ಡಾ.ಜಗದೀಶ್ ಶೆಟ್ಟಿಯವರು ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ 12.03.1974 ರಲ್ಲಿ ಜನಿಸಿದರು.ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೋಟೇಶ್ವರದಲ್ಲಿ ಪೂರೈಸಿದ ಇವರು ವೈದ್ಯಕೀಯ ಶಿಕ್ಷಣವನ್ನು ಆಯ್ದುಕೊಳ್ಳುತ್ತಾರೆ.
ವೈದ್ಯಕೀಯ ಶಿಕ್ಷಣವನ್ನು ಪೂರೈಸಿದ ನಂತರ ಕುಂದಾಪುರದ ವಿಜಯಶ್ರೀ ಆಸ್ಪತ್ರೆಯಲ್ಲಿ ಒಂದು ವರ್ಷ ಕಾಲ ಸೇವೆಯನ್ನು ಸಲ್ಲಿಸಿದ್ದರು . ಗ್ರಾಮೀಣ ಜನರ ಬದುಕಿನ ಬವಣೆಯನ್ನು ಮನಗಂಡು ಅವರ ಸೇವೆ ಮಾಡುವ ಉದ್ದೇಶದಿಂದ ಸುಮಾರು ಎರಡು ದಶಕಗಳ ಹಿಂದೆ ಕುಂದಾಪುರ ತಾಲ್ಲೂಕಿನ ಸಿದ್ದಾಪುರದಲ್ಲಿ ‘ವಾಸುಕಿ ಕ್ಲಿನಿಕ್’ ಎನ್ನುವ ತನ್ನ ಸ್ವಂತ ಕ್ಲಿನಿಕ್ ಅನ್ನು ಆರಂಭಿಸಿ ಈ ಭಾಗದ ಜನರ ನೋವು ನಲಿವು ಗಳೊಂದಿಗೆ ಬೆರೆತು ಜನಾನುರಾಗಿ ವೈದ್ಯರಾಗಿ ಹೆಸರು ಗಳಿಸಿಕೊಂಡವರು.
ವೈದ್ಯಕೀಯ ವೃತ್ತಿಯ ಜೊತೆಜೊತೆಗೇ ಕ್ರೀಡಾ ಮತ್ತು ಸಾಂಸ್ಕೃತಿಕ ಲೋಕದಲ್ಲೂ ಇವರು ತಮ್ಮ ಗಮನಾರ್ಹ ಸೇವೆಯನ್ನು ಸಲ್ಲಿಸಿರುತ್ತಾರೆ.ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಮತ್ತು ಕೇರಂನಲ್ಲಿ ಇವರು ರಾಜ್ಯ ಮಟ್ಟದ ಪ್ರತಿಭೆ.ತನ್ನ ಆಕರ್ಷಕ ವಾಕ್ಪಟುತ್ವದ ಮೂಲಕ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಕ್ರಿಕೆಟಿನ ವೀಕ್ಷಕ ವಿವರಣಕಾರರಾಗಿ ಜಿಲ್ಲೆಯಲ್ಲಿ ಹೆಸರು ಮಾಡಿದವರು.
ಇವರಿಗೆ ಕಲೆ- ಸಂಸ್ಕೃತಿಯ ಬಗ್ಗೆ ಅತಿಯಾದ ಒಲವು.ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಗಂಡು ಕಲೆಯಾದ ಯಕ್ಷಗಾನದ ಬಗ್ಗೆ ಇನ್ನಿಲ್ಲದ ಪ್ರೀತಿ .ಸ್ವತಃ ಕೌರವ, ಪರಶುರಾಮ, ರಾಮ ,ಕೃಷ್ಣ, ಸಂಜಯ ಅಕ್ರೂರನಂತಹ ಪಾತ್ರಗಳನ್ನು ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು.ಯಕ್ಷ ಜಿಲ್ಲೆಗಳ ದಿಗ್ಗಜ ಕಲಾವಿದರೊಂದಿಗೆ ಒಡನಾಟವನ್ನು ಹೊಂದಿದವರು.
ತಾಳಮದ್ದಳೆಯಲ್ಲಂತೂ ಇವರ ವಾಕ್ಚಾತುರ್ಯ, ಲಯಬದ್ಧವಾದ ಮಾತುಗಾರಿಕೆ,ಪಾತ್ರ ಜ್ಞಾನ ,ಬಹಳಷ್ಟು ಅಭಿಮಾನಿಗಳನ್ನು ಸೃಷ್ಟಿಸಿದೆ.
ಉತ್ತಮ ಸಂಘಟನಾಕಾರರೂ, ನಾಯಕತ್ವ ಗುಣವನ್ನು ಹೊಂದಿರುವ ಇವರು ಯಕ್ಷಗಾನವನ್ನು ಮುಂದಿನ ಪೀಳಿಗೆಯವರಿಗೂ ತಲುಪಿಸಿ ಸಂಸ್ಕಾರಯುತವಾದ ಸಮಾಜ ನಿರ್ಮಾಣದ ಉದ್ದೇಶದಿಂದ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಯಕ್ಷಗಾನದ ಹೆಜ್ಜೆ ಕಲಿಸುವ ತರಗತಿಗಳನ್ನೂ ಕೂಡ ಸಿದ್ದಾಪುರದಲ್ಲಿ ನಡೆಸುತ್ತಿದ್ದಾರೆ.
ವರ್ಷಂಪ್ರತಿ ಹೆಜ್ಜೆ ಕಲಿತ ಮಕ್ಕಳ ವಾರ್ಷಿಕೋತ್ಸವವನ್ನು ನಡೆಸುವುದರ ಮೂಲಕ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ , ನೊಂದ ಕಲಾವಿದರನ್ನು ಗುರುತಿಸಿ ಕೈಲಾದ ಸಹಕಾರವನ್ನು ನೀಡಿ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ .
ಈಗಾಗಲೇ ನುಡಿಸಿರಿಯಲ್ಲಿ ಬೆಳೆದ ನೂರಾರು ಮಕ್ಕಳು ಯಕ್ಷಗಾನದ ಹೆಜ್ಜೆ ಕಲಿತು ಈ ಭಾಗದಲ್ಲಿ ಸಾಂಸ್ಕೃತಿಕವಾದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ ಎಂದರೆ ಅದಕ್ಕೆ ಕಾರಣರು ಜಗದೀಶ್ ಶೆಟ್ಟರು.ಹೀಗಾಗಿ ಬಹಳಷ್ಟು ಜನರು ಅಭಿಪ್ರಾಯಿಸಿದಂತೆ ಇವರು ಸಿದ್ದಾಪುರದ “ಸಾಂಸ್ಕೃತಿಕ ರಾಯಭಾರಿ”.
2103-14 ರಲ್ಲಿ ಪ್ರತಿಷ್ಠಿತ ಸಿದ್ದಾಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಸಿದ್ದಾಪುರದ ಬಸ್ ನಿಲ್ದಾಣವನ್ನು ದಾನಿಗಳ ಸಹಾಯದಿಂದ ಆಧುನಿಕರಣಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಧ್ಯಕ್ಷತನದ ಅವಧಿಯಲ್ಲಿ ಬಹಳಷ್ಟು ಸಮಾಜ ಮುಖೀ ಕಾರ್ಯಕ್ರಮಗಳನ್ನು ನಡೆಸಿ ಸಮಾಜದ ಎಲ್ಲ ವರ್ಗದವರಿಂದ ಮೆಚ್ಚುಗೆಯನ್ನು ಪಡೆದಿರುತ್ತಾರೆ.
ಇವರು ಆಯಷ್ ವೈದ್ಯರ ಸಂಘಟನೆ AFI ಇದರ ಕುಂದಾಪುರ ಘಟಕದ ಸ್ಥಾಪಕಾಧ್ಯಕ್ಷರು.ವೈದ್ಯಕೀಯ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಿರುವ ಇವರು ಮಣಿಪಾಲ ವಿಶ್ವವಿದ್ಯಾನಿಲಯದಿಂದ ‘ಕ್ಲಿನಿಕ್ ರಿಸರ್ಚ್’ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.ಜೊತಗೆ ‘ಡಿ ಫಾರ್ಮಾ’ ಪದವೀಧರರೂ ಹೌದು .
2003 ರಲ್ಲಿ ಡಾ। ರಶ್ಮಿಯವರನ್ನು ವರಿಸಿ ಸಮಿತ್ ಮತ್ತು ಸಾರ ಎಂಬ ಎರಡು ಮುದ್ದಾದ ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.