ಗುರುಪುರ ಬಂಟರ ಮಾತೃ ಸಂಘದ ನೇತೃತ್ವದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡಂಬೈಲ್ ಡಾ.ರವಿ ಶೆಟ್ಟಿ ದೋಣಿಂಜೆಗುತ್ತು ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ನಡೆಯಿತು.
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಮಾರಂಭವನ್ನು ಉದ್ಘಾಟಿಸಿದರು. ಆಶೀರ್ವಚನ ನೀಡಿದ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಡಾ. ರವಿ ಶೆಟ್ಟಿ ನಮ್ಮೂರ ದೊಡ್ಡ ಆಸ್ತಿ, ಮೇರು ಸಾಧಕರು ಹಾಗೂ ಅರ್ಹರಿಗೆ ಈ ಬಾರಿ ಪ್ರಶಸ್ತಿ ಬಂದಿದೆ, ಇದರಿಂದ ಪ್ರಶಸ್ತಿಯ ಘನತೆ ಹೆಚ್ಚಿದೆ ಎಂದರು.
ಶಾಸಕ ಡಾ. ಭರತ್ ವೈ ಶೆಟ್ಟಿ ಮಾತನಾಡಿ, ದೂರದ ಕತಾರ್ನಲ್ಲಿದ್ದರೂ ಡಾ. ರವಿ ಶೆಟ್ಟಿ ಕೊರೋನಾ ಸಂದರ್ಭ ರಾಜ್ಯ ಮತ್ತು ನಾಡಿನ ಮಂದಿಗೆ ನೆರವಾಗಿರುವ ವ್ಯಕ್ತಿಯಾಗಿದ್ದಾರೆ ಸಮಾಜದ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸುವ ದೊಡ್ಡ ಗುಣ ಅವರಲ್ಲಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ, ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ, ಗಡಿಕಾರ ಪ್ರಮೋದ್ ಕುಮಾರ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಮಂಜುನಾಥ ಭಂಡಾರಿ ಶೆಡ್ಡೆ ಮಾತನಾಡಿದರು. ಮಂಗಳೂರು ಆಗ್ನೇಸ್ ಕಾಲೇಜಿನ ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಅಭಿನಂದನಾ ಭಾಷಣ ಮಾಡಿದರು. ಜಯಲಕ್ಷ್ಮೀ ಸಿ. ಶೆಟ್ಟಿ ನಾರಳ ಸನ್ಮಾನ ಪತ್ರ ವಾಚಿಸಿದರು. ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ಬಡಾಜೆ ರವಿಶಂಕರ ಶೆಟ್ಟಿ, ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ, ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿ, ಗುರುಪುರ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಬಲ ಅಮೀನ್, ಉಷಾ ಶೆಟ್ಟಿ ಗುರುಪುರ ಹಾಗೂ ಬಂಟರ ಸಂಘ ಮತ್ತು ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಡಾ. ರವಿ ಶೆಟ್ಟಿ ಹಿತೈಷಿಗಳು, ಮಿತ್ರರು ಇದ್ದರು. ವಾಮಂಜೂರಿನ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ಕಲಾಲವಿದರು ಭಾಗವತಿಕೆ ಶೈಲಿನಲ್ಲಿ ಗಣಪತಿ ಪ್ರಾರ್ಥನೆಗೈದರು. ಸಂಘದ ಸಂಘಟನಾ ಪ್ರಮುಖ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಶೆಟ್ಟಿ ಬೊಂಡಂತಿಲಗುತ್ತು ನಿರೂಪಿಸಿದರು. ಸಂಘದ ಮಾಜಿ ಅಧ್ಯಕ್ಷ ರಾಜ್ಕುಮಾರ್ ಶೆಟ್ಟಿ ತಿರುವೈಲುಗುತ್ತು ವಂದಿಸಿದರು. ಮಂಗಳೂರಿನ ನಾದ ಸಂಕೀರ್ತನದಿಂದ ‘ಭಕ್ತಿ ಗಾನಸುಧೆ’ ಜರುಗಿತು. ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಡಾ. ರವಿ ಶೆಟ್ಟಿ ಅವರನ್ನು ಸಭಾಭವನದವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಯಿತು.