ವಿದ್ಯಾಗಿರಿ: ‘ಆಧುನಿಕ ವಿಜ್ಞಾನವು ಸಂಶೋಧನೆಯಲ್ಲಿ ಮುಂದುವರಿದಿದ್ದು, ರೋಗದ ಮೂಲ ಪತ್ತೆಗೆ ಕ್ಷ ಕಿರಣದ ಕೊಡುಗೆ ಅಪಾರ’ ಎಂದು ಕೇರಳದ ಕೊತ್ತಮಂಗಲಂ ಕಲಾರಿಕ್ಕಲ್ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಿಬು ವರ್ಗೀಸ್ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ರೋಗನಿದಾನ, ಕಾಯಾಚಿಕಿತ್ಸೆ ಮತ್ತು ಮನಸರೋಗ ವಿಭಾಗವು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ‘ಕ್ಷ- ಕಿರಣದ ಮೂಲಲಕ್ಷಣ ಹಾಗೂ ವ್ಯಾಖ್ಯಾನ ಕುರಿತ ರಾಷ್ಟ್ರ ಮಟ್ಟದ ಕಾರ್ಯಾಗಾರ ‘ಜ್ಞಾನಚಾಕ್ಷು- 2023’ನ್ನು ಉದ್ಘಾಟಿಸಿ ಮಾತನಾಡಿದರು.
‘ಆಯುರ್ವೇದದಲ್ಲೂ ಸಾಮಾನ್ಯವಾಗಿ ಮೂಳೆಚಿಕಿತ್ಸೆ, ಉಸಿರಾಟದ ಪ್ರಕರಣಗಳ ಪತ್ತೆ ಮಾಡಲು ಮೂಲವು ಕ್ಷ -ಕಿರಣವೇ ಆಗಿದೆ. ಆದರೆ ಸಾಮಾನ್ಯವಾಗಿ ಜನರು ಆಯುರ್ವೇದದ ಚಿಕಿತ್ಸಾ ಪದ್ದತಿಯನ್ನು ದ್ವಿತೀಯ ಶ್ರೇಣಿಯ ಚಿಕಿತ್ಸಾ ಕ್ರಮವೆಂದು ಭಾವಿಸುವುದನ್ನು ತಪ್ಪಿಸಬೇಕು. ಅವರಲ್ಲಿ ಭರವಸೆಯನ್ನು ಮೂಡಿಸುವ ಕೆಲಸವನ್ನು ಮಾಡಬೇಕು. ಈ ಕಾರ್ಯಾಗಾರದ ಮೂಲಕ ಕ್ಷ- ಕಿರಣ ಕ್ಷೇತ್ರದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು. ರೋಗಿಗೆ ಚಿಕಿತ್ಸೆ ನೀಡುವ ಮೊದಲು ರೋಗ ಪತ್ತೆ ಹಚ್ಚುವಿಕೆಯು ಬಹುಮುಖ್ಯ, ಆಯುರ್ವೇದ ಆ ಕ್ರಿಯೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ವಿನಯ ಆಳ್ವ ಮಾತನಾಡಿ, ‘ಶಿಕ್ಷಣ ಎಂದರೆ ಮನುಷ್ಯನ ಮಿದುಳಿನಲ್ಲಿರುವ ಒಟ್ಟು ಮಾಹಿತಿಯ ಮೊತ್ತವಲ್ಲ, ಅದು ಒಬ್ಬ ವ್ಯಕ್ತಿಯನ್ನು ರೂಪುಗೊಳಿಸುವುದು, ಆತನ ವ್ಯಕ್ತಿತ್ವ ನಿರೂಪಿಸುವುದು ಮತ್ತು ಜೀವನವನ್ನು ಬಲಪಡಿಸಬೇಕು’ ಎಂದರು. ‘ನೀವು ಕಲಿಯಲು ಸಿದ್ಧರಿಲ್ಲದಿದ್ದರೆ ಯಾರೂ ಸಹಾಯ ಮಾಡಲಾರರು. ನೀವು ಕಲಿಯಲು ನಿರ್ಧರಿಸಿದರೆ ಯಾರೂ ನಿಮ್ಮನ್ನು ತಡೆಯಲಾರರು ಎಂದು ಅವರು ಧೈರ್ಯ ತುಂಬಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ., ಯುಜಿ ಡೀನ್ ಡಾ.ಪ್ರಶಾಂತ್ ಜೈನ್, ಪಿಜಿ ಡೀನ್ ಡಾ. ರವಿಪ್ರಸಾದ ಹೆಗ್ಡೆ, ಪ್ರಾಧ್ಯಾಪಕ ಡಾ.ಸುಶೀಲ್ ಶೆಟ್ಟಿ ಇದ್ದರು. ಡಾ.ಗೀತ ಬಿ. ಮಾರ್ಕಂಡೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಕೊತ್ತಮಂಗಲಂ ಕಲಾರಿಕ್ಕಲ್ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಿಬು
ವರ್ಗೀಸ್ ‘’ಕ್ಷ-ಕಿರಣ; ಬೆನ್ನುಮೂಳೆ ಹಾಗೂ ಅದರ ವ್ಯಾಖ್ಯಾನಗಳು, ಮಂಗಳೂರು ಕೆಎಂಸಿ ಆಸ್ಪತ್ರೆಯ ಡಾ.ಮೇಘನಾ ಡಿ ಅವರು ‘ಕ್ಷ-ಕಿರಣ: ಎದೆ ಮತ್ತು ವ್ಯಾಖ್ಯಾನಗಳು’ ಕುರಿತು ಉಪನ್ಯಾಸ ನೀಡಿದರು.