ಈ ಬಾರಿಯ ಪ್ರತಿಷ್ಠಿತ ರಂಗ ಚಾವಡಿ 2022 ಪ್ರಶಸ್ತಿಗೆ ಸಾಹಿತಿ ಜಾನಪದ ವಿದ್ವಾಂಸರಾದ ಮುದ್ದು ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ನವಂಬರ್ 20 ರಂದು ಭಾನುವಾರ ಸಂಜೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ.
ಮುದ್ದು ಮೂಡುಬೆಳ್ಳೆ ಅವರು ಬಹುಮುಖ ಪ್ರತಿಭಾವಂತರು ಹಾಗೂ ಬೇರೆ ಬೇರೆ ರಂಗಗಳಲ್ಲಿ ಸೇವೆ ಸಲ್ಲಿಸಿ ಗಮನ ಸೆಳೆದವರು ಹಾಗೂ ಸೆಳೆಯುತ್ತಿರುವವರು. ಸುಮಾರು 16ರ ಪ್ರಾಯದಿಂದಲೇ ಕೆಲಸ ಮತ್ತು ಶಿಕ್ಷಣ – ಜೊತೆಗೆ ನಡೆದು ಬಂತು. ತುಳು ನಾಡು, ಹುಬ್ಬಳ್ಳಿ, ಬೆಂಗಳೂರು, ಮುಂಬೈ – ಮುಂತಾಡೆದೆ ನೌಕರಿ ಮಾಡಿದವರು.
ಸರಕಾರದ ನ್ಯಾಯಾಂಗ ಹಾಗೂ ಪ್ರಸಾರ ಇಲಾಖೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ ಗಮನಾರ್ಹ ಸೇವೆ ಸಲ್ಲಿಸಿದವರು. ಇಂಥ ಸಾಧಕನ ಬಗ್ಗೆ ಒಂದು ಕಿರುಪರಿಚಯ ಇಲ್ಲಿದೆ.
ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕತೆಗಾರರಾಗಿ ಗುರುತಿಸಿಕೊಂಡಿದ್ದ ಮುದ್ದು ಮೂಡುಬೆಳ್ಳೆ ಅವರು ಕಲೆ (ನಾಟಕ ಸಂಗೀತ) ಹಾಗೂ ಸಾಹಿತ್ಯದಲ್ಲಿ ಬಾಲ್ಯದಲ್ಲೇ ಒಲವು ಬೆಳೆಸಿಕೊಂಡವರು. ಶಿಕ್ಷಣದ ಬಳಿಕ ಕರ್ನಾಟಕ ಸರಕಾರದ ನ್ಯಾಯಾಂಗ ಇಲಾಖೆಯಲ್ಲಿ ಸುಮಾರು 9 ವರ್ಷ ಕಾಲ ಸೇವೆ ಸಲ್ಲಿಸಿದರು. ಬಳಿಕ 1985 ರಲ್ಲಿ ಇವರ ಆಸಕ್ತಿಯ ಕ್ಷೇತ್ರವಾದ ಕೇಂದ್ರ ಪ್ರಸಾರ ಇಲಾಖೆಗೆ ಆಯ್ಕೆಯೊಂಡರು. ಇದು ಇವರಲ್ಲಿರುವ ಕಲಾಪ್ರತಿಭೆ ಹುಲುಸಾಗಿ ಬೆಳೆಯಲು ಹೆಚ್ಚು ಸಹಕಾರಿಯಾಯಿತು. ಈ ಇಲಾಖೆಯಲ್ಲಿ ಅವರು ಮಂಗಳೂರಿನ ಆಕಾಶವಾಣಿ ಕೇಂದ್ರದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಹಿರಿಯ ಶ್ರೇಣಿ ಪ್ರಸಾರಕರಾಗಿ ಗಮನಾರ್ಹ ಕಲಾ ಸೇವೆ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಸಲ್ಲಿಸಿದ್ದ ಸೇವೆಗಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸಂಪಾದಕ ಮಂಡಳಿಯಲ್ಲಿ
ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರ ತಂದಿರುವ ಮಂಗಳೂರು ದರ್ಶನ ಸಂಪುಟ ಯೋಜನೆಯ ಸಹಸಂಪಾದಕರಾಗಿದ್ದರಲ್ಲದೆ, ಕೋಟಿ ಚೆನ್ನಯ ಪಾಡ್ದನ ಸಂಪುಟ ಸಹಿತ 60ಕ್ಕೂ ಮಿಕ್ಕಿ ಪ್ರಮುಖ ಕೃತಿ ಸಂಪುಟಗಳ ಸಂಪಾದಕ ಮಂಡಳಿಯಲ್ಲಿ ದುಡಿದ ಅನುಭವಿ.
ಸಾಹಿತ್ಯ ಕೃತಿ
ಕನ್ನಡ ಹಾಗೂ ತುಳುವಿನಲ್ಲಿ ಹಲವಾರು ಸಾಹಿತ್ಯ ಕೃತಿಗಳನ್ನು ಹೊರ ತಂದಿರುವ ಇವರು 7 ಕಥಾ ಸಂಕಲನ, 3 ಕವನ ಸಂಕಲನ, 3 ಕಾದಂಬರಿ, ಕಾಂತಾಬಾರೆ ಬೂದಾಬಾರೆ ಕುರಿತು ಸಂಶೋಧನೆ, ತುಳು ರಂಗಭೂಮಿ ಸಮಗ್ರ ಅಧ್ಯಯನ, ತುಳುನಾಡಿನ ಜಾನಪದ ವಾದ್ಯಗಳು, ಮೂಲ್ಕಿಯ ಸಾವಂತ ಅರಸರು ಮುಂತಾದ ಸುಮಾರು 95ರಷ್ಟು ಕೃತಿಗಳ ಲೇಖಕರು ಹಾಗೂ ಸಂಪಾದಕರಾಗಿ ದುಡಿದ ಅನುಭವಿ.
ವಾಗ್ಮಿ
ತುಳು ಸಂಸ್ಕೃತಿ, ಸಾಹಿತ್ಯ, ಕಲೆಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಮುದ್ದು ಮೂಡುಬೆಳ್ಳೆ ಅವರು ಉತ್ತಮ ವಾಗ್ಮಿಯೂ ಆಗಿದ್ದಾರೆ. ಹಲವಾರು ಪ್ರಮುಖ ಹಾಗೂ ಪ್ರತಿಷ್ಠಿತ ವೇದಿಕೆಗಳಲ್ಲಿ ಉಪನ್ಯಾಸ ನೀಡಿರುವ ಇವರು ದೇಶದಲ್ಲಿ ಮಾತ್ರವಲ್ಲದೇ ಕೊಲ್ಲಿ ರಾಷ್ಟ್ರಗಳಿಗೂ ತೆರಳಿ ಉಪನ್ಯಾಸ ನೀಡಿದ ಹಿರಿಮೆ ಹೊಂದಿದ್ದಾರೆ. ಕಾಪು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಒಲಿದು ಬಂದಿತ್ತು.
ಎರಡು ಸ್ನಾತಕೋತ್ತರ ಪದವೀಧರರು
ಕರ್ನಾಟಕ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಿಂದ ಸಮಾಜಶಾಸ್ತ್ರ ಮತ್ತು ಕನ್ನಡ (ಜಾನಪದ) ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಪತ್ರಿಕೋದ್ಯಮ ಮತ್ತು ಕೊಂಕಣಿ ಭಾಷೆ ಸಾಹಿತ್ಯ ಕುರಿತು ಎರಡು ಸ್ನಾತಕೋತ್ತರ ಡಿಪ್ಲೋಮಾ ಕೂಡ ಮಾಡಿದವರು.
ರಂಗಭೂಮಿ ಹಿನ್ನೆಲೆ
ಮುದ್ದು ಮೂಡುಬೆಳ್ಳೆ ಅವರು ತುಳು ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿ ತನ್ನ ಬಹುಮುಖ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಕವಿಯಾಗಿ, ಜಾನಪದ ಸಂಶೋಧಕರಾಗಿರುವ ಇವರು ನಟ, ಗಾಯಕ, ನಾಟಕ ರಚನೆಗಾರ, ನಿರ್ದೇಶಕ ಮುಂತಾದ ವಿಶೇಷತೆಗಳಿಂದ ಗುರುತಿಸಿಕೊಂಡವರು.
ತುಳು ರಂಗಭೂಮಿ ಬಗ್ಗೆ ಅಪಾರ ಜ್ಞಾನ, ಮಾಹಿತಿ ಹೊಂದಿರುವ ಇವರು ಈ ಕ್ಷೇತ್ರದ ಬಗ್ಗೆ ಸ್ವಾನುಭವದೊಂದಿಗೆ ತುಳು ರಂಗಭೂಮಿ ಬಗ್ಗೆ ಸುಮಾರು 35 ವರ್ಷ ಕಾಲ ಕ್ಷೇತ್ರಾಧ್ಯಯನ ನಡೆಸಿ 2005ರಲ್ಲಿ “ತುಳು ರಂಗಭೂಮಿ” ಅಧ್ಯಯನ ಎಂಬ ಕೃತಿಯನ್ನು ಹೊರತಂದಿದ್ದು, ಇದು ತುಳು ನಾಟಕ ರಂಗದ ಇತಿಹಾಸಕ್ಕೆ ಸಂಬಂಧಿಸಿ ಒಂದು ಪ್ರಮುಖ ಆಕರ ಗ್ರಂಥ ಎಂದು ಗುರುತಿಸಿಕೊಂಡಿದೆ. ಇದನ್ನು ಇನ್ನಷ್ಟು ವಿಸ್ತರಿಸಿ 2019ರಲ್ಲಿ ತುಳು ನಾಟಕ ಪರಂಪರೆ ಎಂಬ ಕೃತಿಯನ್ನು ಹೊರ ತಂದಿದ್ದಾರೆ.
ಕರಾವಳಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲೂ ರಂಗಭೂಮಿ ಸೇವೆ ಸಲ್ಲಿಸಿದ್ದು, ಹವ್ಯಾಸಿ ನಟನಾಗಿ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮನದಲ್ಲಿ ಒಂದು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಮುಖ ನಾಟಕಕಾರರ ಕೃತಿಗಳು ಹಾಗೂ ತನ್ನ ರಚನೆಯ ಸುಮಾರು 100ಕ್ಕೂ ಮಿಕ್ಕಿದ ನಾಟಕ ರೂಪಕಗಳನ್ನು ಆಕಾಶವಾಣಿಯಲ್ಲಿ ನಿರ್ದೇಶಿಸಿ, ನಿರ್ಮಿಸಿ ಪ್ರಸಾರ ಮಾಡಿದವರು. 2010ರಲ್ಲಿ ನಾಟಕ ನಿರ್ಮಾಣಕ್ಕಾಗಿ ರಾಜ್ಯಮಟ್ಟದ ಬಾನುಲಿ ನಾಟಕ ನಿರ್ಮಾಣ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಗಳಿಸಿದರು. “ಮರೆಯಾಗುತ್ತಿರುವ ತುಳು ಜಾನಪದ ಸಾಹಿತ್ಯ” ಕುರಿತಾದ ಸಾಕ್ಷ ರೂಪಕದ ರಚನೆ, ನಿರೂಪಣೆ ಹಾಗೂ ನಿರ್ಮಾಣಕ್ಕಾಗಿ 2013ರಲ್ಲಿ ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ ಪಡೆದವರು. ನಾಟಕಕಾರ ಕವಿ, ಕತೆಗಾರ, ಸಂಪಾದಕ, ಅನುವಾದಕ., ಆಕಾಶವಾಣಿಯ ಉನ್ನತ ಗ್ರೇಡ್ನ ನಾಟಕ ಮತ್ತು ಸುಗಮ ಸಂಗೀತ ಗಾಯಕರೂ ಆಗಿದ್ದಾರೆ. ಆಕಾಶವಾಣಿ ಮಾಧ್ಯಮದ 30 ವರ್ಷಗಳ ಸೇವೆಯಲ್ಲಿ ಸ್ಟುಡಿಯೋದಲ್ಲಿ ನೇರಪ್ರಸಾರ, ಅಲ್ಲದೆ ಕಾರ್ಯಕ್ರಮಗಳ ರೆಕಾರ್ಡಿಂಗ್, ಎಡಿಟಿಂಗ್, ಡಬ್ಬಿಂಗ್, ಪ್ರೊಡಕ್ಷನ್ ತಜ್ಞರೂ ಆಗಿದ್ದವರು.
ಹೀಗೆ ತುಳು ಸಾಹಿತ್ಯ, ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಈಗಲೂ ಬೇಡಿಕೆಯ ಸಂಪನ್ಮೂಲ ವ್ಯಕ್ತಿಯಾಗಿರುವ ಮುದ್ದು ಮೂಡುಬೆಳ್ಳೆ ಅವರು ಇಷ್ಟು ಸಾಧನೆ ಮಾಡಿದ್ದರೂ ಅಹಂ ಇಲ್ಲದೆ ತನ್ನಲ್ಲಿರುವ ಮಾಹಿತಿಯನ್ನು ಕಿರಿಯರಿಗೆ ಹಂಚುವ ಶ್ರೀಮಂತ ಹೃದಯಿ. ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದರೂ, ಕೌಟುಂಬಿಕ ಜವಾಬ್ದಾರಿಗಾಗಿ ಊರಿನ ಮೂಲ ಮನೆಗೂ ಓಡಾಡುತ್ತಿರುವವರು. ನಿವೃತ್ತಿ ಜೀವನದಲ್ಲೂ ಕೆಲಸದ ಒತ್ತಡದಲ್ಲೇ ಇದ್ದಾರೆ ಎಂಬುದು ಅವರ ಆಸಕ್ತಿ ಹಾಗೂ ಅವರು ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಮಾಜಕ್ಕೆ ಎಷ್ಟು ಅಗತ್ಯ ಎಂಬುದಕ್ಕೆ ಉತ್ತಮ ಸಾಕ್ಷಿಯಾಗಿದೆ.
******
ಮುದ್ದು ಮೂಡುಬೆಳ್ಳೆ ಮೂರು ದಶಕಗಳ ಸೇವಾವಧಿಯಲ್ಲಿ ಆಕಾಶವಾಣಿಯಲ್ಲಿ ನೇರಪ್ರಸಾರ ಉದ್ಘೋಷಣೆ ಅಲ್ಲದೆ ಕಾರ್ಯಕ್ರಮ ರೆಕಾರ್ಡಿಂಗ್, ಎಡಿಟಿಂಗ್ ಡಬ್ಬಿಂಗ್, ಪ್ರೊಡಕ್ಷನ್ ತಜ್ಞರಾಗಿ ನೂರಾರು ಕಾರ್ಯಕ್ರಮ ಬಾನುಲಿ ವರದಿ ಪ್ರಸ್ತುತಿ, ನೂರಕ್ಕೂ ಮಿಕ್ಕಿ ರೂಪಕ ನಾಟಕ ನಿರ್ಮಾಣ ಮಾಡಿದ್ದಾರೆ.
ಮುದ್ದು ಮೂಡುಬೆಳ್ಳೆಯವರ ಬಹುಮುಖ ಪ್ರತಿಭೆಯನ್ನು ಗುರುತಿಸಿದ ರಂಗಚಾವಡಿ ಪ್ರಶಸ್ತಿ ಆಯ್ಕೆ ಸಮಿತಿಯು 2022 ರ ಸಾಲಿನ ರಂಗಚಾವಡಿ ಪ್ರಶಸ್ತಿಯನ್ನು ಮುದ್ದುಮೂಡುಬೆಳ್ಳೆ ಅವರಿಗೆ ನೀಡಿದೆ. ಆಯ್ಕೆ ಸಮಿತಿಯಲ್ಲಿ ಹಿರಿಯ ರಂಗ ನಟ ವಿ.ಜಿ.ಪಾಲ್, ಚಲನ ಚಿತ್ರ ನಿರ್ದೇಶಕ ಡಾ ಸಂಜೀವ ದಂಡೆಕೇರಿ ಹಾಗೂ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಇದ್ದಾರೆ.