ಅಡಿಕೆ ಬೆಳೆಗಾರರ ಸಂಕಟಕ್ಕೆ ಬೆಂಬಲ ನೀಡದ ತೋಟಗಾರಿಕಾ ಇಲಾಖೆ; ಎಲೆಚುಕ್ಕಿ ರೋಗದಿಂದ ಬಂಡವಾಳ ನೆಲಸಮ…! ತೋಟದಲ್ಲೇ ಕಮರಿ ಹೋದ ಅಡಿಕೆ ಬೆಳೆಗಾರರ ಕನಸು…..!
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
ದಕ್ಷಿಣ ಕನ್ನಡ ,ಉಡುಪಿ, ಕುಂದಾಪುರ, ಬೈಂದೂರು ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಕಾಡುತ್ತಿರುವ ಎಲೆ ಚುಕ್ಕಿ ರೋಗದಿಂದ ರೈತ ಕಂಗಾಲಾಗಿದ್ದಾನೆ. ಅದಲ್ಲದೆ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗದಿಂದಾಗಿ ಹಾಕಿದ ಬಂಡವಾಳ ನೆಲಸಮವಾಗುತ್ತಿದೆ .ಇದರ ಬಗ್ಗೆ ತೋಟಗಾರಿಕೆ ಇಲಾಖೆ ಮೌನಕ್ಕೆ ಶರಣಾಗಿದ್ದು ,ವಿಪರ್ಯಾಸ ಕರ್ನಾಟಕ ರಾಜ್ಯದಾದ್ಯಂತ ತೋಟಗಾರಿಕೆ ಇಲಾಖೆಯು ಎಲೆಚುಕ್ಕಿ ರೋಗವನ್ನು ಸಮೀಕ್ಷೆ ಮಾಡುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದು ನೆಪ ಮಾತ್ರಕ್ಕೆ, ದಕ್ಷಿಣ ಕನ್ನಡಗೂ ಬಾಹು ಚಾಚಿದ ಎಲೆಚುಕ್ಕಿ ರೋಗ – ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ಜಿಲ್ಲೆಗೆ ವ್ಯಾಪಿಸುವ ಆತಂಕ.ಬೆಳ್ತಂಗಡಿ ಸಂಸೆಯಿಂದ ಸುತ್ತುವರಿದು ಎಳನೀರು ಭಾಗಕ್ಕೆ ಹಬ್ಬಿದ್ದ ಎಲೆಚುಕ್ಕಿರೋಗ ಇದೀಗ ಬೆಳ್ತಂಗಡಿ ತಾಲೂಕಿನ ಕೆಳಭಾಗಕ್ಕೂ ಹಬ್ಬಿರುವುದು ಗೋಚರಿಸುತ್ತಿದೆ. ಸರಕಾರದ ನಿರ್ಲಕ್ಷ್ಯವೋ, ರೈತರ ಅಸಹಾಯಕತೆಯೋ ಅಥವಾ ಪ್ರಕೃತಿ ವೈಪರೀತ್ಯವೋ ಒಟ್ಟಿನಲ್ಲಿ ಅಡಿಕೆ ಬೆಳೆ ನಶಿಸುವ ಆತಂಕ ರೈತರಲ್ಲಿ ಕಾಡಿದೆ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿರುವುದು ಕೃಷಿಕರನ್ನು ನಿದ್ದೆಗೆಡಿಸಿದೆ. ಶಿವಮೊಗ್ಗ, ಕಳಸ ಹಾಗೂ ಸಂಸೆ ಭಾಗಗಳಲ್ಲಿ ಕಳೆದ ಮೂರು ,ವರ್ಷಗಳ ಹಿಂದೆ ರೋಗ ಆವರಿಸಿದ್ದಾಗ ಇದೀ ರೀತಿ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಆ ಭಾಗದ ಅಡಿಕೆ ಕೃಷಿ ಸಂಪೂರ್ಣ ನೆಲಕಚ್ಚಿದೆ. ಅಲ್ಲಿ ಮತ್ತೆ ಹೊಸ ಕೃಷಿ ಅನಿವಾರ್ಯವಾಗಿದೆ. ಇದೀಗ ದ.ಕ. ಭಾಗದಲ್ಲಿ ಅಡಿಕೆ ಧಾರಣೆ ಸದ್ಯ ಸ್ಥಿರತೆ ಕಾಯ್ದುಕೊಂಡರೂ ಮುಂದಿನ ದಿನಗಳಲ್ಲಿ ಬೆಳೆಗೇ ಕುತ್ತು ತಂದುಕೊಳ್ಳುವಂತಾಗಲಿದೆ.
ಮಲವಂತಿಗೆ ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳಲ್ಲಿ ಸುಮಾರು 20534.50 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಈಗಾಗಲೆ ಬಾಧಿಸಿತ್ತು. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಇಲ್ಲಿನ ಸುಮಾರು 200 ಎಕ್ರೆ ಅಡಿಕೆ ತೋಟ ಈಗಾಗಲೇ ನಾಶ ಮಾಡಿದೆ. ಮಲವಂತಿಗೆ ಗ್ರಾಮದ ದಿಡುಪೆ ಪರಿಸರದ ಕೆಲವು ತೋಟಗಳಲ್ಲಿ ಈಗಾಗಲೇ ಎಲೆಚುಕ್ಕಿ ರೋಗ ವ್ಯಾಪಿಸುತ್ತಿದೆ.
ಎಳನೀರು, ದಿಡುಪೆ ಪರಿಸರಕ್ಕೆ ಸುಮಾರು 6 ಕಿ.ಮೀ. ಅಂತರವಿದೆ. ದಿಡುಪೆಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಕಡಿರುದ್ಯಾವರ ಗ್ರಾಮದ ಆಲಂತಡ್ಕ, ಮಲ್ಲಡ್ಕ, ಕುಚ್ಚಾರು ಮೊದಲಾದ ಪರಿಸರಗಳ ವಿಘ್ನೇಶ್ ಪ್ರಭು, ಶ್ರೀಧರ ಗೌಡ, ನೇಮಣ್ಣ ಗೌಡ, ಮಂಜುನಾಥ ಗೌಡ ಹಾಗೂ ಪರಿಸರದ ಹಲವು ತೋಟಗಳಲ್ಲಿ ಎಲೆಚುಕ್ಕಿ ರೋಗ ಲಕ್ಷಣಗಳು ಕಂಡುಬಂದಿದ್ದು, ಸಾವಿರಾರು ಅಡಿಕೆ ಮರ ಹಾಗೂ ಗಿಡಗಳ ಸೋಗೆ ಹಳದಿ ಬಣ್ಣಕ್ಕೆ ತಿರುಗಿದ್ದು ಚುಕ್ಕಿಗಳು ಮೂಡಲಾರಂಭಿಸಿವೆ. ಇಲ್ಲಿಂದ 3 ಕಿ.ಮೀ. ದೂರದಲ್ಲಿರುವ ಮುಂಡಾಜೆಯ ಪರಮುಖದಲ್ಲೂ ಈ ರೋಗದ ಲಕ್ಷಣ ಕಂಡು ಬಂದಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಕೆಲವು ಭಾಗದಲ್ಲಿ ಈ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ ಎಂದು ಕೆಲವು ಕಡೆ ಸಭೆಗಳಲ್ಲಿ ವಿಚಾರ ಪ್ರಸ್ತಾವವಾಗಿತ್ತು. ಅದರಂತೆ ವಿಜ್ಞಾನಿಗಳ ತಂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಲಹೆ ಸೂಚನೆಗಳನ್ನೂ ನೀಡಿತ್ತು. ಆದರೂ ಅಲ್ಲಿ ರೋಗವಿದೆ ಇಲ್ಲಿ ರೋಗ ಪತ್ತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇಲಾಖೆಯನ್ನು ಸಂಪರ್ಕಿಸಿದ್ದೇವೆ
ಕಳೆದ 3 ವರ್ಷಗಳ ಹಿಂದೆ ನೆಟ್ಟ 1500 ಅಡಿಕೆ ಗಿಡಗಳು ಫಸಲು ಬರುವ ಹಂತದಲ್ಲಿದೆ. ಇದೀಗ ಎಲೆಚುಕ್ಕಿ ರೋಗ ಕಂಡುಬರುತ್ತಿದೆ. ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಔಷಧಗಳು ಎಷ್ಟು ಪರಿಣಾಮ ಬೀರುತ್ತವೆ ತಿಳಿದಿಲ್ಲ. ರೈತರು ತತ್ಕ್ಷಣ ಎಚ್ಚೆತ್ತುಕೊಳ್ಳಬೇಕಿದೆ.
-ನೇಮಣ್ಣ ಗೌಡ, ಕೃಷಿಕ, ಕಚ್ಚಾರು, ಕಡಿರುದ್ಯಾವರ
ಸಿಂಪಡಣೆ ಸಮಸ್ಯೆ:-
ಎಲೆಚುಕ್ಕಿ ರೋಗ ವ್ಯಾಪಿಸಿದ ರೀತಿ ನೋಡಿದರೆ ಔಷಧ ಸಿಂಪಡಣೆಯೂ ಪರಿಣಾಮ ಬೀರುತ್ತಿಲ್ಲ. ಅಡಿಕೆಯ ಸೋಗೆಗಳಿಗೆ ಮೇಲ್ಭಾಗದಿಂದ ಔಷಧ ಸಿಂಪಡಣೆ ಮಾಡುವುದು ಕಷ್ಟಸಾಧ್ಯ. ಡ್ರೋನ್ ಆಧಾರಿತ ಯಂತ್ರೋಪಕರಣದಿಂದಷ್ಟೇ ಪೂರ್ತಿ ಸಿಂಪಡಣೆ ಸಾಧ್ಯ. ಇದು ಅಸಾಧ್ಯದ ಮಾತಾಗಿದೆ. ನುರಿತ ಸಿಂಪಡಣೆ ಮಾಡುವ ಕಾರ್ಮಿಕರ ಕೊರತೆಯು ಅತಿಯಾಗಿ ಕಾಡುತ್ತಿದೆ. ಇದಕ್ಕೆ ಸರಕಾರ ಹೆಲಿಕಾಪ್ಟರ್ ಸಹಾಯದಿಂದ ಸಿಂಪಡಣೆಗೆ ಕ್ರಮ ಕೈಗೊಂಡಲ್ಲಿ ಪರಿಣಾಮ ಬೀರಬಹುದಾಗಿದೆ ಎಂಬುವುದು ರೈತರ ಅಭಿಮತವಾಗಿದೆ.
ದಕ್ಷಿಣ ಕನ್ನಡ, ಉಡುಪಿ ,ಕುಂದಾಪುರ, ಬೈಂದೂರು, ಭಟ್ಕಳ, ಸಾಗರ, ಸಿರಸಿ, ಮಲೆನಾಡು ,ಭಾಗವಾದ ಶಿವಮೊಗ್ಗ, ತೀರ್ಥಹಳ್ಳಿ ,ಹೊಸನಗರ, ಈ ಭಾಗಗಳಲ್ಲಿ ಅಡಿಕೆ ಬೆಳೆಗಾರರು ಹೆಚ್ಚು ಇರುವುದರಿಂದ ಪ್ರತಿವರ್ಷವು ಎಲೆ ಚುಕ್ಕಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಬಾಧಿತವಾಗಿರುವುದರಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇನ್ನಾದರೂ ತೋಟಗಾರಿಕಾ ಇಲಾಖೆ ಇದರ ಬಗ್ಗೆ ಗಮನವನ್ನು ಹರಿಸಿ ,ಬಂಡವಾಳ ಹಾಕಿದ ರೈತನಿಗೆ ಅಡಿಕೆ ಬೆಳೆ ನಶಿಸಿ ಹೋಗದೆ, ರೈತನ ಬಂಡವಾಳ ಕಾಪಾಡಿ ಲಾಭ ತರುವಲ್ಲಿ ಯಶಸ್ವಿಯಾಗಬೇಕಾಗಿ ತೋಟಗಾರಿಕೆ ಇಲಾಖೆಯಲ್ಲಿ ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.