ಈ ಚಿತ್ರವನ್ನು ಯಾವುದರ ಜೊತೆ ಹೋಲಿಕೆ ಮಾಡ್ಬೇಕು ಅಂದ್ರೂ ಒಂದೇ ಒಂದು ಚಿತ್ರನೂ ನೆನಪಾಗಲ್ಲ. ಅಲ್ಲಿವರೆಗೆ ಈ ಸಿನೆಮಾ ಮನಸ್ಸನ್ನು ಆವರಿಸಿಕೊಂಡಿದೆ. ಸಿನಿಮಾ ಮುಗಿದು ಆದ್ರೂ ಕಾಂತಾರದ ಗಗ್ಗರದ ಶಬ್ಧ ಇನ್ನೂ ಹಾಗೆ ಬಡಿತಾನೇ ಇದೆ.
ನಾವು ತುಳುವರು ನಮಗೆ ಈ ಮಣ್ಣಿನ ಕಾರ್ಣಿಕದ ಅನುಭವ ಇದೆ. ನಾವು ನಮ್ಮ ಎಲ್ಲಾ ಕಾರ್ಯಗಳ ಆರಂಭದಲ್ಲಿ ಮೊದಲು ನೆನೆಸಿ ನಮಿಸುವುದೇ ದೈವಗಳನ್ನು ನಂತರ ದೇವರು. ಕಾರಣ ಈ ಮಣ್ಣಿನಲ್ಲಿರೋ ಪ್ರತಿಮನೆತನದಲ್ಲೂ ದೈವಗಳಿಗೇ ಆರಾಧ್ಯ ಸ್ಥಾನ, ಕಾರಣ ಈ ಮಣ್ಣೆ ದೈವಗಳ ಭೂಮಿ ಹಾಗಾಗಿ ದೈವಗಳ ಕೋಲಗಳನ್ನು ತೀರ ಹತ್ತಿರದಿಂದ ನೋಡಿದವರಿಗೆ, ಅಥವಾ ನಮ್ಮ ನಂಬಿಕೆಗಳ ಬಗ್ಗೆ ಅಧ್ಯಯನ ಮಾಡಿದವರಿಗೆ ನಮ್ಮ ದೈವಗಳ ಹಿನ್ನೆಳೆ ಬಗ್ಗೆ ಚೆನ್ನಾಗೇ ಗೊತ್ತಿರುತ್ತದೆ. ನಡೆಯಲ್ಲಿ ನಿಂತು ತನ್ನ ಮಕ್ಕಳಿಗೆ ಅಭಯ ನೀಡಿ ಜೊತೆಗೆ ಬರುವ ಹಾಗೆ ದೈವದ ಮುಂದೆ ನಿಂತು ಕೊಟ್ಟ ಮಾತಿಗೆ ತಪ್ಪಿ ನಡೆದರೆ ತಲತಲಾಂತರದ ವರೆಗೆ ಶಿಕ್ಷೆ ನೀಡುವ ದೈವಗಳು ತುಳುನಾಡಿನ ನಮ್ಮ ಜೀವನದ ಒಂದು ದೊಡ್ಡ ಭಾಗ. ಅಂತಹ ದಿವ್ಯಶಕ್ತಿಯ ಕಥೆಯೊಂದನ್ನು ಲೋಪ ಬಾರದಂತೆ ಚಿತ್ರಿಸಿದ ರೀತಿ ಇದೆಯಲ್ಲ ಅದು ಕೇವಲ ಅದನ್ನು ನಂಬಿಕೊಂಡು, ಆರಾಧಿಸಿಕೊಂಡು ಬಂದಿರುವವರಿಂದ ಮಾತ್ರ ಸಾಧ್ಯ.
ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ನಮ್ಮ ತುಳು ಮತ್ತು ಕರಾವಳಿ ಕನ್ನಡದ ಸೊಬಗಿನ ಅರಿವಿದ್ದವರಿಗೆ ಈ ಚಿತ್ರ ತುಂಬಾ ಹೆಚ್ಚು ಆಪ್ತವಾಗುತ್ತೆ. ಮೊದಲಾರ್ಧದಲ್ಲಿ ಬರುವ ಚಿಕ್ಕ ಚಿಕ್ಜ ಹಾಸ್ಯ ಸನ್ನಿವೇಷಗಳು ಭಾಷೆಯ ಸೊಬಗಿನ ಅರಿವಿದ್ದವರಿಗೆ ಹೊಟ್ಟೆಹುಣ್ಣಾಗುವಷ್ಟು ನಗು ನೀಡುತ್ತೆ. ಪ್ರಕೃತಿಯ ಆರಾಧಕರಾಗಿರೋ ತುಳು ಸಂಸ್ಕೃತಿಯ ಶ್ರೀಮಂತಿಕೆಯನ್ನು ಇಡಿ ದೇಶ ತಿರುಗಿ ನೋಡುವಂತೆ ಮಾಡುವ ಪ್ರಯತ್ನದಲ್ಲಿ ರಿಷಬ್ ಮತ್ತು ತಂಡ ದೊಡ್ಡ ಮಟ್ಟದ ಯಶಸ್ಸುಗಳಿಸುತ್ತೆ ಅನ್ನೋ ಅಚಲವಾದ ನಂಬಿಕೆ ನನಗಿದೆ.
ಮಧ್ಯಂತರದ ನಂತರ ಸಿನೆಮಾ ತುಂಬಾ ವೇಗವಾಗಿ ಸಾಗುತ್ತೆ. ಒಂದೊಮ್ಮೆ ಚಿತ್ರದ ಕೊನೆಯ ಅಧ್ಯಾಯದ ಹತ್ತಿರ ಬಂದಾಗ ರಿಷಭ್ ಕಮರ್ಷಿಯಲ್ ಫಾರ್ಮುಲಾದತ್ತ ಮುಖ ಮಾಡಿದ್ರು ಅನಿಸಲು ಆರಂಭಿಸಿದ್ರೇನೋ ಅಂತ ಅನಿಸಿತು ಆದರೆ ಕಥೆಯ ಅಂತ್ಯದಲ್ಲೊಂದು ರಿಷಬ್ ರ ಅಬ್ಬರದ ರಂಗಪ್ರವೇಷ ನೋಡಿ ನಾವು ನಂಬೋ ತುಳುವರ “ಕ್ಷೇತ್ರಪಾಲ”ನೇ ರಿಷಭ್ ಮೈಮೇಲೆ ಬಂದಂತೆ ಅನಿಸಿತು. ಅಂತಹ ಪರಾಕಾಯ ಪ್ರವೇಷ ರಿಷಭ್ ರದ್ದು. ಆಹ್ ಇಡಿ ಚಿತ್ರದಲ್ಲಿ ನಮ್ಮ ತಾಸೆ, ಡೊಳ್ಳು, ವಾದ್ಯದಿಂದ ಬರೋ ಸಂಗೀತ ಇದೆಯಲ್ಲಾ ಆಹಾ ಕುಳಿತಲ್ಲೆ ಎದ್ದು ನಿಲ್ಲೋಣ ಅನಿಸುತ್ತೆ ಅದಕ್ಕೆ ಮುಖ್ಯ ಕಾರಣ ತುಳು ಭಾಷೆಯಲ್ಲಿ ಕೇಳಿ ಬರೋ ದೈವನುಡಿಗಳು ಅಷ್ಟೊಂದು ಹತ್ತಿರವಾಯ್ತು ಈ ಸಿನೆಮಾ.
ಕಾಂತಾರ ನೋಡುವಾಗ ಈ ಮಣ್ಣಿನ ಸಂಸ್ಕೃತಿ ಅರಿವಿದ್ದವರ ಮೈ ಎಲ್ಲಾ ಜುಂ ಅನಿಸಬಹುದು. ಅದರಲ್ಲೂ ದೈವದಕಲದಲ್ಲಿನ ಕೋಲದ ದೃಶ್ಯಗಳಾಗಲೀ, ಊರೊಳಗಿನ ಹೊಡೆದಾಟವಾಗಲೀ ಮತ್ತೆ ಮುಖ್ಯವಾಗಿ ಪ್ರಕೃತಿಯನ್ನು ತೋರಿಸಿದ ದೃಶ್ಯ ವೈಭವವಾಗಲಿ ಎಲ್ಲವೂ ಹೆಚ್ಚುಕಾಲ ನೆನಪಲ್ಲಿ ಉಳಿಯುತ್ತೆ.. ಈ ಮಣ್ಣಿನ ಜೀವನಾಡಿಯಾಗಿರೋ ಕಂಬಳ, ಕೋಳಿ ಕಟ್ಟದಂತ ಕ್ರೀಡೆಗಳು, ಶುದ್ದ ಪೋಲಿತನದ ಬೈಯ್ಗುಳಗಳು ಆಹಾ ಒಂದಾ ಎರಡಾ.
ತಾರಾಗಣದ ಬಗ್ಗೆ ಹೇಳುವುದಾದ್ರೆ ರಿಷಬ್ ಇಡಿ ಸಿನೆಮಾದ ಕ್ಷೇತ್ರಪಾಲಕನಾಗಿ ಸಿನಿಮಾದುದ್ದಕ್ಕೂ ಓಡಾಡ್ತಾರೆ. ಕಿಶೋರ್ ತನ್ನ ಮ್ಯಾನರಿಸಂ ನಟನೆಯಿಂದ ಅತ್ತಿತ್ತ ಕದಲಲ್ಲ, ಅಚ್ಯುತ್ ರದ್ದು ಮತ್ತದೇ ನಗಿಸಿ ಸಿಡಿಯೋ ನಟನೆ. ಇನ್ನು ಹೀರೋಯಿನ್ ತನ್ನ ಪಾತ್ರಕ್ಕೆ ಮೊದಲ ಪ್ರಯತ್ನದಲ್ಲೇ ಜೀವ ತುಂಬಿದಾರೆ. ಆದ್ರೆ ಈ ಸಿನೆಮಾದಲ್ಲಿ ನಮ್ಮನ್ನೆಲ್ಲಾ ಒಂದು ಬಾರಿ ನಾವು ನಮ್ಮ ದೈನಂದಿನ ಜೀವನದಲ್ಲಿ ಆಡೋ ಮಾತುಗಳನ್ನು ಅಡ್ಡಬಿದ್ದು ನಗುವಷ್ಟು ರಿವೈಂಡ್ ಮಾಡಿಸಿ ನಗಿಸುವಂತೆ ಮಾಡಿದ ತೂಮಿನಾಡು, ಪಾಣಾಜೆ ಹಾಗೂ ಇನ್ನಿಬ್ಬರ ನಟನೆ ಮಾತ್ರ ಇದೆಯಲ್ಲ ಆಹಾ. ನೈಜ್ಯತೆಯೇ ಈ ಸಿನಿಮಾದ ಜೀವಾಳ ಅಂತಂದ್ರೆ ತಪ್ಪಾಗಲ್ಲ.
ಆದಷ್ಟು ಬೇಗ ಈ ಸಿನಿಮಾವನ್ನು ನಾವು ಕರಾವಳಿಯವರು ಮಿಸ್ ಮಾಡದೇ ನೋಡಿದ್ರೆ ಒಳ್ಳೆಯದು ಇಲ್ಲಾಂದ್ರೆ ಅದು ನಿಮ್ಮ ಕರ್ಮ ಅಷ್ಟೇ.
ದೈವ ಕೊರ್ತಿನ ಜಾಗೆನು ದೈವ ಬುಡುಂಡಲಾ ಬಂಟೆ ಬುಡುವೆನಾ ! ವೋಓಓಓಓಓ.
ಅನೂಪ್ ಸೂರಿಂಜೆ