ಸುರತ್ಕಲ್: ಬಂಟರ ಸಂಘ(ರಿ.) ಸುರತ್ಕಲ್ ಇದರ ಸಹಯೋಗದಲ್ಲಿ “ಯಕ್ಷಸಿರಿ” ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವು ಸುರತ್ಕಲ್ ಬಂಟರ ಭವನದದಲ್ಲಿ ಜರುಗಿತು.
ಪಂಚ ಯಕ್ಷಗಾನ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರು ಉದ್ಘಾಟನೆ ನೆರವೇರಿಸಿದರು.
ಬಳಿಕ ಮಾತಾಡಿದ ಅವರು, “ಯಕ್ಷಗಾನ ತರಬೇತಿ ಕೇಂದ್ರಗಳು ಅನೇಕ ಕಡೆಗಳಲ್ಲಿ ಪ್ರಾರಂಭಗೊಳ್ಳುತ್ತವೆ. ಆದರೆ ದಿನಕಳೆದಂತೆ ತರಬೇತಿ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ಸುರತ್ಕಲ್ ಬಂಟರ ಸಂಘ ಇತರರಿಗೆ ಸ್ಫೂರ್ತಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಯಕ್ಷಗಾನ ಸೇವೆ ಅನ್ನೋದು ದೇವರ ಸೇವೆಯಿದ್ದಂತೆ. ಹಿಂದೆ ಯಕ್ಷಗಾನ ಕಲಾವಿದರ ಬಗ್ಗೆ ತಾತ್ಸಾರವಿತ್ತು ಆದರೆ ಈಗ ವಿದ್ಯಾವಂತ ಯುವಜನತೆ ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿದ್ದಾರೆ. ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಯಕ್ಷ ಸೇವೆಗೆ ಮುಂದಾಗಿರುವ ಸುರತ್ಕಲ್ ಬಂಟರ ಸಂಘದ ಶ್ರಮ ಸಾರ್ಥಕವಾಗಲಿ. ಯಕ್ಷ ಕಲೆಯನ್ನು ಕ್ಷಯವಾಗಿಸೋದು ಬೇಡ ಅಕ್ಷಯವಾಗಿಸೋಣ” ಎಂದು ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಿದ್ದರು. ಬೆಳ್ಳಿ ಹಬ್ಬದ ಹೊಸ್ತಿಲಲ್ಲಿ ಇರುವ ಬಂಟರ ಸಂಘ ಸುರತ್ಕಲ್ ನಿರಂತರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಬೇರೆ ಬೇರೆ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಯ ಸಂಚಾಲಕರು, ಸದಸ್ಯರು ಜವಾಬ್ದಾರಿಯುತವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ನವಂಬರ್- ಡಿಸೆಂಬರ್ ತಿಂಗಳಿನಲ್ಲಿ ಸಂಘದ ಬೆಳ್ಳಿಹಬ್ಬ ಸಮಾರಂಭ ನಡೆಯಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸದಸ್ಯ ನವನೀತ್ ಶೆಟ್ಟಿ ಕದ್ರಿ ಅವರು, “ಸುರತ್ಕಲ್ ಗೂ ಯಕ್ಷಗಾನಕ್ಕೂ ತಲೆ ತಲಾಂತರಗಳ ಇತಿಹಾಸವಿದೆ. ಹಿಂದೆ ಇದೇ ಕ್ಷೇತ್ರದಲ್ಲಿ ಕುಂಬ್ಳೆ ಸುಂದರ ರಾವ್ ಅವರಂತಹ ಯಕ್ಷಗಾನ ಕಲಾವಿದರು ಚುನಾವಣೆಗೆ ನಿಂತು ಗೆದ್ದಿದ್ದರು. ಅವರ ಗೆಲುವಿಗೆ ಪಕ್ಷಕ್ಕಿಂತ ಜಾಸ್ತಿಯಾಗಿ ಅವರೊಬ್ಬ ಯಕ್ಷಗಾನ ಕಲಾವಿದರು ಅನ್ನುವುದೇ ಕಾರಣವಾಗಿತ್ತು” ಎಂದು ಸ್ಮರಿಸಿಕೊಂಡರು.
ಇತ್ತೀಚಿಗೆ ನಿಧನರಾದ ಕಟೀಲು ಮೇಳದ ಪ್ರಧಾನ ಭಾಗವತರಾದ ಪ್ರಸಾದ ಬಲಿಪರನ್ನು ಕಟ್ಲ ಲೀಲಾಧರ ಶೆಟ್ಟಿ ಸ್ಮರಿಸಿ ಸಂತಾಪ ಸೂಚಿಸಿದರು. ಬಂಟರ ಸಂಘ ಸುರತ್ಕಲ್ ಇದರ ನಿಕಟಪೂರ್ವ ಅಧ್ಯಕ್ಷರಾದ ಉಲ್ಲಾಸ್ ಆರ್. ಶೆಟ್ಟಿ ಅವರು ಪ್ರಾಸ್ತಾವಿಕ ಮಾತಾನ್ನಾಡಿದರು.
ಮುಖ್ಯ ಅತಿಥಿಗಳಾಗಿ ಅಗರಿ ಸಂಸ್ಮರಣಾ ವೇದಿಕೆಯ ಅಧ್ಯಕ್ಷ ಅಗರಿ ರಾಘವೇಂದ್ರ ರಾವ್ ಸುರತ್ಕಲ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಮಾಧವ ಭಂಡಾರಿ ಕುಳಾಯಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಿ.ಇ., ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಯಕ್ಷಗುರು ರಾಕೇಶ್ ರೈ ಅಡ್ಕ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸಂಘಟನಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಾಟಿಪಳ್ಳ, ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ಜೆ. ಶೆಟ್ಟಿ, ಯಕ್ಷ ಸಿರಿ ಸಹಸಂಚಾಲಕಿ ಕೇಸರಿ ಎಸ್. ಪೂಂಜಾ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಗೌರವಿಸಿದರು.
ಯಕ್ಷಸಿರಿ ಸುರತ್ಕಲ್ ಬಂಟರ ಸಂಘ ಇದರ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು.
ಖ್ಯಾತ ಭಾಗವತ ಕೇಶವ ಶೆಟ್ಟಿ ಪಡ್ರೆ ದೇವರನ್ನು ಪ್ರಾರ್ಥಿಸಿದರು. ಲೋಕಯ್ಯ ಶೆಟ್ಟಿ ಮುಂಚೂರು ವಂದನಾರ್ಪಣೆಗೈದರು. ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷಗುರು ರಾಕೇಶ್ ರೈ ಅವರಿದ ಶಿಷ್ಯ ಸ್ವೀಕಾರ ಕಾರ್ಯಕ್ರಮ ನಡೆಯಿತು.