ಭಾರತೀಯ ಸೇನೆ ಎಂದಾಕ್ಷಣ ಏನೋ ರೋಮಾಂಚನ. ಗಡಿ ನುಸುಳುವ ವೈರಿಗಳ ಗುಂಡಿಗೆ ಎದೆಯೊಡ್ಡಿ ಪ್ರತಿದಾಳಿ ನಡೆಸುತ್ತ ಭಾರತಾಂಬೆಯ ರಕ್ಷಣೆಯೊಂದೇ ತನ್ನ ಧ್ಯೇಯವಾಗಿರಿಸಿಕೊಂಡು ತಮ್ಮ ಬದುಕನ್ನು ಮುಡಿಪಿಟ್ಟು ಹೋರಾಟ ಮಾಡುವ ಮೂಲಕ ದೇಶದ ಜೊತೆಗೆ ನಮ್ಮೆಲ್ಲರನ್ನು ಕಾಯುವ ಸೈನಿಕರ ಸೇವೆ ಅನನ್ಯ.
ಹತ್ತೊಂಬತ್ತು ವರ್ಷಗಳ ಕಾಲ ಭೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ತಾಯ್ನಾಡಿಗೆ ಸೇವೆ ಸಲ್ಲಿಸಿರುವ ದಿಟ್ಟತನದ ವೀರ ಜಗನ್ನಾಥ ಶೆಟ್ಟಿ ಮಾಣಿ.
12-07-1980 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ರಘುರಾಮ ಶೆಟ್ಟಿ ಹಾಗೂ ಗುಲಾಬಿ ಶೆಟ್ಟಿ ದಂಪತಿಗಳ ಪುತ್ರನಾಗಿ ಜನಿಸಿದ ಜಗನ್ನಾಥ ಶೆಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಪೂರ್ಣಗೊಳಿಸಿ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಮಾಣಿ ಹಾಗೂ ತಮ್ಮ ಪದವಿಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಕೊಂಬೆಟ್ಟಿನಲ್ಲಿ ಪಡೆದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ_ಪದವಿ ಪಡೆದರು.
ಹೈಸ್ಕೂಲ್ ಶಿಕ್ಷಣದ ಸಂದರ್ಭದಲ್ಲೇ ಕ್ರೀಡೆಯತ್ತ ಒಲವನ್ನಿಟ್ಟುಕೊಂಡಿದ್ದ ಜಗನ್ನಾಥ ಶೆಟ್ಟಿ ಕಬಡ್ಡಿ ವಾಲಿಬಾಲ್ ಹಾಗೂ ಫುಟ್ಬಾಲ್ ಅಭ್ಯಸಿಸುತ್ತಾ ಕಬಡ್ಡಿಯಲ್ಲಿ ಜಿಲ್ಲಾ ಮಟ್ಟವನ್ನೂ ಪ್ರತಿನಿಧಿಸಿದ್ದರು.
ಬಾಲ್ಯದಿಂದಲೇ ದೇಶ ಸೇವೆಯಲ್ಲಿ ತಾನೂ ತೊಡಗಬೇಕೆಂಬ ಆಶಯವನ್ನು ಹೊತ್ತಿದ್ದ ಜಗನ್ನಾಥ ಶೆಟ್ಟಿಗೆ ಅದೇ ಅಕಾಂಕ್ಷೆಯನ್ನು ಇಟ್ಟುಕೊಂಡಿದ್ದ ಗೆಳೆಯರ ಬಳಗವೂ ದೊರಕಿ ಮತ್ತಷ್ಟು ಪ್ರೇರಣೆಯಾಯಿತು.
1998 ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಗೊಂಡು ಒಂದು ವರ್ಷಗಳ ಕಾಲ ಊಟಿಯಲ್ಲಿ ಭೂ ಸೇನೆಯ ತರಬೇತಿಯನ್ನು ಪಡೆದು 1999 ರ ಕಾರ್ಗಿಲ್ ಸಮರದ ಸಂದರ್ಭದಲ್ಲಿ ಪಂಜಾಬ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅನಂತರ ಪ್ರಪಂಚದ ಅತ್ಯಂತ ದೊಡ್ಡ ರಣರಂಗವೆಂದೇ ಕರೆಯಲ್ಪಡುವ ಸಿಯಾಚಿನ್ ಗ್ಲೇಸಿಯರ್ ನಲ್ಲಿ ಸತತ ಎರಡು ವರ್ಷಗಳ ಸೇವೆಯನ್ನು ಪೂರೈಸಿ ಅನಂತರ ರಾಜಸ್ಥಾನದ ಜೈಸಲ್ಮರ್ ಉದಯಪುರ್ ಮತ್ತು ಗಡಿ ಪ್ರದೇಶದ ಮರುಭೂಮಿಗಳಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಶ್ರೀನಗರದ ರಜೋರಿಯಲ್ಲಿ ಹಾಗೂ 2013 ರಲ್ಲಿ ಅಸ್ಸಾಂನಲ್ಲಿ ಶತ್ರು ಅಟ್ಟಹಾಸವ ತಡೆಯುವಲ್ಲಿ ಇವರು ಮಾಡಿರುವ ದೇಶ ಸೇವೆ ಅನನ್ಯ. ಅಷ್ಟೇ ಅಲ್ಲದೆ ಸೇನಾ ತಂಡದಲ್ಲಿಯೂ ಕಬಡ್ಡಿ ಆಟಗಾರನಾಗಿ ಸ್ಪರ್ಧಿಸುತ್ತಿದ್ದರು.
ತಮ್ಮ ಕೊನೆಯ ಸೇವೆಯನ್ನು ಊಟಿಯ ತರಬೇತಿ ಕೇಂದ್ರದಲ್ಲಿ ಸೈನಿಕರಿಗೆ ತರಬೇತಿಯನ್ನು ನೀಡಿ ತಮ್ಮ ಅಮೂಲ್ಯವಾದ ಹತ್ತೊಂಬತ್ತು ವರ್ಷಗಳ ದೇಶ ಸೇವೆಯನ್ನು ಮಾಡಿ ನಿವೃತ್ತಿಯನ್ನು ಹೊಂದಿರುತ್ತಾರೆ. ಸೇನಾ ಕೋರ್ಸ್ ಪ್ರಶಸ್ತಿಗಳಲ್ಲಿ ಸೆಕ್ಷನ್ ಕಮಾಂಡರ್ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ.
“ಇಂದಿನ ಯುವಜನತೆ ದೇಶ ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಶಾಲಾ ಕಾಲೇಜುಗಳಲ್ಲಿ ಎನ್.ಸಿ.ಸಿ ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಮುಂತಾದ ಸಂಘಗಳ ಹುಟ್ಟು ದಾರಿ ದೀಪವಾಗಿದೆ. ಸೇನೆಗೆ ಸೇರ್ಪಡೆಗೊಳ್ಳಲು ದೈಹಿಕ ಸಾಮರ್ಥ್ಯ ಹಾಗೂ ಸಾಮಾನ್ಯ ಜ್ಞಾನ ಅತೀ ಅಗತ್ಯ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕರ್ನಾಟಕದಿಂದ ಸೇನೆಗೆ ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಊರಿನ ಸಂಘ ಸಂಸ್ಥೆಗಳು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು.” ಎನ್ನುವುದು ಇವರ ಕಿವಿಮಾತು.
“ಬಾಲ್ಯದಿಂದಲೇ ದೇಶಕ್ಕಾಗಿ ನಾನೇನಾದರೂ ಮಾಡಬೇಕೆಂದಿದ್ದ ಕನಸು ಹೆತ್ತವರ ಪ್ರೋತ್ಸಾಹದಿಂದ ಸಾಕಾರಗೊಂಡಿತು. ನನ್ನ ಹತ್ತೊಂಬತ್ತು ವರ್ಷಗಳ ದೇಶ ಸೇವೆ ಬದುಕನ್ನೇ ಸಾರ್ಥಕವಾಗಿಸಿದೆ “ಎನ್ನುತ್ತಾರೆ ಜಗನ್ನಾಥ ಶೆಟ್ಟಿ.
ದೇಶ ಸೇವೆಯ ಕನಸನ್ನು ಹೊತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಎಂದಿಗೂ ಸಿದ್ಧರಾಗಿರುವ ಇವರ ವ್ಯಕ್ತಿತ್ವ ಅಭಿನಂದನೀಯ.
ಕೊರೆಯುವ ಚಳಿ, ಮರುಭೂಮಿಯ ತಾಪವನ್ನೂ ಲೆಕ್ಕಿಸದೆ ಹತ್ತೊಂಬತ್ತು ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿರುವ ಜಗನ್ನಾಥ ಶೆಟ್ಟಿ ತಮ್ಮ ಪತ್ನಿ ಚಂದ್ರಿಕಾ.ಜೆ ಶೆಟ್ಟಿ ಮಕ್ಕಳಾದ ಆಶಿಕ್.ಜೆ ಶೆಟ್ಟಿ ಹಾಗೂ ಖುಷಿ.ಜೆ ಶೆಟ್ಟಿ ಇವರೊಂದಿಗೆ ಸುಖಮಯ ಜೀವನ ಸಾಗಿಸುತ್ತಿದ್ದಾರೆ.
ಇವರ ದೇಶಸೇವೆಯ ಹಾದಿ ಇತರರಿಗೂ ಪ್ರೇರಣೆಯಾಗಲಿ. ದೇಶ ಭಕ್ತಿಯನ್ನು ತುಂಬಿಕೊಂಡು ಭಾರತಾಂಬೆಯ ಸೇವೆಯಲ್ಲಿ ತೊಡಗುವ ಮನಸ್ಸುಗಳು ಹೆಚ್ಚಾಗಲೆನ್ನುವುದೇ ನಮ್ಮೆಲ್ಲರ ಆಶಯ. ಬಂಟ ಸಮಾಜದ ತೆರೆಮರೆಯ ಯಶಸ್ವಿ ಸಾಧಕರಲ್ಲಿ ನೀವು ಒಬ್ಬರು. ನಿಮಗೆ ಬಂಟ್ಸ್ ನೌ ತಂಡದ