್ಕೆ ಪ್ರಸಿದ್ಧಿ ಹೊಂದಿರುವ ಈ ದೇವಾಲಯದಲ್ಲಿ ಏಕಶಿಲಾಮೂರ್ತಿ `ಜಡೆ ಗಣಪ’ ಬಲು ಆಕರ್ಷಣೀಯ. ಸಂಕಷ್ಟಹರ ಬಯಲು ಗಣಪ, ಜಡೆ ಗಣಪತಿ ಎಂದೂ ಪ್ರಖ್ಯಾತಿ ಯಾಗಿರುವ ಈ ದೇವಸ್ಥಾನ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಶಿಲ್ಪ ಆಗಮ ಶಾಸ್ತ್ರದ ಪ್ರಕಾರ 21 ಗಣಪತಿ ಪ್ರಭೇದಗಳಿವೆ. ಅವುಗಳಲ್ಲಿ ಒಂದಾದ ಪ್ರಸನ್ನ ಗಣಪತಿಗೆ ನಾಲ್ಕು ಕೈಗಳು. ಮೇಲಿನೆರಡರಲ್ಲಿ ಪಾಶ, ಅಂಕುಶಗಳು ಇದ್ದರೆ, ಕೆಳಗಿನ ಕೈಗಳು ಅಭಯ, ವರದ ಮುದ್ರೆಗಳನ್ನು ಪ್ರದರ್ಶಿಸುತ್ತವೆ. ಪ್ರಸನ್ನ ಮುಖಮುದ್ರೆ ಇರುವುದರಿಂದ ಶ್ರಿ ಪ್ರಸನ್ನ ಗಣಪತಿ ಎಂಬ ಹೆಸರು. ಈ ಗಣಪತಿ ಸರ್ವಾಭರಣ ಪ್ರಿಯ. ನರಸಿಂಹ ಸ್ವಾಮಿ ಸುಬ್ರಹ್ಮಣ್ಯನ ಅಂಶವುಳ್ಳ ದೇವತೆ. ಗಣಪತಿ ಮೂಲಾಧಾರ ಕ್ಷೇತ್ರಸ್ಥಿತನಾಗಿ ಕುಂಡಲಿನೀ ಶಕ್ತಿ ಪ್ರಚೋದಕರಾಗಿ ಉಗ್ರಸ್ವಾಮಿಯೊಂದಿಗೆ ನೆಲೆಸಿದ್ದಾನೆ. ಇಷ್ಟಾರ್ಥ ಸಿದ್ಧಿಗಾಗಿ ಬರುವ ಭಕ್ತ ಸಮೂಹ ಇಲ್ಲಿಗೆ ಬಂದು ಯಾವುದೇ ಬೇಡಿಕೆಯನ್ನಿಟ್ಟರೂ ನೆರವೇರುತ್ತದೆ ಎನ್ನುವ ಅಪಾರ ನಂಬಿಕೆ ಭಕ್ತರಲ್ಲಿದೆ.
ಈ ಗಣಪನ ಮತ್ತೊಂದು ವಿಶೇಷ ಏನೆಂದರೆ, ಮದುವೆ, ಸಂಪತ್ತು, ಆಶ್ವರ್ಯ, ಸಂತಾನ ಭಾಗ್ಯ ಹೀಗೆ ಹಲವು ಸಂಸಾರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತುಂಬಾ ಶಕ್ತಿ ಶಾಲಿ ಗಣಪ ಎಂದೇ ಪ್ರಸಿದ್ಧಿವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಇರದಂಥ ಗಣಪ ಇದಾಗಿದ್ದು ಈತನಿಗೆ ಪುರುಷರು ಮತ್ತು ಮಹಿಳೆಯರು ಏಕಕಾಲದಲ್ಲಿ ಪೂಜೆ ಮಾಡಿದ್ರು ಗಣಪನ ಹಿಂಭಾಗದಲ್ಲಿ ಕೇವಲ ಮಹಿಳೆವರು ಮಾತ್ರ ಪೂಜೆ ಮಾಡುತ್ತಾರೆ. ಈ ಗಣಪನಿಗೆ ಉದ್ದನೆಯ ಜಡೆ ಇದ್ದು ಮಹಿಳೆಯರು ಜಡೆಗೆ ಬೆಣ್ಣೆ ಹಚ್ಚಿ ಪೂಜೆ ಮಾಡುತ್ತಾರೆ ಕಾರಣ ಗಣಪನ ಜಡೆಯೆಂತೆ ತಮಗೂ ಕೂಡ ಉದ್ದನೆಯ ಕೇಶ ರಾಶಿ ಬರುತ್ತದೆ ಎಂಬ ನಂಬಿಕೆಯಿಂದ ಪೂಜೆ ಮಾಡಲಾಗುತ್ತದೆ. 16.5 ಅಡಿ ಎತ್ತರ ಮತ್ತು 12.5 ಅಡಿ ಅಗಲವಿರುವ ಗಣಪತಿಗೆ ಬೆಣ್ಣೆ ಪೂಜೆಗೆ 85 ಕೆ.ಜಿ. ಬೆಣ್ಣೆ ತಂದು ಪೂಜೆ ಮಾಡಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ಅಪಾರ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.
ಇಲ್ಲಿ ಒಂಟಿ ಕಂಬದ ಮಠವಿದೆ. ಮುರುಗ ಮಠದ ಪ್ರಸಿದ್ಧ ಶಾಖೆ ಇದಾಗಿದೆ. ಈ ಮಠಕ್ಕೆ ಸುಮಾರು 300 ವರ್ಷಗಳ ಇರಿಹಾಸವಿದೆ. ಈ ಮಠದ ಮಂಟಪವು ಬರೀ ಒಂದೇ ಒಂದು ಕಂಬದ ಮೇಲೆ ನಿಂತಿದೆ ಹಾಗಾಗಿ ಒಂಟಿ ಕಂಬದ ಮಠ ಎಂಬ ಹೆಸರು ಪಡೆದಿದೆ. ಈ ಮಂಟಪದ ಮುಂದೆ ಒಂದು ಕಲ್ಯಾಣಿ ಇದೆ. ಇಲ್ಲಿ ಕಡುಬಿನ ಹಾರ, ಕುಂಕುಮ ಪೂಜೆ, ಅಭಿಷೇಕ. ಕ್ಷೀರಾಭಿಷೇಕ, ರುದ್ರಾಭಿಷೇಕ, ತೈಲಾಭಿಷೇಕ, ಹೂವಿನ ಪೂಜೆ, ಜನ್ಮ ದಿನಾಚರಣೆ ಶಾಂತಿ, ವಿವಾಹ ಸಮಾರಂಭಗಳು ನಡೆಯುತ್ತವೆ. ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜೆ ಹಾಗೂ ಪ್ರಭಾವಳಿ ಅಲಂಕಾರ ಪೂಜೆ ಮಾಡಲಾಗುತ್ತದೆ. ದೇವಸ್ಥಾನದ ಸಮಯ: ಬೆಳಿಗ್ಗೆ 6.30ರಿಂದ ರಾತ್ರಿ 9.30ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಐತಿಹಾಸಿಕ ಪುರಾಣ ಪ್ರಸಿದ್ಧ ಜಡೆ ಗಣಪತಿಯ ದೇವಸ್ಥಾನ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯು ಶಿವಮೊಗ್ಗದಿಂದ 80 ಕಿ.ಮೀ, ಚಿತ್ರದುರ್ಗದಿಂದ 60ಕಿ.ಮೀ, ದಾವಣಗೆರೆಯಿಂದ 60 ಕಿ.ಮೀ ದೂರದಲ್ಲಿದೆ.
” ಭಕ್ತರನ್ನ ಸಲಹುವ ಲಂಬೋದರನಾ ದರುಶನವನ್ನು ಪಡೆದು ಪುನೀತರಾಗುವುದರೊಂದಿಗೆ ಭಕ್ತ ಮಹಾಶಯದ ಸಂಕಷ್ಟವನ್ನು ನಿವಾರಿಸುವ ಜಡೆ ಗಣಪತಿ ದೇಗುಲವು ಕರ್ನಾಟಕದಲ್ಲಿ ಪ್ರಸಿದ್ಧ ಹಾಗೂ ಪುರಾಣ ಐತಿಹಾಸಿಕ ದೇಗುಲಗಳಲ್ಲಿ ಈ ಜಡೆ ಗಣಪತಿಯು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಒಮ್ಮೆ ಬಂದು ದರ್ಶನ ಪಡೆದು ಪುನೀತರಾಗೋಣ ಎನ್ನುವುದೇ ನಮ್ಮ ಹಾರೈಕೆ.
ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ಉಡುಪಿ ಜಿಲ್ಲೆ ಪತ್ರಕರ್ತರು ಮಾಧ್ಯಮ ವಿಶ್ಲೇಷಕರು m:9632581508