ಒಳನಾಡು ಹಾಗು ಹೊರನಾಡಿನಲ್ಲಿ ತಮ್ಮ ಬರವಣಿಗೆಯ ಮೂಲಕ ಛಾಪು ಮೂಡಿಸಿದ ಖ್ಯಾತ ಅಂಕಣಕಾರರು, ಕಾದಂಬರಿಗಾರ್ತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅವರ ಯಶಸ್ವಿ ಪಯಣ ಪ್ರವಾಸ ಕಥನ (284 ಪುಟಗಳ) ಮಾಮರ ಪ್ರಕಾಶನದಿಂದ ಪ್ರಕಾಶಿತ ಕೃತಿಯನ್ನು ನವೆಂಬರ್ 29 ರಂದು ಮುಂಬಯಿಯ ಮೈಸೂರು ಅಸೋಸಿಯೇಷನ್ ನ ಸಭಾಗೃಹದಲ್ಲಿ ಸಂಜೆ 5.30ಕ್ಕೆ ಜರುಗಿದ ಕೃತಿಗಳ ಸಮೀಕ್ಷೆಯ ಸಭಾ ಕಾರ್ಯಕ್ರಮದಲ್ಲಿ ‘ಯಶಸ್ವಿ ಪಯಣ’ ಪ್ರವಾಸ ಕಥನವನ್ನು ಹಿರಿಯ ಸಾಹಿತಿ ಶ್ಯಾಮಲ ಮಾಧವ ಮತ್ತು ಸೃಜನಾ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಹಾಗೂ ಬಳಗದ ಪದಾಧಿಕಾರಿಗಳಿಗೆ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅವರು ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗಕ್ಕೆ ಹಸ್ತಾಂತರಿಸಿದರು. ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಸಂತೋಷಗೊಂಡ ದೃಶ್ಯ ವಿಶೇಷತೆಗಳನ್ನು, ಸ್ಥಳ ಪರಿಚಯವನ್ನು, ಅಲ್ಲಿ ಆಗಬೇಕಾದ ಬದಲಾವಣೆ, ಕಂಡು ಬಂದ ಲೋಪದೋಷಗಳನ್ನು ಬರೆದಿದ್ದು, ಈ ಹೊತ್ತಿಗೆಯ ಶೀರ್ಷಿಕೆಯೇ ಹೇಳುವಂತೆ ಯಶಸ್ವಿ ಪಯಣದ ವಿವಿಧ ಮಗ್ಗುಲುಗಳನ್ನು ಈ ಕೃತಿಯೊಳಗೆ ಮೂಡಿಸಿ ಸಾಹಿತ್ಯ ಕ್ಷೇತ್ರದ ತನ್ನ ಬದುಕನ್ನು ಮತ್ತಷ್ಟು ಸಿಂಗರಿಸಿದ ಕ್ಷಣಗಳ ಬರಹಗಳಿಗೆ ಮೆರಗು ನೀಡಿ ಮೂಡಿ ಬಂದ ಕೃತಿ ಇದಾಗಿದೆ.

ಇಲ್ಲಿನ ಲೇಖನಗಳು ಒಳನಾಡು ಹೊರನಾಡಿನ ಪತ್ರಿಕೆಗಳ ರಂಗಸ್ಥಳದಲ್ಲಿ ನಲಿದಾಡಿ ಬಂದಿವೆ. ಓದಿ ಮೆಲುಕು ಹಾಕಬಹುದಾದ ಲೇಖನಗಳು, ಪರಮಾರ್ಶಿಸಬಹುದಾದ ವಿವಿಧ ಮಾಹಿತಿ ನೀಡುವ ಲೇಖನಗಳು ಇವೆ ಎನ್ನುವುದನ್ನು ಅಲ್ಲಗಳೆಯುವಂತೆಯೂ ಇಲ್ಲ. ನೆಲ, ಜಲ, ಕಾಡು, ಕಡಲು, ವಿಜ್ಞಾನ, ಇತಿಹಾಸ, ಪರಂಪರೆಗಳ ಸ್ಥಳಗಳಿಗೆ ಭೇಟಿ ನೀಡಿ ಬರೆದ ಲೇಖನಗಳು ಈ ಕೃತಿಯೊಳಗಿದೆ. ಈ ಕೃತಿಯಲ್ಲಿ ಗಿರಿಧಾಮಗಳ ಸೊಬಗಿದೆ. ದೇವಾಲಯಗಳ ವಿಚಾರ ವಿಷಯಗಳಿವೆ. ಮೊದಲ ಚಿಟ್ಟೆಪಾರ್ಕ್ ನ ಮಾಹಿತಿ ಇದೆ. ರಕ್ಷಿತಾರಣ್ಯ, ಮ್ಯೂಸಿಯಂಗಳು ಹೀಗೆ ಓರ್ವ ಪ್ರವಾಸಿಗನಿಗೆ ಇರಬೇಕಾದ ಕುತೂಹಲ, ಆಸಕ್ತಿ, ಸಂಶೋಧನಾ ಮನೋಭಾವ ಇವೆಲ್ಲಾ ಈ ಕೃತಿಯ ಹೆಚ್ಚಿನ ಲೇಖನಗಳಲ್ಲಿ ಕಂಡು ಬರುತ್ತದೆ. ಭೇಟಿ ಮಾಡಿ ಅಲ್ಲಿಯ ಪೌರಾಣಿಕ ಇತಿಹಾಸ, ವೈಶಿಷ್ಟ್ಯತೆ, ಸಂಪ್ರದಾಯಗಳು, ಸ್ಥಳೀಯರ ಬದುಕು ಬವಣೆಗಳ ಬಗ್ಗೆ ಓದುಗರ ಕಣ್ಣಿಗೆ ಕಟ್ಟುವಂತೆ ಬರೆದ ”ಯಶಸ್ವಿ ಪಯಣ” ಎಂಬುದು ಕೇವಲ ಒಂದು ಪುಸ್ತಕವಲ್ಲ, ಬದಲಾಗಿ ಒಂದೇ ಹೊತ್ತಿಗೆಯಲ್ಲಿ ಮೂವತ್ತೈದು ಸ್ಥಳಗಳ ವಿವರವಿರುವ ಬೃಹತ್ “ಸಂಶೋಧನಾ ಗ್ರಂಥ” ಎಂದರೆ ತಪ್ಪಾಗಲಾರದು. ಕೊಡಚಾದ್ರಿಯಲ್ಲಿ ಹೀಗೊಂದು ಚಾರಣ ಎಂಬ ವಿಷಯದಿಂದ ಹಿಡಿದು ಚೆಲುವ ಭಾರ್ಗವ ಕ್ಷೇತ್ರ ಎಂಬ ಈ ಕೃತಿಯ ಕಡೆಯ ಲೇಖನಗಳ ಮಧ್ಯೆ ಹಿಂದಿನ ರಾಜ ಮಹಾರಾಜರಗಳ ತೀರ್ಥ ಕ್ಷೇತ್ರ, ಪುಣ್ಯ ಕ್ಷೇತ್ರ, ಪಕ್ಷಿಧಾಮ, ಜೈನ ಬಸದಿ, ಗಿರಿಧಾಮ, ವಸ್ತು ಸಂಗ್ರಹಾಲಯ ಹೀಗೇ ಒಟ್ಟು 35 ವಿಷಯಗಳ ಕುರಿತು ಸಂಶೋಧನಾ ಲೇಖನಗಳು ಶ್ರೀಮತಿ ಲತಾ ಸಂತೋಷ್ ಶೆಟ್ಟಿಯವರ ಲೇಖನಿಯಿಂದ ಹೊರ ಹೊಮ್ಮಿದೆ. ಬದುಕನ್ನು ಪ್ರಭಾವಿಸುವ ಪ್ರವಾಸ ಎಂಬ ಶೀರ್ಷಿಕೆ ಅಡಿಯಲ್ಲಿ ಖ್ಯಾತ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ ಮುನ್ನುಡಿ ಮತ್ತು ಪ್ರಖ್ಯಾತ ಕವಿ ಡುಂಡಿರಾಜ್ ರವರ ಬೆನ್ನುಡಿಯಿದೆ.











































































































